ಜಮ್ಮು ಕಾಶ್ಮೀರ : ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಕಾಶ್ಮೀರದಲ್ಲಿ ಎರಡನೇ ಸ್ಥಾನ ಪಡೆದಿರುವ ದಾಲ್ ಸರೋವರವನ್ನು, ಕಾಶ್ಮೀರವೆಂಬ ಕಿರೀಟದಲ್ಲಿರುವ ಅಮೂಲ್ಯವಾದ ವಜ್ರಕ್ಕೆ ಹೋಲಿಸುತ್ತಾರೆ. ಇದರ ಸುತ್ತಳತೆ 15.5 ಚದರ ಕಿ.ಮೀ. ಇದ್ದು, ಸರಾಸರಿ ಇಪ್ಪತ್ತು ಅಡಿ ಆಳವಿದೆ. ನಾವು ದಾಲ್ ಸರೋವರದ ಹೌಸ್‌ಬೋಟ್ ವೊಂದರಲ್ಲಿ ಎರಡು ದಿನ ತಂಗಿದ್ದೆವು. ಕಾಶ್ಮೀರಿ ಭಾಷೆಯಲ್ಲಿ ದಾಲ್ ಎಂದರೆ ಸರೋವರ, ನಾವು ಮಲೆನಾಡಿನವರು ಹೆಬ್ಬೆ ಫಾಲ್ಸ್ ಎಂದ ಹಾಗೆ. (ಹೆಬ್ಬೆ /ಅಬ್ಬಿ ಎಂದರೆ ಜಲಪಾತ) ಹೌಸ್‌ಬೋಟ್‌ಗಳು, ಬ್ರಿಟಿಷರು ನೀಡಿದ ಬಳುವಳಿ. ಇದನ್ನು ‘ದಾಲ್ ಸರೋವರದ ಮೇಲೆ ತೇಲುತ್ತಿರುವ ಇಂಗ್ಲೆಂಡಿನ ಒಂದು ತುಣುಕು’ ಎನ್ನುತ್ತಾರೆ ಸ್ಥಳೀಯರು. ಇವು ಸುಸಜ್ಜಿತ ರೆಸಾರ್‍ಟ್‌ಗಳಂತೆ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದವು. ಕಲಾತ್ಮಕವಾಗಿ ಕೆತ್ತನೆ ಮಾಡಿದ ಮರದ ಬೋಟಿನಲ್ಲಿ, ಒಂದು ವೆರಾಂಡ, ಟಿ.ವಿ. ಹಾಲು, ಊಟದ ಕೋಣೆ, ಎರಡು ಅಥವಾ ಮೂರು ಕೊಠಡಿಗಳು ಇದ್ದವು. ಬಿಸಿ ಬಿಸಿಯಾದ ಊಟವನ್ನು ತಂದು ಬಡಿಸುತ್ತಿದ್ದರು. ಮಲಗುವ ಕೊಠಡಿಯನ್ನು ಬೆಚ್ಚಗಿಡಲು, ಒಂದು ಅಗಿಷ್ಠಿಕೆಯಲ್ಲಿ ಬೆಂಕಿ ಹಾಕಿ, ಅದಕ್ಕೆ ಒಂದು ಹೊಗೆ ಕೊಳವೆಯನ್ನು ಜೋಡಿಸಿದ್ದರು. ರಾತ್ರಿ ಮಲಗಿದಾಗ, ನೀರಿನ ಅಲೆಗಳ ಮಧ್ಯೆ ಹೊಯ್ದಾಡುತ್ತಿದ್ದ ದೋಣಿ, ನೀರಿನ ಕಲರವದ ಸದ್ದು, ನಮ್ಮನ್ನು ಜೋಗುಳ ಹಾಡುತ್ತಾ, ತೊಟ್ಟಿಲಲ್ಲಿ ತೂಗಿ ಮಲಗಿಸಿದ ಹಾಗಿತ್ತು. ಮಾರನೆಯ ದಿನ ಮುಂಜಾನೆ, ‘ಶಿಕಾರ’ ಎಂದು ಕರೆಯಲ್ಪಡುವ ದೋಣಿಗಳು ನಮ್ಮನ್ನು ಸರೋವರದಲ್ಲಿ ಸುತ್ತಾಡಿಸಲು ಸಿದ್ದವಾಗಿ ಕಾಯುತ್ತಿದ್ದವು. ಹಾಂಜಿ ಪಂಗಡದವರು ನಡೆಸುವ ಈ ಶಿಕಾರ ದೋಣಿಗಳು ಉದ್ದವಾಗಿದ್ದು, ಮಧ್ಯೆ ಪ್ರವಾಸಿಗರು ಕೂರಲು ಮೆತ್ತನೆಯ ಹಾಸು, ಮಳೆ ಬೀಳದಿರಲೆಂದು ತಲೆಯ ಮೇಲೊಂದು ಸೂರು. ರಾಜಕುವರಿಯರಂತೆ ಮೆತ್ತನೆಯ ಕೆಂಪು ಹಾಸಿನ ಮೇಲೆ ಕುಳಿತು, ಪ್ರಶಾಂತವಾದ ಸರೋವರದ ಮೇಲೆ ನಿಧಾನವಾಗಿ ಸಾಗುತ್ತಾ, ದೂರದಲ್ಲಿ ಕಾಣುತ್ತಿದ್ದ ಹಿಮಗಿರಿಗಳನ್ನು ನೋಡುತ್ತಾ ಇರುವಾಗ, ಕಾಶ್ಮೀರವು ಸ್ವರ್ಗದಂತೆ ಭಾಸವಾಗಿತ್ತು. ಮಧ್ಯೆ ಮಧ್ಯೆ ಇರುವ ನಡುಗಡ್ಡೆಗಳಲ್ಲಿ ಹೂಗಳನ್ನೂ, ತರಕಾರಿಗಳನ್ನೂ ಬೆಳಸಿದ್ದರು. ಕೆಸರು ಹೆಚ್ಚು ಇರುವ ಸ್ಥಳಗಳಲ್ಲಿ, ತಾವರೆಗಳು ಅರಳಿ ನಿಂತಿದ್ದವು. ಇಲ್ಲಿ ವಾಸಿಸುವರ ಮುಖ್ಯ ಕಸುಬು ಮೀನುಗಾರಿಕೆ ಮತ್ತು ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ಶೇಖರಿಸಿ, ಗೊಬ್ಬರವನ್ನಾಗಿ ಮಾರ್ಪಡಿಸಿ, ತಮ್ಮ ತೋಟಗಳಲ್ಲಿ ಉಪಯೋಗಿಸುವರು.

ನಾವು ಎರಡು ಮಾರು ಚಲಿಸುವಷ್ಟರಲ್ಲಿ ಬಣ್ಣ ಬಣ್ಣದ ಹೂಗಳನ್ನು ಹೊತ್ತ ದೋಣಿಗಳು ನಮ್ಮನ್ನು ಸುತ್ತುವರೆದಿದ್ದವು. ತರಹೇವಾರಿ ಹಣ್ಣುಗಳು, ವಿವಿಧ ಬಗೆಯ ಅಲಂಕಾರಿಕ ವಸ್ತುಗಳು, ಸ್ವೆಟರ್‌ಗಳು, ಶಾಲುಗಳು ಎಲ್ಲವನ್ನೂ, ದೋಣಿಗಳಲ್ಲಿ ತುಂಬಿಸಿ ಮಾರಲು ತಂದಿದ್ದರು. ನಾವು ಅವರು ಮಾರುತ್ತಿದ್ದ ವಸ್ತುಗಳನ್ನು ಕೊಳ್ಳದಿದ್ದರೆ, ‘ಮಾಜೀ, ಇಂದು ನೀವು ವ್ಯಾಪಾರ ಮಾಡದಿದ್ದರೆ, ಮನೆಯಲ್ಲಿ ಮಡದಿ, ಮಕ್ಕಳು ಉಪವಾಸ’ ಎಂದು ಅಂಗಲಾಚುತ್ತಾರೆ. ಪ್ರವಾಸಿಗರಿಂದಲೇ ಅವರ ಜೀವನ ನಡೆಯಬೇಕು. ಹಾಗಾಗಿ, ಅವರು ಮಾರುವ ವಸ್ತುಗಳನ್ನು ಕೊಳ್ಳದಿದ್ದರೆ ನಮಗೇ ಒಂದು ಬಗೆಯ ತಪ್ಪಿತಸ್ಥ ಭಾವನೆ ಕಾಡತೊಡಗುತ್ತದೆ. ಅಲ್ಲಲ್ಲಿ ತೇಲಾಡುವ ರೆಸ್ಟೊರಾಂಟುಗಳಿದ್ದವು, ಒಣ ಹಣ್ಣುಗಳಿಂದ ತಯಾರಿಸಿದ, ಕೇಸರಿ ಬೆರಸಿದ ಕಾಶ್ಮೀರಿ ಪೇಯ ‘ಕಾವಾ’ ಕುಡಿಯದೇ ಮುಂದೆ ಹೋಗಲು ಸಾಧ್ಯವೇ? ಬಟ್ಟೆ ಅಂಗಡಿಗಳು, ಚೆಂದದ ಕಲಾಕೃತಿಗಳ ಅಂಗಡಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದವು. ನಾವೂ, ಪಶ್ಮೀನಾ ಉಣ್ಣೆಯಿಂದ ತಯಾರಿಸಿದ ಶಾಲು ಕೊಂಡೆವು. ಮುಂದೆ ಸಾಗುತ್ತಾ, ಮೊಗಲ್ ಚಕ್ರವರ್ತಿಗಳು, ದಾಲ್ ಸರೋವರದ ಸುತ್ತ ನಿರ್ಮಿಸಿದ್ದ – ಮೊಗಲ್ ಗಾರ್ಡನ್ಸ್, ನಿಷಾತ್ ಬಾಗ್, ಶಾಲಿಮಾರ್ ಬಾಗ್‌ಗಳಲ್ಲಿ ಸುಂದರವಾದ ಹೂ ತೋಟವನ್ನು ನೋಡಿ ಇದು ನಂದನವನವೆನ್ನಿಸಿತ್ತು. ಸಂಜೆಯಾದಂತೆ, ರವಿಯ ಹೊಂಗಿರಣಗಳು ದಾಲ್ ಸರೋವರವನ್ನು ಸ್ಪರ್ಶಿಸುತ್ತಿದ್ದಂತೆ, ಶ್ರೀನಗರ ಇಂದ್ರನ ಅಮರಾವತಿಯಂತೆ ತೋರುತ್ತಿತ್ತು. ನಿಧಾನವಾಗಿ, ಇರುಳು ಕವಿದಂತೆ, ನಾವು ಕಂಡ ಚೆಲುವಿನ ಚಿತ್ತಾರಗಳು ಅದೃಶ್ಯವಾದವು. ಚಳಿಗಾಲದಲ್ಲಿ, ಈ ಸರೋವರ ಹೆಪ್ಪುಗಟ್ಟಿ ಮಂಜುಗಡ್ಡೆಯ ಕಲ್ಲು ಚಪ್ಪಡಿಯಂತೆ ಕಾಣುತ್ತದೆ. ನಾವು ನೋಡಿದ್ದ ದೃಶ್ಯಗಳನ್ನು ಮೆಲುಕು ಹಾಕುತ್ತಾ, ನಮ್ಮ ಹೌಸ್ ಬೋಟಿಗೆ ಮರಳಿದೆವು.

Boat houses in Dal Lake, Kashmir PC: Internet


ಮರುದಿನ, ಶ್ರೀನಗರದಿಂದ 56 ಕಿ.ಮೀ. ದೂರದಲ್ಲಿದ್ದ ಗುಲ್ಮಾರ್ಗ್‌ಗೆ ಭೇಟಿ ನೀಡಿದೆವು. ಚಳಿಗಾಲದಲ್ಲಿ ಎಲ್ಲೆಲ್ಲಿಯೂ ಹಿಮದ ರಾಶಿ, ಬೆಟ್ಟ ಗುಡ್ಡಗಳ ಮೇಲೆ, ಮನೆಗಳ ಮೇಲೆ, ಗಿಡ ಮರಗಳ ಮೇಲೆ ಹಿಮದ ಮುಸುಕು. ಪ್ರಕೃತಿಮಾತೆ ಶ್ವೇತ ವಸ್ತ್ರಧಾರಿಣಿಯಾಗಿ ನಮ್ಮ ಮುಂದೆ ಮಂದಹಾಸ ಬೀರುತ್ತಾ ನಿಲ್ಲುತ್ತಾಳೆ. ಸರೋವರಗಳು ಹೆಪ್ಪುಗಟ್ಟಿ ಹಿಮದ ಚಪ್ಪಡಿಗಳಂತಾಗುತ್ತವೆ. ವಾಹನಗಳು ಓಡಾಡಲು ಅನುಕೂಲವಾಗುವಂತೆ, ರಸ್ತೆಗಳಲ್ಲಿ ಬೀಳುವ ಹಿಮವನ್ನು ರಸ್ತೆಯ ಬದಿಗೆ ದೂಡುತ್ತಾರೆ. ಹಿಮಗಡ್ಡೆಗಳ ನಡುವೆ ಚಲಿಸುವ ವಾಹನಗಳ ಚಕ್ರಗಳಿಗೆ ಸರಪಳಿಯನ್ನು ಬಿಗಿದಿರುತ್ತಾರೆ. ಬಹುಶಃ, ವಾಹನಗಳು ಹಿಮದ ಮೇಲೆ ಜಾರದಿರಲಿ, ಸುಗಮವಾಗಿ ಚಲಿಸಲಿ ಎಂಬ ಉದ್ದೇಶ ಇರಬಹುದು. ನಾವು ಅಗಸ್ಟ್ 2022 ರಲ್ಲಿ ಅಮರನಾಥ ಯಾತ್ರೆಗೆಂದು ಹೋದವರು, ಗುಲ್ಮಾರಿಗೆ ಭೇಟಿ ನೀಡಿದಾಗ, ಹಿಮದ ಸುಳಿವೇ ಇರಲಿಲ್ಲ. ಬಟ್ಟಲಾಕಾರದ ಕಣಿವೆ ಹಚ್ಚ ಹಸುರು ಹುಲ್ಲುಗಾವಲಾಗಿ ಮಾರ್ಪಾಡಾಗಿತ್ತು. ಅಲ್ಲಲ್ಲಿ ಸುಂದರವಾದ ಬಣ್ಣ ಬಣ್ಣದ ಹೂಗಳು ಕಂಗೊಳಿಸುತ್ತಿದ್ದವು. 1500 ನೇ ಸಾಲಿನಲ್ಲಿ, ಈ ಪ್ರದೇಶಕ್ಕೆ ಭೇಟಿಯಿತ್ತ ಯೂಸುಫ್ ಷಾ ಎಂಬ ಪ್ರವಾಸಿಗನು, ಈ ಪುಷ್ಪಗಳ ಸೌಂದರ್ಯಕ್ಕೆ ಬೆರಗಾಗಿ, ಈ ಸ್ಥಳವನ್ನು ಗುಲ್‌ಮಾರ್ಗ್ ಅಂದರೆ ಪುಷ್ಪಗಳ ಕಣಿವೆ ಎಂಬ ಹೆಸರಿನಿಂದ ಕರೆದನಂತೆ. ಮೊದಲು, ಈ ಪ್ರದೇಶಕ್ಕೆ ಗೌರೀಪಥ ಎಂಬ ನಾಮಧೇಯ ಇತ್ತು ಎಂಬ ಪ್ರತೀತಿ. ಹಿಮಾಲಯ ಶಿವ ಪಾರ್ವತಿಯರ ವಾಸಸ್ಥಾನ ಎಂಬ ನಂಬಿಕೆ ಹಿಂದೂಗಳ ಮನಸ್ಸಿನಲ್ಲಿ ಬೇರೂರಿದೆ ಅಲ್ಲವೇ?

ಭಾರತದಲ್ಲಿನ ಬಿಸಿಲಿನ ಬೇಗೆಯನ್ನು ತಡೆಯಲಾರದೆ, ಬ್ರಿಟಿಷರು ಬೇಸಿಗೆಯಲ್ಲಿ, ಕಾಶ್ಮೀರದಲ್ಲಿ ಮೊಕ್ಕಾಂ ಹೂಡುತ್ತಿದ್ದರು, ಮನರಂಜನೆಗಾಗಿ ಹಲವು ಬಗೆಯ ಕ್ರೀಡೆಗಳನ್ನೂ ಆಯೋಜಿಸುತ್ತಿದ್ದರು – ಗೋಲ್ಫ್ ಮೈದಾನಗಳು, ಸ್ಕೀಯಿಂಗ್ ಕ್ಲಬ್‌ಗಳು ಇತ್ಯಾದಿ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಗೋಲ್ಫ್‌ಕೋರ್ಸ್ ಗುಲ್ಮಾರ್ಗ್‌ನಲ್ಲಿದೆ ಎನ್ನುವ ಹೆಗ್ಗಳಿಕೆ ಇದೆ. ಸಮುದ್ರ ಮಟ್ಟದಿಂದ 8690 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಪ್ರತಿ ವರ್ಷ ಕ್ರಿಸ್‌ಮಸ್ ಮತ್ತು ಈಸ್ಟರ್ ಸಮಯದಲ್ಲಿ ಸ್ಕೀಯಿಂಗ್ ಹಾಗೂ ಗೋಲ್ಫ್ ಪಂದ್ಯಗಳನ್ನು ಏರ್ಪಡಿಸುತ್ತಿದ್ದರಂತೆ. ಗುಲ್ಮಾರ್ಗ್‌ನ ಹಿಂಭಾಗದಲ್ಲಿ, 1972 ರ ಶೀಮ್ಲಾ ಒಪ್ಪಂದದ ಪ್ರಕಾರ, ಭಾರತ ಮತ್ತು ಪಾಕಿಸ್ಥಾನದ ನಡುವಿನ ಗಡಿ ನಿಯಂತ್ರಣ ರೇಖೆಯನ್ನು ಗುರುತಿಸಲಾಗಿದೆ.

ಗುಲ್‌ಮಾರ್ಗ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಗೊಂಡೋಲಾ ರೈಡ್. ಫ್ರೆಂಚರು ನಿರ್ಮಿಸಿದ, ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿರುವ, ಈ ಗೊಂಡೋಲಾ, ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿ ಚಲಿಸುವ ತೂಗು ತೊಟ್ಟಿಲು. ಇದು ಎರಡು ಹಂತದಲ್ಲಿ ಕಾರ್ಯ ನಿರ್ವಹಿಸುತ್ತದೆ, ಮೊದಲನೇ ಹಂತದಲ್ಲಿ 8,500 ಅಡಿಯಿಂದ 10,000 ಅಡಿ ಎತ್ತರದವರೆಗೆ ಚಲಿಸುವುದು. ಎರಡನೇ ಹಂತದಲ್ಲಿ 10,000 ಅಡಿಯಿಂದ 12,960 ಅಡಿ ಎತ್ತರದವರೆಗೆ ಚಲಿಸುವುದು. ವಿಶೇಷವಾಗಿ ಸ್ಕೀಯಿಂಗ್ ಮಾಡುವವರಿಗೆ ಮೂರನೆಯ ಹಂತದಲ್ಲಿ 13,800 ಅಡಿ ಎತ್ತರದವರೆಗೂ ಕರೆದೊಯ್ಯುವುದು. ಸಾಹಸ ಕ್ರೀಡೆಗಳು ಯುವಜನತೆಯನ್ನು ಆಯಸ್ಕಾಂತದಂತೆ ಆಕರ್ಷಿಸುವುದು – ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಪರ್ವತಾರೋಹಣ, ಚಾರಣ, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್, ಕುದುರೆ ಸವಾರಿ ಇತ್ಯಾದಿ.

Gulmarg PC:Internet


ಹನಿಮೂನಿಗೆಂದು ಆಗಮಿಸಿದ್ದ ನವ ದಂಪತಿಗಳು, ಸಿನೆಮಾಗಳಲ್ಲಿನ ನವಜೋಡಿಗಳಂತೆ ವಿಹರಿಸುತ್ತಿದ್ದರು ಹಿರಿಯರು ಕಿರಿಯರೆನ್ನದೆ, ಎಲ್ಲರೂ ಮಕ್ಕಳಂತೆ ಹಿಮದ ಉಂಡೆಗಳನ್ನು ಮಾಡಿ ಒಬ್ಬರಮೇಲೊಬ್ಬರು ಎಸೆದಾಡುತ್ತಿದ್ದರು. ಮಕ್ಕಳಂತೂ ಹಿಮದ ದಿಬ್ಬಗಳಿಂದ ಇಳಿಜಾರಿನೆಡೆಗೆ ಉರುಳುತ್ತಿದ್ದರು.. ಗಿರಿಜಕ್ಕನ ಸೊಸೆ ಚೈತ್ರ ಮಗನೊಡನೆ ಸ್ನೋಸ್ಕೂಟರಿನಲ್ಲಿ ಒಂದು ಸುತ್ತು ಹಾಕಿದರೆ, ಧರ್ಮಪ್ಪ ಭಾವನವರು ಕುದುರೆ ಸವಾರಿ ಮಾಡಿದರು. ನಾವು ಸ್ನೋಬೋರ್ಡ್‌ನಲ್ಲಿ ಕುಳಿತು ಕೇಕೆ ಹಾಕುತ್ತಾ ಸಾಗಿದೆವು. ನಮ್ಮ ಗೈಡ್ ಕೇಳಿದ – ‘ಸ್ವಿಟ್ಸರ್‌ಲ್ಯಾಂಡ್ ನೋಡಿದ್ದೀರಾ? ಯಾವುದು ಚೆಂದ ಹೇಳಿ?’ ನಾವು ಉತ್ತರ ಹೇಳುವ ಮೊದಲೇ – ಯೇ ತೋ ಸ್ವಿಟ್ಸರ್‌ಲ್ಯಾಂಡ್ ಕಾ ಬಾಪ್ ಹೈ ಎಂದು ಹೆಮ್ಮೆಯಿಂದ ಹೇಳಿದ. ಹೌದು ಎಲ್ಲ ದೇಶಗಳಿಗಿಂತ ನಮ್ಮ ಮಾತೃಭೂಮಿಯೇ ಚೆಂದ ಅಲ್ಲವೇ?

(ಮುಂದುವರಿಯುವುದು)
ಈ ಬರಹದ ಮೊದಲ ಹೆಜ್ಜೆ ಇಲ್ಲಿದೆ: https://www.surahonne.com/?p=38955

– ಡಾ.ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ

11 Responses

 1. ನಯನ ಬಜಕೂಡ್ಲು says:

  ಮನಸಿಗೆ ಮುದ ನೀಡುವ ಲೇಖನ. ಕಾಶ್ಮೀರದ ಸೌಂದರ್ಯಕ್ಕೆ ಯಾವುದೂ ಸಾಟಿ ಇಲ್ಲ.

 2. ಚೆನ್ನಾದ ನಿರೂಪಣೆ.. ಕಣ್ಣಿಗೆ ಕಟ್ಟುವಂತೆ ಬರದಿದ್ದೀರಿ ಗಾಯತ್ರಿ ಮೇಡಂ..

 3. Padmini Hegde says:

  ಕಾಶ್ಮೀರದ ವೈವಿಧ್ಯಮಯ ಚಿತ್ರ ರಂಗು ರಂಗಾಗಿದೆ

 4. Hema says:

  ನಿಮ್ಮ ಪ್ರವಾಸಕಥನವನ್ನು ಓದುತ್ತಾ ನಮ್ಮ ಕಾಶ್ಮೀರ ಪ್ರವಾಸವನ್ನೂ ನೆನಪಿಸಿಕೊಂಡೆ. ಚೆಂದದ ಬರಹ.

 5. Padma Anand says:

  ಸುಂದರ ಪ್ರೇಮ ಕಾಶ್ಮೀರದ ಕುರಿತಾದ ಅಷ್ಟೇ ಚಂದದ ಲೇಖನದ ಈ ಕಂತೂ ಮುದ ತಂದಿತು.

 6. ಶಂಕರಿ ಶರ್ಮ says:

  ಸುಂದರ ಕಾಶ್ಮೀರದ ಪ್ರವಾಸ ಲೇಖನವು ನಮ್ಮನ್ನೂ ಅಲ್ಲಿಗೆ ಕರೆದೊಯ್ದಿತು!

 7. ತಮ್ಮ ಅಭಿಮಾನ ಪೂರ್ವಕ ನುಡಿಗಳಿಗೆ ನನ್ನ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: