ಜ್ಯೋತಿರ್ಲಿಂಗ 4 ;ಓಂಕಾರೇಶ್ವರ

Share Button

ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಕಾರ, ಕಾರ ಮತ್ತು ಕಾರಗಳಿಂದ ಉದ್ಭವವಾಗಿದೆ. ಇವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿ ನಿಂತರೆ, ಓಂಕಾರವು ಪರಬ್ರಹ್ಮನ ಸಂಕೇತವಾಗಿ ನಿಲ್ಲುವುದು. ಹಿಂದು ಧರ್ಮದಲ್ಲಿ ಬರುವ ಎಲ್ಲಾ ಮಂತ್ರಗಳೂ ‘ಓಂ‘ಕಾರದಿಂದಲೇ ಆರಂಭವಾಗುವುವು. ಈ ಪವಿತ್ರವಾದ ‘ಓಂ’ಕಾರದ ಒಡೆಯ ‘ಓಂಕಾರೇಶ್ವರ’ ಜ್ಯೋತಿರ್ಲಿಂಗ.

ಮದ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಂದತ್ತಾ ಎಂಬ ದ್ವೀಪದಲಿ, ಶಿವನು ‘ಓಂಕಾರೇಶ್ವರ ಹಾಗೂ ಮಮಲೇಶ್ವರನೆಂಬ’ ಹೆಸರಿನಲ್ಲಿ ಪ್ರಕಟನಾಗಿರುವನು. ನರ್ಮದೆಯ ತೀರದಲ್ಲಿರುವ ಮಂದತ್ತಾ ದ್ವೀಪವು ಸುಂದರವಾದ, ರಮಣೀಯವಾದ ಪ್ರದೇಶ. ಈ ದ್ವೀಪವು ಎರಡು ಕಿ.ಮೀ. ಉದ್ದ, ಒಂದು ಕಿ.ಮೀ. ಅಗಲವಾಗಿದ್ದು ಓಂಕಾರದ ಆಕೃತಿಯಲ್ಲಿದೆ. ಎರಡು ಬೆಟ್ಟಗಳ ನಡುವೆ ಹರಿಯುವ ನರ್ಮದಾ, ಕಾವೇರಿ ನದಿಯೊಂದಿಗೆ ಸೇರುವ ಪುಣ್ಯಕ್ಷೇತ್ರವೂ ಆಗಿದೆ. ಸಂಸ್ಕೃತದಲ್ಲಿ ನರ್ಮದಾ ಎಂದರೆ – ‘ಸಂತಸದ ಬೆಳಕನ್ನು ಚೆಲ್ಲುವವಳು’. ಎತ್ತರವಾದ ಪ್ರದೇಶದಲ್ಲಿ ನಿಂತು, ಈ ಸ್ಥಳವನ್ನು ವೀಕ್ಷಿಸಿದಾಗ, ಓಂಕಾರದ ಆಕೃತಿಯಲ್ಲಿ ಕಾಣುವುದರಿಂದ ಈ ಜ್ಯೋತಿರ್ಲಿಂಗವನ್ನು ‘ಓಂಕಾರೇಶ್ವರ’ನೆಂದು ಹೆಸರಿಸಿದ್ದಾರೆ. ಯಾತ್ರಿಗಳು ದೋಣಿಯಲ್ಲಿ ಕುಳಿತು, ನರ್ಮದಾ ನದಿಯನ್ನು ದಾಟಿ, ಈ ಪುಣ್ಯಕ್ಷೇತ್ರವನ್ನು ತಲುಪುವರು. ಇತ್ತೀಚೆಗೆ ನಿರ್ಮಾಣವಾದ ೨೭೦ ಅಡಿ ಉದ್ದದ ತೂಗು ಸೇತುವೆ ಈ ಕ್ಷೇತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಯಾತ್ರಿಗಳು, ಈ ತೂಗು ಸೇತುವೆಯ ಮೇಲೆ ಹೋಗುವಾಗ – ಪ್ರಕೃತಿ ಸೌಂದರ್ಯವನ್ನು ಕಣ್ತ್ತುಂಬಿಕೊಳ್ಳುತ್ತಾ ಸಾಗುವರು. ಪರಿಕ್ರಮ ಮಾಡುವವರಿಗಂತೂ, ಈ ತೂಗು ಸೇತುವೆ ಒಂದು ವರಪ್ರಸಾದವಿದ್ದಂತೆ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ನರ್ಮದಾ ನದಿಯ ವಿಹಂಗಮ ನೋಟ, ದೇಗುಲದ ಶಿಖರಗಳು – ಎಲ್ಲವೂ ಈ ಕ್ಷೇತ್ರದ ಸೊಬಗನ್ನು ಇಮ್ಮಡಿಗೊಳಿಸಿವೆ. ಮಾನವ ನಿರ್ಮಿತ ದೇಗುಲಗಳ ಜೊತೆ ಪ್ರಕೃತಿ ಸೌಂದರ್ಯ -‘ನಾನು ಚೆಂದವೋ, ನೀನು ಚೆಂದವೋ’ ಎಂಬ ಸವಾಲನ್ನೆಸೆಯುವಂತೆ ತೋರುತ್ತಿದೆ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿರುವ ಓಂಕಾರೇಶ್ವರ, ಮಮಲೇಶ್ವರದ ಪೌರಾಣಿಕ ಹಿನ್ನೆಲೆಯನ್ನು ಕೇಳಿ ತಿಳಿಯೋಣ ಬನ್ನಿ – ಒಮ್ಮೆ ದೇವ ದಾನವರ ನಡುವೆ ಭೀಕರ ಕಾಳಗ ನಡೆದಿತ್ತು. ಯುದ್ಧದಲ್ಲಿ ದಾನವರು ಜಯ ಗಳಿಸಿದಾಗ, ದೇವತೆಗಳು ಸೋತು ಕಂಗಾಲಾದರು. ದಾನವರು ಅಹಂಕಾರದಿಂದ, ಮೂರು ಲೋಕಗಳಲ್ಲಿಯೂ ಅರಾಜಕತೆ ಸೃಷ್ಟಿಸಿದರು. ದೇವಾನು ದೇವತೆಗಳು, ಅಲ್ಲೋಲಕಲ್ಲೋಲವಾದ ಲೋಕವನ್ನು ರಕ್ಷಿಸಲು ಶಿವನನ್ನು ಪ್ರಾರ್ಥಿಸಿದರು. ಆಗ ನರ್ಮದೆಯಿಂದ ಉದ್ಭವಿಸಿದ , ಜ್ಯೋತಿರ್ಲಿಂಗ ಸ್ವರೂಪನಾದ ಶಿವನು, ದಾನವರನ್ನು ಸಂಹರಿಸಿ, ಲೋಕ ಕಲ್ಯಾಣಕ್ಕಾಗಿ ‘ಓಂಕಾರೇಶ್ವರ, ಮಮಲೇಶ್ವರ’ಎಂಬ ನಾಮಧೇಯವನ್ನು ಹೊತ್ತು, ಇಲ್ಲಿಯೇ ನೆಲಸಿದನು.

ಮತ್ತೊಂದು ಐತಿಹ್ಯ ಹೀಗಿದೆ. ಆದ್ವೈತ ಸಿದ್ಧಾಂತದ ಕತೃಗಳಾದ ಆದಿಗುರು ಶಂಕರರು ತಮ್ಮ ಗುರುಗಳಾದ ಗೋವಿಂದ ಭಗವತ್ಪಾದರನ್ನು ಭೇಟಿಯಾಗಿದ್ದು ಇಲ್ಲಿನ ಗುಹೆಯೊಂದರಲ್ಲಿ. ಶಂಕರರ ಮತ್ತು ಅವರ ಗುರುಗಳ ಶಿಲ್ಪಗಳು ಗೋವಿಂದ ಗುಹೆಯೊಳಗೆ ಇಂದಿಗೂ ಪೂಜಿಸಲ್ಪಡುತ್ತಿವೆ. ಶಂಕರರು ಆದ್ವೈತ ಸಿದ್ಧಾಂತದಲ್ಲಿ ಪ್ರಸುತ್ತ ಪಡಿಸುವಂತೆ – ಓಂಕಾರ ಎಂಬ ಶಬ್ದವು – ಓಂ ಮತ್ತು ಆಕಾರ ಎಂಬ ಪದಗಳಿಂದ ರಚಿಸಲ್ಪಟ್ಟಿದೆ. ಓಂ ಎಂದರೆ ನಾದ, ಆಕಾರ ಎಂದರೆ ಸೃಷ್ಟಿ. ಓಂಕಾರವೇ ಸೃಷ್ಟಿಯ ಮೂಲ ಅಂದರೆ ಸೃಷ್ಟಿಯ ರಹಸ್ಯ ಅಡಗಿರುವುದು ಓಂಕಾರದಲ್ಲಿಯೇ. ಅಸಂಖ್ಯಾತ ಆಕಾಶ ಕಾಯಗಳ ನಡುವೆ ಕೇಳಿಬರುತ್ತಿರುವ ನಾದವೂ ‘ಓಂ’ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ವೇದ ಪುರಾಣಗಳಲ್ಲಿ ಪ್ರತಿಪಾದಿಸಿರುವ ಈ ಸತ್ಯವನ್ನು ವಿಜ್ಞಾನಿಗಳೂ ಪರೀಕ್ಷಿಸಿ, ಒಪ್ಪಿರುತ್ತಾರೆ.

ಓಂಕಾರೇಶ್ವರ PC: Internet

ಇನ್ನೊಂದು ಪೌರಾಣಿಕ ಪ್ರಸಂಗ ಕೇಳೋಣವೇ? ಕಲಹ ಪ್ರಿಯರಾದ ನಾರದ ಮುನಿಗಳು ಸೃಷ್ಟಿಸಿದ ಕುತೂಹಲಕಾರಿ ಪ್ರಸಂಗ ಇದು. ಒಮ್ಮೆ ನಾರದ ಮಹರ್ಷಿಗಳು, ವಿಂಧ್ಯ ಪರ್ವತದ ಬಳಿ ಬಂದು ಮೇರು ಪರ್ವತದ ಗುಣಗಾನ ಮಾಡಿದರಂತೆ. ಮೇರು ಪರ್ವತದ ಎತ್ತರ, ವೈಭವವನ್ನು ವರ್ಣಿಸುತ್ತಾ, ಅದು ದೇವಾನು ದೇವತೆಗಳ ವಾಸ ಸ್ಥಳವೂ ಆಗಿದೆ ಎಂದರಂತೆ. ನಾರದರ ಮಾತುಗಳನ್ನು ಕೇಳುತ್ತಾ, ವಿಂಧ್ಯನಲ್ಲಿ ಮತ್ಸರ ಉಂಟಾಯಿತಂತೆ. ಆಗ ವಿಂಧ್ಯನು, ಮಣ್ಣಿನಿಂದ ಓಂಕಾರದ ಆಕೃತಿಯನ್ನು ರಚಿಸಿ, ಶಿವನನ್ನು ಕುರಿತು, ದೀರ್ಘವಾದ ತಪಸ್ಸನ್ನಾಚರಿಸಿದನಂತೆ. ಅವನ ತಪಸ್ಸಿಗೆ ಮೆಚ್ಚಿ, ಶಿವನು ಪ್ರತ್ಯಕ್ಷನಾದಾಗ, ವಿಂಧ್ಯನು ಬೇಡಿದ ವರವೇನು ಗೊತ್ತೆ? ‘ನಾನು ಸದಾ ಎತ್ತರವಾಗಿ ಬೆಳೆಯುವಂತೆ ಅನುಗ್ರಹಿಸು ತಂದೆ’. ಆಗ ಶಿವನು, ಅವನ ಬೆಳವಣಿಗೆಯಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಷರತ್ತಿನೊದಿಗೆ, ಅವನ ಇಚ್ಛೆಯನ್ನು ಪೂರೈಸುತ್ತಾನೆ. ವಿಂಧ್ಯ ಪರ್ವತದ ಎರಡೂ ಬದಿಯಲ್ಲಿ ‘ಓಂಕಾರೇಶ್ವರ, ಮಮಲೇಶ್ವರ’ ನೆಂಬ ಜೋಡಿಲಿಂಗಗಳ ಆಕಾರದಲ್ಲಿ ಶಿವನು ನೆಲೆಸುತ್ತಾನೆ. ಕಾಲಾನುಕ್ರಮದಲ್ಲಿ, ಶಿವನು ಹಾಕಿದ ಷರತ್ತನ್ನು ಮರೆತ ವಿಂಧ್ಯನು, ಹೆಮ್ಮೆಯಿಂದ ಬೀಗುತ್ತಾ ಆಕಾಶದೆತ್ತರಕ್ಕೆ ಬೆಳೆದು ನಿಂತನು. ಸೂರ್ಯ, ಚಂದ್ರರಿಗೇ ತಡೆಯೊಡ್ಡಿ ನಿಂತನು. ಎಲ್ಲೆಡೆ ಕತ್ತಲೆ ಕವಿಯಿತು. ಇಡೀ ಲೋಕವೇ ಅಂಧಃಕಾರದಲ್ಲಿ ಮುಳುಗಿತು. ಆಗ ಸಮಸ್ತ ದೇವತೆಗಳೂ ಪರಶಿವನ ಮೊರೆ ಹೊಕ್ಕರು. ಶಿವನು ಅಗಸ್ತ್ಯ ಮುನಿಗಳನ್ನು ವಿಂಧ್ಯನ ಬಳಿ ಕಳುಹಿಸಿದನು. ಅಗಸ್ತ್ಯರು ವಿಂಧ್ಯನ ಬಳಿ ಬಂದು -‘ನಾನು ದಕ್ಷಿಣ ದಿಕ್ಕಿನೆಡೆ ಯಾತ್ರೆ ಹೋಗಬೇಕಾಗಿದೆ. ಆದರೆ ನೀನು ಬೃಹದಾಕಾರವಾಗಿ ಬೆಳೆದು ಎಲ್ಲಾ ಮಾರ್ಗಗಳನ್ನೂ ಮುಚ್ಚಿ ಹಾಕಿರುವೆ. ದಯಮಾಡಿ ನೀನು ಮೊದಲಿದ್ದ ಗಾತ್ರಕ್ಕೆ ಬಂದು, ನನ್ನ ಯಾತ್ರೆಗೆ ಸಹಕರಿಸು’ ಎಂದು ವಿನಂತಿಸಿಕೊಂಡರು. ಅಗಸ್ತ್ಯರ ಸೌಜನ್ಯಪೂರ್ವಕ ಬೇಡಿಕೆಗೆ ಮಣಿದ ವಿಂಧ್ಯನು, ತನ್ನ ಗಾತ್ರವನ್ನು ಮೊದಲಿನಂತೆ ಕಿರಿದುಗೊಳಿಸಿದ. ಆಗ ಚಾಣಾಕ್ಷರಾದ ಆಗಸ್ತ್ಯರು ಮತ್ತೊಂದು ಬೇಡಿಕೆಯನ್ನು ಅವನ ಮುಂದಿಟ್ಟರು -‘ನಾನು ಹಿಂತಿರುಗಿ ಬರುವವರೆಗೂ, ನಿನ್ನ ಎತ್ತರ ಇಷ್ಟೇ ಇರಲಿ.’ ಎಂದು ಕೇಳಿಕೊಂಡರು. ವಿಂಧ್ಯನು, ಅವರ ಬೇಡಿಕೆಗೆ ತಲೆಯಾಡಿಸಿ, ಇನ್ನೂ ಅಗಸ್ತ್ಯರ ಬರುವಿಕೆಯನ್ನು ಕಾಯುತ್ತಲೇ ಇದ್ದಾನೆ. ಆದರೆ ಅಗಸ್ತ್ಯರು ಹಿಂತಿರುಗಿ ಬರಲೇ ಇಲ್ಲ. ಯುಗ ಯುಗಗಳಲ್ಲೂ, ಹೇಗೆ ದುಷ್ಟ ಸಂಹಾರ, ಶಿಷ್ಟ ರಕ್ಷಣೆ ನಡೆಯುತ್ತಲೇ ಇದೆ ಅಲ್ಲವೇ?

ಈ ದೇಗುಲ ಯಾವಾಗ ನಿರ್ಮಾಣವಾಯಿತು? ಯಾರು ನಿರ್ಮಿಸಿದರು? ಎಂಬ ಐತಿಹಾಸಿಕ ವಿವರಗಳನ್ನು ತಿಳಿಯೋಣ ಬನ್ನಿ. ಈ ದೇಗುಲದ ನಿರ್ಮಾಣದ ನಿಖರವಾದ ಮಾಹಿತಿ, ಚರಿತ್ರೆಯ ಪುಟಗಳಲ್ಲಿ ದಾಖಲಾಗಿಲ್ಲ. ಪುರಾತನ ಕಾಲದಲ್ಲಿ, ಚಾರಿತ್ರಿಕ ಘಟನೆಗಳ ಮಾಹಿತಿ, ಶಿಲಾ ಶಾಸನಗಳಲ್ಲಿ, ಓಲೆಗರಿಗಳಲ್ಲಿ ದೊರೆಯುತ್ತದೆಯಾದರೂ, ಭಾರತದ ಇತಿಹಾಸ ಕ್ರಮಬದ್ದವಾಗಿ ದಾಖಲಾದದ್ದು ಬ್ರಿಟಿಷರ ಕಾಲದಲ್ಲಿಯೇ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಕ್ಷ್ವಾಕು ವಂಶದ ದೊರೆ ಮಂದಾತನು – ಒಂದು ಗುಹೆಯಲ್ಲಿ ಪುಟ್ಟದೊಂದು ಶಿವಲಿಂಗವನ್ನು ಸ್ಥಾಪಿಸಿ, ಪೂಜಿಸುತ್ತಿದ್ದನೆಂಬ ಪ್ರತೀತಿಯಿದೆ. ಆದುದರಿಂದಲೇ ಈ ದ್ವೀಪಕ್ಕೆ ಮಂದಾತ ಎಂಬ ಹೆಸರು ಬಂದಿತು. ೧೦೬೩ ರಲ್ಲಿ ರಾಜಾ ಉದಯಾದಿತ್ಯನು ಬರೆಸಿರುವ ನಾಲ್ಕು ಶಿಲಾಶಾಸನಗಳು ಲಭ್ಯವಾಗಿದ್ದು, ಈ ದೇಗುಲದ ಪುನರ್‌ನಿರ್ಮಾಣ ಮಾಡಿದವನು ಈ ದೊರೆಯೇ ಎಂಬ ಅಂಶ ಬೆಳಕಿಗೆ ಬಂದಿದೆ. ಮೊದಲಿನಿಂದಲೂ ಈ ದ್ವೀಪವನ್ನು ಆಳುತ್ತಿದ್ದ ‘ಬಿಲಾಲ್’ ಬುಡಕಟ್ಟು ಜನಾಂಗದವರು, ಧಾರ್‌ನ ಪರಮಾರರು, ಮಾಳ್ವದ ಸುಲ್ತಾನರು ಹಾಗೂ ಗ್ವಾಲಿಯರ್‌ನ ಸಿಂಧಿಯಾ ರಾಜ ವಂಶಸ್ಥರಿಗೆ ಸಾಮಂತರಾಗಿದ್ದರು. ನಂತರದ ದಿನಗಳಲ್ಲಿ, ಬಿಲಾಲ್ ನಾಯಕನ ಮಗಳನ್ನು ಮದುವೆಯಾದ, ರಾಜಾ ಭರತ್ ಸಿಂಗ್ ಚೌಹಾಣ್, ಈ ದೇಗುಲವನ್ನು ಭವ್ಯವಾಗಿ ನಿರ್ಮಾಣ ಮಾಡಿದನು. ಈ ಶಿವಾಲಯವನ್ನು ಮೃದುವಾದ ಬಳಪದ ಕಲ್ಲಿನಿಂದ ನಿರ್ಮಿಸಲಾಗಿದ್ದು, ಇದು ಉತ್ತರ ಭಾರತದ ನಗರ ಶೈಲಿಯ ವಾಸ್ತು ಶಿಲ್ಪವನ್ನು ಹೋಲುತ್ತದೆ. ಈ ದೇಗುಲವು ಐದು ಅಂತಸ್ತಿನದಾಗಿದ್ದು, ಹಲವು ಸುಂದರವಾದ ಮೂರ್ತಿಗಳಿಂದ ಅಲಂಕರಿಸಲ್ಪಟ್ಟಿದೆ.

ಓಂಕಾರೇಶ್ವರ ದೇಗುಲ PC: Internet

ಜ್ಯೋತಿ ಸ್ವರೂಪರಾದ ಓಂಕಾರೇಶ್ವರ ಹಾಗು ಮಮಲೇಶ್ವರರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ಪ್ರಕೃತಿಯ ಈ ಸುಂದರ ತಾಣದಲ್ಲಿ ನೆಲೆಯಾಗಿದ್ದಾರೆ. ನರ್ಮದೆಯಲ್ಲಿ ಮಿಂದು, ಓಂಕಾರದ ನಾದವನ್ನು ಆಲಿಸುತ್ತಾ, ಈ ಜ್ಯೋತಿರ್ಲಿಂಗಕ್ಕೆ ಭಕ್ತಿಯಿಂದ ನಮಿಸೋಣ ಬನ್ನಿ.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 3 ) ಇಲ್ಲಿದೆ:
ಉಜ್ಜಯಿನಿಯ ಮಹಾಕಾಲೇಶ್ವರ http://surahonne.com/?p=34500

-ಡಾ.ಗಾಯತ್ರಿದೇವಿ ಸಜ್ಜನ್

6 Responses

 1. Savithri bhat says:

  ಓಂಕಾರೇಶ್ವರ ನ ಮಹಿಮೆಯನ್ನು ಪೌರಾಣಿಕ, ಐತಿಹಾಸಿಕ ಕಥೆಯೊಂದಿಗೆ ,ಹಾಗೂ ಚಿತ್ರಗಳೊಂದಿಗೆ ಚೆನ್ನಾಗಿ ನಿರೂಪಿಸಿದ್ದೀರಿ..ಧನ್ಯವಾದಗಳು

 2. ನಾಗರತ್ನ ಬಿ. ಅರ್. says:

  ಓಂಕಾರೇಶ್ವರ ದೇವಾಲಯದ ಬಗ್ಗೆಮಹತ್ವ ಪೊರ್ಣವಾದ ಮಾಹಿತಿ ಯನ್ನು ಅಚ್ಚುಕಟ್ಟಾದ ನಿರೂಪಣೆ ಯೊಂದಿಗೆ ತಿಳಿಸಿರುವ ನಿಮಗೆ ಧನ್ಯವಾದಗಳು ಮೇಡಂ

 3. ನಯನ ಬಜಕೂಡ್ಲು says:

  ಸುಂದರವಾದ, ಮಾಹಿತಿಪೂರ್ಣ ಲೇಖನ

 4. . ಶಂಕರಿ ಶರ್ಮ says:

  ಓಂಕಾರೇಶ್ವರ ದೇಗುಲದ ಪೌರಾಣಿಕ ಕಥಾ ಹಿನ್ನೆಲೆಗಳು ಬಹಳ ರೋಚಕವಾಗಿವೆ. ಅಗಸ್ತ್ಯ ಋಷಿಗಾಗಿ ಕಾಯುತ್ತಿರುವ ವಿಂಧ್ಯ ಪರ್ವತದ ಕಥೆ ಚೆನ್ನಾಗಿದೆ. ಪೂರಕ ಚಿತ್ರಗಳೊಂದಿಗಿನ ಸೊಗಸಾದ ಲೇಖನ ಮಾಹಿತಿಪೂರ್ಣವಾಗಿದೆ.

 5. Padma Anand says:

  ಓಂಕಾರೇಶ್ವರನ ವಿವರಣಾತ್ಮಕ ಲೇಖನವನ್ನೋದಿ ಪುನೀತಭಾವ ಮೂಡಿತು. ಅಭಿನಂದನೆಗಳು.

 6. ನಿಮ್ಮೆಲ್ಲರ ಹಿತನುಡಿ ಗಳಿಗೆ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: