ಪರಿಸರದೊಂದಿಗೆ ಸಾಮರಸ್ಯ…

Spread the love
Share Button


ದೇವರು ಸೃಷ್ಟಿಸಿರುವ ಕೋಟ್ಯಾನುಕೋಟಿ ಜೀವಿಗಳಲ್ಲಿ ಮಾನವ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಅವನು ಯಾವುದು ತಪ್ಪು….. ಯಾವುದು ಸರಿ….. ಎಂದು ಚಿಂತಿಸುವ…. ಚರ್ಚಿಸುವ….. ಗುಣವನ್ನು ಹೊಂದಿದ್ದಾನೆ. ಇದರಿಂದಾಗಿ ಮಾನವ ಇಂದು ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳೊಂದಿಗೆ ತನ್ನ ಬುದ್ಧಿಮತ್ತೆಯನ್ನು ಪರೀಕ್ಷಿಸಿ ಅವುಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ತರುತ್ತಿದ್ದಾನೆ.

ಈ ರೀತಿಯ ನಾಗಾಲೋಟದ ಬದುಕಿನಲ್ಲಿ ಮಾನವ ಪ್ರಕೃತಿಯನ್ನು ಮರೆಯುತ್ತಿದ್ದಾನೆ!. ಅದರ ಬೇಕು-ಬೇಡಗಳ ಬಗ್ಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ.  ತನ್ನ ಈ ರೀತಿಯ ಅಗಾಧವಾದ ಬೆಳವಣಿಗೆಗೆ ನಮ್ಮ ಪ್ರಕೃತಿ ಒಂದೆಡೆ ಘಾಸಿಗೊಂಡಿದೆ. ಈ ರೀತಿ ಇದ್ದರೂ ಕೂಡ ಪ್ರಕೃತಿ ಮಾತ್ರ ಅಡಿ ಅಡಿಗೂ ಸಹ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.ಆದರೆ ಈ ವಿಷಯವನ್ನು ಬುದ್ಧಿವಂತ ಮಾನವ ಮರೆಯುತ್ತಿದ್ದಾನೆ….. ಮೆರೆಯುತ್ತಿದ್ದಾನೆ…..!. ಇದರಿಂದಾಗಿ ಈಗಾಗಲೇ ನಾವು ಅನೇಕ ತೊಂದರೆಗಳನ್ನು ಅನುಭವಿಸಿದ್ದೇವೆ. ಪರಿಸ್ಥಿತಿ ಈ ರೀತಿಯಾಗಿ ವಿಕೋಪಕ್ಕೆ ಹೋಗಿದ್ದರು ಕೂಡ ಮಾನವ ಬುದ್ದಿ ಕಲಿತಿಲ್ಲ. ಪ್ರಕೃತಿಯೊಂದಿಗೆ ಅವನ ಒಡನಾಟವನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಾ ಬರುತ್ತಿದ್ದಾನೆ!. ಪ್ರಕೃತಿಯೊಂದಿಗಿನ ಅವನ ವಿಕೃತಿ ವರ್ತನೆಗಳು ಹದ್ದು ಮೀರಿದೆ. ಸಕಲ ಸಂಪತ್ತನ್ನು ನೀಡುವ ಭೂಮಾತೆಯನ್ನು  ಪ್ರತಿನಿತ್ಯ…..ನಿರಂತರವಾಗಿ….. ದೌರ್ಜನ್ಯ ಎಸಗುತ್ತಿದ್ದೇವೆ. ಎಲ್ಲಾ ಸಂಪತ್ತುಗಳನ್ನು ಲೂಟಿ ಮಾಡಿದ್ದು ಆಯಿತು!. ಇನ್ನು ಮುಂದಿನದೂ ಇನ್ನೇನಿದೆ ಎಂದು ಯೋಜ(ಚ)ನೆ ಮಾಡುತ್ತಿದ್ದಾನೆ?!.ಹೀಗೇಕೆ ಪೀಠಿಕೆ ಹಾಕಿದೆ ಎಂದರೆ ನಿಜಕ್ಕೂ ನಾವು ಒಂದು ಕಡೆ ಕುಳಿತು ಯೋಚನೆ ಮಾಡಿದರೆ ನಾವು ಎತ್ತ ಸಾಗುತ್ತಿದ್ದೇವೆ……? ಅಭಿವೃದ್ಧಿಯ ಪಥಕ್ಕೋ…..? ಅವನತಿಯ ಹಾದಿಗೋ….? ಎಂದು ಯೋಚನೆ ಮಾಡುವಂತಾಗುತ್ತದೆ!.
 
ಗ್ರಾಮ ಪಂಚಾಯಿತಿ ಮಟ್ಟದಿಂದ ಮೊದಲ್ಗೊಂಡು ಅನೇಕ ಕಡೆಗಳಲ್ಲಿ ಪ್ರಕೃತಿಯ ಕುರಿತಾಗಿ….  ಭೂಮಿಯ ಕುರಿತಾಗಿ…. ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳುತ್ತಾಬಂದರೂ ಕೂಡ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲು ನಾವು ಸೊಲುತ್ತಿದ್ದೇವೆ! ನಮ್ಮ ಪ್ರಕೃತಿ ಯಾವುದೇ ರೀತಿಯಲ್ಲೂ  ನಿರೀಕ್ಷೆ ಬಯಸದೇ  ಫಲ ನೀಡುತ್ತಿದೆ.  ಇದನ್ನು ನಾವು ಅರ್ಥಮಾಡಿಕೊಳ್ಳದೆ…. ಅದರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೆ……. ಮುಂದೆ ಮುಂದೆ  ಸಾಗುತ್ತಿದ್ದೇವೆ.

ಈ ಸುಂದರ, ವರ್ಣಿಸಲಸದಳ ಪ್ರಕೃತಿಯಲ್ಲಿ ಪ್ರತಿದಿನ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ದಿನಚರಿ ಮಾತ್ರ ಬದಲಾಗುತ್ತಿಲ್ಲ!. ಆದರೆ ನಾವು ಅದರ ವಿರುದ್ಧ ಸಾಗುತ್ತಿದ್ದೇವೆ!. “ಮಾನವ ಜನ್ಮ ಸಿಗುವುದೇ ಅಪರೂಪ ಅದನ್ನು ಉಪಯೋಗಿಸಿಕೊಳ್ಳದೇ ಹಾಳು ಮಾಡಿಕೊಳ್ಳುತ್ತಿದ್ದೇವೆ”.

ನಗರ ಪ್ರದೇಶದಿಂದ ಹತ್ತರಿಂದ ಹದಿನೈದು ಕಿಲೋ ಮೀಟರ್ ವ್ಯಾಪ್ತಿವರೆಗೂ ಸಹ ಎಲ್ಲೆಡೆ ಬೆಳೆಗಳನ್ನು ಬೆಳೆಯುತ್ತಿದ್ದ ಭೂಮಿ ಈಗ ಸೈಟುಗಳಾಗಿ ಮಾರ್ಪಾಡಾಗಿದೆ.ಇದರೊಂದಿಗೆ ಕಾಂಕ್ರೀಟ್ ಕಾಡು ಗಳಾಗಿ ರೂಪುಗೊಳ್ಳುತ್ತಿವೆ. ಭೂ-ಒಡೆಯನಾದ ರೈತನು ಕೂಡ ವ್ಯವಸಾಯವನ್ನು ಕ್ರಮಬದ್ಧವಾಗಿ ನಿರ್ವಹಿಸದೆ ಹಂತಹಂತವಾಗಿ ವ್ಯವಸಾಯದಿಂದ ದೂರ ಸರಿಯುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಇದ್ದರೂ ಕೂಡ ಒಂದು ರೀತಿಯಲ್ಲಿ ತಾತ್ಸಾರ ಮನೋಭಾವ ತಾಳುತ್ತಿದ್ದಾನೆ ಎಂದೇ ಹೇಳಬೇಕು. ಇದಕ್ಕೆ ಗಗನಕ್ಕೇರಿದ ಕೃಷಿ ಪದಾರ್ಥಗಳು ಕಾರಣವಾಗಿರಬಹುದು….. ವ್ಯವಸಾಯಕ್ಕೆ ಆಳುಕಾಳುಗಳು ಸಿಗದೇ ಇರಬಹುದು….. ನಿರಂತರ ಬೆಳೆ ಬೆಳೆದರೂ ಕೂಡ ರಾಸಾಯನಿಕ ಗೊಬ್ಬರಗಳ ಅತಿ ಹೆಚ್ಚು ಬಳಕೆಯಿಂದ ಭೂಮಾತೆ ಮುನಿಸಿಕೊಂಡಿದ್ದಾಳೆ!. ಹೆಚ್ಚು ಇಳುವರಿ ತೆಗೆಯಲು ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಾ ಸಾವಯವ ಕೃಷಿಯಿಂದ ದೂರ ಸರಿದುದರ ಫಲವಾಗಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾನೆ. ಕೃಷಿಗೆ ನೆರವಾಗುವ ಎರೆಹುಳು ಇನ್ನಿತರ ಕ್ರಿಮಿಕೀಟಗಳನ್ನು ಕಳೆದು ಕೊಳ್ಳುತ್ತಿದ್ದಾನೆ.ಹೀಗೆ ಒಂದಕ್ಕೊಂದು ಸಮಸ್ಯೆಗಳಿಂದಾಗಿ ಭೂಮಿಯ ಸಹಜ ಸೌಂದರ್ಯ ಬರಿದಾಗುತ್ತಿದೆ.

ಇನ್ನು ಪ್ಲಾಸ್ಟಿಕ್ ಹೆಮ್ಮಾರಿ!. ಸಾವಿರಾರು ಟನ್ ಪ್ರತಿದಿನ ಭೂಮಿಯ ಒಡಲು ಸೇರುತ್ತಿದೆ. ಆಹಾರ ಪದಾರ್ಥ ವೆಂದು ಅದರ ಜೊತೆಯಲ್ಲೇ ಪ್ಲಾಸ್ಟಿಕ್ ಪದಾರ್ಥಗಳನ್ನು ಕೂಡ ಪ್ರಾಣಿ-ಪಕ್ಷಿಗಳು ತಿಂದು ಯಾತನೆ ಅನುಭವಿಸುತ್ತಿವೆ. ಸರ್ಕಾರ ಅನೇಕ ವಿನೂತನ ಯೋಜನೆಗಳನ್ನು…… ವಿವಿಧ ಇಲಾಖೆಗಳ ಮೂಲಕ…… ಹಮ್ಮಿಕೊಂಡಿದೆ. ಅದನ್ನೆಲ್ಲಾ ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ.

PC : Internet

ಇರುವ ಭೂಮಿಯನ್ನು ಮಾರುತ್ತಿದ್ದೇವೆ. ಆದರೆ ಹೊಸದಾಗಿ ನಾವು ಭೂಮಿಯನ್ನು ನಿರ್ಮಾಣ ಮಾಡಲು ಸಾಧ್ಯವೇ ಇಲ್ಲಾ. ಇರುವಷ್ಟರಲ್ಲಿ ನಾವು ಹೊಸ  ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಬೇಕಾಗಿದೆ. ಅದು ಬಿಟ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಮಾಡಲು ನಾವು ಹೋದರೆ ಖಂಡಿತ ಮೂರ್ಖರಾಗುತ್ತೇವೆ ಅಲ್ಲವೇ?.  ಈಗಾಗಲೇ ಪ್ರಕೃತಿ ಮುನಿಸಿಕೊಂಡು ಹಲವು ಅನಾಹುತಗಳ ದರ್ಶನ ಮಾಡಿಸಿದೆ!. ಮಳೆಗಾಲ, ಬೇಸಿಗೇಕಾಲ, ಚಳಿಗಾಲದ ದಿಕ್ಕೇ ಬದಲಾಗಿದೆ!.

ಈ ನಿಟ್ಟಿನಲ್ಲಿ ಸಂಪರ್ಕ ಮಾಧ್ಯಮಗಳಾದ ಪತ್ರಿಕೆಗಳಾಗಿರಬಹುದು…….ಆಕಾಶವಾಣಿಯಾಗಿರಬಹುದು……. ಟಿವಿ ಗಳಾಗಿರಬಹುದು……. ಸರ್ಕಾರದ ಹಲವುಸಂಸ್ಥೆಗಳಾಗಿರಬಹುದು….. ಹೀಗೆ ಹಲವು ಜಾಗೃತ ಮಾಹಿತಿಗಳು ಎಲ್ಲೆಡೆ ಸಿಗುತ್ತಿವೆ. ನಾನು ಮೊದಲೇ ಹೇಳಿದಂತೆ ಸರ್ಕಾರದ ಹಲವು ಇಲಾಖೆಗಳಾಗಿರಬಹುದು ಈ ಮೂಲಕ ಜಾಗೃತಿ ಮೂಡಿಸುತ್ತಿವೆ. ಈ ಸುಂದರ ಪ್ರಕೃತಿ ತನ್ನತನವನ್ನು ಕಳೆದುಕೊಳ್ಳುತ್ತಿದೆ  ಮಾನವನಿಂದ ಸತತವಾಗಿ!.

ನಮ್ಮ ಕಾಲದ ಪರಿಸ್ಥಿತಿಯೆ ಹೀಗಾದರೆ ಮುಂದಿನ ಪೀಳಿಗೆಗೆ ನಾವು ಉಳಿಸಬೇಕಾದರೆ ನಮ್ಮ ಪ್ರಯತ್ನವೂ ಅತಿ ಮುಖ್ಯವಾಗುತ್ತದೆ. ಇರುವ ಅರಣ್ಯ ಪ್ರದೇಶಗಳು ಕೂಡ ಕಡಿಮೆಯಾಗುತ್ತಿವೆ. ಭೂಮಾತೆಯ ಅಂತರಂಗದಲ್ಲಿ ಅಡಗಿರುವ ಅನೇಕ ಖನಿಜ ಪದಾರ್ಥಗಳನ್ನು ಹೊರತೆಗೆದೂ….. ಗಣಿಗಾರಿಕೆ ಮೂಲಕ ಮತ್ತಷ್ಟು ಮಾತೆಗೆ ಧಕ್ಕೆ ಮಾಡಿದ್ದಾಯಿತು. ನಾವೇನು ಹೊಸದಾಗಿ ಎಲ್ಲವನ್ನು ನಿರ್ಮಾಣ ಮಾಡಬೇಕಾಗಿಲ್ಲ, ಇರುವುದನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ!.

ಹಲವು ವರ್ಷಗಳಿಂದ ಅಣೆಕಟ್ಟು, ಅರಣ್ಯವನ್ನು ನಮ್ಮ ಹಿರಿಯರು ಬೆಳೆಸಿ, ಉಳಿಸಿ ಹೋಗಿದ್ದಾರೆ. ಇದಕ್ಕೆ ಆಧುನಿಕ ಸ್ಪರ್ಶ ನೀಡಿ ಅವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅತಿ ಮುಖ್ಯ ಚಿಂತನೆ ಅಗತ್ಯ. ನಮ್ಮ ಹಿರಿಯರು ಗಿಡ- ಮರಗಳನ್ನು ಮಕ್ಕಳಂತೆ ಸಾಕುತ್ತಿದ್ದರು. ನೂರಾರು ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.

ಪ್ರಸ್ತುತ ಉದಾಹರಣೆಯೆಂದರೆ;- “ಸಾಲುಮರದ ತಿಮ್ಮಕ್ಕ” ಇವರಿಗಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ.  ನಮ್ಮ ಊರಿನಲ್ಲಿ ಮನೆಯ ಹಿಂದಗಡೆ ವಿಶಾಲವಾದ ಜಾಗ ಇದೆ. ಅಲ್ಲಿ ನಮ್ಮ ತಾತನ ಕಾಲದ ಹಲಸಿನಮರ, ದಾಳಿಂಬೆ, ಸಪೋಟ, ಹುಣಸೆಮರ, ಅಮಟೆ ಮರ, ಮಾವಿನ ಮರ ಇವೆಲ್ಲ ಎರಡೆರಡು ಮರಗಳು ಇದ್ದವು. ಅವೆಲ್ಲಾ ಸಮೃದ್ಧವಾಗಿದ್ದವು. ರುಚಿಯಾದ ಫಲ ನೀಡುತ್ತಿದ್ದವು.ಮನೆಮಂದಿಯಲ್ಲ ತಿಂದು ಪಕ್ಕದ ಮನೆಯವರಿಗೆ ಕೂಡ ನೀಡುತ್ತಿದ್ದೆವು. ಅವು ಈಗ ಇಲ್ಲಾ!.

ಈಗ ಮನೆ- ಹೊಲಗಳ ತುಂಬಾ ಹಣ್ಣಿನ ಮರಗಳಿದ್ದರೂ ಕೂಡ ಅಂತಹ ರುಚಿ ಹಾಗೂ ಇಳುವರಿಯನ್ನ ನಿರೀಕ್ಷಿಸಲಾಗುವುದಿಲ್ಲ. ತೆಂಗಿನಮರಗಳನ್ನೇ ನೋಡಿ ಆ ಕಾಲದಲ್ಲಿ ಹಾಕಿರುವ ಮರಗಳು ಇವತ್ತಿಗೂ ಕೂಡ ಸಮೃದ್ಧ ಫಲ ನೀಡುತ್ತಿವೆ. ಇವೆಲ್ಲವನ್ನು ನೆಟ್ಟಿದ್ದರೆ ಫಲವಾಗಿನಾವು ಅವುಗಳಿಂದ ಸಾಕಷ್ಟು ಉಪಯೋಗ ಪಡೆದುಕೊಂಡೆವು. ಆದರೆ ಮುಂದುವರಿದಂತೆ ನಾವು ಹೊಸದಾಗಿ ಗಿಡಗಳನ್ನು ಮಾತ್ರ ಹಾಕಲಿಲ್ಲ  ಇದು ಎಲ್ಲರ ಮನೆಯ ಕಥೆ!.

ನಮ್ಮ ಮುಂದಿನ ಪೀಳಿಗೆಗೆ ನಾವುಗಳೆಲ್ಲರೂ ಒಂದಿಷ್ಟು ಗಿಡಗಳನ್ನು ನೆಡಬೇಕಾಗಿದೆ. “ವಿಶ್ವ ಪರಿಸರ ದಿನಾಚರಣೆ……” “ವನ ಮಹೋತ್ಸವ……”  “ವಿಶ್ವ ಭೂಮಿ ದಿನ….” ಹೀಗೆ ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ದಿನಾಚರಣೆಗಳನ್ನು ನಾವು ವರ್ಷವರ್ಷವೂ ಆಚರಣೆ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ. ಅದು ಒಂದು ದಿನಕ್ಕೆ ಎನ್ನುವಂತೆ ಸೀಮಿತವಾಗಿದೆ. ನಾವು ವರ್ಷಪೂರ್ತಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ, ಇರೋಣ. ನಾವು ಬದುಕಿ  ಇತರರನ್ನು ಬದುಕಿಸೋಣ.

ಈ ಸುಂದರ ಪರಿಸರ ಮಾನವನಿಗೊಬ್ಬನಿಗೆ ಸೀಮಿತವಾಗಿಲ್ಲ. ಸಕಲ ಜೀವರಾಶಿಗಳಿಗೂ ಸೇರಿದ್ದು. ಅವುಗಳಿಗೂ ಕೂಡ ಅನುಭವಿಸುವ….. ಬದುಕುವ…… ಹಕ್ಕು ಇದೆ. ಅದನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಮುಖ್ಯವಾಗಿ ನಮ್ಮ ಮಕ್ಕಳಿಗೆ ಪರಿಸರದ ಬಗ್ಗೆ,  ಗಿಡ ಮರಗಳ ಬಗ್ಗೆ ಜಾಗೃತಿಯ ಮೂಡಿಸಬೇಕು. ಸರ್ಕಾರ ಶಾಲಾ ಹಂತದಲ್ಲೇ ಪರಿಸರದ ಕುರಿತಾಗಿ ಹಲವು ಪಠ್ಯ ಸಂಬಂಧಿ ವಿಷಯಗಳನ್ನು ನೀಡಿ ಮಕ್ಕಳಲ್ಲೂ ಕೂಡ ಜಾಗೃತಿ ಮೂಡಿಸುತ್ತಿದೆ. ಪರಿಸರ ದಿನಾಚರಣೆಗಳಂದು ಚಿತ್ರ ಬಿಡಿಸುವ ಸ್ಪರ್ಧೆ, ಪರಿಸರದ ಕುರಿತಾಗಿ ಅನೇಕ ವಿಷಯಗಳು ಚರ್ಚಿತ ವಾಗುತ್ತವೆ. ಪರಿಸರ ಇದ್ದರೆ ನಾವು, ಪರಿಸರ ನಮಗೆ ಎಷ್ಟು ಉಪಯೋಗ? ಎಂಬಿತ್ಯಾದಿ ಬಗ್ಗೆ ಕಾರ್ಯಗಾರಗಳನ್ನು ಕೂಡ ಮಾಡುತ್ತಾ ಬರುತ್ತಿದೆ.

ಮತ್ತೆ ಭೂಮಿಗೆ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ದಿನನಿತ್ಯ ಸಾವಿರಾರು ಟನ್ ಸೇರುತ್ತಿವೆ. ಒಣ ಕಸ….. ಹಸಿ ಕಸ….. ವೈದ್ಯಕೀಯ  ತ್ಯಾಜ್ಯ ಸಲಕರಣೆಗಳು… ಇತ್ಯಾದಿಗಳನ್ನು ಬೇರ್ಪಡಿಸಿ ಕಸ ವಿಂಗಡಣೆ ಮಾಡುವ ಕೆಲಸ ದಿನನಿತ್ಯ ನಗರಪಾಲಿಕೆ… ನಗರಸಭೆ…. ಪುರಸಭೆ….. ಪಟ್ಟಣ ಪಂಚಾಯಿತಿ….. ಗ್ರಾಮ ಪಂಚಾಯಿತಿ….. ಮಟ್ಟದಲ್ಲಿ ನಡೆಯುತ್ತಿದ್ದರೂ ಕೂಡ ಅದನ್ನು ನಾವು ಸಮರ್ಪಕವಾಗಿ ನಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ   “ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ” ಮುಖಾಂತರ ಪಂಚಾಯಿತಿ ಹಂತದಲ್ಲೇ ಇಂಗು ಗುಂಡಿ…. ಇನ್ನಿತರ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳಿವೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿವಿಧ ರೀತಿಯ ಸಸಿಗಳನ್ನು ವಿತರಿಸುವುದು….. ತಮ್ಮ ತಮ್ಮ ಪಾಣಿಗಳ ಮೂಲಕ ಎಲ್ಲರಿಗೂ  ನೀಡುತ್ತಾರೆ.

ಈಗ ಮಳೆಗಾಲ. ಸುಸಮಯ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಕೂಡ ಪ್ರತ್ಯೇಕವಾಗಿ ವಿವಿಧ ಜಾತಿಯ ಸಸಿಗಳನ್ನು ರೈತರಿಗೆ…. ಸಾರ್ವಜನಿಕರಿಗೆ….ವಿತರಿಸುತ್ತಾರೆ. ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿ ಖಾಲಿ ಇರುವ ಜಾಗದಲ್ಲಿ ಇವುಗಳನ್ನು ನೆಟ್ಟು ಪೋಷಣೆ ಮಾಡಿದರೆ ಮುಂದೊಂದು ದಿನ ಆರ್ಥಿಕವಾಗಿಯೂ ಕೂಡ ಅದರಿಂದ ಪ್ರಯೋಜನ ಪಡೆಯಬಹುದು. ಸಸಿಗಳ ವಿತರಣೆ ಜೊತೆಗೆ ನಿರ್ವಹಣಾ ವೆಚ್ಚವನ್ನು ಕೂಡ ನೀಡುತ್ತಾರೆ. ಇಷ್ಟೆಲ್ಲಾ ಸೌಕರ್ಯಗಳನ್ನು ನಾವೇಕೆ ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ!.

ಇರುವುದೊಂದೇ ಭೂಮಿ”. “ಇರುವುದೊಂದೇ ಜನ್ಮ”. ಇದನ್ನು ಮನಗಂಡು ಜಾಗೃತರಾಗಬೇಕು. ನಮ್ಮ ಪ್ರಯತ್ನ ನಿರಂತರವಾಗಿ ಸಾಗಬೇಕು.ಅದರಲ್ಲೂ ನಮ್ಮ ಯುವಜನತೆ ಈ ನಿಟ್ಟಿನಲ್ಲಿ ಮುಂದಾಗಬೇಕು. ನಮ್ಮ ತಾತ…..ತಂದೆ…. ನೆಟ್ಟಿರುವ ಮರಗಳಿಂದ ಅನೇಕ ಪ್ರಯೋಜನವನ್ನು ನಾವೆಲ್ಲ ಪಡೆದಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ನಾವೊಂದಿಷ್ಟು ಗಿಡಗಳನ್ನು  ನೆಟ್ಟು ಅವರು ಕೂಡ ಫಲವನ್ನು ಅನುಭವಿಸುವಂತೆ ಮಾಡೋಣ.

ಮತ್ತೊಮ್ಮೆ ನಾವೆಲ್ಲರೂ  ಪರಿಸರದೊಂದಿಗೆ ಸಾಮರಸ್ಯದಿಂದ, ಹೊಂದಾಣಿಕೆ ಮಾಡಿಕೊಂಡು ಬದುಕೋಣ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

4 Responses

  1. ಪರಿಸರದೊಂದಿಗೆ ಸಾಮರಸ್ಯಜವಾಬ್ದಾರಿಯುತ. ಲೇಖನ ಬರೆದ ನಿಮಗೆ ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    Nice one

  3. ಶಂಕರಿ ಶರ್ಮ says:

    ಇರುವುದೊಂದೇ ಭೂಮಿ… ಇದರ ನಿರಂತರ ಯೋಗ್ಯ ಇರುವಿಕೆಗಾಗಿ ನಮ್ಮ ಕರ್ತವ್ಯಗಳೇನೆಂದು ನೆನಪಿಸುವ ಸೊಗಸಾದ ಲೇಖನ.

  4. Padmini Hegde says:

    ಜವಾಬ್ದಾರಿಯ ಲೇಖನ. ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: