ವನಿತೆಯರ ಆತ್ಮಶ್ರೀ

Share Button

ಧಿಡೀರನೆ ಎನ್ನುವಂತೆ ಬರೆವಣಿಗೆಯ ಲೋಕಕ್ಕೆ ಕಾಲಿಟ್ಟವರು ಮಾಲತಿ ಹೆಗಡೆ. ಕೃಷಿ ಲೇಖಕರ ತರಬೇತಿ ಶಿಬಿರದ ಶಿಬಿರಾರ್ಥಿಯಾದ ಅವರು ತರಬೇತಿಯ ಅಂಗವಾಗಿ ಹತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವುದು ಅನಿವಾರ್ಯವಾಗಿತ್ತು. ಅದನ್ನು ಸ್ವ-ಅಭಿಲಾಷೆಯಾಗಿಸಿಕೊಂಡ ಮಾಲತಿ ಹೆಗಡೆ ತಮ್ಮ ಮೊದಲ ಲೇಖನಕ್ಕೆ ದೊರೆತ ಮೆಚ್ಚಿಗೆಯಿಂದ ಸ್ಫೂರ್ತಿ ಪಡೆದು ಇಪ್ಪತ್ತೊಂದು ಲೇಖನಗಳನ್ನು ಬರೆದರು. ಬರೆದದ್ದೆಲ್ಲ ಪ್ರಕಟವಾಯಿತು. ಯಶಸ್ವಿ ಶಿಬಿರಾರ್ಥಿಯಾಗಿ ಹೊರಹೊಮ್ಮಿದರು. ಇದರ ಇನ್ನೊಂದು ಮುಖ ಮಾಲತಿಯವರಿಗೆ ವಾರಕ್ಕೊಂದು ಅಂಕಣ ಬರೆದುಕೊಡಲು ಹುಬ್ಬಳ್ಳಿ-ಧಾರವಾಡದ ಪ್ರಜಾವಾಣಿ ಆವೃತ್ತಿಯ ಮೆಟ್ರೊ ವಿಭಾಗದವರಿಂದ ದೊರೆತ ಆಗ್ರಹದ ಆಹ್ವಾನ ಮತ್ತು ವಿಜಯವಾಣಿಯ ಲಲಿತಾ ಮತ್ತು ಲೇಡೀಸ್‌ ಡೈರಿ ಅಂಕಣಗಳಿಗೆ ಆಗಾಗ ಬರೆಯುತ್ತಿದ್ದ ಮಾಲತಿಯವರು ಆ ಪುರವಣಿಗಳ ಸಂಪಾದಕಿ ಭಾರತೀ ಹೆಗಡೆಯವರಿಂದಲೂ ಅಂಕಣ ಬರೆಯಲು ಆಹ್ವಾನವನ್ನು ಪಡೆದದ್ದು. ಸಾಂಗತ್ಯ ಎಂಬ ತಲೆಬರೆಹದಲ್ಲಿ ಬರೆದ ಮಾಲತಿಯವರಿಗೆ ಹೆಂಗಸರ ಬಾಹ್ಯಸೌಂದರ್ಯಕ್ಕಿಂತ ಅವರ ಅಂತರಂಗ ಚೆಲುವನ್ನು ಪಸರಿಸುವ ತ್ಯಾಗ, ಕಷ್ಟಸಹಿಷ್ಣುತೆ, ಧೀಶಕ್ತಿಗಳನ್ನು ಸಮಾಜಕ್ಕೆ ಮಾಧ್ಯಮದ ಮೂಲಕ ಪರಿಚಯಿಸಬೇಕು ಎನ್ನುವ ತುಡಿತಕ್ಕೊಂದು ಸೂಕ್ತ ಅಭಿವ್ಯಕ್ತಿ ಮಾಧ್ಯಮ ದೊರೆತಂತಾಯಿತು.

“ಸಾಂಗತ್ಯ”ದಲ್ಲಿ ಪರಿಚಿತರಾದ ಮಹಿಳೆಯರ ಆತ್ಮಶ್ರೀಯ ಬಗ್ಗೆ ಓದುಗಜಗತ್ತನ್ನು ಜಾಗೃತಗೊಳಿಸುವ ಒಂದು ಪ್ರಯತ್ನ ಮಾಲತಿ ಹೆಗಡೆಯವರ “ವನಿತೆಯರ ಆತ್ಮಶ್ರೀ – ಕಾನನದ ಮಲ್ಲಿಗೆಗಳನ್ನರಸುತ್ತ” ಎನ್ನುವ ಕೃತಿ. ಪುತಿನ ಅವರು ತಮ್ಮ ಶ್ರೀಹರಿಚರಿತೆಯಲ್ಲಿ ಪ್ರಾಸಂಗಿಕವಾಗಿ ಸ್ತ್ರೀಯರ ದೈನಂದಿನ ಬದುಕಿನ ಭಂಗಗಳನ್ನು ಪ್ರಸ್ತಾಪಿಸುತ್ತಾರೆ. ಕೃಷ್ಣನ ಮುರಲೀಗಾನ ಸುಧಾಮೃತಪಾನದಿಂದ ಗೋಪಿಕಾ ಸ್ತ್ರೀಯರು ಮಾತ್ರವಲ್ಲದೆ ಯಾಜ್ಞಿಕರ ಪತ್ನಿಯರೂ ಸಹ ತಮ್ಮ ಸಂಕಷ್ಟಗಳನ್ನು ಮರೆತು ಸಂತೃಪ್ತರಾದರು, ತಮ್ಮ ಬದುಕು ಸಾರ್ಥಕವಾಯಿತು ಎಂದು ಧ್ಯಾನಸ್ಥರಾದರು ಎನ್ನುತ್ತಾರೆ. ಪುತಿನರವರು ಸ್ತ್ರೀಯರ ಈ ಸಾಧ್ಯತೆಯನ್ನು ಅವರ ಆತ್ಮಶ್ರೀ ಎಂದು ಕೊಂಡಾಡುತ್ತಾರೆ. ಪುರುಷರಿಗಿಲ್ಲ ಈ ಭಾಗ್ಯ ಎಂದು ಸಣ್ಣ ಧ್ವನಿಯಲ್ಲಿ ಸೂಚಿಸುತ್ತಾರೆ. ಸ್ತ್ರೀಯರು ತಮ್ನ ಬದುಕಿನ ಏಕತಾನತೆಯನ್ನು ಮೀರುವ ಆಧ್ಯಾತ್ಮಿಕ ಆತ್ಮಶ್ರೀಯನ್ನು ಪುತಿನ ಪ್ರಸ್ತಾಪಿಸಿದರೆ ಮಾಲತಿ ಭೌತಿಕ ಮುಖದಲ್ಲೇ ಬೆಳಗುವ ಆತ್ಮಶ್ರೀಯನ್ನು ಗುರುತಿಸುತ್ತಾರೆ.

ಶ್ರೀಮತಿ ಮಾಲತಿ ಹೆಗಡೆ (ಚಿತ್ರ ಋಣ: ಬುಕ್ ಬ್ರಹ್ಮ)

ಸ್ತ್ರೀ-ಪುರುಷ ಸಮಾನತೆಯನ್ನು ಬಹುಮುಖಿಯಾಗಿ ಎತ್ತಿಹಿಡಿಯುವ ಪ್ರಜಾಪ್ರಭುತ್ವದ ಮತ್ತು ವರ್ತಮಾನದ ಒಂದು ತುರ್ತು ಸ್ತ್ರೀಯರ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ರೀತಿಯ ಸಾಧನಸಂಪತ್ತುಗಳನ್ನು ಒದಗಿಸಿಕೊಡುವುದು, ಸ್ತ್ರೀಯರು ಅದರ ಸದುಪಯೋಗ ಮಾಡಿಕೊಳ್ಳುವುದು. ಸಂತೋಷದ ವಿಷಯವೇನೆಂದರೆ ಅಂತಹವರ ಸಂಖ್ಯೆ ಗಣನೀಯವಾಗಿ ದೊಡ್ಡದಾಗಿಯೇ ಇರುವುದು ಮತ್ತು ಅಂತಹವರಲ್ಲಿ ಕೆಲವರನ್ನಾದರೂ ಮಾಲತಿ ಹೆಗಡೆಯವರ ಕೃತಿ ಮುನ್ನೆಲೆಗೆ ತಂದಿರುವುದು.

ಕಾನನದ ಹೂಗಳು ನೂರಾರು, ಅವುಗಳ ಸೌರಭವೂ ನೂರಾರು. ಅವು “ಅರಳು ಹುರಿದಂಥಾ ಮಾತು, ಧ್ವನಿ ಬಂದತ್ತ ಫಕ್ಕನೇ ನಗುಮೊಗ ಅರಳಿಸಿ ಬಿಡುವ, ಶಿಕ್ಷಣ ಮಂತ್ರಿಯಿಂದ ಶಿಫಾರಸ್‌ ಪತ್ರ ಪಡೆದು ತನ್ನನ್ನು ಹೊರದಬ್ಬಿದ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸಿದ, ಆಲ್‌ ಇಂಡಿಯಾ ಕಾನಿಫೆಡರೇಷನ್‌ ಆಫ್‌ ದಿ ಬ್ಲೈಂಡ್‌ ಸಂಸ್ಥೆಯಲ್ಲಿ ಕೊಆರ್ಡಿನೇಟರ್‌ ಆದ, ಮದುವೆಯಾಗಿ ದೋಷರಹಿತ ಮಗಳನ್ನು ಪಡೆದರೂ ತನ್ನಂತೆ ದೃಷ್ಟಿಹೀನ ಅನಾಥ ಮಗುವಿನ ತಾಯಿಯೂ ಆದ ಪ್ರಬಲ ಇಚ್ಛಾಶಕ್ತಿ” (ನಂದಿನಿ ಎಂಬ ನಗುವಿನ ಧ್ವನಿ) ಆಗಿರಬಹುದು. ಅಥವಾ “ಸಂತೆಯೊಳಗೆ ಎನ್ನುವಂತೆ ಇರುವ ತಪೋಭೂಮಿಯಲ್ಲಿ ಮಾಡಿದ ಸಮಾಜಸೇವಾ ತಪಸ್ಸು (ಮಾಯಿಯ ಮಡಿಲು ಕರುಣೆಯ ಕಡಲು); ಅಥವಾ “ತಲೆಗೆ ಹಾಕುವ ಕೊಬರಿ ಎಣ್ಣೆಗೆ ಬೇಕಾಗುವಷ್ಟನ್ನೂ ದುಡಿಯಲಾರದ ಗಂಡನನ್ನೂ ನಾಲ್ಕು ಮಕ್ಕಳನ್ನೂ ಕುಂಬಾರಿಕೆಯ ವೃತ್ತಿಯಿಂದ ಸಾಕಿ ಸಲಹಿದ ಸ್ವಾಭಿಮಾನ (ಬಸವ್ವನ ಖಾಲಿ ಕೊಡ); ಅಥವಾ “ಬೇರೆ ಬೇರೆ ಸಂಸ್ಕೃತಿಯಲ್ಲಿ, ಸಂಸ್ಕಾರದಲ್ಲಿ ಬೆಳೆದವರಾದ್ದರಿಂದ ಪರಸ್ಪರ ಹೆತ್ತವರನ್ನು ಗೇಲಿಮಾಡುವುದು, ನಿಂದಿಸುವುದು ಇಂಥವುಗಳನ್ನು ಬದುಕಿನುದ್ದಕ್ಕೂ ಮಾಡುವಂತಿಲ್ಲ ಎಂಬ ಆದರ್ಶದ ನೆಲೆಯಲ್ಲಿ ಅಂತರ್ಜಾತೀಯ ವಿವಾಹವಾಗಿ ಅನ್ಯೋನ್ಯ ದಾಂಪತ್ಯ ನಡೆಸುತ್ತಿರುವುದು, ಗ್ರಾಮೀಣ ಮಹಿಳೆಯರ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು, ಕೌಟುಂಬಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದು” (ವನಿತೆಯರ ವಾಣಿ) ಆಗಿರಬಹುದು.

ಅಥವಾ “ಬದುಕಲಿಕ್ಕೆ ಬೇಕಾದದ್ದು ಬರೀ ದುಡ್ಡಲ್ಲ ಜನರ ವಿಶ್ವಾಸ, ಯಾರ ಕೂಡೆ ಹೆಚ್ಚ ಭೂಮಿ ಇರ್ತದೆಯೋ ಅವ್ರು ಇಲ್ಲದವರಿಗೆ ಸ್ವಲ್ಪ ದಾನ ಮಾಡಿದ್ರೆ ಸಾಕು ಎಲ್ಲರೂ ಸಂತೋಷದಾಗೆ ಬದುಕಬಹುದು ಎನ್ನುವ ಸರಳ ಸಮಾಜವಾದ” (ಹಾಡಿನ ಹಾದಿ ಹೋರಾಟದ ಬದುಕು); ಅಥವಾ “ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಮತ್ತು ಮಕ್ಕಳೊಂದಿಗೆ ಒಡನಾಡುತ್ತಾ ಬಡತನವಿರದ ಮಹತ್ವಾಕಾಂಕ್ಷೆಯೊಂದಿಗೆ ಬೇರೆ ಬೇರೆ ಭಾಷೆಗಳನ್ನು ಕಲಿತು ಮಕ್ಕಳ ಕಲಿಕಾ ನ್ಯೂನತೆಯನ್ನು ಸರಿಪಡಿಸುವ ಸಾಧನಾ ಛಲ “ (ಏಂಜಲ್‌ ನಂತಹ ಏಂಜಲಿನಾ); ಅಥವಾ “ಪರಿಸರದಲ್ಲಿ ನೂರಾರು ಬಣ್ಣಗಳಿರುವಾಗ ನಾಲ್ಕೈದು ಪರಿಸರ ಸ್ನೇಹಿ ಬಣ್ಣಗಳನ್ನು ತಯಾರಿಸಲು ಸಾಧ್ಯವಿಲ್ಲವೇ ಎಂದುಕೊಳ್ಳುತ್ತ ಪ್ರಯೋಗಕ್ಕಿಳಿದು ಯಶಸ್ವಿಯಾದದ್ದು” (ನೈಸರ್ಗಿಕ ಬಣ್ಣಗಳ ಅನುಶೋಧಕಿ); ಅಥವಾ “ಹೆಣ್ಣು ಮಕ್ಕಳಿಗೇಕೆ ಬೇಕು ಶಿಕ್ಷಣ ಎಂದು ಕೇಳುತ್ತಿದ್ದ ತಾಯಿಯರ ಮನಸ್ಸನ್ನು ಬದಲಾಯಿಸಿದುದು” (ಸೇವಾ ಮೋಹದ ಮೋಹಿನಿ); ಅಥವಾ “ಆಟವಾಡಿಸುತ್ತಲೇ ಮಕ್ಕಳಲ್ಲಿ ಗಣಿತ, ವಿಜ್ಞಾನ, ಪರಿಸರಗಳ ಅರಿವು ಮೂಡಿಸುವ ಸಾಹಸ” (ಪುಟಾಣಿಗಳ ಕಣ್ಮಣಿ); ಅಥವಾ “ಮಾರುವವರಿಗೆ ನಷ್ಟವಾಗಬಾರದು, ಖರೀದಿಸುವವರಿಗೆ ಹೊರೆಯಾಗದಂತಿರಬೇಕು, ಗುಣಮಟ್ಟದ ಹೊಸತನದ ವಸ್ತುಗಳು ಗ್ರಾಹಕರಿಗೆ ನಿರಂತರವಾಗಿ ದೊರೆಯಬೇಕು ಎನ್ನುವ ವ್ಯಾಪಾರೀ ತತ್ತ್ವದ ಸುಂದರ ಸಸ್ಯಲೋಕದ ನಿರ್ಮಾಣ” (ಹಸಿರಿನುದ್ಯಮಕ್ಕೆ ಹೊಸ ಭಾಷ್ಯೆ ಬರೆದವರು) ಆಗಿರಬಹುದು

ಅಥವಾ “ಕಲೆಗೆ ಅಂಧತ್ವವನ್ನೇಕೆ ಅಂಟಿಸಬೇಕು? ಸಂಗೀತವೆನ್ನುವುದು ಕೇವಲ ಕಲೆಯಾಗಿರದೆ ಇಡೀ ಬದುಕು ಎನ್ನುವ ನಿಲುವು” (ನಾದ ಮಾಧುರ್ಯದ ಶಕ್ತಿ);ಅಥವಾ “ಪ್ರತಿ ಪಾತ್ರದ ವಿಸ್ತಾರವನ್ನು ಅರಿತು ಯಕ್ಷಗಾನ ದೃಶ್ಯಕಾವ್ಯದ ರಸದೌತಣವನ್ನು ಉಣಬಡಿಸುವುದು” (ಯಕ್ಷಪುರುಷನ ಅಶ್ವಿನಿ ವಿದ್ಯೆ); ಅಥವಾ “ಭೂಮಿಯ ಸತ್ವವನ್ನು ಹೆಚ್ಚಿಸುವ ರೆಡ್ಯೂಸ್‌, ರಿಯೂಸ್‌, ರಿಸೈಕಲ್‌ ಎನ್ನುವ ಚಕ್ರವನ್ನು ಸಮರ್ಥವಾಗಿ ಬಳಸಿ ಸಾವಯವ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಸಿದುದು, ಕೈತೋಟ ಮಾಡಿದುದು, ಭೂರಹಿತ ರೈತರು ತಾವು ಉಳುಮೆ ಮಾಡುತ್ತಿರುವ ಇನಾಮುದಾರರ ಭೂಮಿಯ ಒಡೆತನವನ್ನು ತಾವೇ ಪಡೆಯುವಂತೆ ಮಾಡಿದುದು, ಕೆರೆಯ ಹೂಳೆತ್ತಿಸಿ ಕೆರೆಗಳು ನೀರಿನಿಂದ ತುಂಬಿ ತುಳುಕುವಂತೆ ಮಾಡಿದುದು” (ಪರಿಸರ ಸ್ನೇಹಿ ಶಾರದಕ್ಕ); ಅಥವಾ ಹಳ್ಳಿ ಹಳ್ಳಿಗಳಲ್ಲಿ ನಾಟಕವಾಡಿಸಿ ದೇವದಾಸಿಯರು ತಮ್ಮ ಮಕ್ಕಳಿಗೆ ಮುತ್ತು ಕಟ್ಟಿಸುವುದಿಲ್ಲ ಎಂದು ಮುತ್ತನ್ನೇ ಜೋಳಿಗೆಗೆ ಹಾಕುವಂತೆ ಪ್ರೇರೇಪಿಸಿದುದು” (ರಂಗಭೂಮಿಯ ರಂಗಿನ ಚಿಕ್ಕಿ); ಅಥವಾ ರೂಢಿಗತ ಮೌಲ್ಯಗಳನ್ನು ಪ್ರಶ್ನಿಸುತ್ತ ಅಗತ್ಯ ಬಿದ್ದಾಗ ಮುರಿಯುತ್ತ ಮತ್ತವುಗಳನ್ನು ವಿಶಿಷ್ಟವಾಗಿ ಕಟ್ಟುತ್ತ ಮೌಲ್ಯಯುತವಾದ ಘನತೆಯ ಬದುಕು ಸಾಗಿಸುವುದು, ಪುರುಷರು ಮಹಿಳಾ ಧ್ವನಿಯನ್ನು ಕೇಳುವ ಕಿವಿಗಳನ್ನು ಮಹಿಳಾ ಸಂವೇದನೆಯನ್ನು ಅರಿಯುವ ಮನಸ್ಥಿತಿಯನ್ನು ಹೊಂದುವಂತೆ ಮಾಡಿದುದು” (ನಟನೆಗೂ ಸೈ ನಿರ್ದೇಶನಕ್ಕೂ ಸೈ) ಆಗಿರಬಹುದು.

ಅಥವಾ “ಕೊಳೆಗೇರಿಯ ಅಮ್ಮನಿಲ್ಲದವರು ಅಪ್ಪನಿಲ್ಲದವರು ಗಂಡು ಮಗುವಿನ ವ್ಯಾಮೋಹದಲ್ಲಿ ಅಲಕ್ಷ್ಯಕ್ಕೀಡಾದ ಹುಡುಗಿಯರು ಟ್ರಸ್ಟಿನ ಮಕ್ಕಳಾಗಿ ಆತ್ಮವಿಶ್ವಾಸದಿಂದ ಬೌದ್ಧಿಕವಾಗಿ ಸಶಕ್ತರಾಗಿ ರೂಪುಗೊಂಡು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವಂತೆ ಮಾಡಿದುದು” (ಜೀವನದಿ ನರ್ಮದಾ); ಅಥವಾ “ಬರನಿರೋಧಕ, ಆರೋಗ್ಯಕ್ಕೆ ಪೂರಕ ಆದ ಸಿರಿಧಾನ್ಯಗಳನ್ನು ರೈತರು ಬೆಳೆಯುವಂತೆ, ನಾಗರಿಕರು ಸಿರಿಧಾನ್ಯಗಳ ವೈವಿಧ್ಯಮಯ ಅಡುಗೆ ಮಾಡಿ ಊಟಮಾಡುವಂತೆ ಮನಃಪರಿವರ್ತನೆ ಮಾಡಿದುದು” (ಸಿರಿಧಾನ್ಯಗಳಡುಗೆಯ ಮಾರ್ಗದರ್ಶಕಿ); ಅಥವಾ “ದಾಂಪತ್ಯದಲ್ಲಿ ಸಂಕಷ್ಟಗಳನ್ನೆದುರಿಸಬೇಕಾಗಿ ಬಂದ ಸಂದರ್ಭದಲ್ಲಿ ಕುಶಲವಸ್ತುಗಳ ತಯಾರಿಕೆಯಿಂದ ಮಾನಸಿಕ ಆರೋಗ್ಯವನ್ನು ಕಾಯ್ದುಕೊಂಡದ್ದು, ಸಾಂತ್ವನಕೇಂದ್ರ ಮತ್ತು ಸದ್ಭಾವನಾ ಸಂಸ್ಥೆಯಡಿ ಆಪ್ತಸಲಹೆ ನೀಡುವುದು” (ಕಷ್ಟಕ್ಕಂಜದ ಅಂಜನಾ); ಅಥವಾ “ಸಂಘಟನೆ, ಅಧ್ಯಯನ, ಪ್ರವಾಸಕ್ಕೆಂದು ಬರುವವರನ್ನು ಪೇಯಿಂಗ್‌ ಗೆಸ್ಟ್‌ ಆಗಿ ನೋಡಿಕೊಂಡು ಅನಕ್ಷರಸ್ಥೆಯಾಗಿದ್ದೂ ಭಾಷೆಯ ಬೇಲಿಯನ್ನು ದಾಟಿ ಜನರ ಪ್ರೀತಿ ಗಳಿಸುವುದು” (ಮರುಕದಿಂದ ಮರ್ಯಾದೆಯತ್ತ); ಅಥವಾ ”ಹುಟ್ಟಿದ ಮನೆತನಾನ ಸಂಕ್ಟಕ್ಕೆ ಕೆಡವಿ ಇನ್ನೊಂದು ಮನೆತನಾನ ನಡಸೋದು ಯಾಕ ಅಂತ ಮದುವೆ ಆಗದೆ ತಮ್ಮ ತಂಗಿಯರಿಗೆ ಮದುವೆ ಮಾಡಿದುದು, ಮನಸ್ಸು ಮಾಡಿ ಧೈರ್ಯ ತೆಗೆದುಕೊಂಡು ಹೊಲದ ಕಸಾ ಪಸಾ ಕಿತ್ತಷ್ಟೇ ಸಲೀಸಾಗಿ ನೇಗಿಲು ಹಿಡಿದುದು” (ವಸುಂಧರೆಯ ಮಗಳು) ಆಗಿರಬಹುದು.

ಅಥವಾ “ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರಯತ್ನಿಸಿ ಸೂಜಿಗೆ ದಾರ ಪೋಣಿಸುವುದನ್ನು ಕಲಿತು ಸ್ವಾವಲಂಬಿಯಾಗಿ
ರೂಪುಗೊಂಡದ್ದು, ವಿಕಲಚೇತನರ ಸಮರ್ಥನಂ ಸಂಸ್ಥೆಯಡಿ ವಿಕಲಚೇತನರಿಗೆ ಕಂಪ್ಯೂಟರ್‌ ತರಬೇತಿ ನೀಡುವುದು, ಇಲ್ಲದ ಅವಯವವನ್ನು ನೆನೆಸಿ ಕೊರಗುವುದಕ್ಕಿಂತ ಇದ್ದ ಅವಯವವನ್ನೇ ಬಳಸಿ ಸ್ವಾವಲಂಬಿಯಾದದ್ದು” (ಅಂಗವಿಕಲರ ಆಶಾಕಿರಣ); ಅಥವಾ “ವರ್ಷಕ್ಕೊಮ್ಮೆ ಪರಿಸರ ಸ್ನೇಹಿ ಗಣಪತಿಯ ತಯಾರಿಕೆಯಿಂದ ಬರುವ ಆದಾಯದಲ್ಲಿ ಇಡೀ ವರ್ಷ ಬಂಡವಾಳ ಹೂಡುತ್ತಾ ಸಂಯಮದಿಂದ ಬದುಕನ್ನು ನಡೆಸುವುದು” (ಮಣ್ಣಿನ ಮೂರ್ತಿಗಳ ತಯಾರಿಕೆಗೆ ಮನಸೋತವರು); ಅಥವಾ “ಬಾವಿಯಲ್ಲಿ ಬಿದ್ದರೂ ಬದುಕಿ ಉಳಿದದ್ದು ಭಗವದ್ಗೀತೆಯ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿ ಧ್ವನಿಸುರುಳಿಯನ್ನು ಹೊರತರುವುದಕ್ಕೆ, ಅದನ್ನು 25 ಸಾವಿರದ ಜನರು ಕೇಳಿ ಕಲಿತು ಒಟ್ಟಿಗೆ ಭಗವದ್ಗೀತಾ ಅಭಿಯಾನದಲ್ಲಿ ಹಾಡಿದ ಆನಂದವನ್ನು ಅನುಭವಿಸುವುದಕ್ಕೆ ಎಂದು ಸಂತೋಷಿಸಿದುದು” (ಗೀತೆಯ ಗಾಯಕಿ); ಅಥವಾ “ವಿಶೇಷ ಸಾಮರ್ಥ್ಯವುಳ್ಳ ಬುದ್ಧಿಮಾಂದ್ಯ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸ ಮಾಡುವ ಅವಕಾಶ ಕಲ್ಪಿಸಿ ಅವರು ಕುಟುಂಬಕ್ಕೂ ಸಮಾಜಕ್ಕೂ ಹೊರೆಯಾಗದಂತೆ ಆ ಮಕ್ಕಳನ್ನು ತರಪೇತುಗೊಳಿಸಿದುದು” (ಚೈತನ್ಯ ತುಂಬುವ ಚೇತನಾ); ಅಥವಾ ಸಂಬಳಕ್ಕೂ ಕೆಲಸಕ್ಕೂ ತಾಳೆ ಹಾಕದೆ ಸೇವಾಮನೋಭಾವದಿಂದ ಅಸಹಾಯಕರಿಗೆ, ನಿರಾಶ್ರಿತರಿಗೆ, ಬೀದಿಗೆ ಬಿದ್ದವರಿಗೆ ಆಹಾರ ವೈದ್ಯಕೀಯವೇ ಮೊದಲಾದ ಎಲ್ಲಾ ರೀತಿಯ ಸೇವೆಯನ್ನು ಒದಗಿಸಿದುದು” (ದಿಕ್ಕಿಲ್ಲದವರಿಗೆ ಸರಕಾರ ತೋರಿದ ದಿಕ್ಕು) ಆಗಿರಬಹುದು.

ಅಥವಾ “ಒಡೆದು ಹೋಗುತ್ತಿದ್ದ ಎಷ್ಟೋ ಮುಸ್ಲಿಂ ಕುಟುಂಬಗಳನ್ನು ನ್ಯಾಯ ಚಾವಡಿಯಲ್ಲಿ ಒಂದುಗೂಡಿಸಿದುದು, ವಿವಾಹಿತರು ವಿಚ್ಛೇದಿತರು ಅತ್ಯಾಚಾರಕ್ಕೆ ಒಳಗಾಗುವವರು ಹಾಗೂ ವಿಧವಾ ಸ್ತ್ರೀಯರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವುದು” (ಮುಸ್ಲಿಂ ಮಹಿಳೆಯರಿಗೆ ನ್ಯಾಯಚಾವಡಿ ಬೆಂಬಲ, ನೊಂದವರಿಗೆ ಆಶಾದೀಪ, ಬೆಳಕಿನಾಸರೆಯಲ್ಲಿ ನಡೆವವರು) ಅಥವಾ “ಮುತ್ತುಗದ ಊಟದೆಲೆ ತಯಾರಿಸಿ ಗಳಿಸಿದ ಹಣದಲ್ಲಿಯೇ ಮಕ್ಕಳನ್ನು ಓದಿಸಿದುದು, ಮನೆ ಕಟ್ಟಿಕೊಂಡದ್ದು, ಮಕ್ಕಳಿಗೆ ಮದುವೆ ಮಾಡಿದುದು” (ಅನ್ನವಾಗುವ ಮುತ್ತುಗ); ಅಥವಾ “ಸಂಗ್ರಹಿಸಿದ ಮಳೆನೀರಿನಿಂದ ದೈಹಿಕ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಂಡದ್ದು” (ನೀರ ನೆಮ್ಮದಿಯತ್ತ ಸುಸ್ಥಿರ ಹೆಜ್ಜೆ); ಅಥವಾ “ಊರಿಂದೂರಿಗೆ ಸುತ್ತುತ್ತಲೇ ಬದುಕಿನ ಬಟ್ಟೆ ನೇಯುವ ಕುರುಬರ ಹೆಣ್ಣುಮಕ್ಕಳು ಸುಖೀ ಸಂಸಾರಕ್ಕೆ ಒಂದಿಷ್ಟು ಸವಲತ್ತುಗಳು ಬೇಕೆಂಬ ಮಾತನ್ನು ಸುಳ್ಳು ಮಾಡಿದುದು” (ಸಹಯಾನಕ್ಕೆ ಸಲಾಂ), ಅಥವಾ “ವಿವಾಹ, ಜಾತ್ರೆಯೇ ಮೊದಲಾದ ವಿಶೇಷ ಸಮಾರಂಭಗಳಲ್ಲಿ ಮನೆಯವರಿಂದ ಹಿಟ್ಟನ್ನು ಪಡೆದು ಉಚಿತವಾಗಿ ಸಹಕಾರ ಮನೋಭಾವದಲ್ಲಿ ಖಡಕ್‌ ರೊಟ್ಟಿ ಮಾಡಿ ಕಳಿಸುವುದು, ಅಗತ್ಯವಿದ್ದಾಗ ಊರಿಂದ ಊರಿಗೆ ಪಯಣಿಸುವ ಬುತ್ತಿ ಮನಗಳನ್ನೂ ಮನೆಗಳನ್ನೂ ಬೆಸೆಯುತ್ತಲಿರುವುದು” (ಬುತ್ತಿ ಪಯಣ) ಆಗಿರಬಹುದು.

ಈ ಕೃತಿಯ ನಾಯಕಿಯರು ಬಡತನದಲ್ಲಿಯೇ ವಿದ್ಯಾಭ್ಯಾಸ ಮಾಡಿ ಅಥವಾ ಪಾರಂಪರಿಕ ಉದ್ಯೋಗವನ್ನನುಸರಿಸಿ ಸ್ವಾವಲಂಬಿಗಳಾದವರು. ಕಷ್ಟದಲ್ಲಿರುವವರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ನೆರವಾಗುವವರು ಮತ್ತು ನೆರವು ಪಡೆದವರೂ ಸಹ ಸ್ವಾವಲಂಬಿಗಳಾಗುವಂತೆ ನೋಡಿಕೊಂಡವರು. ಮಾನಸಿಕ ಸಂತೋಷಕ್ಕೆ ಪ್ರಥಮ ಆದ್ಯತೆಯನ್ನು ನೀಡಿದವರು. ತಾವು ಕಲಿತ ವಿದ್ಯೆಯಿಂದ ಇತರರಿಗೂ ಬದುಕು ಸುಲಲಿತ ಆಗುವಂತೆ ಸಮಾಜಮುಖಿಯಾದವರು. “ಕಷ್ಟ ಸಹಿಸಾಕ, ಹಿಂಗ ದುಡಿಯಾಕ ದೇವ್ರು ಹೆಣ್ಣುಮಕ್ಕಳಿಗೆ ಭಾಳ ಶಕ್ತಿ ಕೊಟ್ಟಾನ್ರಿ. ಅದನ್ನ ಉಪಯೋಗ ಮಾಡ್ಕೋಬೇಕ್ರಿ, ನಾವಾ ಬೆಳೀಬೇಕ್ರಿ, ಸಮಯ ಹಾಳುಮಾಡದ ತಮ್ಮ ಕ್ರಿಯಾಶೀಲತೆಯಿಂದ ಏನನ್ನಾದರ ಸಾಧಿಸಲು ಮಹಿಳೆಯರಾ ಮನಸ್ಸು ಮಾಡಬೇಕ್ರಿ” ಎಂಬ ನಿಲುವಿನವರು. “ನಾವು ದಿನದಾಗ ಸ್ವಲ್ಪ ಹೊತ್ತಾರ ನಿದ್ದಿ ಮಾಡ್ಲಿ ಅಂತ ಸೂರ್ಯದೇವ ಮುಣಗತಾನ್ರಿ. ಇಲ್ಲಾಂದ್ರ ಹೆಣ್ಮಕ್ಕಳು ಇಪ್ಪತ್ನಾಲ್ಕು ತಾಸು ಬಡಬಡಕೊಂಡು ನಾ ನೀ ಅಂತ ಕೆಲ್ಸಾ ಮಾಡಿ ಹೆಣಾ ಬೀಳಬೇಕಾಗಿತ್ತು” ಎಂದು ವಿಚಿತ್ರರೀತಿಯ ಸಮಾಧಾನ ಪಟ್ಟುಕೊಳ್ಳುವವರು.

ಇವರು ಎದುರಿಸಿದ ಕಷ್ಟಗಳು ಅಂಗಾಂಗದ ದೋಷ, ಸಮರಸವಿಲ್ಲದ ದಾಂಪತ್ಯ, ಬೇಜವಾಬ್ದಾರಿಯ ಗಂಡ,ಆಕಸ್ಮಿಕವಾಗಿ ನಿರುದ್ಯೋಗಿಯಾದ ಗಂಡ, ಯುದ್ಧ ಅಥವಾ ಅಪಘಾತ ಅಥವಾ ರೋಗ ಇತ್ಯಾದಿ ಕಾರಣದಿಂದಾಗಿ ಹರೆಯದಲ್ಲಿಯೇ ಗಂಡನನ್ನು ಕಳೆದುಕೊಂಡದ್ದು ಇತ್ಯಾದಿ ಎಲ್ಲರ ಗಮನಕ್ಕೂ ಬಂದಿರುವ ಸಮಸ್ಯೆಗಳೇ. ಇವರಿಗೆ ಯಾವುದೇ ರೀತಿಯ ಸಮಸ್ಯೆ ಕಾಡಿದರೂ ತನಗೇ ಯಾಕೆ ಈ ಕಷ್ಟ ಎಂಬ ಕೊರಗು ಇಲ್ಲ, ಇನ್ನೊಬ್ಬರು ತಮ್ಮ ಸಹಾಯಕ್ಕೆ ಬರಲಿಲ್ಲ ಎನ್ನುವ ವಿಷಾದವೂ ಇಲ್ಲ, ಏನು ಮಾಡುವುದಪ್ಪಾ ಎಂದು ತಲೆಯ ಮೇಲೆ ಕೈ ಹೊತ್ತು ಕೂಡುವ ಆತಂಕವೂ ಇಲ್ಲ. ಗಂಡು ಮನೆಯ ಹೊರಗೆ ದುಡಿಯಬೇಕು, ಕುಟುಂಬ ನಿರ್ವಹಣೆಯ ಆರ್ಥಿಕ ಹೊಣೆಗಾರಿಕೆಯನ್ನು ಹೊರಬೇಕು ಎಂಬುದು ಒಂದು ಅಲಿಖಿತ ಆದೇಶ ಇದ್ದರೂ ಅದನ್ನು ಗಂಡು ಪಾಲಿಸದಿದ್ದರೂ ಅದಕ್ಕೆ ವ್ಯಥೆ ಪಡದೆ ಗಂಡೂ ಹೆಣ್ಣು ಎರಡೂ ಆಗಿ ಮನೆಯ ಒಳಗಿನ ಮತ್ತು ಹೊರಗಿನ ಹೊಣೆಗಾರಿಕೆಯನ್ನು ನಿರ್ವಹಿಸಿದ್ದಾರೆ.

ವ್ಯಕ್ತಿಯ ಈ ಎಲ್ಲ ಅಂತರಂಗ ಬಹಿರಂಗ ಭಾವಗಳನ್ನು ತೆರೆದಿಡುವ ಬದುಕಿನ ಚಿತ್ರ ಸುಂದರವಾಗಿ ನಿರೂಪಿತವಾಗಿದೆ ಎನ್ನುವುದು ಕೃತಿಯ ಮತ್ತೆ ಕೃತಿಕಾರರಾದ ಮಾಲತಿ ಹೆಗಡೆಯವರ ವಿಶೇಷತೆ! ಈ ಕೃತಿಯ ಪ್ರತಿಯೊಂದು ಲೇಖನವೂ ಅದು ನಿರೂಪಿಸಬಯಸಿದ ವಿಷಯಕ್ಕೆ ಪೂರಕವಾದ ಒಂದು ದೃಶ್ಯ-ಚಿತ್ರದಿಂದ ಆರಂಭವಾಗುತ್ತದೆ ಮತ್ತೆ ವಿಷಯ ನಿರೂಪಣೆಗೆ ಪೂರಕವಾಗಿ ಮುಕ್ತಾಯಗೊಳ್ಳುತ್ತದೆ. “ನಾನು ಯಾವಾಗಲೂ ಸಂತೋಷವಾಗಿ ಇರ್ತೀನಿ, ನನಗೆ ಜೀವನದಲ್ಲಿ ಎಲ್ಲರಿಂದ ಸಮೃದ್ಧವಾದ ಪ್ರೀತಿ ಸಿಕ್ಕಿದೆ ಎಂದವರು ಹೇಳಿದಾಗ ಒಂದು ಕ್ಷಣ ಮೂಕವಿಸ್ಮಿತಳಾದೆ. ಈ ಮಾತುಗಳನ್ನಾಡಿದವರು ಪ್ರತಿಭೆ, ಜೀವನಪ್ರೀತಿ ಮೇಳೈಸಿದಂತಿರುವ ವಾಣಿ ಪೆರಿಯೋಡಿ. ಸದ್ದಿಲ್ಲದ ಸೇವೆಯ ಸಾಮಾಜಿಕ ಕಾರ್ಯಕರ್ತೆ” – ಇದು “ವನಿತೆಯರ ವಾಣಿ” ಲೇಖನ ಆರಂಭವಾಗುವ ರೀತಿ. “ಹೆಂಗಸರು ಬದಲಾಗಬೇಕೆಂದುಕೊಂಡಾಗ ಗಂಡಸಿನಂತಾಗಬೇಕು ಎಂದುಕೊಳ್ಳುತ್ತಾರೆ. ಹಾಗಾಗುವ ಬದಲು ಹೆಂಗಸರು ತಮ್ಮಲ್ಲಿರುವ ಹೆಣ್ತನದ ಶಕ್ತಿಗಳನ್ನೂ, ಸೊಗಸನ್ನೂ, ಪೋಷಕ ಗುಣಗಳನ್ನೂ ಗಮನಿಸಬೇಕು, ಗುರುತಿಸಬೇಕು, ಆ ಶಕ್ತಿಗಳನ್ನು ಉಳಿದವರೂ ಗುರುತಿಸುವಂತೆ ಬೆಳೆಯಬೇಕು. ಗಂಡಸರೂ ಕೂಡ ಶ್ರೇಷ್ಠತೆಯ ವ್ಯಸನದಿಂದ ಹೊರಬಂದು ಸಮಾನತೆಯನ್ನೊಪ್ಪಬೇಕು” – ಇದು ಲೇಖನದ ಮುಕ್ತಾಯದ ಮಾತುಗಳು ಮಾತ್ರವಲ್ಲದೆ ಇಡೀ ಕೃತಿಯ ಸಾರ-ಸೂತ್ರ ಆಗಿದೆ.

-ಪದ್ಮಿನಿ ಹೆಗಡೆ

10 Responses

 1. ಕೃತಿ ಕಾರರ ಮತ್ತು ಕೃತಿ ಪರಿಚಯ ಚೆನ್ನಾಗಿದೆ.. ಪದ್ಮಿನಿ ಮೇಡಂ

 2. ನಯನ ಬಜಕೂಡ್ಲು says:

  ಚೆನ್ನಾಗಿದೆ ಕೃತಿ ಪರಿಚಯ

 3. Anonymous says:

  ಧನ್ಯವಾದಗಳು ನಾಗರತ್ನ ಮೇಡಂಗೆ

 4. Padmini Hegade says:

  ನಾಗರತ್ನ ಮೇಡಂಗೆ ಕೃತಜ್ಞತೆಗಳು

 5. ಶಂಕರಿ ಶರ್ಮ says:

  ಸೊಗಾಸಾದ ವಿವರಣಾತ್ಮಕ ಕೃತಿ ಪರಿಚಯ.

 6. Malati Hegde says:

  ವಯಸ್ಸಿನಲ್ಲಿ ಓದಿನಲ್ಲಿ, ಬರಹದಲ್ಲಿ ಪ್ರಬುದ್ಧರಾದ ತಾವು ನನ್ನ ಪುಸ್ತಕ ಓದಿ ಬರೆದಿರುವುದು ತುಂಬಾ ಸಂತೋಷ. ಅನಂತ ಧನ್ಯವಾದಗಳು.

 7. ಶೈಲಜಾ ಭಟ್ಟ says:

  ತುಂಬಾ ಉತ್ತಮ ಲೇಖನ.ಸತ್ಯದ ನೆಲೆಗಟ್ಟಲ್ಲಿ ಬಿಂಬಿಸುವ ಬರವಣಿಗೆ ಗೆ ನಮ ನಮನಗಳು.

 8. Pushpa halbhavi says:

  ತುಂಬಾ ಚೆನ್ನಾಗಿ ಸಾಧಕ ಮಹಿಳೆಯ ಸಾಧನೆಗಳನ್ನು ಪ್ರಸ್ತಾಪಿಸುತ್ತ ಕೃತಿಯನ್ನು ತುಂಬಾ ಆತ್ಮೀಯವಾಗಿ ಪರಿಚಯಿಸಿದ್ದಾರೆ.

 9. ಉತ್ತಮವಾದ ಕೃತಿ ಪರಿಚಯ ಧನ್ಯವಾದಗಳು ಕೃತಿಯನ್ನು ಓದಲೇಬೇಕು ಎಂಬ ಉತ್ಸಾಹ ತುಡಿಯುತ್ತದೆ

 10. Padma Anand says:

  ಸೊಗಸಾದ ವಿವರಣಾತ್ಮಕ ಕೃತಿ ಮತ್ತು ಕೃತಿಕಾರರ ಪರಿಚಯ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: