ಅವಿಸ್ಮರಣೀಯ ಅಮೆರಿಕ – ಎಳೆ 72

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಹಿಮನಗರಿ ಅಲಾಸ್ಕಾದತ್ತ….  

ಜೂನ್ ತಿಂಗಳ ಕೊನೆಯಾಗುತ್ತಾ ಬಂದಿತ್ತು… ನಮ್ಮ ಮುಂದಿನ ಪ್ರವಾಸವು ಉತ್ತರ ಅಮೇರಿಕಾದ ಅತೀ ದೊಡ್ಡ ರಾಜ್ಯವಾಗಿರುವ  ‘ಅಲಾಸ್ಕಾ` ಎಂಬ ಅದ್ಭುತ ಪ್ರಕೃತಿ ಸೌಂದರ್ಯಗಳನ್ನೊಳಗೊಂಡ ನಾಡಿಗೆ ನಿಗದಿಯಾಗಿತ್ತು. ಇದು, ನಾವಿರುವ ಕ್ಯಾಲಿಫೋರ್ನಿಯಾದಿಂದ ಸುಮಾರು 3,050 ಮೈಲು ದೂರದಲ್ಲಿದ್ದು ಉತ್ತರ ಅಮೆರಿಕದ ವಾಯವ್ಯ ಭಾಗದ ತುತ್ತತುದಿಯಲ್ಲಿದೆ. ಇದು, ಪೂರ್ವದಲ್ಲಿ ಕೆನಡಾ ಮತ್ತು ಪಶ್ಚಿಮದಲ್ಲಿ ರಷ್ಯಾ ಸರಹದ್ದುಗಳನ್ನು ಒಳಗೊಂಡಿದೆ. ಇದರ ಉತ್ತರದಲ್ಲಿ ಅಟ್ಲಾಂಟಿಕ್ ಮಹಾಸಾಗರವಿದ್ದರೆ, ದಕ್ಷಿಣ ಮತ್ತು ನೈಋತ್ಯ ದಿಕ್ಕುಗಳನ್ನು ಪೆಸಿಫಿಕ್ ಮಹಾಸಮುದ್ರವು ಆವರಿಸಿದೆ. 18ನೇ ಶತಮಾನದಲ್ಲಿ ಈ ಪ್ರದೇಶವು ರಷ್ಯಾ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಆಡಳಿತದಲ್ಲಿ ಉದ್ಭವಿಸಿದ ಕೆಲವು ಸಮಸ್ಯೆಗಳು ಹಾಗೂ ಆ ರಾಜ್ಯದ ಆದಾಯಕ್ಕಿಂತ, ಅದಕ್ಕಾಗಿ ಆಗುತ್ತಿರುವ ಖರ್ಚು ಹೆಚ್ಚಾಗುತ್ತಿರುವುದನ್ನು ಗಮನಿಸಿ ಅದನ್ನು ಕೈಬಿಡುವ ಬಗ್ಗೆ ರಷ್ಯಾ ಯೋಚಿಸಿತು. ಆ ಸಮಯದಲ್ಲಿ; ಅಂದರೆ 1867ರಲ್ಲಿ ಅಮೆರಿಕವು ಈ ಪ್ರದೇಶವನ್ನು  ಕೇವಲ 7.2ಮಿಲಿಯ ಡಾಲರ್ ಗೆ ರಷ್ಯಾದಿಂದ ಖರೀದಿಸಿತು. ಅದರ ಬೆಲೆಯು ಇಂದಿನ ದರದಲ್ಲಿ 140ಮಿಲಿಯ ಡಾಲರ್! ಎಂದರೆ, ಅಮೆರಿಕಕ್ಕೆ ಅಲಾಸ್ಕಾವು  ಎಷ್ಟು ಕಡಿಮೆ ಬೆಲೆಯಲ್ಲಿ ಸಿಕ್ಕಿತು ಎಂಬುದು ಅಚ್ಚರಿ ಹುಟ್ಟಿಸುತ್ತದೆ ಅಲ್ಲವೇ? ಅನೇಕ ವರುಷಗಳ ತರುವಾಯ, ಅಂದರೆ 1959ರಲ್ಲಿ ಈ ಪ್ರದೇಶವು ಅಮೆರಿಕದ 49ನೇ ರಾಜ್ಯವಾಗಿ ಸ್ವೀಕೃತವಾಯಿತು.

ಅಲಾಸ್ಕವು ಉತ್ತರ ಧ್ರುವದ ಸಮೀಪವಿರುವುದರಿಂದ ಇಲ್ಲಿ ವರ್ಷದ ಒಂಭತ್ತು ತಿಂಗಳುಗಳು(ಸೆಪ್ಟೆಂಬರ್ ದಿಂದ ಮೇ ವರೆಗೆ) ಚಳಿಗಾಲ. ಆ ಕಾಲದಲ್ಲಿ 67ದಿನಗಳು ಪೂರ್ತಿ ಕತ್ತಲೆ..ಸೂರ್ಯನ ಬೆಳಕೇ ಇರುವುದಿಲ್ಲ! ಉಳಿದಂತೆ ಮೂರು ತಿಂಗಳು(ಜೂನ್ ನಿಂದ ಆಗಸ್ಟ್ ವರೆಗೆ) ಬೇಸಿಗೆ ಕಾಲ. ಈ ಸಮಯದಲ್ಲಿ 80 ದಿನಗಳು ಪೂರ್ತಿ ಹಗಲು! ಮಧ್ಯ ರಾತ್ರಿಯಲ್ಲೂ ಆಗಸದಲ್ಲಿ ಸೂರ್ಯ ಕಂಗೊಳಿಸುತ್ತಿರುತ್ತಾನೆ! ಬೇಸಿಗೆ ಕಾಲ ಪೂರ್ತಿ ಅತ್ಯಂತ ರಮಣೀಯ ಪ್ರವಾಸಿ ಕೇಂದ್ರವಾಗಿ ಪರಿವರ್ತಿತಗೊಳ್ಳುವ ಅಲಾಸ್ಕಾವು, ನೂರಾರು ಪರ್ವತಗಳು, ಸಾವಿರಾರು ನದಿಗಳು, ಮಿಲಿಯಗಟ್ಟಲೆ ಸರೋವರಗಳು, ಲಕ್ಷಗಟ್ಟಲೆ ಹಿಮನದಿಗಳಿಂದೊಡಗೂಡಿದೆ ಮತ್ತು ಜಗತ್ತಿನಲ್ಲೆಡೆಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಚಳಿಗಾಲದಲ್ಲಿ ಸ್ಥಗಿತಗೊಂಡಿದ್ದ, ಇಲ್ಲಿ ವಾಸಿಸುವ ಸುಮಾರು ಏಳೂವರೆ ಲಕ್ಷದಷ್ಟು ಜನರ ದೈನಂದಿನ ಜೀವನಚಕ್ರವು ಬೇಸಿಗೆಯ ಸುಖೋಷ್ಣತೆಯಲ್ಲಿ ಉರುಳಲು ಆರಂಭವಾಗುತ್ತದೆ!  ಈ ಸಮಯದಲ್ಲಿ ಹಿಮವೆಲ್ಲಾ ಕರಗಿ, ಭೂಮಾತೆಯು ಸಹಸ್ರಾರು ಬಣ್ಣದ ಹೂಗಳಿಂದ, ಹಚ್ಚಹಸುರಿನ ಬೆಚ್ಚನೆಯ ವಸನದಿಂದ ಅಲಂಕೃತಗೊಂಡು ಕಂಗೊಳಿಸುತ್ತಾಳೆ.  ಸೂರ್ಯನ ಶಾಖಕ್ಕೆ  ಬೆಟ್ಟಗಳ ಹಿಮವು ಕರಗಿ, ನದಿಗಳಲ್ಲಿ ಶೀತಲ ಜಲವು ತುಂಬಿ ಹರಿಯುವ ಸೊಗಸು…ರವಿತೇಜನ ಕಿರಣ ಸ್ಪರ್ಶದಿಂದ ಬೆಳ್ಳನೆ ಹೊಳೆಯುವ ಹಿಮಗಿರಿ, ಶಿಖರಗಳು.. ಭೂಲೋಕ ಸ್ವರ್ಗವೇ ನಮ್ಮ ಕಣ್ಮುಂದೆ ತೆರೆದುಬಿಡುತ್ತದೆ.

ಸುಮಾರು 18ಲಕ್ಷ ಚ.ಕಿ.ಮೀ. ವಿಸ್ತೀರ್ಣವಿರುವ ಅಲಾಸ್ಕಾ ರಾಜ್ಯವು ಜನಜೀವನಕ್ಕೆ ತೆರೆದುಕೊಳ್ಳುವ ಸಮಯದಲ್ಲಿ; ಅಂದರೆ, ಜೂನ್ ನಿಂದ ಅಗೋಸ್ತು ವರೆಗೆ ವಲಸೆ ಹೋಗಿರುವ ಸುಮಾರು 7.3 ಲಕ್ಷ ಸ್ಥಳೀಯರು ಹಿಂತಿರುಗುವರು. ಇಲ್ಲಿಯ ಮುಖ್ಯ ಆದಾಯ ಮೂಲವಾದ ಪ್ರವಾಸೋದ್ಯಮ ಮತ್ತು ಚಿನ್ನದ ಗಣಿಗಾರಿಕೆಯ ಜೊತೆಗೆ, ಇಲ್ಲಿ ದೊರೆಯುವ ನೈಸರ್ಗಿಕ ಅನಿಲ ಹಾಗೂ ತೈಲಗಳನ್ನು ಭೂಗರ್ಭದಿಂದ ತೆಗೆಯುವ ಕೆಲಸಗಳು ಪ್ರಾರಂಭವಾಗುವವು. ಅಲಾಸ್ಕವು ಅಗಾಧ ನೈಸರ್ಗಿಕ ಸಂಪನ್ಮೂಲಗಳ ಆಗರವಾಗಿದೆ! ಇಲ್ಲಿಯ ನೌಕಾಯಾನ, ಸಾಹಸಪ್ರಿಯ ಚಾರಣಿಗರಿಗೆ ಸ್ವರ್ಗವಾಗಿರುವ ಅದ್ಭುತ ತಾಣಗಳು, ಹಿಮಚ್ಛಾದಿತ ಗಿರಿ ಶಿಖರಗಳು, ನಿಸರ್ಗದ ಸೊಬಗಿನ ನಡುವೆ ವಿಹರಿಸುವ ಅಪರೂಪದ ಕಾಡುಪ್ರಾಣಿ ಇತ್ಯಾದಿಗಳು ಪ್ರವಾಸಿಗರ ಆಕರ್ಷಣೆಗಳಾಗಿವೆ. ಸುಮಾರು 75,000 ಕಿ.ಮೀ. ಉದ್ದದ ಸಮುದ್ರ ಕರಾವಳಿಯನ್ನು ಹೊಂದಿರುವ ಅಲಾಸ್ಕಾದ ಜಗತ್ಪ್ರಸಿದ್ಧ ಮೀನುಗಾರಿಕೆ, ಸಾಗರಜನ್ಯ ಉತ್ಪತ್ತಿಗಳು ಜನರ ಇನ್ನೊಂದು ಬಹು ಮುಖ್ಯ ಆದಾಯ ಮೂಲವೂ ಹೌದು. ಇಲ್ಲಿಯ ಜಗತ್ಪ್ರಸಿದ್ಧ ಸಾಲ್ಮನ್ (Salmon) ಮೀನುಗಳ ಜೀವನ ಕ್ರಮ ಬಹಳ ಕುತೂಹಲದಾಯಕವಾಗಿದೆ. ಚಳಿಗಾಲದ ಒಂಭತ್ತು ತಿಂಗಳಿನ ಕಾಲ, ಜೀವನಕ್ಕೆ ಸಾಲುವಷ್ಟು ಧನವನ್ನು ಮೂರು ತಿಂಗಳ ಸಮಯದ ಮಿತಿಯೊಳಗೆ ಕಷ್ಟಪಟ್ಟು ಗಳಿಸಿ, ಇಲ್ಲಿಯ ಜನರು ಸ್ವಾವಲಂಬನೆಯ ಬದುಕನ್ನು ಸಾಗಿಸುವರು. ವರ್ಷವಿಡೀ ದುಡಿಯುತ್ತಾ ಒತ್ತಡದ ಜೀವನ ಸಾಗಿಸುವ ಪಟ್ಟಣದ ಮಂದಿ, ನಿರಾಳವಾಗಿ ಹಲವು ದಿನಗಳನ್ನು ಆನಂದವಾಗಿ ಕಳೆಯಲು ಇಲ್ಲಿಗೆ ಬರುವರು. ಜನರ ಕೈಯಲ್ಲಿ ಸಿಕ್ಕಿ ನಲುಗದಿರುವ ಪರಿಶುದ್ಧ ಪ್ರಕೃತಿಯ ನಡುವೆ ಸ್ವಲ್ಪ ಸಮಯವನ್ನು ಕಳೆದು ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ಪುನ: ತುಂಬಿಕೊಂಡು ಹಿಂತಿರುಗುವರು. ಇಲ್ಲಿಯ ಜನರು ಬಹಳ ಸ್ನೇಹಪರರಾಗಿರುವರು. ಇನ್ನೊಂದು ವಿಶೇಷವೆಂದರೆ; ಇಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ! ಆದ್ದರಿಂದ ಇಲ್ಲಿಯ ದೈನಂದಿನ ಜೀವನದ ವೆಚ್ಚವು ಅತ್ಯಂತ ಕಡಿಮೆಯಾಗಿದೆ. ಆದರೆ ಸಂಚಾರ, ಸಾರಿಗೆ  ವ್ಯವಸ್ಥೆಯು ಅತ್ಯಂತ ಕಠಿಣತರವಾಗಿರುವುದು ಮಾತ್ರವಲ್ಲದೆ, ಇಲ್ಲಿ ನೌಕರಿಯ ಲಭ್ಯತೆಯು ಕೂಡಾ ಅತೀ ಕಡಿಮೆ ಎನ್ನಬಹುದು. ಇಲ್ಲಿ, ಮನುಷ್ಯರು ವಾಸಿಸುವ ಭೂಭಾಗವು ಅತ್ಯಂತ ಕಡಿಮೆಯಾಗಿರುವುದರಿಂದ ಜನರಿಗಿಂತ ಹೆಚ್ಚು ಕಾಡುಪ್ರಾಣಿಗಳನ್ನು ಕಾಣಬಹುದು. ಅವುಗಳಲ್ಲಿ ಕಪ್ಪು ಕರಡಿ, ಕಂದು ಕರಡಿ,ಜಿಂಕೆಯಂತೆ ಕಾಣುವ ಮೂಸ್ (moose) ಎನ್ನುವ ಪ್ರಾಣಿ, ತೋಳ, ನರಿ ಇತ್ಯಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. 

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಮಗಳು ಮತ್ತು ಅಳಿಯ; ಬಹಳ ಪ್ರಶಸ್ತವಾದ ಜುಲೈ ತಿಂಗಳಲ್ಲಿ, ಇಂತಹ ವಿಶೇಷವಾದ ಪ್ರೇಕ್ಷಣೀಯ ಸ್ಥಳಕ್ಕೆ 10 ದಿನಗಳ ಪ್ರವಾಸವನ್ನು ಆಯೋಜಿಸಿದರು. 29.6.2019ನೇ ದಿನ…. ನಾವಿಬ್ಬರು, ಮಗಳು, ಅಳಿಯ,ಅವರ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸೇನೋಸೆ (San Jose) ಯಲ್ಲಿರುವ ದೇಶೀಯ ವಿಮಾನ ನಿಲ್ದಾಣದಿಂದ ಅಲಾಸ್ಕಾ ಏರ್ ಲೈನ್ಸ್ (Alaska Airlines) ನ ಸುಮಾರು 200 ಆಸನಗಳುಳ್ಳ ಪುಟ್ಟ ವಿಮಾನದಲ್ಲಿ ಸುಮಾರು 696 ಮೈಲು ದೂರವಿರುವ ಸಿಯಾಟೆಲ್(Seattle)ಗೆ ಹೊರಟೆವು. ರಾತ್ರಿ  ಹತ್ತೂವರೆ ಗಂಟೆಗೆ ಈ ವಿಮಾನವು ಹೊರಟಾಗ, ಆಗಸ ತುಂಬ ಕತ್ತಲು ತುಂಬಿತ್ತಾದರೂ; ಹಾರುತ್ತಿರುವ ವಿಮಾನದ ಕಿಟಿಕಿ ಮೂಲಕ ಹೊರ ನೋಡಿದಾಗ ವಿಚಿತ್ರ ಅನುಭವವಾಗತೊಡಗಿತು! ನಮ್ಮ ಈ ಹಾರಾಟದಲ್ಲಿ ಕೆಳಗಡೆಗೆ ಕಾಣಿಸುವ ದೃಶ್ಯಗಳು ಅತ್ಯಂತ ರಮಣೀಯ. ರಾತ್ರಿ 11ಗಂಟೆ, ಇನ್ನೇನು ಪೂರ್ತಿ ಕತ್ತಲಾಯಿತು ಎಂದುಕೊಳ್ಳುವಂತೆಯೇ ಹೊರಗಡೆ ನೋಡಿದರೆ ಚೇತೋಹಾರಿ ಬದಲಾವಣೆ!  ಸೂರ್ಯನ ಎಳೆ ಕಿರಣಗಳು ನೋಡು ನೋಡುತ್ತಿದ್ದಂತೆಯೇ ಪ್ರಖರಗೊಂಡವು. ಕರ್ರಗಿದ್ದ ಬಾನಂಗಳ ಬೆಳ್ಳನೆ ಬೆಳಗಿತು. ಕೆಳಗಡೆಗೆ ಬೆಳ್ಳನೆ ಹರಡಿದ ಹಿಮಚಾದರ ಸ್ಪಷ್ಟವಾಗಿ ಕಾಣತೊಡಗಿತು. ಎತ್ತರದ ಪರ್ವತಗಳ ಮೇಲ್ಗಡೆ ಹಾರಾಡುವಾಗ ಇನ್ನೊಂದು ವಿಶೇಷ ದೃಶ್ಯ ನಮ್ಮ ಕಣ್ತುಂಬಿತು. 

ಅತ್ಯಂತ ವಿಸ್ತಾರವಾಗಿ ಹರಡಿ ನಿಂತ, ಅತ್ಯಂತ ಎತ್ತರವೆನಿಸುವ ಪರ್ವತವೊಂದು ಗೋಚರಿಸಿತು. ಅದರ ಹೆಸರು ಮೌಂಟ್  ಶಾಸ್ತಾ (Mount Shasta) ಎಂದಾಗಿತ್ತು! ಅಷ್ಟು ದೊಡ್ಡ ಪರ್ವತವೊಂದರ ಹೆಸರು ದೇವರ ಹೆಸರಾಗಿದ್ದು ಮಾತ್ರವಲ್ಲದೆ, ಹೆಸರೂ ಕನ್ನಡದಲ್ಲಿರುವುದು ಕಂಡು ಬಹಳ ವಿಶೇಷವೆನಿಸಿ ಸಂತಸವಾಯಿತು. ಆಗ ಚರವಾಣಿಯನ್ನು ನೋಡಿದಾಗ ಸಮಯ ಮಧ್ಯರಾತ್ರಿ 1.40am (30.9.2019) ಆಗಿತ್ತು…ಆದರೆ, ನಡು ಮಧ್ಯಾಹ್ನದ ಬಿಸಿಲು ಎಲ್ಲೆಡೆ ಹರಡಿತ್ತು..!! ಇದನ್ನು ನೋಡಿಯಂತೂ ನಾನು ಬೆಕ್ಕಸ ಬೆರಗಾದೆ!

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   https://www.surahonne.com/?p=39055

-ಶಂಕರಿ ಶರ್ಮ, ಪುತ್ತೂರು  

8 Responses

 1. ಅಲಾಸ್ಕಾದ ತಮ್ಮ ಅನುಭವವನ್ನು ಕೇಳಲು ಕಾತುರರಾಗಿದ್ದೇವೆ

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಗಾಯತ್ರಿ ಮೇಡಂ.

 2. ಪ್ರವಾಸ ಕಥನ ಮುಂದಿನ ಅಲಾಸ್ಕಾ ಅನುಭವಕ್ಕೆ ಕಾಯುವಂತಿದೆ..ಮೇಡಂ

  • ಶಂಕರಿ ಶರ್ಮ says:

   ಆತ್ಮೀಯವಾಗಿ ಸ್ಪಂದಿಸಿದ ನಾಗರತ್ನ ಮೇಡಂಗೆ ಧನ್ಯವಾದಗಳು.

 3. ನಯನ ಬಜಕೂಡ್ಲು says:

  ಸೊಗಸಾಗಿದ್ದು ಓದಿಸಿಕೊಂಡು ಹೋಗುವ ಪ್ರವಾಸ ಕಥನ.

 4. Padma Anand says:

  ಅಪೂರ್ವ ರಾಜ್ಯ ಅಲಸ್ಕಾದ ವಿಭಿನ್ನರೀತಿಯ ಪ್ರಕೃತಿ ಬದಲಾವಣೆಗಳ ಆಶ್ಚರ್ಯಕರ ವಿವರಣೆಗಳನ್ನೊಳಗೊಂಡ ಚಂದದ ಕಂತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: