ಡಾlಶಿವರಾಮ ಕಾರಂತರ ಬದುಕಿನ ಬಗ್ಗೆ ಸಂಕ್ಷಿಪ್ತ ಚಿತ್ರಣ ..

Share Button


ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗು ಪಡುವಂತಾಗುತ್ತದೆ. ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,. “….ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ. ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ. ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ. ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ. ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ! ಇಂಥದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ. ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ. ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ. ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ. ಕೆಲವು ರುಚಿಸುವುದಿಲ್ಲ. ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ. ಮಾಡಬಹುದಾದ ಕೆಲಸಗಳು ವಿಪುಲವಾಗಿವೆ. ಸಮಯವೂ ಧಾರಾಳವಾಗಿದೆ. ಬದುಕಿಗೂ, ಮಾನವೀಯ ಚಟುವಟಿಕೆಗಳಿಗೂ ನಿಕಟ ಸಂಬಂಧವಿದೆ ಎಂಬುದು ನನ್ನ ತಿಳಿವು. ನಾವು ಬದುಕಿದ್ದೇವೆ – ಎಂದು ಅನಿಸಿಕೊಳ್ಳುವುದಕ್ಕಾದರೂ ನಮಗೆ ಒಂದಲ್ಲ ಒಂದು ಚಟುವಟಿಕೆ ಬೇಕೇ ಆಗುತ್ತದೆ. ಆ ಚಟುವಟಿಕೆಯೇ ನಮ್ಮ ಮನಸ್ಸಿನ ಅಭಿರುಚಿಗೆ ಒಗ್ಗಿದ ಒಂದು ಕೆಲಸ ಅನಿಸಿದರಾಯಿತು” 

ಕಾರಂತರು ತಾವು ಬದುಕಿದ 95ವರ್ಷಗಳಲ್ಲಿ ನಿರಂತರವಾಗಿ ನವ ಯುವಕರಂತೆ ಊರೂರು ಅಲೆದು, ಜನಸಮುದಾಯದಲ್ಲಿ ಬೆರೆತು, ತಾವು ಬದುಕಿನಲ್ಲಿ ಕಂಡುಕೊಂಡ ದರ್ಶನಗಳನ್ನು ಹಂಚಿಕೊಳ್ಳುತ್ತ, ಕೇಳುಗರಿಗೆ ಮಾಹಾನ್ ಪುರುಷರ ವ್ಯಾಖ್ಯೆಗಳನ್ನು ಕೇಳುತ್ತಿರುವ ಅನುಭವವಾಗುತ್ತಿರುವಷ್ಟರಲ್ಲೇ, ನಾನಿನ್ನೂ ಬದುಕಿನ ವಿದ್ಯಾರ್ಥಿ ಎಂದು ವಿನೀತಭಾವ ತೋರ್ಪಡಿಸಿ ಈ ಬ್ರಹ್ಮಾಂಡದ ಅಖಂಡತೆಯಲ್ಲಿ ಮತ್ತೊಮ್ಮೆ ಕಾರ್ಯಪ್ರವೃತ್ತರಾಗುತ್ತಿದ್ದರು. ಡಾ. ಶಿವರಾಮ ಕಾರಂತರು ಮಂಗಳೂರಿಗೆ 50 ಮೈಲಿ ದೂರದ ಕೋಟ ಎಂಬ ಚಿಕ್ಕ ಗ್ರಾಮದಲ್ಲಿ 1902ರ ಅಕ್ಟೋಬರ್ 10ರಂದು ಜನಿಸಿದರು. ಅವರ ತಂದೆ ಶ್ರೀ. ಕೆ. ಶೇಷ ಕಾರಂತ. ತಾಯಿ ಶ್ರೀಮತಿ. ಲಕ್ಷ್ಮಿ. ಕೋಟ ಮತ್ತು ಕುಂದಾಪುರಗಳಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಕಾರಂತರು ಪಡೆದರು. ಚಿಕ್ಕಂದಿನಲ್ಲೇ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಕಾರಂತರಿಗೆ ಆಸಕ್ತಿ ಹುಟ್ಟಿತು.

ಕಾರಂತರು ಶಾಲೆಯಲ್ಲಿ ಕುಳಿತು ಕಲಿತದ್ದಕ್ಕಿಂತ ನಿಸರ್ಗದಲ್ಲಿ ವಿಹರಿಸಿ ಬದುಕಿನ ಶಾಲೆಗಳಲ್ಲಿ ಕಲಿತಿದ್ದೆ ಹೆಚ್ಚು. ಅವರದೇ ಪರಿಯಲ್ಲಿ ಹೇಳುವುದಾದರೆ ಮುಂಜಾನೆಯ ಹಕ್ಕಿಗಳ ಉಲಿತ, ಹರಳುಗಲ್ಲಿನ ಮೇಲೆ ಓಡುವ ನದಿಯೊಂದರ ನಾದ, ಸಂಜೆಯ ಗಾಳಿಗೆ ಮಿದುವಾಗಿ ಉರುಳುವ ಕಡಲಿನ ಮೊರೆತ, ಅಲೆಗಳು ಮರಳ ದಿನ್ನೆಯನ್ನೇರಿ ತಿರುಗಿ ಕಡಲನ್ನು ಸೇರುವ ಜೋಗುಳ, ನೀಲ ಬಾನಿನ ಚುಕ್ಕಿಗಳ ವಿಸ್ತಾರ ರಾಜ್ಯ, ಹಸಿರು ಕಾನನ ಇವುಗಳೆಲ್ಲ ಅವರಿಗೆ ಪಾಠಕ್ಕಿಂತ ಹೆಚ್ಚು ಪ್ರಿಯ.

ಡಾ. ಶಿವರಾಮ ಕಾರಂತ

ಜೀವನದ ಸಹಸ್ರಾರು ಸಮಸ್ಯೆಗಳಿಗೆ ಸದಾ ತೆರೆದ ಮನಸ್ಸು, ಕುಂದದ ಕುತೂಹಲ ಮತ್ತು ನಿರಂತರ ಸಾಧನೆಯ ಛಲ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಅಥವಾ ನಿರಾಕರಿಸುವ ಸ್ವಭಾವ ಇವೆಲ್ಲವನ್ನೂಕಾರಂತರು ಪ್ರಾರಂಭದಿಂದಲೇ ಮೈಗೂಡಿಸಿಕೊಂಡರು. ತಮಗನ್ನಿಸಿದ್ದನ್ನು ಕೈಗೊಳ್ಳಲು ಹಿಂದೆ ಮುಂದೆ ನೋಡಿದವರಲ್ಲ. ಗಾಂಧೀಜಿಯವರ ಅಸಹಕಾರ ಚಳುವಳಿಯ ಕರೆಯ ಬಗ್ಗೆ ಪತ್ರಿಕೆಯಲ್ಲಿ ಓದಿ ಆ ಕ್ಷಣದಲ್ಲೇ ತಮ್ಮ ಶಾಲಾ ಪ್ರಿನ್ಸಿಪಾಲರಿಗೆ, “I want to non-co-operate with your education system” ಎಂದು ಚೀಟಿ ನೀಡಿ ಹೊರಬಂದರು. ಇದೇನು, ಆ ಹುಡುಗ ಲೀವ್ ಲೆಟರ್ ಇಟ್ಟಂತೆ ಈ ಪತ್ರವನ್ನಿಟ್ಟು ಹೋಗುತ್ತಿದ್ದಾನಲ್ಲ, ಅವನನ್ನು ಕರೆಯಿರಿ ಎಂದು ಹೇಳುವಷ್ಟರಲ್ಲಿ ಇವರು ಹಿಂದಿರುಗಿ ನೋಡದೆ ಹೊರಟುಬಿಟ್ಟಿದ್ದರು. ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ಗಾಂಧೀವಾದದಲ್ಲಿ ಪ್ರಭಾವಿತರಾಗಿ ಸಾಕಷ್ಟು ಕಾಲ ಸವೆಸಿದರೂ ಅದಕ್ಕೇ ಜೋತುಬೀಳದೆ ಬದುಕಿನ ವೈವಿಧ್ಯತೆಯೆಡೆಗೆ ದೃಷ್ಟಿ ಹಾಯಿಸಿದರು.

ತಮ್ಮ ಬದುಕಿಗೆ ಯಾವುದೇ ಸೀಮಿತ ಪರಿಧಿಗಳನ್ನು ವಿಧಿಸಿಕೊಳ್ಳಲು ಬಯಸದ ಕಾರಂತರಿಗೆ ಜ್ಞಾನದ ಎಲ್ಲ ಶಾಖೆಗಳೂ ಹತ್ತಿರವಾಗಿ ಕಂಡವು. ಸಾಹಿತ್ಯ ರಚನೆ, ನಾಡ ಹಬ್ಬ, ಶಿಕ್ಷಕರ ಸಮ್ಮೇಳನ ಮುಂತಾದ ಚಟುವಟಿಕೆಗಳನ್ನು ಪುತ್ತೂರಿನಲ್ಲಿ ಪ್ರಾರಂಭಿಸಿದರು. ಕಾರಂತರಂತೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾದ ಬರಹಗಾರರು ಇಲ್ಲವೇ ಇಲ್ಲ ಎನ್ನಬೇಕು. ಅವರು ಮಾಡಿದ “ಬಾಲ ಪ್ರಪಂಚ”, “ವಿಜ್ಞಾನ ಪ್ರಪಂಚ” ಯೋಜನೆಗಳು ವಿಶ್ವ ವಿದ್ಯಾಲಯಗಳಿಗೆ ಮಾತ್ರ ಸಾಧ್ಯವಿರುವಂತದ್ದು. ಇಂತಹದ್ದನ್ನು ಒಬ್ಬರೇ ಕೈಗೊಂಡು ಸಾಧಿಸಿದರು. ಸಿರಿಗನ್ನಡ ಅರ್ಥಕೊಶವನ್ನು ತಯಾರಿಸಿದರು. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದರು. ಸ್ವತಃ ಹಲವು ಪ್ರಯೋಗಗಳನ್ನು ನಡೆಸಿದರು. ಶಿಲ್ಪಕಲೆ, ಚಿತ್ರಕಲೆಗಳ ಕುರಿತಾದ ಪುಸ್ತಕಗಳನ್ನು ಬರೆದರು. ಸ್ವತಃ ಚಿತ್ರರಚನೆಯನ್ನೂ ಮಾಡಿದರು. ಚಲನಚಿತ್ರ ನಿರ್ಮಿಸಿದರು, ನಿರ್ದೇಶಿಸಿದರು. ನಾಟಕ, ಯಕ್ಷಗಾನಗಳಲ್ಲಿ ನಟಿಸಿದರು. ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನೂ, ಹಲವಾರು ಪ್ರವಾಸ ಕಥನಗಳನ್ನೂ, ಆತ್ಮ ಚರಿತ್ರೆಯನ್ನೂ ಬರೆದರು. ಐ.ಬಿ..ಬಿ.ಎಚ್ ಪ್ರಕಾಶನ ಮಕ್ಕಳಿಗಾಗಿ ಪ್ರಕಟಿಸಿದ ಅಮರ ಚಿತ್ರಕಥೆಗಳನ್ನು ಅನುವಾದಿಸಿದರು. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿಪುಲವಾದ ಪ್ರಯೋಗಗಳನ್ನು ನಡೆಸಿದರು. ಚುನಾವಣೆಗಳಲ್ಲಿ ಸ್ಪರ್ಧಿಸುವುದೂ ಸೇರಿದಂತೆ ಭಾರತದ ರಾಜಕೀಯದಲ್ಲಿ ಕ್ರಿಯಾಶೀಲ ಸಂಬಂಧವನ್ನು ತೋರಿದರು. ‘ ಪ್ರಾಣಿ ಪ್ರಪಂಚದ ವಿಸ್ಮಯಗಳು’ ಅವರು 90 ವರ್ಷದ ಸಮೀಪದಲ್ಲಿದ್ದಾಗ ಪ್ರಕಟವಾದ ಕೃತಿ. ಒಂದು ಕಾಲದಲ್ಲಿ ಅವರು ತಮ್ಮ ಪುಸ್ತಕಗಳಿಗೆ ತಾವೇ ಪ್ರಕಾಶಕರೂ, ವಿನ್ಯಾಸಕರೂ, ಮುದ್ರಕರೂ, ಮಾರಾಟಗಾರರೂ ಆಗಿದ್ದರು. ಕೆಲವೊಂದಕ್ಕೆ ನಾನೇ ಓದುಗನೂ ಆಗಿದ್ದೆ ಎಂದು ತಮ್ಮನ್ನೇ ತಾವು ಹಾಸ್ಯ ಮಾಡಿಕೊಳ್ಳುತ್ತಿದ್ದರು.
ಕಾರಂತರಿಗೆ ಅವರ ಬದುಕು ಬೇರೆಯಲ್ಲ, ಬರವಣಿಗೆ ಬೇರೆಯಲ್ಲ. ಅವರು ಪರಿಸರ ಮಾಲಿನ್ಯದ ಬಗ್ಗೆಯಾಗಲೀ, ಪ್ರಾಕೃತಿಕ ಸಮತೋಲನದ ಬಗ್ಗೆಯಾಗಲೀ, ಪಾಂಡಿತ್ಯಪೂರ್ಣವಾಗಿ ಬರೆಯುವಷ್ಟೇ ಖಾಳಜಿಯಿಂದ ಅವುಗಳನ್ನು ಕುರಿತ ಚಟುವಟಿಕೆಗಳ ಜವಾಬ್ದಾರಿಯನ್ನೂ ವಹಿಸುತ್ತಿದ್ದರು. ಸಂಗೀತ, ಚಿತ್ರ, ನಟನೆ, ಪ್ರವಾಸ ಯಾವುದೇ ಆಗಲಿ ಸ್ವಾನುಭವದಲ್ಲಿ ಆಗಿ ಬರದೆ ಅವರಿಗೆ ತೃಪ್ತಿ ಇರುತ್ತಿರಲಿಲ್ಲ.

ಗಾಂಧೀಜಿ ಆದರ್ಶ, ಸಬರಮತಿ ಆಶ್ರಮ ವಾಸ, ರಾಮಕೃಷ್ಣ ಪರಮಹಂಸರಲ್ಲಿ ಪೂಜ್ಯಭಾವ ಇವೆಲ್ಲ ಕಾರಂತರಿಗೆ ದೇವರನ್ನು ಕುರಿತ ವಿಷಯದಲ್ಲಿ ಆಸಕ್ತಿ ಹುಟ್ಟಿಸಿತು. ಈ ನಿಟ್ಟಿನಲ್ಲಿ ಧ್ಯಾನ, ಭಜನೆ, ನಿರ್ಜನ ಮಸಣ ಮತ್ತು ಅರಣ್ಯಗಳಲ್ಲಿ ಏಕಾಂತ, ದೇಹದಂಡನೆ, ಆಚಾರ ಇವೆಲ್ಲವನ್ನೂ ದೇವರ ಅರಸುವಿಕೆಯಲ್ಲಿ ಶ್ರದ್ಧಾಪೂರ್ಣವಾಗಿಯೇ ಕೈಗೊಂಡರು. ಈ ಹಂತದಲ್ಲಿ ಅವರು ಕಂಡುಕೊಂಡ ಸತ್ಯವೆಂದರೆ: “ನಾನು ಎಷ್ಟೂ ಚಿಂತಿಸಲಿ, ಹೇಗೂ ಚಿಂತಿಸಲಿ – ನನ್ನ ದೇವರು ನನ್ನ ಮಿತಿಯನ್ನು, ನನ್ನ ಜೀವನದ ಅನುಭವಗಳ ಮಿತಿಯನ್ನು ತೋರಿಸಿಕೊಡುತ್ತಿತ್ತು. ದೇವರ ಚೆಲುವು, ದೊಡ್ಡಸ್ತಿಕೆ, ಉದಾರಗುಣಗಳು ನಮ್ಮ ಅನುಭವಗಳ ಮಿತಿಯನ್ನು ದಾಟಲಾರವೆಂಬ ತಿಳಿವಿಗೆ ನಾನು ಬರಬೇಕಾಯಿತು. ಇದರಿಂದ ನನಗೆ ಅನಿಸುವುದೆಂದರೆ, ಮಾನವನು ತಾನು ದೊಡ್ದವನಾಗದೆ ತನ್ನ ದೇವರನ್ನು ದೊಡ್ಡದು ಮಾಡಲಾರ. ನಾವು ನಮ್ಮ ಜೀವನವನ್ನು ಬೆಳೆಸಿದರೆ ಮಾತ್ರ ನಮ್ಮ ದೇವರೂ ಬೆಳೆಯಬಹುದು.”

ಕಾರಂತರ ಲೋಕದೃಷ್ಟಿ ಅಸಾಧಾರಣವಾದದ್ದು. ಅವರ ನಿಷ್ಠೆ ಕೇವಲ ಒಂದು ಮನುಷ್ಯ ಸಮೂಹಕ್ಕಾಗಲಿ, ಒಂದು ನಿರ್ದಿಷ್ಟ ಭೌಗೋಳಿಕ ಪರಿಸರಕ್ಕಾಗಲೀ ಸೀಮಿತವಾಗಿರಲಿಲ್ಲ. ಇಡೀ ಬ್ರಹ್ಮಾಂಡವನ್ನು ಒಳಗೂಳ್ಳುವ ಉದಾರವಾದ ಮನಸ್ಸು ಕಾರಂತರದ್ದು. ಈ ಬ್ರಹ್ಮಾಂಡದಲ್ಲಿ ಅಸಂಖ್ಯ ನಕ್ಷತ್ರಗಳೂ, ಗ್ರಹಗಳೂ ಇವೆ. ಭೂಮಂಡಲ ಈ ಅಗಾಧವಾದ ಬ್ರಹ್ಮಾಂಡದ ಒಂದು ಚಿಕ್ಕ ಭಾಗ ಅಷ್ಟೆ. ಈ ಭೂಮಂಡಲದಲ್ಲಾದರೂ ಅಸಂಖ್ಯ ಜೀವಿಗಳಿದ್ದಾವೆ. ಈ ಜೀವ ಸಂಕುಲದಲ್ಲಿ ಮನುಷ್ಯ ಕುಲ ಒಂದು ಚಿಕ್ಕ ಗುಂಪು. ಈ ಮನುಷ್ಯ ಕುಲದಲ್ಲಿ ಹಲವು ರೀತಿಯ ಮನುಷ್ಯರಿದ್ದಾರೆ. ಆದ್ದರಿಂದ ಯಾವುದೇ ಮನುಷ್ಯನು ತಾನೇ ಶ್ರೇಷ್ಠ, ಮೇಲು ಎಂದು ಗರ್ವ ಪಟ್ಟುಕೊಳ್ಳುವ ಹಾಗಿಲ್ಲ. ಅವನು ಇತರ ಎಲ್ಲಾ ಮನುಷ್ಯರೊಂದಿಗಷ್ಟೇ ಅಲ್ಲ, ಇಡೀ ಜೀವ ಸಂಕುಲದೊಡನೆ ಈ ಬ್ರಹ್ಮಾಂಡದಲ್ಲಿ ಬಾಳ್ವೆ ನಡೆಸಬೇಕು. ಕೇವಲ ಒಂದು ಜೀವ ಘಟಕವಾದ ಮನುಷ್ಯ ತನ್ನನು ಇಡೀ ಬ್ರಹ್ಮಾಂಡದೊಂದಿಗೆ ಸಮೀಕರಿಸಿ ನೋಡಿದಾಗ ಮಾತ್ರ ತನ್ನ ಮಿತಿಯನ್ನು ಅರಿತುಕೊಳ್ಳುತ್ತಾನೆ. ತಾನು ಬದುಕಿಗೆ ನೀಡುವುದಕ್ಕಿಂತ ಬದುಕು ತನಗೆ ನೀಡಿದ್ದು ಹೆಚ್ಚು ಎಂದು ತಿಳಿದುಕೊಳ್ಳುತ್ತಾನೆ. ಇದರಿಂದ ಅವನಲ್ಲಿ ಕೀಳರಿಮೆ ಮೂಡಬೇಕಿಲ್ಲ; ವಿನೀತಭಾವ ಬೆಳೆಯಬೇಕು. ಎಲ್ಲದರ ಬಗ್ಗೆ ಕುತೂಹಲ ಹುಟ್ಟಬೇಕು. ಎಲ್ಲವನ್ನೂ ತಿಳಿಯುವಲ್ಲಿ, ಹಂಚಿಕೊಳ್ಳುವಲ್ಲಿ, ಬದುಕನ್ನು ಮತ್ತಷ್ಟು ಸುಂದರ, ಸಮೃದ್ಧಗೊಳಿಸುವಲ್ಲಿ ಸಾರ್ಥಕ್ಯ ಪಡೆಯಬೇಕು. ಇದು ಒಟ್ಟಾರೆ ಕಾರಂತರ ಜೀವನ ದೃಷ್ಟಿಯಾಗಿದೆ.

ಒಬ್ಬ ಸಾಹಿತಿಯ ಹೊಣೆ ಸಾಮಾನ್ಯ ಜನತೆಯ ಹೊಣೆಗಿಂತಲೂ ಹೆಚ್ಚಿನದೆಂದು ಭಾವಿಸುವ ಕಾರಂತರು, ಬರಹಗಾರ ತನ್ನ ಜನಗಳ ಸಲುವಾಗಿ ಶ್ರಮಿಸಬೇಕು. ಅವರ ಬದುಕಿನ ಮೂಕ ಜೀವನಕ್ಕೆ ನಾಲಿಗೆಯಾಗಬೇಕು, ಅವರ ತಿಳಿವಿನ ಅಂಧಕಾರಕ್ಕೆ ಆತ ಬೆಳಕಾಗಬೇಕು ಮತ್ತು ಅವರ ಜೀವನದ ಚಿತ್ತಭಿತ್ತಿಯಾಗಬೇಕು ಎನ್ನುತ್ತಿದ್ದರು. ಕಾರಂತರ ಯಾವುದೇ ಬರಹವೂ ಈ ಮೂಲ ತತ್ವಕ್ಕೆ ಹೊರತಾಗಿಲ್ಲ. ಈ ಎಲ್ಲಕ್ಕೂ ಮಿಗಿಲಾದದ್ದು, ಸಾಧ್ಯವಿದ್ದಷ್ಟನ್ನು ಅನುಭವಿಸಿ ತಿಳಿದುಕೊಳ್ಳಬೇಕು. ಇತರರಿಗೆ ತಿಳಿಸಬೇಕು ಎಂಬ ಅವರ ಮನೋಧರ್ಮ. ಈ ಹಾದಿಯಲ್ಲಿ ಯಾವುದೇ ಒಣ ತ್ಯಾಜ್ಯ ಮನೋಭಾವಗಳು ಅವರಲ್ಲಿ ಸುಳಿಯುವುದಿಲ್ಲ. ‘ಬಾಳು ನನಗೆ ಮುಖ್ಯ’ ಎನ್ನುವ ಅವರು, ನಿಸರ್ಗದಿಂದ ಪಡೆದ ಈ ದೊಡ್ಡ ವರವನ್ನು, ಅನನ್ಯವಾದ ಅವಕಾಶವನ್ನು ಸದುಪಯೋಗಿಸಿಕೊಂಡು ಚೆನ್ನಾಗಿ ಬಾಳಬೇಕು, ಸಾಧ್ಯವಾದ ಮಟ್ಟಿಗಿನ ಪೂರ್ಣತೆಯನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ನಿಲುವನ್ನು ಪ್ರತಿಪಾದಿಸಿದವರು. “ಬಾಳ್ವೆಯೇ ಬೆಳಕು” ಪ್ರಬಂಧದಲ್ಲಿ ಈ ಆದರ್ಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಕಾರಂತರು ಆದರ್ಶವಾದಿಗಳಾಗಿ ಇರುವಷ್ಟೇ ವಾಸ್ತವಾವಾದಿಗಳೂ ಆಗಿದ್ದರು. ವಿಕಾಸದ ಆದರ್ಶ ಇಡೀ ಒಂದು ಸಮುದಾಯದ ದೃಷ್ಟಿಯಿಂದ ದೂರದ ಕನಸಾಗಿ ಕಂಡರೂ ವೈಯಕ್ತಿಕ ಮಟ್ಟದಲ್ಲಿ ಅದು ಅಸಾಧ್ಯವಲ್ಲ ಎನ್ನುವುದು ಅವರ ಕಾದಂಬರಿಗಳು ತೋರಿಸಿಕೊಡುತ್ತವೆ. ಅಂತೆಯೇ ಈ ದೃಷ್ಟಿ ಒಟ್ಟು ಕಾದಂಬರಿಯ ಆಶಯದಲ್ಲಿ, ಅಲ್ಲಿನ ಕೆಲವೊಂದು ಪಾತ್ರಗಳ ಶೀಲದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಅವರ ಒಲವು ಎತ್ತ ಎನ್ನುವುದನ್ನೂ ಸ್ಪುಟವಾಗಿಸುತ್ತವೆ. ಸುತ್ತಲಿನ ಸಾಮಾಜಿಕ ಜೀವನದಲ್ಲಿ, ರಾಜಕೀಯ ವಿದ್ಯಮಾನಗಳಲ್ಲಿ, ಧಾರ್ಮಿಕ ಜೀವನಕ್ಕೆ ಸಂಬಂಧಿಸಿದ ನಿಷ್ಠೆ ನಂಬಿಕೆಗಳಲ್ಲಿ ಯಾವ ಯಾವುದೆಲ್ಲ ಬದುಕನ್ನು ಹದಗೆಡಿಸಬಲ್ಲದೋ ಅದರ ವಿವಿಧ ಮುಖಗಳನ್ನು ಮಾತ್ರ ಅವರ ವಾಸ್ತವದೃಷ್ಟಿ ಎತ್ತಿ ತೋರಿಸುತ್ತದೆ. ಅಷ್ಟು ಮಾತ್ರವನ್ನು ಅವರು ಮಾಡಿದ್ದರೆ ಅವರ ನೋಟ ನಿರಾಶೆಯದಾಗುತ್ತಿತ್ತು. ಇವುಗಳಿಗೆ ಇದಿರಾಗಿ ಜೀವನವನ್ನು ಒಳ್ಳೆಯದಾಗಿಸಬಲ್ಲ ಅಂಶಗಳನ್ನೂ ಕೆಲವೊಂದು ಪಾತ್ರಗಳ ಮೂಲಕ ಸೂಚಿಸುತ್ತಾರೆ. ಈ ಅಂಶಗಳೆಂದರೆ ಅವಿಶ್ರಾಂತ ದುಡಿಮೆ, ಸಂಕಲ್ಪ ಶುದ್ಧಿ, ಪ್ರಾಮಾಣಿಕ ಉದ್ದೇಶ, ನಿಷ್ಠೆ, ಎಂಥ ಬಡತನವೂ ಕೆಡಿಸಲಾಗದ ಹೃದಯದ ಒಲುಮೆ, ಚೆಲುವಾದದ್ದೆಲ್ಲದರ ಬಗೆಯಲ್ಲಿ ಗೌರವ, ಅದನ್ನು ಸವಿಯಬಲ್ಲ ಮನಸ್ಸಿನ ಪರಿಪಾಕ, ಬದುಕನ್ನು ಸಂಮೃದ್ಧವಾಗಿಸಿ, ಸಂತೋಷಕೊಡಬಲ್ಲ ಪ್ರತಿಯೊಂದರಲ್ಲಿಯೂ ಆಸಕ್ತಿ ಇವೇ ಮುಂತಾದ್ದವನ್ನು ಹೇಳಬಹುದು. ಕಾರಂತರ ಈ ಆದರ್ಶ – ವಾಸ್ತವಗಳ ಸಮನ್ವಯ ದೃಷ್ಟಿಯೇ ಅವರ ಹಿರಿತನವೂ ಹೌದು.

-ವಿದ್ಯಾ ಶ್ರೀ ಬಿಬಳ್ಳಾರಿ

10 Responses

 1. ಮಹೇಶ್ವರಿ ಯು says:

  ಕಾರಂತರ ವ್ಯಕ್ತಿ ತ್ವವನ್ನು ಚೆನ್ನಾಗಿ ಹಿಡಿದಿಟ್ಟ ಬರಹ. ಎಳೆಯ ಪೀಳಿಗೆ ಇಂತಹ ಹಿರಿಯ ಚೇತನ ಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಬಹಳವಿದೆ.ಆದರೆ ಗ್ರಂಥಾಲಯ ಗಳಲ್ಲಿ ಅವರ ಬರಹಗಳು ಓದುಗರನ್ನು ಎದುರು ನೋಡುತ್ತಾ ಕಪಾಟುಗಳಲ್ಲಿ ಕುಳಿತಿರುವುದು ಅತ್ಯಂತ ವಿಷಾದ ನೀಯ.
  ಸಹೋದರಿಗೆ ಅಭಿನಂದನೆ ಗಳು

 2. ಶಿವಮೂರ್ತಿ.ಹೆಚ್. says:

  ಬಹಳ ಸುಂದರ ಲೇಖನ

 3. SHARANABASAVEHA K M says:

  ಬಹಳ ಅತ್ಯುತ್ತಮ ಬರಹ ಕಾರಂತರ ಬಗ್ಗೆ ವಿಭಿನ್ನ ರೀತಿಯಲ್ಲಿ ಬೆಳಕು ಚೆಲ್ಲುತ್ತದೆ. ಧನ್ಯವಾದಗಳು ಮೇಡಂ

 4. ಕೆ. ರಮೇಶ್ says:

  ಬಹಳ ಚೆನ್ನಾಗಿ ಮೂಡಿಬಂದಿದೆ.

 5. ನಾಗರತ್ನ ಬಿ. ಅರ್. says:

  ಕಾರಾಂತರ ವ್ಯಕ್ತಿತ್ವವನ್ನು ಹಲವಾರು ಮಗ್ಗುಲಗಳಲ್ಲಿ ಪರಿಚಯಿಸಿರುವ ರೀತಿ ಬಹಳ ಚೆನ್ನಾಗಿ ಮೂಡಿಬಂದಿದೆ ಖುಷಿಯಾಯ್ತು.ಗೆಳತಿ ಅಭಿನಂದನೆಗಳು.

 6. ನಯನ ಬಜಕೂಡ್ಲು says:

  ಸಾಕಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನ, ಚೆನ್ನಾಗಿದೆ

 7. dharmanna dhanni says:

  ಅರ್ಥಪೂರ್ಣ ಬರಹ

 8. ಆರ್. ಎಸ್...ಗಜಾನನ says:

  ಕಡಲತೀರದ ಭಾರ್ಗವ ಕಾರಂತರ ಬಗ್ಗೆ ಸೊಗಸಾದ ಲೇಖನ. ಹಲವಾರು ವಿಶ್ವ ವಿದ್ಯಾಲಯಗಳು ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಒಬ್ಬ ದೊಡ್ಡ ಮಟ್ಟದ ದಾರ್ಶನಿಕರೇ ಶ್ರೀ ಕಾರಂತರು. ಇಡಿಯಾಗಿರೋದನ್ನ ಒಂದು ಹಿಡಿಯಲ್ಲಿ ಉತ್ತಮ ವಾಗಿ ನೀಡಿದ್ದೀರಿ. ಧನ್ಯವಾದಗಳು.

 9. . ಶಂಕರಿ ಶರ್ಮ says:

  ಅಭೂತಪೂರ್ವ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರಿಗೆ, ನಮ್ಮೂರು ಪುತ್ತೂರು ಕೂಡಾ ಆಡುಂಬೊಲವಾಗಿತ್ತು ಎಂಬುದು ನಮಗೆ ಹೆಮ್ಮೆಯ ವಿಷಯ. ಅವರು ಕಟ್ಟಿ ಬೆಳೆಸಿದ ಪುತ್ತೂರಿನ “ಬಾಲವನ”ವು ಈಗಲೂ ತನ್ನ ಎಡೆಬಿಡದ ಕಾರ್ಯಚಟುವಟಿಕೆಗಳಿಗೆ ಹೆಸರಾಗಿದೆ. ಅವರ ಸಂಕ್ಷಿಪ್ತ ಪರಿಚಯ ಲೇಖನ ಬಹಳ ಚೆನ್ನಾಗಿದೆ ಮೇಡಂ..ಧನ್ಯವಾದಗಳು.

 10. Padma Anand says:

  ಲೇಖನ ಕಾರಂತರ ಉನ್ನತ ಮಟ್ಟದ ಜೀವನ ಧ್ಯೇಯ, ಪ್ರೌಢ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ಬಿಂಬಿಸಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: