ಸಖ್ಯದ ಆಖ್ಯಾನ!

Share Button

ಜಗತ್ತಿನಲ್ಲಿ ಪ್ರೀತಿ ವಾತ್ಸಲ್ಯ ಮಮತೆಗಳಿಲ್ಲದೇ ನರಳುವವರ ಸಂಖ್ಯೆಯು ನಿಚ್ಚಳವಾಗಿ ಹೆಚ್ಚಿದೆ. ಇದಕ್ಕೆ ಏನು? ಮತ್ತು ಯಾರು ಕಾರಣ? ಎಂಬುದು ಒತ್ತಟ್ಟಿಗಿರಲಿ, ಸಂತೈಸುವಿಕೆಗಾಗಿ ಕಾದಿರುವವರೇ ಬಹಳ. ಒಂದು ತುತ್ತು ಅನ್ನವೀಗ ಹೇಗಾದರೂ ದೊರೆಯುತ್ತದೆ; ಆದರೆ ಒಂದು ಬೊಗಸೆ ಪ್ರೀತಿಯನ್ನು ಪಡೆಯುವುದು ದುಸ್ತರ. ಕದನಕ್ಕೆ ಹೇಗೆ ಇಬ್ಬರ ಅಗತ್ಯವಿದೆಯೋ ಹಾಗೆಯೇ ಪ್ರೀತಿಗೂ ಇಬ್ಬರು ಬೇಕು. ಇಲ್ಲದಿದ್ದರೆ ಅದು ಏಕಮುಖ ಸಂಚಾರ. ಕೊನೆಗದು ಆತ್ಮರತಿಯಾಗಿ ಕೊನೆಗೊಳ್ಳುವುದು! ಜೊತೆಗೆ ಕೊಟ್ಟು ತೆಗೆದುಕೊಳ್ಳುವ ಸಮಾನ ಪ್ರಕ್ರಿಯೆ ಬೇಕಿದೆ. ಅಹಮು ಕಳೆದ ವೇಳೆಯಲಷ್ಟೇ ಈ ಪ್ರೀತಿಯು ಪ್ರತ್ಯಕ್ಷ. ಎಲ್ಲಿ ಅಹಮಿರುವುದೋ ಅಲ್ಲಿ ಪ್ರೀತಿಯಿರುವುದಿಲ್ಲ; ಕೇವಲ ಭಯಭೀತಿ ಮತ್ತು ಆಕ್ರಮಣವಷ್ಟೇ. ಮುಖ್ಯವಾಗಿ ಪ್ರೀತಿಯೆಂಬುದು ಹಲವು ಸ್ತರಗಳಲ್ಲಿ ಜೀವಂತ. ನಮಗೆ ಬೇಕಾದ ರೀತಿಯ ಪ್ರೀತಿ ಬೇಕಾದವರಿಂದ ದೊರೆಯದೇ ಹೋಗಬಹುದು. ಪ್ರೇಮದ ನಿರೀಕ್ಷೆಯಲ್ಲಿದ್ದಾಗ ಅದು ಕೇವಲ ಸ್ನೇಹದ ಪರಿಧಿಯಲ್ಲೇ ನಿಂತು ಬಿಡಬಹುದು; ಸ್ನೇಹದಲಿದ್ದಾಗ ಧುತ್ತನೆ ಅದು ಪ್ರೀತಿಯಾಗಿ ಮಾರ್ಪಡಬಹುದು. ಒಟ್ಟಾರೆ ಮೇಲ್ನೋಟಕ್ಕೆ ಸ್ವಾರ್ಥಮೂಲದಂತೆ ಕಂಡರೂ ಅದು ಆಳದಲ್ಲಿ ತ್ಯಾಗಮೂಲವಾಗದಿದ್ದರೆ ಚಿರಂತನವಾಗುವುದಿಲ್ಲ; ಇನ್ನು ಬಹುಕಾಲ ಬಾಳುವುದಂತೂ ಮುಗಿದ ಕತೆ. ನಿಜವಾದ ಮತ್ತು ನಿಷ್ಕಲ್ಮಶ ಪ್ರೀತಿ ಪಡೆಯಲು ಅದೃಷ್ಟವೂ ಇರಬೇಕು. ಇಂಥ ಪ್ರೀತಿಯನ್ನು ಧಾರೆಯೆರೆಯಲು ಸಂಸ್ಕಾರವು ಬೇಕು!

ಪ್ರೀತಿ ಹೆಚ್ಚಾದರೂ ಕಷ್ಟ; ಹಿಂಸೆ ಎನಿಸುತ್ತದೆ. ಇದಕ್ಕೊಂದು ಚೆನ್ನಾದ ಇಂಗ್ಲಿಷ್ ಪದವೊಂದಿದೆ. ಅದೆಂದರೆ ಸ್ಪೇಸ್. ಪ್ರತಿಯೊಬ್ಬರಿಗೂ ಅವರದೇ ಆದ ಸ್ಪೇಸ್ ಅಂತ ಒಂದಿರುತ್ತದೆ. ಅದು ಅವರ ಖಾಸಗೀ ಆಡುಂಬೊಲ. ಪ್ರೀತಿಯ ಹೆಸರಿನಲ್ಲಿ ಕಟ್ಟಿ ಹಾಕಲು ಹೊರಟಾಗ ಅದು ಕೆರಳುತ್ತದೆ. ಜಗತ್ತಿನ ಬಹುತೇಕ ಪ್ರೀತಿ ಪ್ರೇಮಗಳು ವಿಫಲವಾಗಿರುವುದು ಅರ್ಥ ಮಾಡಿಕೊಳ್ಳುವುದರಲ್ಲಿ ಅಲ್ಲ; ತನ್ನಗಷ್ಟೇ ಕಟ್ಟಿ ಹಾಕುವ ವಿಫಲ ಪ್ರಯತ್ನದಿಂದ! ವಿಶಾಲಾರ್ಥದಲ್ಲಿ ನೋಡಿದರೆ ಪ್ರೇಮಕಿಂತ ಸ್ನೇಹವು ಶ್ರೇಷ್ಠ ಮೌಲ್ಯ. ಸ್ನೇಹದಲ್ಲಿ ಅನುಸರಣೆ ಮತ್ತು ಔದಾರ್ಯ ಕೂಡಿ ಬಾಳುತ್ತದೆ. ಕೊನೆಗದು ತ್ಯಾಗವೇ ಆಗಿ ಬಿಡುತ್ತದೆ. ನಿಸ್ವಾರ್ಥವೇ ಮೈತ್ರಿಯ ಮತ್ತೊಂದು ಹೆಸರು. ಇಲ್ಲಿ ಯಾವುದೇ ಹಮ್ಮುಬಿಮ್ಮುಗಳಿಗೆ ಅವಕಾಶವಿಲ್ಲ. ಗೆಳೆತನಕ್ಕಾಗಿ ಜೀವ ಕೊಟ್ಟವರಿದ್ದಾರೆ. ಆದರೆ ಪ್ರೇಮವೆಂಬುದು ಹೀಗಲ್ಲ. ಇದರ ಹೆಸರಿನಲ್ಲಿ ರಕ್ತಪಾತಗಳಾಗಿವೆ. ತನ್ನನೇ ಪ್ರೇಮಿಸಬೇಕೆಂಬ ಒನ್‌ವೇ ಹುಚ್ಚು ಪ್ರೀತಿಗೆ ಕಣ್ಣಿಲ್ಲ, ಕಿವಿಯಿಲ್ಲ; ಹೃದಯವೂ ಇರುವುದಿಲ್ಲ. ಕೇವಲ ಸ್ವಾರ್ಥವದು. ಪ್ರೀತ್ಸೇ ಎಂದು ಕಿರುಚಿ, ಒತ್ತಾಯಿಸಿದರೆ ಅಲ್ಲಿ ಪ್ರೇಮ ಹುಟ್ಟಲು ಸಾಧ್ಯವೇ ಇಲ್ಲ. ಇದನ್ನರಿಯದ ಗಂಡು ಹೈಕಳು ಭ್ರಮಾಲೋಕದಲ್ಲಿ ತೇಲುತ್ತಾರೆ. ಚಿತ್ರ ವಿಚಿತ್ರ ವೇಷಭೂಷಣಗಳಿಂದ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆಕರ್ಷಣೆಯನ್ನೇ ಪ್ರೀತಿ ಪ್ರೇಮವೆಂದುಕೊಂಡು ಜೀವನದ ಹಾದಿ ತಪ್ಪುತ್ತಾರೆ. ನಿಜ, ಪ್ರೀತಿ ಪ್ರೇಮದಲ್ಲಿ ಸೆಳೆತವಿರುತ್ತದೆ. ಆದರೆ ಆ ಸೆಳೆತವೇ ಶಾಶ್ವತವಲ್ಲ. ಕಾಮನೆಗಳೇ ಪ್ರೀತಿಯಲ್ಲ; ತನಗೆ ಮೀಸಲಿರಬೇಕೆಂಬ ಮಾನವನ ಬಹು ದೊಡ್ಡ ಮನೋರೋಗವಾಗಿ ಪ್ರೀತಿಯನ್ನು ಬಂಧಿಸಿದ್ದೇವೆ. ಹಾರುವ ಹಕ್ಕಿಯ ಸಂತಸದಲ್ಲಿ ಸುಖ ಕಾಣಬೇಕು; ಪಂಜರದೊಳಿಟ್ಟು ಬಂದವರಿಗೆಲ್ಲಾ ತನ್ನ ಪಕ್ಷಿಪ್ರೇಮವನ್ನು ಕೊಂಡಾಡಿಕೊಳ್ಳುವುದಲ್ಲ! ಮೀಸಲು ಎಂಬುದು ಮನಸ್ಸಿನ ಪ್ರತಿಬಂಧಕ ಶಕ್ತಿ. ಅದನ್ನು ಒತ್ತಾಯದಿಂದ ಸಾಧಿಸಲು ಹೊರಟರೆ ಅವಘಡಗಳು ಉಂಟಾಗುತ್ತವೆ. ಸಹಜ ಮತ್ತು ಸಮರ್ಪಕ ಪ್ರೀತಿಯಲ್ಲಿ ಯಾವ ಬಂಧನಗಳೂ ಇರುವುದಿಲ್ಲ. ತಂತಾನೇ ಅಂಥದೊಂದು ಚೌಕಟ್ಟು ನಿರ್ಮಾಣವಾಗಿ ಬಿಡುತ್ತದೆ. ನಾವು ಪ್ರೀತಿಯನ್ನು ಹುಡುಕಿಕೊಂಡು ಅಲೆದಾಡಬೇಕಿಲ್ಲ. ವಾಸ್ತವವಾಗಿ ನಮ್ಮ ಪ್ರೀತಿಯನ್ನು ಇನ್ನೊಬ್ಬರಲ್ಲಿ ಹುಡುಕುತ್ತಿರುತ್ತೇವೆ. ಇನ್ನೊಬ್ಬರು ಪ್ರೀತಿಸಲಿಲ್ಲವಲ್ಲಾ ಎಂದು ಕೊರಗುತ್ತೇವೆ. ಇದು ಇಷ್ಟಾನಿಷ್ಟಗಳ ವಿಚಾರ. ನಾನು ನನ್ನಿಷ್ಟ; ನೀನು ನಿನ್ನಿಷ್ಟ. ಒಟ್ಟಾದರದು ನಮ್ಮಿಷ್ಟ. ಸಮಾನ ಮನಸ್ಕತೆಯೇ ಪ್ರೀತಿಯು ವ್ಯಕ್ತಗೊಳ್ಳಲು ಇರುವ ನಿಜಮೂಲ.

ತಾಯಿಯ ಪ್ರೀತಿಯು ಮಕ್ಕಳಿಗೆ ಮಮತೆಯಾಗುತ್ತದೆ. ದೈವಪ್ರೀತಿಯು ಮಧುರಭಕ್ತಿಯಾಗುತ್ತದೆ. ವಿಶ್ವಭ್ರಾತೃತ್ವವು ಜೀವದಯೆಯಾಗುತ್ತದೆ. ನಿಸರ್ಗಾರಾಧನೆ ಸಹ ಪ್ರೀತಿಯ ಮತ್ತೊಂದು ಮಜಲು. ಲೋಕಕಲ್ಯಾಣಕೆ ಟೊಂಕ ಕಟ್ಟಿ ನಿಂತವರು ಸಹ ಪ್ರೀತಿವಂತರೇ. ಪಾಪಿಗಳನ್ನು ಉದ್ಧರಿಸಲೆಂದು ಕಾಣಿಸಿಕೊಂಡ ಅವತಾರಿಗಳು ಪ್ರೀತಿ, ಮಮತೆಗಳನ್ನು ಬಿತ್ತಿ ಬೆಳೆದವರೇ. ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ? ಎಂದು ಕವಿ ಕೇಳುವಾಗ ನಮಗಿದು ವೇದ್ಯ. ಪ್ರೀತಿಯ ಪೂರ್ಣ ಪರಿಚಯವಾಗಲು ಹೃದಯ ಮಿಡಿಯಬೇಕು; ಏಕೆಂದರೆ ಇದು ಬುದ್ಧಿಗಮ್ಯವಲ್ಲ. ತರ್ಕಿಸಿ ತೀರ್ಮಾನಕೆ ಬರುವಂಥದಲ್ಲ. ಅರ್ಥೈಸಿ ಆಚರಿಸುವಂಥದು; ಭವಿಸುವಂಥದು, ಸಂವೇದಿಸುವಂಥದು. ವೇದನೆಯನ್ನು ಸಂವೇದನೆಯಾಗಿಸುವ ಶಕ್ತಿ ಇದ್ದರೆ ಅದು ಪ್ರೀತಿಗೆ ಮಾತ್ರ.
ತಾಯ್ತಂದೆಯರ ಪ್ರೀತಿಯನ್ನು ಪಡೆದ ಮಕ್ಕಳೇ ಅದೃಷ್ಟವಂತರು; ಹಾಗೆಯೇ ಮಕ್ಕಳ ಪ್ರೀತಿ-ಗೌರವಕ್ಕೆ ಪಾತ್ರರಾದ ಪೋಷಕರೇ ಭಾಗ್ಯವಂತರು. ಈ ಅದೃಷ್ಟ ಮತ್ತು ಸೌಭಾಗ್ಯಗಳು ಎಲ್ಲರಿಗೂ ಒದಗಿ ಬಂದಿರುವುದಿಲ್ಲ. ಹಾಗಾಗಿಯೇ ಪ್ರೀತಿಗಾಗಿ ಪರಿತಪಿಸುವವರೇ ಜಗದ ತುಂಬ. ಹಣ, ಅಂತಸ್ತು, ಸಂಪತ್ತು, ಅಧಿಕಾರ, ದೌಲತ್ತು ಎಲ್ಲವೂ ಇದ್ದರೂ ಇನ್ನೇನೋ ಕೊರತೆಯಾಗಿದೆ ಎಂದರೆ, ಅವರನ್ನು ಬಾಧಿಸುತ್ತಿದೆಯೆಂದರೆ ಅದು ಇಂಥ ಶುದ್ಧಪ್ರೀತಿಯ ಕೊರತೆಯೇ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ ಎಂದು ಕೊರಗುತ್ತಾ ಅಳಲು ಪಡುವವರೇ. ಇಂಥ ಮೂರ್ಖರಿಗೆ ಗೊತ್ತಿಲ್ಲ. ಪ್ರೀತಿಯೆಂಬುದು ಮಾಡುವಂಥ ಕ್ರಿಯೆಯಲ್ಲ; ಆಗುವಂಥ ಪ್ರಕ್ರಿಯೆ! ‘ಓ ದೇವರೇ, ಈ ಪಾಪಿಗಳನ್ನು ಕ್ಷಮಿಸು’ ಎಂದ ಏಸು ಪರಮಾತ್ಮ ತನ್ನನ್ನು ಹಿಂಸಿಸುತ್ತಿರುವವರನ್ನು ದೂರಲಿಲ್ಲ; ಪ್ರೀತಿಯೇ ಆಗಿ ಕನಿಕರಿಸಿದರು. ಇಂಥ ಮಮತೆಯನ್ನೇ ಪಾಸಿಟೀವ್ ಶಕ್ತಿ ಎನ್ನುವುದು. ಅದಕಾಗಿಯೇ ಅವರು ದೇವರೇ ಆದರು. ರಾಕ್ಷಸನೇ ಆಗಿದ್ದ ಅಂಗುಲಿಮಾಲನೆದುರು ಗೌತಮಬುದ್ಧರು ಸಾವಿಗಂಜದೆ ಧೈರ್ಯವಾಗಿ ನಿಂತದ್ದು ಸಹ ಈ ಪ್ರೀತಿಯಿಂದಲೇ! ಅಂಥ ಶಿಷ್ಯಪ್ರೀತಿಯ ಅಂತರಾಳವನ್ನು ಮೊದಲ ಬಾರಿಗೆ ಅನುಭವಿಸಿದ ಪಾಪಾತ್ಮನು ಬದಲಾಗಿ ಹೋದ.

ಶುದ್ಧ ಲೌಕಿಕರಾದ ನಾವು ಪ್ರೀತಿಯಲ್ಲಿ ತರ್ಕವನ್ನೂ ಹಟವನ್ನೂ ಬೆರೆಸಿ ಚೌಕಾಸಿ ಮಾಡುತ್ತೇವೆ. ನಮ್ಮನ್ನು ಇನ್ನೊಬ್ಬರು ಇಷ್ಟಪಡಲಿ ಎಂದು ಏನೆಲ್ಲ ಸರ್ಕಸ್ಸು ಮಾಡುತ್ತೇವೆ. ನಾವಿರುವಂತೆಯೇ ಒಪ್ಪಿಕೊಳ್ಳುವವರನ್ನು ಹುಡುಕುತ್ತೇವೆ. ಅವರಿರುವಂತೆಯೇ ನಾವು ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ. ಇದೆಲ್ಲ ಪ್ರೀತಿಯ ಹೆಸರಿನಲ್ಲಿ ನಿತ್ಯವೂ ನಡೆಸುವ ನಾಟಕವೇ ವಿನಾ ಬೇರಲ್ಲ. ನಮಗಿಷ್ಟವಾದವರಿಗೆ ಏನಾದರೊಂದು ಸಹಾಯ, ಸೇವೆ, ಅನುಕೂಲ ಮಾಡಿ ಆದರಿಸಬೇಕೆಂಬ ತುಡಿತ ಇದ್ದೇ ಇರುತ್ತದೆ. ಇದೆಲ್ಲ ಒಲಿಸಿಕೊಳ್ಳುವ ಉಪ ಉತ್ಪತ್ತಿಗಳು. ಬಲವಂತವಾಗಿ ಹೂ ಅರಳಿಸಲು ಸಾಧ್ಯವೇ? ಗಿಡದಲ್ಲಿ ಹೂ ಅರಳಬೇಕು; ಅಥವಾ ಅರಳುವ ತನಕ ಕಾಯಬೇಕು. ಕಾಯದಿದ್ದರೆ ಯಾವ ಪ್ರೀತಿಯೂ ಹೆಪ್ಪುಗಟ್ಟುವುದಿಲ್ಲ. ಹಾಲನ್ನು ಕುದಿಸದಿದ್ದರೆ ಬೇಗ ಒಡೆದು ಹೋಗುತ್ತದೆ. ಹಾಗೆಯೇ ಪ್ರೀತಿ. ಹಾಲನ್ನು ಕಾಯಿಸಿ, ಕುದಿಸಿ, ತಣ್ಣಗಾಗಿಸಿ, ಹೆಪ್ಪು ಹಾಕಿ, ಮೊಸರು ಕಡೆದು, ಬೆಣ್ಣೆ ತೆಗೆದು, ಮತ್ತೆ ಅದನ್ನು ಕಾಯಿಸಿ, ತುಪ್ಪ ಮಾಡಿ ರುಚಿಯನಸ್ವಾದಿಸುವಂತೆಯೇ ನಮ್ಮ ಬದುಕಿನ ಪ್ರೀತಿ ಪ್ರೇಮ ಮತ್ತು ಪ್ರಣಯಗಳು. ನಮ್ಮ ಅಜೆಂಟಿಗೆ ನಮ್ಮ ತೆವಲಿಗೆ ನಮ್ಮ ಅಭೀಪ್ಸೆಗೆ ಬಳಸಿಕೊಳ್ಳುವುದನ್ನು ಪ್ರೀತಿ ಎನ್ನುವುದಿಲ್ಲ; ಪ್ರೇಮದ ಆಭಾಸ ಅಷ್ಟೇ. ಶರೀರದ ಮೂಲಕ ಒಂದಾಗುವ ಪ್ರೇಮವು ಆತ್ಮೋನ್ನತಿಯತ್ತ ಧಾವಿಸಬೇಕು; ಇಲ್ಲದಿದ್ದರೆ ಅದು ಕೇವಲ ಲಸ್ಟ್ ಅಷ್ಟೇ. ಕಾಮುಕತೆಯು ದೈವಿಕವಾಗುವುದೇ ಶೃಂಗಾರದ ಮೂಲಕ. ಆರಾಧನೆಯು ಆಸ್ವಾದನೆಯಾಗಿ ಆತ್ಮದ ಅನುಭೂತಿಯತ್ತ ಹೊರಳದಿದ್ದರೆ ಅದು ಕೆಲವೇ ನಿಮಿಷಗಳ ಕ್ಷಣ ಕತೆಯಷ್ಟೇ. ಭೋಗದಿಂದ ಹೊರಟು ಭೋಗದಾಚೆಗೆ ತಲಪಿದರೆ ಅಲ್ಲಿಗೆ ಪ್ರೀತಿಯು ಪರಿಪೂರ್ಣಗೊಳ್ಳುವುದು. ಇದನ್ನು ನಾವೇ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಅಲ್ಲಿಯೇ ಬಿದ್ದು ತೊಳಲಾಡಬೇಕು. ಪ್ರೀತಿಯು ಪಕ್ವಗೊಂಡು ಪ್ರಬುದ್ಧವಾಗದಿದ್ದರೆ ಆ ಮಟ್ಟಿಗೆ ಅದು ಮನೋವಿಕಲ. ಲೋಕದ ಬಹುಮಂದಿಗೆ ಇನ್ನೂ ಪ್ರೀತಿಯ ಆಳನಿರಾಳಗಳು ಅರ್ಥವೇ ಆಗಿಲ್ಲ. ಶರೀರಸುಖವೇ ಪ್ರೀತಿಯಲ್ಲ; ದೈಹಿಕ ಬಯಕೆಗಳೇ ಪ್ರೇಮದ ಪರಾಕಾಷ್ಠೆಯಲ್ಲ. ಅದು ಗುರಿಯಲ್ಲ; ಕೇವಲ ದಾರಿ. ನಾವು ಅರಿಷಡ್ವರ್ಗಗಳ ದಾಸರಾದವರು ದಾರಿಯನ್ನೇ ಗುರಿಯೆಂದು ತಿಳಿದಿದ್ದೇವೆ. ಸೆಕ್ಸ್‌ನಲ್ಲಿಯೇ ನಿಂತು ಬಿಡುತ್ತೇವೆ. ಅಲ್ಲಿಂದಾಚೆಗೂ ಪಯಣವಿದೆಯೆಂದು ಅರಿಯುವುದೇ ಇಲ್ಲ. ಬಹುತೇಕರಿಗೆ ಅದು ಬೇಕಾಗಿಯೂ ಇಲ್ಲ! ಪ್ರೀತಿಯನ್ನು ಅರಿಯುತ್ತಾ, ಪ್ರೀತಿಯೇ ಆಗಿ ಬಿಡುವ ಪವಾಡ ಕೆಲವರಿಗಷ್ಟೇ ಸಾಧಿತ.

ಹಾಗಾಗಿ, ಪ್ರೀತಿಯೆಂಬುದು ವಿದ್ಯಮಾನವಲ್ಲ; ಕ್ರಿಯೆಯಲ್ಲ. ಮಾಡಿ ಮುಗಿಸಬೇಕಾದ ಟಾಸ್ಕಂತೂ ಅಲ್ಲವೇ ಅಲ್ಲ. ಪ್ರೀತಿ ನಮ್ಮಳತೆಗೆ ಸಿಗುವುದಿಲ್ಲ. ಇದನ್ನು ತೂಗುವ ತಕ್ಕಡಿ ತುಂಬ ಸರಳ: ಒಂದು ಕಡೆ ಹೃದಯವನೂ ಇನ್ನೊಂದು ಕಡೆ ಮಿದುಳನೂ ಇಟ್ಟು ನಿರ್ಧರಿಸಬೇಕು. ಆದರೆ ನಿರ್ಧರಿಸುವುದು ಬಲು ಕಠಿಣ. ಆಯಾ ಸಂದರ್ಭಕ್ಕೆ, ಆಯಾ ದೇಶಕಾಲಕ್ಕೆ, ಆಯಾ ಮನೋಧರ್ಮದ ಮೇಲೆ ಅವಲಂಬಿತ. ಪ್ರೀತಿ ಮಾಡುವುದಕಿಂತ ಪ್ರೀತಿಯೇ ಆಗಿ ಬಿಡುವ ಪ್ರಕ್ರಿಯೆಯೇ ನಮ್ಮ ಜೀವಿತದ ಸಾಧನೆ. ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಲ್ಲ ಎಂದು ಕೊರಗುವುದಕಿಂತ ನಾನು ಇತರರನ್ನು ಹೇಗೆ ಪ್ರೀತಿಸಬಲ್ಲೆ ಎಂಬುದನ್ನು ಆಲೋಚಿಸಬೇಕು. ಪ್ರೀತಿ ಹೆಚ್ಚಾದಾಗ ಒಂದು ಬಗೆಯ ಅಧಿಕಾರವನ್ನು ಚಲಾಯಿಸುತ್ತದೆ. ಆಗ ಅದು ಪ್ರೀತಿಯಾಗಿ ಉಳಿಯುವುದಿಲ್ಲ. ಪ್ರೀತಿಯು ಬಂಧನವಾದಾಗ ಹಕ್ಕುದಾರಿಕೆಯನ್ನು ವಿಧಿಸುತ್ತದೆ. ಆಗ ಅದು ಜೀವಂತವಾಗಿರುವುದಿಲ್ಲ. ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸದೇ, ಅವರ ಆಯ್ಕೆಗಳನ್ನು ಮನ್ನಿಸದೇ ಪಂಜರದ ಪಕ್ಷಿಯಂತಾಗಿಸಿದರೇ ಅದನ್ನು ಪ್ರೀತಿಯೆನ್ನಲಾದೀತೇ? ಆಕ್ರಮಣ ಎನ್ನಬೇಕಷ್ಟೇ. ಆಕ್ರಮಣದಲ್ಲಿ ಅಗಾಧವಾದ ಕೀಳರಿಮೆ; ನಂಬುಗೆಯ ಜಾಗದಲ್ಲಿ ಸಂದೇಹ; ತನ್ನನ್ನೇ ಅವಲಂಬಿಸಲಿ ಎಂಬ ಹಮ್ಮು ಆವರಿಸಿರುತ್ತದೆ. ಇದನ್ನೇ ತಣ್ಣನೆಯ ಶೋಷಣೆ ಎಂದು ಕರೆಯುವುದು. ಆಗ ವ್ಯಕ್ತಿಪ್ರತಿಷ್ಠೆಯೇ ಮೆರೆದು ಸಂಬಂಧ ಸಡಿಲಾಗುತ್ತದೆ. ಪ್ರೀತಿಯೇ ಇಲ್ಲದ ಬಹುತೇಕ ದಂಪತಿ ಬೇರೆ ಆಯ್ಕೆಗಳಿಲ್ಲದೇ ಇರುವುದರಿಂದ ಒಟ್ಟಿಗಿರುತ್ತಾರೆ. ಹಾಗೆ ಒಟ್ಟಿಗಿರುವವರೆಲ್ಲಾ ಸುಖೀದಾಂಪತ್ಯ ನಡೆಸುತ್ತಿದ್ದಾರೆಂದುಕೊಳ್ಳುವುದು ಭ್ರಮೆಯಷ್ಟೇ.

ನಿಮ್ಮೊಲವು ಇತರರಲ್ಲಿ ಸಂತಸವನ್ನು ಅರಳಿಸದಿದ್ದರೆ, ಆ ಮೂಲಕ ಇತರರ ಪ್ರೀತಿಗೆ ನೀವು ಪಾತ್ರರಾಗದೇ ಇದ್ದರೆ, ಆ ಮಟ್ಟಿಗೆ ನಿಮ್ಮ ಪ್ರೀತಿ ನಿಸ್ಸತ್ವ ಮತ್ತು ಅರ್ಥಹೀನ ಎನ್ನುತ್ತಾನೆ ಮನಶ್ಶಾಸ್ತ್ರಜ್ಞ ಎರಿಕ್ ಫ್ರಾಮ್. ಒಲವಿಗೆ ಒಲವಲ್ಲದೇ ಬೇರೇನಿದೆ ಕೊಡುಗೆ? ಎಂದು ಕವಿ ಕೇಳುವುದು ಈ ಅರ್ಥದಲ್ಲೇ. ನಮ್ಮ ಅನಿಸಿಕೆ, ಅಭಿಮತ ಮತ್ತು ಪೂರ್ವಗ್ರಹಿಕೆಗಳನ್ನು ಪಕ್ಕಕಿಟ್ಟು ನಿರ್ವಂಚನೆಯಿಂದ ಪ್ರತಿಸ್ಪಂದಿಸುವುದೇ ಪ್ರೀತಿಯ ಬಹುಮುಖ್ಯ ಲಕ್ಷಣ. ಒಬ್ಬರನ್ನು ಅವರು ಇರುವ ಹಾಗೆಯೇ ಸ್ವೀಕರಿಸುವುದು ಎಂದು ಓಶೋ ರಜನೀಶರು ಪ್ರೀತಿಯನ್ನು ಅದ್ಭುತವಾಗಿ ವ್ಯಾಖ್ಯಾನಿಸಿದ್ದಾರೆ. ಇದು ತುಂಬ ಕಷ್ಟದ ಸಂಗತಿ. ಏಕೆಂದರೆ ನಾವು ಜಗತ್ತನ್ನು ಅದು ಇರುವ ಹಾಗೆ ನೋಡುವುದಿಲ್ಲ; ನಮ್ಮ ಪ್ರಕಾರ ಹೇಗೆ ಇರಬೇಕಿತ್ತೋ ಹಾಗೆ ನೋಡತೊಡಗುತ್ತೇವೆ. ಅಲ್ಲೊಂದು ಕಂದರ ನಿರ್ಮಾಣವಾಗುತ್ತದೆ. ಅವರನ್ನು ನಮ್ಮಂತಾಗಿಸಲು ಹೊರಡುತ್ತೇವೆ. ಅವರೂ ನಮ್ಮನ್ನು ಅವರಂತಾಗಿಸಲು ಶ್ರಮಿಸುತ್ತಾರೆ. ಈ ಹಗ್ಗಜಗ್ಗಾಟದಲ್ಲಿ ಸೋಲು, ಗೆಲುವು. ಸೋಲು ಗೆಲುವೆಂದ ಮೇಲೆ ಅಲ್ಲೊಂದು ಪಂದ್ಯ! ಜೀವನ ಎಂಬುದು ಸ್ಪರ್ಧೆಯೇ? ಖಂಡಿತಾ ಅಲ್ಲ. ಜೀವನದ ಸಮರದಲಿ ಸೋತವರೇ ನಿಜವಾದ ವಿಜಯಶಾಲಿಗಳು!!

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

14 Responses

 1. ನಯನ ಬಜಕೂಡ್ಲು says:

  ವಿಸ್ತೃತ, ಸುಂದರ ಬರಹ. ನಿಜವಾದ ಪ್ರೀತಿಯಲ್ಲಿ ಸ್ವಾರ್ಥ ಹಾಗೂ ಅಹಂ ಎರಡೂ ಇರುವುದಿಲ್ಲ. ಸ್ನೇಹದ ವ್ಯಾಖ್ಯಾನವು ಚೆನ್ನಾಗಿದೆ.

  • Manjuraj H N says:

   ಧನ್ಯವಾದಗಳು ಮೇಡಂ……….ನಿಮ್ಮ ಮೆಚ್ಚುಗೆಗೆ ನಾನು ಆಭಾರಿ

 2. MANJURAJ says:

  ಸುರಹೊನ್ನೆಗಾಗಿಯೇ ಬರೆದ ಬರೆಹವನ್ನು ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು.

  ಓದಿ ಪ್ರತಿಕ್ರಿಯಿಸುವ ಸಹೃದಯರಿಗೂ ನಾನು ಆಭಾರಿ.

  – ಮಂಜುರಾಜ್

 3. ಮಂಜು ಸಾರ್..ಸ್ನೇಹದ ಬಗ್ಗೆ ಬರೆದಿರುವ ಲೇಖನ ತುಂಬಾ… ಅರ್ಥಪೂರ್ಣ ವಾಗಿ ಮೂಡಿಬಂದಿದೆ… ಹಾಗೂ ಆಪ್ತವಾಗಿದೆ..
  ಸಾರ್..ಅಭಿನಂದನೆಗಳು.

  • Manjuraj H N says:

   ಧನ್ಯವಾದಗಳು ಮೇಡಂ. ನೀವು ತಪ್ಪದೇ ಎಲ್ಲವನೂ ಓದಿ, ಮೆಚ್ಚುಮಾತುಗಳನಾಡಿ, ಪ್ರೋತ್ಸಾಹ ನೀಡುವಿರಿ.

   ನಿಮ್ಮ ಈ ಮನೋಧರ್ಮ ಅನುಕರಣೀಯ. ತ್ಯಾಂಕ್ಯೂ……

 4. Hema Mala says:

  ಗೆಳೆತನದ ಆಳ-ವಿಸ್ತಾರದ ಬಗ್ಗೆ ಮಾಹಿತಿಪೂರ್ಣ ಬರಹ. ಬಹಳ ಸೊಗಸಾಗಿದೆ.

  • Manjuraj H N says:

   ಅನಂತ ಧನ್ಯವಾದ ಮೇಡಂ. ನಿಮ್ಮ ಪ್ರಕಟಿಸುವಿಕೆಯ ಪ್ರೋತ್ಸಾಹ ಮತ್ತು ಮೆಚ್ಚುಮಾತಿಗೆ ನಾನು ಕೃತಜ್ಞ.

   ನಿಮ್ಮ ವೈವಿಧ್ಯಮಯ ಕನ್ನಡದ ಕೆಲಸ ಅಚ್ಚರಿ ತರುವಂಥದು. ಹೀಗೇ ನಿಮ್ಮ ಸೇವೆ ನೂರ್ಕಾಲ ನಡೆಯಲಿ.

 5. ಶಂಕರಿ ಶರ್ಮ says:

  ಪರಿಶುದ್ಧ ಪ್ರೀತಿ ಹಾಗೂ ಗೆಳೆತನದ ಕುರಿತು ಆಳವಾದ ಅರಿವು ಮೂಡಿಸುವ ವ್ಯಾಖ್ಯಾನ ಚೆನ್ನಾಗಿದೆ…ಧನ್ಯವಾದಗಳು.

 6. Ravi L H says:

  ಗುರೂಜಿ
  ಪ್ರೀತಿ ಪ್ರೇಮ ಸ್ನೇಹದ ಬಗೆಯ ಉತ್ತಮವಾಗಿ ಬರೆದಿದ್ದೀರಿ
  ಧನ್ಯವಾದಗಳು

  • Manjuraj H N says:

   ರವೀ………………….ಏನು ಹೇಳಲಿ. ಎಲ್ಲ ನಿನಗೇ ಗೊತ್ತಿರುವಾಗ

   ನಾ ನೆಪ;

   ಮಿಕಿದ್ದೆಲ್ಲವೂ ನೆನಪ ! ಧನ್ಯವಾದ ಶಿಷ್ಯ.

 7. ಲಕ್ಷ್ಮಿ says:

  ಪ್ರೀತಿಯ ಲೇಖನವನ್ನು ಅಷ್ಟೇ ಪ್ರೀತಿಯಿಂದ ಉಣಬಡಿಸಿದ ಸಹೃದಯಿ ಅಣ್ಣನಿಗೊಂದು ಪ್ರೀತಿಯ ನಮಸ್ಕಾರಗಳು.

  • Manjuraj H N says:

   ಧನ್ಯವಾದ ಸೋದರಿ.
   ಓದಿ ಪ್ರತಿಕ್ರಿಯಿಸಿದ ನಿನಗೆ ಪ್ರೀತಿಯ ವಂದನೆ.

 8. ಪದ್ಮಾ ಆನಂದ್ says:

  ಪ್ರೀತಿಯ ಆಳ, ವಿಸ್ತಾರಗಳನ್ನು ಅದ್ಭುತವಾಗಿ ಬಿಡಿಸಿಟ್ಟು ಮನಸ್ಸನ್ನು ಚಿಂತನೆಗೆ ಹಚ್ಚುವ ಅತ್ಯಂತ ಆಪ್ತವಾದ ಲೇಖನ. ಓದಿದ ತಕ್ಷಣ ಮನೋ ವಿಶ್ಕೇಷಣೆಗೆ ತೊಡಗುವಂತೆ ಆಯಿತು. ಪ್ರಬದ್ಧ ಲೇಖನಕ್ಕಾಗಿ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: