ಜ್ಯೋತಿರ್ಲಿಂಗ 10: ತ್ರಯಂಬಕೇಶ್ವರ

Share Button


ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಊರ್ವಾರುಕಮಿವ ಬಂಧನಾತ್, ಮೃತ್ಯೋರ್ಮುಕ್ಷೀಯ ಮಾಮೃತಾತ್


ಈ ಮಹಾ ಮೃತ್ಯುಂಜಯ ಮಂತ್ರವನ್ನು ನಾವೆಲ್ಲರೂ ನಿತ್ಯ ಪಠಣ ಮಾಡುತ್ತೇವಲ್ಲವೇ? ಈ ಮಂತ್ರದ ಅರ್ಥವನ್ನು ತಿಳಿಯೋಣ – ಮೂರು ಕಣ್ಣಿನ ಪರಮೇಶ್ವರನೇ, ಈ ಲೌಕಿಕ ಜಗತ್ತಿನೊಂದಿಗೆ ನಮ್ಮ ಬಂಧನವು ಅತಿ ಸೂಕ್ಷ್ಮವಾಗಿರಲಿ. ಹೇಗೆ ಸೌತೇಕಾಯಿಯು ಬಳ್ಳಿಯೊಂದಿಗೆ ಅಂಟಿಕೊಂಡಿರುವುದೋ ಹಾಗೆ. ಮೃತ್ಯುವು ಅನಾಯಾಸವಾಗಿ ಬಂದು ಮೋಕ್ಷವು ಲಭಿಸಲಿ.

‘ತ್ರಯಂ’ ಎಂದರೆ – ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣರಾದ ತ್ರಿಮೂರ್ತಿಗಳು. ತ್ರಯಂ – ಮೂರು ಲೋಕಗಳಾದ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳ ಒಡೆಯ. ತ್ರಯಂ ಎಂದರೆ – ಭೂತಕಾಲ, ವರ್ತಮಾನ ಹಾಗೂ ಭವಿಷ್ಯತ್ ಕಾಲವನ್ನು ಅರಿತಿರುವ ತ್ರಿಕಾಲಜ್ಞಾನಿಯಾದ ಶಿವ, ತ್ರಯಂ ಎಂದರೆ – ಮೂರು ಕಣ್ಣು ಹೊಂದಿರುವ ಮಹೇಶ್ವರ. ಪರಶಿವನ ಮೂರು ಕಣ್ಣುಗಳು – ಸೂರ್ಯ, ಚಂದ್ರ ಮತ್ತು ಅಗ್ನಿಯ ಸಂಕೇತವಾಗಿ ನಿಲ್ಲುವುವು. ಸ್ವಯಂಭುವಾದ ಈ ಶಿವಲಿಂಗವು, ನೆಲದ ಒಳಗೆ ಮೂರು ಹೆಬ್ಬೆಟ್ಟಿನಾಕಾರದಲ್ಲಿದೆ. ಈ ಪವಿತ್ರ ಸ್ಥಳದಲ್ಲಿ, ಸದಾ ಗಂಗೆಯು, ತ್ರಯಂಬಕೇಶ್ವರನಿಗೆ ಅಭಿಷೇಕ ಮಾಡುತ್ತಾ ಸಂಭ್ರಮಿಸುವಳು. ಬ್ರಹ್ಮಗಿರಿಯ ಮಡಿಲಲ್ಲಿರುವ ಈ ದೇಗುಲವನ್ನು ಪ್ರಕೃತಿಮಾತೆಯು ತನ್ನ ಹಚ್ಚ ಹಸಿರ ಉಡುಗೆಯಿಂದ, ರಂಗು ರಂಗಿನ ಪುಷ್ಪಗಳಿಂದ ಸಿಂಗರಿಸಿಹಳು. ಭರತವರ್ಷದಲ್ಲಿಯೇ ಅತ್ಯಂತ ಉದ್ದವಾದ ನದಿಯೆಂದು ಹೆಸರಾಗಿರುವ ಗೋದಾವರಿ ನದಿಯ ಉಗಮ ಸ್ಥಾನವಿದು. ಗೌತಮೀ ಹಾಗೂ ಅಹಲ್ಯಾ ನದಿಗಳು ಸೇರುವ ಪವಿತ್ರ ಸಂಗಮವೂ ಆಗಿದೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ಸಹಸ್ರ ಸಹಸ್ರ ಭಕ್ತರು ಗಂಗೆಯಲ್ಲಿ ಮಿಂದು, ಶಿವನ ದರ್ಶನ ಮಾಡಿ ಪುನೀತರಾಗುವರು.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಇಪ್ಪತ್ತೆಂಟು ಕಿ.ಮೀ. ದೂರದಲ್ಲಿರುವ ತ್ರಯಂಬಕ ಎಂಬ ಸ್ಥಳದಲ್ಲಿ ನೆಲೆಯಾಗಿರುವ ಈಶ್ವರನೇ ತ್ರಯಂಬಕೇಶ್ವರ. ಬ್ರಹ್ಮಗಿರಿ, ನೀಲಗಿರಿ ಮತ್ತು ಕೋಟಗಿರಿಯಿಂದ ಸುತ್ತುವರೆಯಲ್ಪಟ್ಟಿರುವ ಈ ಜ್ಯೋತಿರ್ಲಿಂಗವು, ರಮಣೀಯವಾದ ನಿಸರ್ಗದ ಮಡಿಲಲ್ಲಿ ಸ್ಥಾಪಿಸಲ್ಪಟ್ಟಿದೆ. ಮುಂಭಾಗದಲ್ಲಿ ಅಮೃತವರ್ಷಿಣಿ ಕೊಳ ಹಾಗೂ ಸುತ್ತಮುತ್ತಲೂ ಇರುವ ಬಿಲ್ವತೀರ್ಥ, ವಿಶ್ವಾನಂತ ತೀರ್ಥ, ಮುಕುಂದ ತೀರ್ಥ ಮುಂತಾದ ಕುಂಡಗಳು ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈ ದೇಗುಲವು, ಕಪ್ಪುಶಿಲೆಯಿಂದ ನಗರ ವಾಸ್ತು ಶಿಲ್ಪದ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ನಾಲ್ಕು ದಿಕ್ಕಿನಲ್ಲಿಯೂ ನಾಲ್ಕು ದ್ವಾರಗಳಿವೆ. ಪೂರ್ವ ದ್ವಾರವು ಆರಂಭಾವಸ್ಥೆಯಾದರೆ, ಪಶ್ಚಿಮ ದ್ವಾರವು ನಿಷ್ಪತ್ತಿಯ ಸಂಕೇತ (ಅಂದರೆ ಪರಿಪೂರ್ಣತೆಯ ಸಂಕೇತ). ದಕ್ಷಿಣ ದ್ವಾರವು ಸಾರ್ಥಕತೆಯ ಸಂಕೇತವಾದರೆ ಉತ್ತರ ದ್ವಾರವು ಜ್ಞಾನೋದಯದ ಸಂಕೇತವಾಗಿ ನಿಲ್ಲುತ್ತವೆ.

ಈ ದೇಗುಲದ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ ಬನ್ನಿ – ಸತ್ಯಲೋಕದಲ್ಲಿ, ಹಲವು ವರ್ಷಗಳಿಂದ ಬರಗಾಲ ಪೀಡಿತವಾಗಿದ್ದ ಈ ಪ್ರದೇಶದಲ್ಲಿ, ಬ್ರಹ್ಮದೇವನು, ಶಿವನ ಜಟೆಯಲ್ಲಿ ಬಂಧಿಯಾಗಿದ್ದ ಗಂಗೆಯು ಭೂಮಿಗೆ ಅವತರಿಸಲಿ ಎಂದು ಪ್ರಾರ್ಥಿಸಿದಾಗ, ಗಂಗಾಮಾತೆಯು ಪ್ರತ್ಯಕ್ಷಳಾಗಿ ಜನರ ಹಸಿವನ್ನು ನೀಗಿಸಿದಳು ಎಂಬ ಪ್ರತೀತಿ.

ಇನ್ನೊಂದು ಪೌರಾಣಿಕ ಕಥೆ ಹೀಗಿದೆ – ಗೌತಮ ಮಹರ್ಷಿಯು ತನ್ನ ಪತ್ನಿ ಅಹಲ್ಯೆಯೊಂದಿಗೆ ಬ್ರಹ್ಮಗಿರಿಯ ತಪ್ಪಲಿನಲ್ಲಿ, ಒಂದು ಆಶ್ರಮವನ್ನು ನಿರ್ಮಿಸಿಕೊಂಡು, ಯಜ್ಞ ಯಾಗಾದಿಗಳನ್ನು ಮಾಡುತ್ತಾ ಶಾಂತಿಯಿಂದ ನೆಲೆಸಿದ್ದ. ಆದರೆ, ಹಲವು ವರ್ಷಗಳ ಕಾಲ ಮಳೆಯಿಲ್ಲದೆ, ಪ್ರಾಣಿ ಪಕ್ಷಿಗಳು, ಜನರೂ, ನೀರಿಗಾಗಿ ಹಾಹಾಕಾರ. ಗೌತಮನು ವರುಣದೇನನ್ನು ಕುರಿತು ತಪಗೈಯುವನು. ಅವನ ಭಕ್ತಿಗೆ ಮೆಚ್ಚಿದ ವರುಣದೇವನು – ಪತಿ ಪತ್ನಿಯರಿಬ್ಬರೂ ಸೇರಿ ಒಂದು ಭಾವಿಯನ್ನು ತೋಡಿರಿ. ಭಾವಿಯಲ್ಲಿ ಎಂದಿಗೂ ಜಲ ಬತ್ತದಿರುವಂತೆ ವರ ನೀಡುತ್ತೇ – ಎಂದು ಹರಸಿದನು. ಮಹರ್ಷಿ ತನ್ನ ಪತ್ನಿಯೊಂದಿಗೆ ಸೇರಿ ಒಂದು ಭಾವಿಯನ್ನು ತೋಡಿದನು. ಅಂದಿನಿಂದ, ಗೌತಮರ ಆಶ್ರಮದಲ್ಲಿದ್ದ ಅಕ್ಷಯಭಾವಿಯಲ್ಲಿ ನೀರು ಸದಾ ಉಕ್ಕುತ್ತಿತ್ತು. ಸುತ್ತಮುತ್ತಲಿದ್ದ ಜನರೆಲ್ಲರೂ, ಆ ಭಾವಿಯಿಂದ ನೀರನ್ನು ಕೊಂಡು ಹೋಗುತ್ತಿದ್ದರು. ಒಮ್ಮೆ ಋಷಿಪತ್ನಿಯರು ನೀರಿಗೆ ಬಂದಾಗ, ದಲಿತವರ್ಗದ ಇಬ್ಬರು ಮಕ್ಕಳಿಗೆ ಅಹಲ್ಯೆಯು ನೀರನ್ನು ಕೊಡಗಳಲ್ಲಿ ತುಂಬಿಸಿ ಕೊಡುತ್ತಿದ್ದಳು. ಇದನ್ನು ಕಂಡ ಋಷಿಪತ್ನಿಯರು ಕುಪಿತರಾಗಿ, ತಮ್ಮ ಕೊಡಗಳಲ್ಲಿ ನೀರನ್ನು ತುಂಬಿಸಿಕೊಳ್ಳದೇ ಹೊರಟು ಹೋಗುವರು. ಕೆಳವರ್ಗದವರಿಗೆ ತಮ್ಮ ಆಶ್ರಮದೊಳಗೆ ಪ್ರವೇಶಿಸಲು ಅನುಮತಿ ನೀಡಿದ್ದ ಗೌತಮರಿಗೆ ಬುದ್ಧಿ ಕಲಿಸಲು ಒಂದು ತಂತ್ರ ಮಾಡಿದರು. ಬಡಕಲಾದ ಹಸುವೊಂದನ್ನು ಗೌತಮರ ಆಶ್ರಮದೊಳಗೆ ನುಗ್ಗಿಸಿದರು. ಆ ಹಸುವು ಆಶ್ರಮದಲ್ಲಿ ಬೆಳೆದ ಪೈರನ್ನು ತಿನ್ನುತ್ತಿರುವಾಗ, ಗೌತಮರು ಅದನ್ನು ಓಡಿಸಲು ಯತ್ನಿಸಿದರು. ದುರದೃಷ್ಟವಶಾತ್, ಆ ಮುದಿ ಹಸು ಅಲ್ಲಿಯೇ ಬಿದ್ದು ಮರಣ ಹೊಂದಿತು. ಆಗ ಅಲ್ಲಿಗೆ ಆಗಮಿಸಿದ ಋಷಿಗಳು, ಗಾಬರಿಯಾದ ಗೌತಮ ಮುನಿಗಳನ್ನು ಕಂಡು, ಗೋಹತ್ಯಾ ಪಾಪ ಮಾಡಿದವನೆಂದು ನಿಂದಿಸತೊಡಗಿದರು. ಪಾಪ ಪರಿಹಾರಕ್ಕಾಗಿ, ಬ್ರಹ್ಮಗಿರಿಯ ಮೇಲೆ ಕುಳಿತು ಶಿವನ ಕುರಿತು ತಪಸ್ಸು ಮಾಡಬೇಕೆಂದೂ, ಶಿವನ ಮುಡಿಯಲ್ಲಿರುವ ಗಂಗೆಯನ್ನು ಆವಾಹಿಸಿ, ಗಂಗೆಯ ಪವಿತ್ರ ಜಲದಲ್ಲಿ ಮೀಯಬೇಕೆಂದು ಆದೇಶಿಸಿದರು. ಅವರ ಅಪ್ಪಣೆಯಂತೆ, ಗೌತಮನು ಒಂದು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ, ಒಂದು ಸಾವಿರ ವರ್ಷ ತಪಸ್ಸು ಮಾಡಿದರೆಂಬ ಪ್ರತೀತಿ ಇದೆ. ಶಿವನು ಪ್ರತ್ಯಕ್ಷನಾದಾಗ, ಗಂಗೆಯನ್ನು ತನ್ನ ಜಟೆಗಳಿಂದ ಬಿಡುಗಡೆಗೊಳಿಸಿ ಭೂಮಿಗೆ ಕಳುಹಿಸಬೇಕೆಂದು ಕೋರುವನು. ಭೂಮಿಗೆ ಇಳಿದು ಬಂದ ಗಂಗೆ ರಭಸದಿಂದ ಹರಿಯುತ್ತಾ – ವರಾಹ ತೀರ್ಥ, ರಾಮ ಲಕ್ಷ್ಮಣ ತೀರ್ಥ, ಗಂಗಾಸಾಗರ ತೀರ್ಥ – ಹೀಗೆ ಅನೇಕ ಕವಲುಗಳಾಗಿ ಮುನ್ನುಗ್ಗುತ್ತ್ತಾಳೆ. ಗೌತಮರು ಗಂಗೆಯನ್ನು ನಿಗ್ರಹಿಸಲು ದರ್ಭೆಯನ್ನು ಮಂತ್ರಿಸಿ, ನೀರಿನ ಸುತ್ತ ಹಾಕಿದಾಗ, ಗಂಗೆಯು ಅಲ್ಲಿಯೇ ನಿಂತಳು. ಈ ಕೊಳವು, ‘ಕುಶಾವರ್ತ’ ಎಂದೇ ಪ್ರಸಿದ್ಧಿಯಾಗಿದೆ. ಗಂಗೆಯಲ್ಲಿ ಮಿಂದು ಮಹರ್ಷಿಗಳು ತಮ್ಮ್ನ ಗೋಹತ್ಯಾ ಪಾಪವನ್ನು ಪರಿಹಾರ ಮಾಡಿಕೊಳ್ಳುವರು. ಹಾಗಾಗಿ, ಇದನ್ನು ಗೌತಮೀ ನದಿಯೆಂದೂ ಕರೆಯುವರು. ಗೌತಮರ ಕೋರಿಕೆಯಂತೆ, ಶಿವನು ಜ್ಯೋತಿ ಸ್ವರೂಪನಾಗಿ ಅಲ್ಲಿ ನೆಲಸಿದನು.

PC: Internet . ತ್ರಯಂಬಕೇಶ್ವರ ದೇಗುಲ, ನಾಸಿಕ್

ಮತ್ತೊಂದು ಐತಿಹ್ಯ ಹೀಗಿದೆ – ಇಂದ್ರನು ಅಮೃತ ಕಳಶವನ್ನು ಹೊತ್ತೊಯ್ಯುತ್ತಿರುವಾಗ ನಾಲ್ಕು ಹನಿ ಅಮೃತವು ಧರೆಗೆ ಬಿತ್ತೆಂದೂ, ಅಮೃತದ ಒಂದು ಹನಿ ತ್ರಯಂಬಕದಲ್ಲಿ ಬಿದ್ದಿರುವುದರಿಂದ, ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವವರಿಗೆ ಮೋಕ್ಷ ದೊರೆಯುವುದೆಂಬ ನಂಬಿಕೆಯೂ ಇದೆ.

ತ್ರಯಂಬಕೇಶ್ವರ ಜ್ಯೋತಿರ್ಲಿಂಗದ ದೇಗುಲವನ್ನು 18 ನೇ ಶತಮಾನದಲ್ಲಿ ನಿರ್ಮಿಸಿದ ಕೀರ್ತಿ ಪೇಶ್ವ ಬಾಲಾಜಿ ಬಾಜಿರಾವ್‌ಗೆ ಸಲ್ಲುವುದು. ಇಲ್ಲೊಂದು ಸ್ವಾರಸ್ಯಕರವಾದ ಕಥನವೂ ಇದೆ. ಒಮ್ಮೆ ಬಾಜಿರಾವ್ ಪೇಶ್ವೆಯು – ತ್ರಯಂಬಕೇಶ್ವರನ ಕೆಳಗೆ ಟೊಳ್ಳಾದ ಬಂಡೆ ಇರಲು ಸಾಧ್ಯವಿಲ್ಲ ಎಂದು ಪಣ ಕಟ್ಟಿದನು. ನಂತರ, ಆ ಸ್ಥಳವನ್ನು ಪರೀಕ್ಷಿಸಿದಾಗ ಆ ಬಂಡೆಯ ಒಳಭಾಗ ಟೊಳ್ಳಾಗಿರುವುದನ್ನು ಕಂಡು ಚಕಿತನಾಗುವನು. ಆಗ ಬಾಜಿರಾವ್ ಇಲ್ಲೊಂದು ಸುಂದರವಾದ ದೇವಾಲಯವನ್ನು ನಿರ್ಮಿಸಿದನು. ನಂತರ ಬಂದ ದೊರೆಗಳು ಈ ದೇಗುಲವನ್ನು ವಿಸ್ತರಿಸುತ್ತಾ ಹೋದರು. ವಿಶಾಲವಾದ ಮುಖ ಮಂಟಪ, ಎತ್ತರವಾದ ಶಿಖರ, ಶಿಖರದ ಒಳಭಾಗದಲ್ಲಿ ಕಮಲದ ಆಕಾರದ ಅಂದವಾದ ಕೆತ್ತನೆ ಇದೆ. ಸಭಾ ಮಂಟಪದಲ್ಲಿರುವ ಕಂಬಗಳ ಮೇಲೆ ಹಲವು ಪೌರಾಣಿಕ ಪ್ರಸಂಗಗಳನ್ನು ಕೆತ್ತಿದ್ದಾರೆ. ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಒಂದು ದೊಡ್ಡ ಕನ್ನಡಿಯನ್ನು ಇಟ್ಟಿರುವುದರಿಂದ ಯಾತ್ರಿಗಳು ನೆಲದೊಳಗಿರುವ ಮೂರು ಮುಖದ ಶಿವಲಿಂಗದ ದರ್ಶನ ಮಾಡಿ ಪುನೀತರಾಗುವರುದೀ ದೇಗುಲದ ಪ್ರಾಂಗಣದಲ್ಲಿ ಹಲವು ದೇವಾಧಿದೇವತೆಗಳ ಗುಡಿಗಳೂ ಇವೆ – ಗಂಗಾದೇವಿ, ಜಲೇಶ್ವರ, ಗೌತಮೇಶ್ವರ, ಪರಶುರಾಮ ಇತ್ಯಾದಿ. ಈ ಪ್ರದೇಶದಲ್ಲಿ, ಶಿವನನ್ನು ಆರಾಧಿಸುತ್ತಾ ಮೋಕ್ಷ ಪಡೆದ, ಹಲವು ಸಾಧು ಸಂತರ ಸಮಾಧಿಗಳೂ ಇವೆ. ಜೈನ ಬಸದಿಗಳೂ ಹಾಗೂ ವೇದ ಪಾಠಶಾಲೆಗಳೂ ಇಲ್ಲಿದ್ದು, ಹಲವು ಮಕ್ಕಳು ವೇದಾಧ್ಯಯನ ಮಾಡುತ್ತಿದ್ದಾರೆ. ಶ್ರೀ ರವಿಶಂಕರ್ ಗುರೂಜಿಯವರ (Founder of Art of Living) ಅಷ್ಟಾಂಗ ಯೋಗ ಕೇಂದ್ರವೂ ಇಲ್ಲಿದೆ.

ಬನ್ನಿ, ಮಹಾ ಮಂಗಳಾರತಿಯಾಗುತ್ತಿದೆ, ಗಂಟೆ ಜಾಗಟೆಗಳ ಸದ್ದು, ಕರ್ಪೂರದಾರತಿಯ ಸಮಯದಲ್ಲಿ ಕಾಣುತ್ತಿರುವ ಸಾಲಂಕೃತವಾದ ಶಿವನ ಚಿನ್ನದ ಮುಖ, ಶಿವಲಿಂಗದ ಮೇಲಿರುವ ವಜ್ರ, ಪಚ್ಚೆಗಳಿಂದ ಕಂಗೊಳಿಸುತ್ತಿರುವ ಕಿರೀಟಗಳನ್ನು ನೋಡಿ ಕಣ್ಮನಗಳು ತುಂಬಿಹೋದವು. ಪ್ರತಿ ಸೋಮವಾರ ಸಂಜೆ ಶಿವನಿಗೆ ಈ ಕಿರೀಟ ಧಾರಣೆ ಮಾಡಿ ಸಂಭ್ರಮಿಸುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ – ನಾಸ್ಸಾಕ್ ಎಂಬ ವಜ್ರದಿಂದ ಮಾಡಲ್ಪಟ್ಟ ಶಿವಲಿಂಗವನ್ನು ಪೇಶ್ವೆಗಳು ಕೊಡುಗೆಯಾಗಿ ನೀಡಿದ್ದರಂತೆ. ಆದರೆ ಮೂರನೆಯ ಬ್ರಿಟಿಷ್ – ಮರಾಠ ಯುದ್ಧ ನಡೆದಾಗ, ಆಂಗ್ಲರು ಈ ಅಮೂಲ್ಯವಾದ ವಜ್ರದ ಶಿವಲಿಂಗವನ್ನು ಲೂಟಿ ಮಾಡಿದರಂತೆ. ಈಗ ಈ ಬೆಲೆಬಾಳುವ ಶಿವಲಿಂಗವು, ಅಮೆರಿಕಾದ ಕನೆಕ್ಟಿಕಟ್‌ನಲ್ಲಿರುವ ಎಡ್ವರ್ಡ್ ಜೆ ಹ್ಯಾಂಡ್ ಎನ್ನುವ ಮಹಾಶಯನ ಬಳಿ ಇವೆ.

ಮುಂಭಾಗದಲ್ಲಿರುವ ಕುಶಾವರ್ತ ಕುಂಡವನ್ನು ಇಂದೋರ್ ರಾಜ್ಯದ ದೊರೆ ಶ್ರೀಮಂತ್ ಸರ್ದಾರ್ ರಾವ್ ಸಾಹೇಬ್ ಕಟ್ಟಿಸಿದನು. ಈ ರಾಜ ದಂಪತಿಗಳು ಮೂರ್ತಿಗಳನ್ನು, ಈ ಕುಂಡದ ಬಳಿ ನೋಡಬಹುದು. ಗೌತಮೀ ನದಿಯು ಸದಾ ಶಿವಲಿಂಗದ ಮೇಲೆ ಹರಿಯುವುದರಿಂದ, ಈ ಶಿವಲಿಂಗವು ಸವೆಯುತ್ತಾ ಇದೆ. ದಾರ್ಶನಿಕರು ಹೇಳುವಂತೆ – ಮಾನವೀಯ ಮೌಲ್ಯಗಳು ಪತನವಾಗುತ್ತಿರುವಂತೆ ಈ ಜ್ಯೋತಿರ್ಲಿಂಗವೂ ಸವೆಯುತ್ತದೆ. ಯಾತ್ರಿಗಳೇ ಬನ್ನಿ, ಸನಾತನ ಧರ್ಮವನ್ನು ಎತ್ತಿ ಹಿಡಿಯೋಣ, ಎಲ್ಲರ ಒಳಿತಿಗಾಗಿ ಶ್ರಮಿಸೋಣ, ಅಮೃತದ ಬಿಂದುಗಳು ಉರುಳಿ ಬಿದ್ದ ಈ ಸ್ಥಳದಲ್ಲಿ ತ್ರಯಂಬಕೇಶ್ವರನನ್ನು ಧ್ಯಾನಿಸುತ್ತಾ ಬದುಕಿನಲ್ಲಿ ಉಲ್ಲಾಸ, ಚೈತನ್ಯವನ್ನು ಪಡೆಯೋಣ.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 9) ಇಲ್ಲಿದೆ : http://surahonne.com/?p=34751

ಡಾ.ಗಾಯತ್ರಿದೇವಿ ಸಜ್ಜನ್

5 Responses

 1. ನಯನ ಬಜಕೂಡ್ಲು says:

  Nice

 2. ಶಂಕರಿ ಶರ್ಮ says:

  ತ್ರಯಂಬಕೇಶ್ವರ ದೇಗುಲದ ಪೌರಾಣಿಕ ಹಿನ್ನೆಲೆಯ ಅದ್ಭುತ ಕಥೆಯನ್ನು ಓದಿ ಬಹಳ ಖುಷಿಯಾಯಿತು ಮೇಡಂ…ಧನ್ಯವಾದಗಳು

 3. ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು

 4. ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

 5. ನಾಗರತ್ನ ಬಿ.ಆರ್. says:

  ತ್ರಯಂಬಕೇಶ್ವರನ ಪರಿಚಯ ಮಾಲಿಕೆ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: