ಜ್ಯೋತಿ ಸ್ವರೂಪನಾದ ಆದಿದೈವ – ಶಿವ

Share Button

ಅಂದು ಶಿವರಾತ್ರಿ. ಶಿವಾಲಯಗಳಲ್ಲಿ – ಗಂಟೆ, ಜಾಗಟೆಗಳ ಸದ್ದಿನೊಂದಿಗೆ, ಓಂಕಾರದ ನಾದ ಹೊರ ಹೊಮ್ಮುತ್ತಿತ್ತು ಪುಷ್ಪಗಳಿಂದ, ಧೂಪ ದೀಪಗಳಿಂದ ಅಲಂಕೃತನಾದ ಶಿವನನ್ನು ಹೇಗೆ ತಾನೆ ಬಣ್ಣಿಸಲಿ?. ನಾನು ನೋಡ ನೋಡುತ್ತಿದ್ದಂತೇ, ಆ ದೀಪಗಳ ಮಧ್ಯೆ ಕಂಗೊಳಿಸುತ್ತಿದ್ದ ಶಿವಲಿಂಗ ನಿಧಾನವಾಗಿ ಜ್ಯೋತಿ ಸ್ವರೂಪವಾಗಿ ಇಡೀ ಗರ್ಭಗುಡಿಯ ತುಂಬಾ ವ್ಯಾಪಿಸಿತು. ಅಚ್ಚರಿಯಿಂದ ನೋಡುತ್ತಿದ್ದ ನನಗೆ ಕೇಳಿಸಿತು, ಶಂಕರರ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ.

ಸೌರಾಷ್ಟ್ರೇ ಸೋಮನಾಥಂಚ, ಶ್ರೀಶೈಲೇ ಮಲ್ಲಿಕಾರ್ಜುನಮ್,
ಉಜ್ಜಯಿನ್ಯಾಮ್ ಮಹಾಕಾಲಮೋಂಕಾರ ಮಮಲೇಶ್ವರೇ,
ಪರಳ್ಯಾಂ ವೈದ್ಯನಾಥಂಚ ಡಾಕಿನ್ಯಾಂ ಭೀಮಶಂಕರಂ,
ಸೇತು ಬಂಧೇತು ರಾಮೇಶಂ, ನಾಗೇಶಂ ದಾರುಕಾವನೆ,
ಹಿಮಾಲಯೇತು ಕೇದಾರಮ್, ತ್ರಯಂಬಕಮ್ ಗೌತಮೀ ತಟೇ,
ವಾರಣಾಸ್ಯಂತು ವಿಶ್ವೇಶಮ್, ಘುಶ್ನೇಶಮ್ ಶಿವಾಲಯೇ


ಅಬ್ಬಾ, ಇಡೀ ಭಾರತವರ್ಷದ ಉದ್ದಗಲದಲ್ಲೂ ನೆಲೆಯಾಗಿರುವ ಈ ಜೋತಿರ್ಲಿಂಗಗಳ ಮಹತ್ವ ಏನಿರಬಹುದು? ಇಡೀ ಮಾನವ ಜನಾಂಗದ ಸಮಗ್ರ ವಿಕಾಸಕ್ಕೆಂದೇ ಉದಯಿಸಿತೇ ಈ ಜ್ಯೋತಿರ್ಲಿಂಗ? ಸಮುದ್ರರಾಜನ ತೀರದಲ್ಲಿ ಬೆಳಗುತ್ತಿರುವ ಸೋಮನಾಥ ಮತ್ತು ರಾಮೇಶ್ವರ, ನದೀ ತೀರದಲ್ಲಿ ರಾರಾಜಿಸುತ್ತಿರುವ ಓಂಕಾರೇಶ್ವರ, ವಿಶ್ವನಾಥ, ತ್ರಯಂಬಕೇಶ್ವರ ಪರ್ವತ ಶಿಖರಗಳಲ್ಲಿ ಕಂಗೊಳಿಸುತ್ತಿರುವ ಕೇದಾರ, ಮಲ್ಲಿಕಾರ್ಜುನ, ಭೀಮಾಶಂಕರ, ಘುಶ್ನೇಶ್ವರ ಹಾಗೂ ಬಯಲು ಪ್ರದೇಶದಲ್ಲಿ ಪ್ರಕಾಶಿಸುತ್ತಿರುವ ವೈದ್ಯನಾಥ, ಮಹಾಕಾಲೇಶ್ವರ, ನಾಗೇಶ್ವರ.

ಈ ಜ್ಯೋತಿರ್ಲಿಂಗಗಳ ಉಗಮ ಹಾಗೂ ಮಹತ್ವದ ಕುರಿತು, ಶಿವನ ಮುಂದೆ ಸದಾ ಆಸೀನನಾಗಿರುವ ನಂದಿಯನ್ನು ಕೇಳೋಣವೇ? ಕಣ್ಣರಳಿಸಿ, ಕಿವಿಯಗಲಿಸಿ ಕುಳಿತಿದ್ದ ನಂದಿ, ಜ್ಯೋತಿರ್ಲಿಂಗದ ಮಹಿಮೆಯ ಬಗ್ಗೆ ಹೇಳತೊಡಗಿದ ”ಆದಿದೇವ ಶಿವನ ವಿರಾಟ್ ರೂಪವೇ ಜ್ಯೋತಿರ್ಲಿಂಗಗಳು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಲಯಕರ್ತನೆಂದೇ ಪ್ರಖ್ಯಾತಿ. ದುಷ್ಟ ಶಕ್ತಿಗಳನ್ನೆಲ್ಲಾ ವಿನಾಶಗೊಳಿಸುವುದರ ಜೊತೆಜೊತೆಗೇ ಇಡೀ ಜಗತ್ತನ್ನೇ ನಾದಮಯಗೊಳಿಸುವ ಮಹಾನ್ ಚೈತನ್ಯ. ‘ಜ್ಯೋತಿ’ ಮತ್ತು ‘ಲಿಂಗ’ ಗಳೆಂಬ ಪದಗಳಿಂದ ಉದ್ಭವವಾದ ‘ಜ್ಯೋತಿರ್ಲಿಂಗ’ವು ಶಕ್ತಿ ಸ್ವರೂಪವಾಗಿ, ಸತ್ ಚಿತ್ ಆನಂದ ನೀಡುವ ಬೆಳಕಾಗಿ ನಿಲ್ಲುವುದು. ಮನಸ್ಸು ಮತ್ತು ಆತ್ಮದ ಸಂಗಮದ ಪ್ರತೀಕವೂ ಹೌದು.”

ನಂದಿಯ ಮಾತುಗಳು ನನಗೆ ಮೋಡಿ ಹಾಕಿದ್ದವು -”ಪ್ರಾಚೀನ ಕಾಲದಿಂದಲೂ, ಹಿಂದೂ ಧರ್ಮವು, ಸಮಾಜದ ಪ್ರಾಪಂಚಿಕ ಏಳಿಗೆಗೆ ಪ್ರಾಮುಖ್ಯತೆಯನ್ನು ನೀಡದೇ, ಆಧ್ಯಾತ್ಮಿಕ ಏಳಿಗೆಗೆ ಮಹತ್ವ ನೀಡಿದೆ. ಈ ಭುವಿಯಲ್ಲಿರುವ ಪ್ರತಿಯೊಂದು ಜೀವಿಯಲ್ಲೂ, ಚೈತನ್ಯ ಸ್ವರೂಪನಾದ ಪರಶಿವನ ಅಂಶವಿರುವುದೆಂದು ಪ್ರತಿಪಾದಿಸುತ್ತದೆ. ಮಾನವನನ್ನು ಹುಟ್ಟು, ಸಾವುಗಳಿಂದ ಮುಕ್ತಗೊಳಿಸಿ, ಮುಕ್ತಿಪಥದತ್ತ ನಡೆಸುತ್ತದೆ. ನಶ್ವರವಾದ ಈ ಜಗತ್ತಿನಲ್ಲಿ, ಸಾಧನೆಯನ್ನು ಮಾಡುತ್ತಾ ಶಾಶ್ವತವಾದ ದಿವ್ಯಜ್ಞಾನವನ್ನು ಹೇಗೆ ಪಡೆಯುವುದು ಎಂಬುದರ ಅರಿವನ್ನು ಮೂಡಿಸುತ್ತದೆ. ತನು ಮನವನ್ನು ಸಂತೈಸಿ. ಸಂತಸದ ಬೆಳಕನ್ನು ಚೆಲ್ಲಿ, ಅರಿವಿನ ಒಳಗಣ್ಣನ್ನು ತೆರೆಸುತ್ತದೆ”

ನಂದಿ ಮಾತನ್ನು ಮುಂದುವರೆಸಿದ – ”ಶಿವ ಮಹಾಪುರಾಣದಲ್ಲಿ – ಜ್ಯೋತಿರ್ಲಿಂಗಗಳ ಉಗಮದ ಬಗ್ಗೆ ಪೌರಾಣಿಕವಾದ ಪ್ರಸಂಗವೊಂದು ಹೀಗಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು, ‘ನಾನು ಮೇಲು, ನಾನು ಮೇಲು’ ಎಂದು ವಾದ ಮಾಡತೊಡಗಿದರಂತೆ. ಅವರ ಚರ್ಚೆಗೆ ಅಂತ್ಯ ಹಾಡಲು, ಶಿವನು, ಒಂದು ಕಣ್ಣು ಕೋರೈಸುವ ಬೆಳಕಿನ ಕಂಬವಾಗಿ ಮೂರು ಲೋಕವನ್ನೂ ಭೇದಿಸುತ್ತಾ ಸಾಗುತ್ತಾನೆ. ಬ್ರಹ್ಮ ಮತ್ತು ವಿಷ್ಣುವಿಗೆ, ಈ ಜ್ಯೋತಿಯ ಅಂತ್ಯವನ್ನು ಹುಡುಕಲು ಸವಾಲೆಸೆಯುತ್ತಾನೆ. ವಿಷ್ಣುವು, ಶಿವನ ಜ್ಯೋತಿಯ ಅಂತ್ಯವನ್ನು ಹುಡುಕಲು ಪಾತಾಳಲೋಕಕ್ಕೂ, ಬ್ರಹ್ಮನು ಸ್ವರ್ಗಲೋಕಕ್ಕೂ ಧಾವಿಸುತ್ತಾರೆ. ವಿಷ್ಣುವು ಆ ವಿರಾಟ್ ಸ್ವರೂಪದ ಜ್ಯೋತಿಯ ಅಂತ್ಯವನ್ನು ಕಾಣಲಾರದೇ, ಹಿಂತಿರುಗಿ ಬಂದು ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮನು, ಜ್ಯೋತಿಯ ಅಂತ್ಯವನ್ನು ಕಂಡುದುದಾಗಿ ಸುಳ್ಳು ಹೇಳುತ್ತಾನೆ. ಕೋಪಗೊಂಡ ಶಿವನು, ‘ನಿನಗೆ ಭೂಲೋಕದಲ್ಲಿ ಎಂದಿಗೂ ಯಾರೂ ಪೂಜೆ ಸಲ್ಲಿಸದಿರಲಿ ಎಂದು ಶಪಿಸುತ್ತಾನೆ’. ಆದಿಯೂ ಇಲ್ಲದ, ಆಂತ್ಯವೂ ಇಲ್ಲದ ಪರಶಿವನ ದಿವ್ಯಜ್ಯೋತಿ ಸ್ವರೂಪವೇ ಜ್ಯೋತಿರ್ಲಿಂಗಗಳು”. ನಂದಿಯ ಮಾತುಗಳನ್ನು ಕೇಳುತ್ತಾ ನಾನು ಮೂಕವಿಸ್ಮಿತಳಾದೆ.

ಕೆಲವು ಪುರಾಣಗಳಲ್ಲಿ ಅರವತ್ನಾಲ್ಕು ಜ್ಯೋತಿರ್ಲಿಂಗಗಳ ಉಲ್ಲೇಖವಿದ್ದರೂ, ನಮಗೆ ದೊರೆತಿರುವುದು ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಮಾತ್ರ. ಈ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಿದ ಮಹರ್ಷಿಗಳ ಭೌಗೋಳಿಕ ಹಾಗೂ ಖಗೋಳಶಾಸ್ತ್ರದ ಜ್ಞಾನ ಅದ್ಭುತ. ಅಕ್ಷಾಂಶ ಮತ್ತು ರೇಖಾಂಶಗಳಲ್ಲಿರುವ ಚೈತನ್ಯದ ಕೇಂದ್ರ ಬಿಂದುಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ, ಅಂತಹ ಪುಣ್ಯಕ್ಷೇತ್ರಗಳಲ್ಲಿಯೇ ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿದರು. ಈ ಜ್ಯೋತಿರ್ಲಿಂಗವಿರುವ ದೇಗುಲಗಳಲ್ಲಿ ಪ್ರಚಂಡ ಶಕ್ತಿ ವ್ಯಾಪಿಸಿರುವುದು, ಅವರ ಜ್ಞಾನಕ್ಕೆ ಸಾಕ್ಷಿಯಾಗಿ ನಿಲ್ಲುವುದು. ನಿಸರ್ಗದಲ್ಲಿ ಅಡಗಿರುವ ಚೈತನ್ಯದ ಜೊತೆಗೇ ಮಾನವನಲ್ಲಿ ಸುಪ್ತವಾಗಿರುವ ಅಂತಃಶಕ್ತಿಯನ್ನೂ ಬಳಸಿಕೊಂಡು, ಈ ಜ್ಯೋತಿರ್ಲಿಂಗಗಳನ್ನು ನಿರ್ಮಿಸಲಾಗಿದೆ. ಆದುದರಿಂದಲೇ, ದೇಗುಲಕ್ಕೆ ಭೇಟಿ ನೀಡುವ ಭಕ್ತರಲ್ಲಿ ದಿವ್ಯವಾದ ಅನುಭೂತಿ ಉಂಟಾಗುವುದು. ಮನಸ್ಸು ಪರಿಶುದ್ಧವಾಗುವುದು. ಅಂಧಕಾರವನ್ನು ತೊಲಗಿಸುವ ಬೆಳಕಾಗಿಯೂ, ಅಜ್ಞಾನವನ್ನು ತೊಲಗಿಸುವ ಜ್ಞಾನವಾಗಿಯೂ ಹಾಗೂ ಮೃತ್ಯುವನ್ನು ಸೋಲಿಸುವ ಅಮರತ್ವವಾಗಿಯೂ ತೋರುವುದು.

ಈ ದ್ವಾದಶ ಜ್ಯೋತಿರ್ಲಿಂಗಗಳು ಆಯಾ ಸ್ಥಳದ ಚಾರಿತ್ರಿಕ, ಪೌರಾಣಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯನ್ನೂ ಪ್ರಸ್ತುತಪಡಿಸುವುದರ ಜೊತೆಗೇ ಅವರ ಅದ್ಭುತ ವಾಸ್ತು ಶಿಲ್ಪಕಲೆಯ ಕೌಶಲದ ಪ್ರತೀಕವೂ ಆಗಿ ನಿಲ್ಲುವುದು. ಮಹಾದೇವನಾದ ಶಿವನು, ಪ್ರಕೃತಿಯ ಸುಂದರ ತಾಣಗಳಲ್ಲಿ, ಜ್ಯೋತಿ ಸ್ವರೂನಾಗಿ ಪ್ರಕಟನಾಗಿರುವುದು ವಿಶೇಷ.

(ಮುಂದುವರೆಯುವುದು)
-ಡಾ.ಗಾಯತ್ರಿದೇವಿ ಸಜ್ಜನ್

10 Responses

  1. ನಾಗರತ್ನ ಬಿ. ಅರ್. says:

    ಜ್ಯೋತಿರ್ಲಿಂಗಗಳನ್ನೆಲ್ಲಾ ಅಡಕಗೊಳಿಸಿರುವ ಒಂದು ಪದ್ಯ ..
    ಅದಕ್ಕೆ ತಕ್ಕಂತೆ ಅವುಗಳ ಹಿನ್ನೆಲೆ ತಿಳಿಸಿರುವ ನಿಮ್ಮ ಲೇಖನ ಮುಂದಿನ ಕಂತನ್ನು ‌.. ಕಾಯುವಂತೆ ಮಾಡಿದೆ.
    ಮೇಡಂ.

  2. ಆಶಾ says:

    Very nice

  3. ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಹೇಮಮಾಲಾ ಮೇಡಂ ರವರಿಗೆ

  4. ವಿದ್ಯಾ says:

    ಮಹಿಮೆ, ಮಹತ್ವವನ್ನು ತಿಳಿಯಪಡಿಸುತ್ತಿರುವ ನಿಮ್ಮ ಲೇಖನ ತುಂಬಾ ಚೆನ್ನಾಗಿ ದೆ

  5. Manju says:

    Prasththi chennagi moodi bandide.
    Manju

  6. Manjunatha Sajjan says:

    Narration is splendid

  7. ಗಾಯತ್ರಿ ಸಜ್ಜನ್ says:

    ನಿಮ್ಮ ಅಭಿಮಾನಪೂರ್ವಕ ನುಡಿ ಗಳಿಗೆ ವಂದನೆಗಳು

  8. . ಶಂಕರಿ ಶರ್ಮ says:

    ಜ್ಯೋತಿರ್ಲಿಂಗಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಒಳಗೊಂಡಿರುವ ಕಥೆ ಬಹಳ ಚೆನ್ನಾಗಿದೆ ಮೇಡಂ.

  9. Padma Anand says:

    ಪರಶಿವನ ಮಹಿಮೆ ತಿಳಿದಷ್ಟೂ ಮತ್ತಷ್ಟು ತಿಳಿಯಬೇಕೆನ್ನುವ ಜ್ಞಾನದಾಹಕ್ಕೆ ಅಮೃತಸಿಂಚನವಾಗುವಂತೆ ಪ್ರಾರಂಭವಾದ ಈ ಸರಣಿ ಸೊಗಸಾಗಿದೆ.

  10. sudha says:

    ಬಹಳ ಒಳ್ಳೆಯ ಮಾಹಿತಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: