ಲಹರಿ….ಭಾಗ 2

Share Button


ಕಾಡುಮೇಡುಗಳನ್ನು, ಹಳ್ಳಿಗಳನ್ನು ಹಿಂದಿಕ್ಕಿ ನಮ್ಮ ವಾಹನ ಮುಂದೆ ಸಾಗುತ್ತಿತ್ತು. ಆಗಾಗ ಅದೇ ರಸ್ತೆಯಲ್ಲಿ ಭರ್ರನೆ ಸದ್ದುಮಾಡುತ್ತ ಸರಿದುಹೋಗುತ್ತಿರುವ ವಾಹನಗಳ ದರ್ಶನ, ಉಳಿದಂತೆ ಎಲ್ಲೆಲ್ಲೂ ಮೌನ. ಸಂಜೆಯಾಗುತ್ತಿದ್ದಂತೆ ದಿನ ಮುಕ್ತಾಯವಾಗುತ್ತಿರುವ ಸೂಚನೆಯಾಗಿ ಹಕ್ಕಿಗಳು ಗೂಡಿನತ್ತ ಹಾರತೊಡಗಿದ್ದವು. ಭೂಮಿಯ ಮೇಲೆ ಮೆಲ್ಲನೆ ಕತ್ತಲು ಪರದೆಯನ್ನು ಹಾಸಿತ್ತು. ಗಕ್ಕನೆ ನಮ್ಮ ವಾಹನ ಒಂದು ಹೋಟೆಲಿನ ಮುಂದೆ ನಿಂತಿತ್ತು. ಆ ಯುವಕ ಇಳಿದುಹೋಗಿ ನಮ್ಮೆಲ್ಲರಿಗೂ ತಟ್ಟೆಗಳಲ್ಲಿ ತಿನಿಸನ್ನು ತಂದುಕೊಟ್ಟ. ಅದರ ಪರಿಮಳಕ್ಕೆ ನಮ್ಮ ಹಸಿವು ಮತ್ತಷ್ಟು ಜಾಗೃತವಾಗಿದ್ದಲ್ಲದೆ ಕಾಡಿಸಲಾರಂಭಿಸಿತು. ಪ್ರಯಾಣ ಉಚಿತ, ಆಹಾರವೂ ಉಚಿತವೇ? ಹೀಗೆ ಎಲ್ಲವನ್ನೂ ಒಬ್ಬರಿಂದಲೇ ಉಚಿತವಾಗಿ ಪಡೆಯುವುದು ಸರಿಯೇ? ಆದರೆ ಅದಕ್ಕೆ ಬದಲಾಗಿ ಆತನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲವಲ್ಲ ಎನ್ನುವ ಆಲೋಚನೆಯೊಂದಿಗೆ ಹಸಿವು ಮತ್ತು ಬಡತನ ಮನುಷ್ಯನ ಮುಖವಾಡವನ್ನು ಕಳಚುತ್ತವೆ ಎನ್ನುವ ನುಡಿ ಈ ಸಮಯದಲ್ಲಿ ಅನುಭವವೇದ್ಯವಾಗಿತ್ತು. ಹಸಿವಡಗಿದ ನಂತರ ಬಾಯಾರಿಕೆ ಕಾಡಿದಾಗ ಅಗಸ್ತ್ಯರು ಸಮುದ್ರವನ್ನೇ ಹೀರಿದಂತೆ ನಾವು ಮೇಜಿನ ಮೇಲಿದ್ದ ನೀರಿನ ಹೂಜಿಗಳನ್ನು ಒಂದೊಂದಾಗಿ ಖಾಲಿ ಮಾಡಿದ್ದೆವು. ನಾವು ಖಾಲಿ ಮಾಡಿದಂತೆಯೂ ಅಲ್ಲಿನ ನೌಕರರು ಮತ್ತೆಮತ್ತೆ ಆ ಹೂಜಿಗಳನ್ನು ನೀರಿನಿಂದ ತುಂಬಿಸುತ್ತಿದ್ದರು.

ನಮ್ಮ ಹಾಹಾಕಾರವನ್ನು ಕಂಡು ನಾವು ಕ್ಷಾಮಪೀಡಿತ ಪ್ರದೇಶದಿಂದ ಬಂದವರಿರಬೇಕು ಎಂದು ಅವರು ತಿಳಿದಿರಬಹುದು ಎಂದು ನಾನು ಭಾವಿಸಿದೆ. ಏನಾದರಾಗಲಿ, ನಮಗೆ ಆಹಾರ ನೀರು ಮತ್ತು ರಕ್ಷಣೆ ಎಲ್ಲವೂ ಆ ಭಗವಂತನ ಕೃಪೆಯಿಂದ ದೊರಕಿದೆ ಎಂದು ಭಾವಿಸಿ ತಲೆಯೆತ್ತಿ ಆಕಾಶದತ್ತ ನೋಡಿದಾಗ ನಕ್ಷತ್ರಗಳು ಮಿನುಗುತ್ತಿದ್ದವು. ಆ ನಕ್ಷತ್ರಗಳನ್ನು ನೋಡುತ್ತಿದ್ದಂತೆ ಈ ಬ್ರಹ್ಮಾಂಡವನ್ನು ಸೃಷ್ಟಿಸುವ ಮುನ್ನ ಆ ಭಗವಂತ ಇದರ ನೀಲನಕ್ಷೆಯನ್ನು ಹೇಗೆ ತಯಾರಿಸಿರಬಹುದು ಎನ್ನುವ ಆಲೋಚನೆಯೇ ನನ್ನನ್ನು ಬೆರಗುಗೊಳಿಸಿತು. ಸ್ವಲ್ಪಕಾಲ ವಿಜ್ಞಾನದ ವಿಷಯಗಳನ್ನು ಬದಿಗೆ ಸರಿಸಿ ಕಣ್ಣಿಗೆ ಕಾಣುವ ದೃಶ್ಯಗಳನ್ನಷ್ಟೇ ಕುರಿತು ಯೋಚಿಸತೊಡಗಿದ್ದೆ. ವಕ್ರಮೇಲ್ಮೈಯನ್ನು ಹೊಂದಿದ ಈ ಭೂಮಿ, ಅದರ ಮೇಲೆ ಅದಕ್ಕೆ ಅಂಟದೆ ಸ್ವತಂತ್ರವಾಗಿ ನಿಂತ ಆಕಾಶ, ಅಂತಹ ಆಕಾಶದಲ್ಲಿನ ಒಂದು ವಿಸ್ಮಯವಾಗಿ ಕಣ್ಣಿಗೆ ಕಂಡರೂ ಕೈಗೆಟುಕದ ನಕ್ಷತ್ರಗಳು, ಅವುಗಳ ಆ ಬೆಡಗು ಹೊಳಪು, ಸೂರ್ಯ ಚಂದ್ರರ ನಿಯಮಿತ ಚಲನೆ, ಸರದಿಯಂತೆ ಬರುವ ಹಗಲು ರಾತ್ರಿಗಳ ಮೇಳದಲ್ಲಿ ಕರಗುತ್ತಿರುವ ಅನುಭವವೇ ಆಗದಂತಹ ನಮ್ಮ ಬದುಕು, ಇಲ್ಲಿ ನಾವೂ ಸೇರಿದಂತೆ ಎಲ್ಲವೂ ಶಾಶ್ವತ ಎಂಬ ಭ್ರಮೆಯಲ್ಲಿರುವ ನಾವು, ಸಾವು ಅಥವಾ ಶಾಶ್ವತ ಅಗಲಿಕೆ ಎಂಬ ಕಹಿಸತ್ಯ-ಅಬ್ಬಬ್ಬ! ವಿಸ್ಮಯಗಳು ಒಂದೇ? ಎರಡೇ? ಎಲ್ಲವೂ ಒಂದಕ್ಕೊಂದು ಪೂರಕವಾಗಿರುವಂತೆ ತೋರಿದರೂ ವೈರುಧ್ಯಗಳಿಂದಾಗಿವೆ. ಇವೆಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಾಗಿ ನನ್ನ ಮುಂದೆ ತಕಧಿಮಿ ನಡೆಸಿದ್ದಾಗಲೇ ಆ ತರುಣ ನಮ್ಮೆಲ್ಲರನ್ನೂ ವಾಹನದತ್ತ ಬರುವಂತೆ ಹೇಳಿದ್ದ. ನನ್ನ ಚಿಂತನಾಲಹರಿ ಅಲ್ಲಿಗೆ ತುಂಡಾಗಿತ್ತು.

ನಾವೆಲ್ಲರೂ ಮತ್ತೆ ವಾಹನವೇರಿ ಕುಳಿತಾಗ ನಮ್ಮ ಪಯಣ ಮುಂದುವರಿದಿತ್ತು. ಹೊಟ್ಟೆ ತುಂಬಿದ್ದರಿಂದಲೋ ಏನೋ, ಕಣ್ಣೆವೆಗಳು ತಾವಾಗಿ ಮುಚ್ಚಿಕೊಳ್ಳತೊಡಗಿದ್ದವು. ರಾತ್ರಿಯ ಎರಡನೆಯ ಪ್ರಹರದ ಸಮಯ, ಯಾವಾಗಲೋ ನಿದ್ರೆ ಆವರಿಸಿತ್ತು. ನಮ್ಮದು ಕುಳಿತಲ್ಲೇ ತೂಕಡಿಸುವ ಸ್ಥಿತಿ. ಆದರೆ ಚಾಲಕ ಮಾತ್ರ ಎಲ್ಲೂ ನಿಲ್ಲಿಸದೆ ವಾಹನ ಚಲಾಯಿಸುತ್ತಿದ್ದ. ನಾವೆಲ್ಲರೂ ಅವನ ಮೇಲೆ ಭರವಸೆಯಿಟ್ಟು ಕಣ್ಣುಮುಚ್ಚಿದ್ದೆವು. ಎಷ್ಟು ಹೊತ್ತು ಹಾಗೆ ಮೈಮರೆತಿದ್ದೆವೋ, ಒಮ್ಮೆಲೇ ಕುಲುಕಿದಂತಾಗಿ ಎಚ್ಚರವಾಗಿತ್ತು. ಕಣ್ತೆರೆದು ನೋಡಿದೆ. ವಾಹನ ಚಲಿಸುತ್ತಲೇ‌ಇತ್ತು. ಮೂಡಣದಲ್ಲಿ ಏನೋ ಸಡಗರ! ಆ ದಿಕ್ಕೇ ಏನೋ ಮಾತನಾಡಲು ತವಕಿಸುತ್ತಿರುವಂತೆ ಭಾಸವಾಯಿತು. ಕೆನ್ನೆಗೆ ಗುಲಾಬಿರಂಗನ್ನು ಬಳಿದ ನರ್ತಕಿ ರಂಗವನ್ನು ಪ್ರವೇಶಿಸುವ ಮುನ್ನ ಗುಲಾಬಿವರ್ಣದ ಬೆಳಕು ರಂಗದ ಎಲ್ಲೆಡೆ ಹರಡುವಂತೆ ಸೂರ್ಯನ ಪ್ರವೇಶಕ್ಕೆ ಭರದಿಂದ ಸಿದ್ಧತೆಗಳು ನಡೆದಿದ್ದವು. ಮೂಡಣ ಕೆಂಪೇರುತ್ತ ಬಾನು ಬಿಳಿಯಾಗತೊಡಗಿತು. ಕಂಪನ್ನು ಪಸರಿಸುತ್ತ ಬಂದ ತಂಗಾಳಿ ಸುತ್ತ ಸುಳಿಯುತ್ತಿದ್ದಂತೆ ಗೂಡನ್ನು ತೊರೆದ ಹಕ್ಕಿಗಳು ಗುಂಪಾಗಿ ಹಾರತೊಡಗಿದ್ದವು. ಬೆಳಕಿನ ಸಿಂಚನದಿಂದ ಭೂಮಿ ಪುಳಕಿತಗೊಂಡಿದ್ದನ್ನು ಸಸ್ಯಗಳೇ ತಿಳಿಸಿದ್ದವು. ನಾನು ಪೂರ್ವದಿಕ್ಕಿನತ್ತ ದೃಷ್ಟಿಯನ್ನು ಕೀಲಿಸಿದ್ದೆ. ನೋಡುತ್ತಿದ್ದಂತೆ ತಾಮ್ರವರ್ಣದ ಗೋಳದಂತೆ ಪ್ರಕಾಶಿಸುತ್ತ ಸೂರ್ಯ ಮೇಲೇರಿ ಬರುತ್ತಿದ್ದ ದೃಶ್ಯ ಮನಸ್ಸಿಗೆ ಬಹಳ ಆಪ್ತವೆನಿಸಿತು.

ಇದ್ದಕ್ಕಿದ್ದಂತೆ ಚಾಲಕ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ-ಬೆಳಗಾಗುತ್ತಿದೆ, ಇಲ್ಲೇ ಬೋರ್‌ವೆಲ್ ಇದೆ, ನಿಮ್ಮ ಬೆಳಗಿನ ಕೆಲಸಗಳನ್ನು ಅರ್ಧಗಂಟೆಯೊಳಗೆ ಇಲ್ಲೇ ಮುಗಿಸಿಕೊಳ್ಳಬಹುದು-ಎಂದು ಘೋಷಿಸಿದ. ನಾವೆಲ್ಲರೂ ವಾಹನದಿಂದ ಇಳಿದು ಬೋರ್‌ನೀರನ್ನು ಬಳಸಿ ಕೈ ಕಾಲು ಮುಖ ತೊಳೆದು ನೀರನ್ನು ಕುಡಿದೆವು. ಕೆಲವರು ಅಲ್ಲೇ ನೀರನ್ನು ಮೈಮೇಲೆ ಸುರಿದುಕೊಂಡು ಮರಗಳ ಮರೆಗೆ ಸರಿದು ನಿಂತು ಗಂಟಿನಲ್ಲಿದ್ದ ಬಟ್ಟೆಗಳನ್ನು ತೊಟ್ಟು ಒದ್ದೆಯಾದ ಬಟ್ಟೆಗಳನ್ನು ಕೊಡವಿ ಅಲ್ಲೇ ಕೈಗೆಟುಕುವಂತಿದ್ದ ಕೊಂಬೆಗಳ ಮೇಲೆ ಒಣಗಲು ಹಾಕಿದರು. ನಾನು ಮಾತ್ರ ಅಂತಹ ಸಾಹಸಕ್ಕೆ ಮುಂದಾಗದೆ ಸ್ವಲ್ಪವೇ ನೀರನ್ನು ಬೊಗಸೆಯಲ್ಲಿ ಹಿಡಿದು ತಲೆಯ ಮೇಲೆ ಚಿಮುಕಿಸಿಕೊಂಡು ಮಡಿಯಾದೆನೆಂದು ಭಾವಿಸಿದೆ.

ಹೋಗುತ್ತಿರುವುದು ಶ್ರೀರಾಮ ಹುಟ್ಟಿದ ಮತ್ತು ಅವನು ನಡೆದಾಡಿದ ಪುಣ್ಯಕ್ಷೇತ್ರಕ್ಕೆ. ಮೈ ಮನಸ್ಸುಗಳೆರಡೂ ಮಡಿಯಾಗಿರಬೇಕು ಎನ್ನುವುದು ನನ್ನ ಭಾವನೆಯಾದರೂ ಉಟ್ಟಿದ್ದ ವಸ್ತ್ರವನ್ನು ಬಿಟ್ಟರೆ ಬೇರೆ ಯಾವ ವಸ್ತ್ರವೂ ನನ್ನಲ್ಲಿರಲಿಲ್ಲ. ರಾಮಧ್ಯಾನದಲ್ಲೇ ಮನಸ್ಸನ್ನು ತೊಳೆದು ಸ್ವಚ್ಛಗೊಳಿಸಿದ್ದೆ. ನಿರಾತಂಕಗೊಂಡ ಮನಸ್ಸಿನಲ್ಲಿ ಅಯೋಧ್ಯೆಯನ್ನು ಯಾವಾಗ ನೋಡುವೆನೋ ಎನ್ನುವ ತವಕ ಮಾತ್ರ ಮುಂದುವರಿದಿತ್ತು. ಈ ವೇಳೆಗೆ ಏಳರ ಹಿತವಾದ ಬಿಸಿಲು ಭೂಮಿಯನ್ನು ತಬ್ಬಿತ್ತು. ಮರದ ಕೊಂಬೆಗಳ ನಡುವೆ ಕಿರಣಗಳನ್ನು ಹಾಯಿಸುತ್ತ ಸೂರ್ಯ ಮೆಲ್ಲನೆ ಮೇಲೇರಿ ಬರುತ್ತಿದ್ದ ದೃಶ್ಯವನ್ನು ಕಣ್ಣುಗಳು ತಬ್ಬಿದ್ದವು. ಹಿಂದಿರುಗಿ ನೋಡಿದೆ. ಎಲ್ಲರೂ ಒಣಗಿದ ವಸ್ತ್ರಗಳನ್ನು ಮತ್ತೆ ಗಂಟಿನೊಳಗೆ ಸೇರಿಸಿ ಹೊರಡಲು ಸಿದ್ಧರಾಗಿದ್ದರು. ಮತ್ತೆ ನಾವೆಲ್ಲರೂ ವಾಹನದೊಳಗೆ ತೂರಿಕೊಂಡೆವು. ಕೆಲವೇ ನಿಮಿಷಗಳಲ್ಲಿ ಚಾಲಕನೂ ಬಂದು ಸೇರಿದ. ನಮ್ಮ ವಾಹನ ಮುಂದೆ ಸಾಗಿತು. ಒಂದು ಗಂಟೆಯ ಕಾಲ ಸಾಗಿದ ನಂತರ ಕವಲೊಡೆದ ದಾರಿಯಲ್ಲಿ ಎಡಕ್ಕೆ ತಿರುಗಿ ವಾಹನ ಗಕ್ಕನೆ ನಿಂತಿತು.

ಹಿಂದಿರುಗಿ ನಮ್ಮತ್ತ ನೋಡಿದ ಚಾಲಕ – ನೀವೆಲ್ಲ ಇಲ್ಲಿ ಇಳಿದುಕೊಳ್ಳಿ, ಬಲಕ್ಕೆ ಹೋಗುವ ದಾರಿಯಲ್ಲಿ ಸ್ವಲ್ಪ ಸಮಯ ನಡೆದರೆ ನೀವು ಅಯೋಧ್ಯೆಯನ್ನು ತಲುಪಬಹುದು, ನಿಮ್ಮ ಪಾದಯಾತ್ರೆಯ ವ್ರತಕ್ಕೆ ಭಂಗವೇನೂ ಬಂದಿಲ್ಲ, ಈಗಲೂ ನೀವು ನಡೆದೇ ಅಯೋಧ್ಯೆಯನ್ನು ಪ್ರವೇಶಿಸಲಿದ್ದೀರಿ. ನಾನು ಇದೇ ದಾರಿಯಲ್ಲಿ ಮುಂದೆ ಹೋಗಬೇಕಿದೆ-ಎನ್ನುತ್ತ ಬಾಗಿಲನ್ನು ತೆರೆಯಲು ಮುಂದಾದ. ನಾವೆಲ್ಲ ಲಗುಬಗೆಯಿಂದ ಇಳಿದು ಆತನಿಗೆ ಧನ್ಯವಾದಗಳನ್ನು ತಿಳಿಸುವಾಗ ಅದೇಕೋ ಹೃದಯ ತುಂಬಿಬಂದಿತ್ತು. ಆಪದ್ಬಾಂಧವನಂತೆ ಬಂದು ನೆರವಾದ ಆತ ಆ ಕ್ಷಣದಲ್ಲಿ ನಮಗೆ ದೇವರಾಗಿ ಕಂಡಿದ್ದ. ವಾಹನ ಕಣ್ಮರೆಯಾಗುವವರೆಗೂ ನೋಡುತ್ತ ನಿಂತ ನಾವು ನಂತರ ನಮ್ಮ ನಡಿಗೆಯನ್ನು ಮುಂದುವರಿಸಿದ್ದೆವು.

ಇಷ್ಟು ಹೊತ್ತೂ ವಾಹನದಲ್ಲಿ ಕುಳಿತು ಸೌಕರ್ಯವನ್ನು ಅನುಭವಿಸಿದ್ದ ಕಾಲುಗಳು ನಡೆಯಲು ಹರತಾಳ ನಡೆಸಿದ್ದವು. ಕ್ಷಣಕ್ಷಣಕ್ಕೂ ಆತನ ಮುಖ, ಆತನ ಮಾತುಗಳು ಮತ್ತು ಆತ ನಮಗೆ ನೀಡಿದ ನೆರವು ಎಲ್ಲವೂ ನೆನಪಾಗತೊಡಗಿದ್ದವು. ಬಹಳ ದೂರದವರೆಗೆ ನಡೆದ ನಂತರ ಅದೇ ಮಾರ್ಗವಾಗಿ ಸಾಗುತ್ತಿದ್ದ ಮತ್ತೆ ಕೆಲವರನ್ನು ಕುರಿತು- ಅಯೋಧ್ಯೆ ಇನ್ನೂ ಎಷ್ಟು ದೂರವಿದೆ?- ಎಂದು ಕೇಳಿದೆವು. ಅದೋ, ಅಲ್ಲಿ ಕಾಣುತ್ತಿರುವುದೇ ಅಯೋಧ್ಯೆ, ಅಲ್ಲಿಗೆ ತಲುಪಲು ಇನ್ನೂ ಸ್ವಲ್ಪ ದೂರ ನಡೆಯಬೇಕು-ಎಂದು ಅವರೆಂದಾಗ ನಿಟ್ಟುಸಿರಿಡುವಂತಾಗಿತ್ತು. ನಮ್ಮೊಂದಿಗೆ ಅವರೆಲ್ಲರೂ ಅದೇ ದಾರಿಯಲ್ಲಿ ನಡೆಯುತ್ತಿದ್ದರು. ಹಾಗೆ ನಡೆಯುತ್ತ ನಾವು ಮೊದಲು ಸರಯೂನದಿಯನ್ನು ಸಮೀಪಿಸಿದ್ದೆವು. ನೋಡಿ, ಇದೇ ಸರಯೂ-ಗುಂಪಿನಲ್ಲಿನ ಒಬ್ಬನ ದನಿ ಕೇಳಿದೊಡನೆ ರೋಮಾಂಚನವೆನಿಸಿತು. ನಾನು ಮಂತ್ರಮುಗ್ಧಳಾಗಿ ಹರಿಯುವ ನೀರನ್ನೇ ನೋಡುತ್ತ ನಿಂತೆ. ಮನದಲ್ಲಿ ವಿಧವಿಧದ ಭಾವಗಳು ಉದಯಿಸಲಾರಂಭಿಸಿದ್ದವು.

ಮಕ್ಕಳಿಲ್ಲವೆಂಬ ದಶರಥನ ಅಳಲು, ಯಾಗದ ತಯಾರಿ, ರಾಮ ಮತ್ತು ಅವನ ಸೋದರರ ಜನನದ ಸಂಭ್ರಮ, ರಾಮನ ವನಗಮನ, ದಶರಥನ ಅಂತ್ಯ, ಮತ್ತೆ ರಾಮನ ಆಗಮನ, ಸೀತಾಪರಿತ್ಯಾಗ-ಹೀಗೆ ಅರಮನೆಯಲ್ಲಿನ ಅನೇಕ ವಿಷಯಗಳನ್ನು ಕುರಿತಂತೆ ಅಯೋಧ್ಯೆಯಲ್ಲಿ ನಡೆದ ಅದೆಷ್ಟೋ ಘಟನೆಗಳಿಗೆ ಸರಯೂ ಸಾಕ್ಷಿಯಾಗಿ ದುಃಖಿಸಿದೆ, ಸಂತೋಷಿಸಿದೆ. ಅದರ ಒಡಲಲ್ಲಿ ನಮಗೆ ತಿಳಿಯದ ಇನ್ನೂ ಅದೆಷ್ಟು ವಿಷಯಗಳು ಅಡಗಿವೆಯೋ ಎನ್ನಿಸಿತು. ಶ್ರೀರಾಮ ದರ್ಶಿಸಿದ ಈ ಪುಣ್ಯಜಲದ ದರ್ಶನಮಾತ್ರದಿಂದಲೇ ಮನಸ್ಸು ಆನಂದದಿಂದ ತುಂಬಿತ್ತು. ಜುಳುಜುಳು ಹರಿಯುವ ನೀರಿನ ಮೇಲೆ ಸೂರ್ಯನ ಕಿರಣಗಳು ಹೊನ್ನನ್ನು ಸುರಿಸಿದ್ದವು. ಬೆಳಕಿನಲ್ಲಿ ಫಳಫಳ ಹೊಳೆಯುತ್ತಿದ್ದ ತೆರೆಗಳನ್ನು ನೋಡುತ್ತ ನಿಂತಿದ್ದ ನನಗೆ ಹೊತ್ತು ಸರಿದುದೇ ತಿಳಿಯಲಿಲ್ಲ.

ಮತ್ತೆ ನಾನು ಹಿಂದಿರುಗಿ ನೋಡಿದಾಗ ನನ್ನ ಜೊತೆ ಬಂದಿದ್ದವರೆಲ್ಲ ಯಾರೂ ಕಾಣಲಿಲ್ಲ. ಎಲ್ಲರೂ ಅವರವರ ದಾರಿ ಹಿಡಿದು ಹೊರಟಿದ್ದರೇನೋ. ನಾನೂ ನಗರವನ್ನು ವೀಕ್ಷಿಸಲು ಹೊರಟಿದ್ದೆ. ಸ್ವಲ್ಪ ದೂರ ಸಾಗುತ್ತಿದ್ದಂತೆ ದೂರದಲ್ಲಿ ಉದ್ಯಾನದ ಮರಗಳ ನಡುವೆ ಒಂದು ಬೃಹತ್ತಾದ ಕಟ್ಟಡವಿರುವಂತೆ ಕಾಣಿಸಿತು. ಸಮೀಪಿಸಿದ ನಂತರ ಅದು ಅರಮನೆಯೆಂದು ತಿಳಿಯಿತು. ಅರಮನೆ ನೆಲದ ಮೇಲೆ ಪಗಡೆಯ ಹಾಸನ್ನು ಹಾಸಿದಂತೆ ಕಾಣುತ್ತಿತ್ತು. ನಾಲ್ಕುದಿಕ್ಕಿಗೂ ಉದ್ದಕ್ಕೂ ವಿಸ್ತಾರವಾಗಿ ಚಾಚಿಕೊಂಡಂತಿದ್ದ ಗೋಡೆಗಳು, ನಡುವೆ ಉಪ್ಪರಿಗೆಯ ಮೇಲೆ ಬಾನನ್ನು ನೋಡುವಂತಿದ್ದ ಶಿಖರ. ಅದರಲ್ಲಿನ ಸುಂದರವಾದ ಕೆತ್ತನೆಗಳು ಮನಸೆಳೆಯುವಂತಿದ್ದವು. ನಾನು ಆ ಸ್ಥಳದ ಅಂದವನ್ನು ಸವಿಯುತ್ತ ನಿಧಾನವಾಗಿ ಮುಂದೆ ಮುಂದೆ ಸಾಗುತ್ತಿದ್ದೆ.

ಮನದಲ್ಲಿ ನಾನಾ ವಿಷಯಗಳು ಉದ್ಭವಿಸುತ್ತಿದ್ದವು. ಧರೆಯಲ್ಲಿ ಭಗವಂತನ ಅವತಾರ ಧರ್ಮಸ್ಥಾಪನೆಗಾಗಿ ಆಗುತ್ತದೆ ಎನ್ನುವುದು ತಿಳಿದ ವಿಷಯವಾದರೂ ನನ್ನ ಮನಸ್ಸು ಅನೇಕ ರೀತಿಗಳಲ್ಲಿ ಯೋಚಿಸುತ್ತಿತ್ತು. ಧರೆಯನ್ನು ಸೃಷ್ಟಿಸಿದ ಭಗವಂತ ತನ್ನ ಸೃಷ್ಟಿಯಲ್ಲಿನ ಸೌಂದರ್ಯವನ್ನು ಮತ್ತು ಸೌಕರ್ಯವನ್ನು ಸವಿಯಲೋ ಅಥವಾ ಭೂಮಿಯ ಸಂಪರ್ಕದಲ್ಲಿ ಜೀವನ ಹೇಗಿರಬಹುದು ಎನ್ನುವ ಕುತೂಹಲವನ್ನು ತಣಿಸಿಕೊಳ್ಳಲೋ ಈ ಭೂಮಿಗೆ ಏಕೆ ಬಂದಿರಬಾರದು? ಹಾಗಲ್ಲದೆ ಧರ್ಮಸ್ಥಾಪನೆಯ ಮತ್ತು ರಾಕ್ಷಸರನ್ನು ನಿಗ್ರಹಿಸುವ ಉದ್ದೇಶದಿಂದ ಧರೆಯಲ್ಲಿ ಅವತಾರವನ್ನು ತಾಳಿದ್ದರೆ ರಾವಣನನ್ನು ಸಂಹರಿಸಲು ತನ್ನನ್ನೇ ಅಷ್ಟೊಂದು ಕಷ್ಟಗಳಿಗೆ ಏಕೆ ಒಡ್ಡಿಕೊಳ್ಳಬೇಕಿತ್ತು? ಭಕ್ತರಿಗೆ ಸುಖವನ್ನು ಕೊಡುವ ಅವನೇ ತನ್ನನ್ನು ಎಲ್ಲ ಸುಖಗಳಿಂದ ವಂಚಿಸಿಕೊಂಡಿದ್ದೇಕೆ? -ಈ ಎಲ್ಲ ಪ್ರಶ್ನೆಗಳೂ ಮನದಲ್ಲಿ ಗಿರಕಿಹೊಡೆಯುತ್ತಿದ್ದವು. ಶ್ರೀರಾಮನನ್ನೇ ಭೇಟಿಮಾಡಿ ನನ್ನ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದಲ್ಲ ಎನ್ನಿಸಿತು. ಇದೇ ಆಲೋಚನೆಗಳಲ್ಲಿ ನಾನು ಹೆಜ್ಜೆಗಳನಿಡುತ್ತಿದ್ದೆ. ಆ ಸ್ಥಳವನ್ನು ನಾನು ಸಮೀಪಿಸಿದಷ್ಟೂ ಅದು ನನ್ನ ಮುಂದೆ ಮತ್ತಷ್ಟು ವಿಶಾಲವಾಗಿ ತೆರೆದುಕೊಳ್ಳುತ್ತಿರುವಂತೆ ಅನ್ನಿಸುತ್ತಿತ್ತು.

ಕೊನೆಗೂ ನಾನು ಉದ್ಯಾನವನ್ನು ದಾಟಿ ಚಪ್ಪಲಿಗಳನ್ನು ತೆಗೆದಿಟ್ಟು ಅರಮನೆಯ ಪ್ರವೇಶದ್ವಾರವನ್ನು ಸಮೀಪಿಸಿದ್ದೆ. ಆ ಅರಮನೆಯ ದಿವ್ಯತೆಗೆ ಮತ್ತು ಭವ್ಯತೆಗೆ ಬೆರಗಾಗಿ ನಾನು ನನ್ನನ್ನೇ ಮರೆತಂತೆ ನಿಂತಿದ್ದೆ. ದ್ವಾರದ ಎದುರು ಎರಡು ಪಾರ್ಶ್ವಗಳಲ್ಲಿ ಸಮವಸ್ತ್ರಗಳನ್ನು ತೊಟ್ಟು ಕೈಗಳಲ್ಲಿ ಉದ್ದವಾದ ಭಲ್ಲೆಗಳನ್ನು ಹಿಡಿದು ನಿಂತಿದ್ದ ಕಾವಲುಗಾರರ-ಏನಾಗಬೇಕು?-ಎಂಬ ದನಿಯಿಂದ ಎಚ್ಚರಗೊಂಡು-ನಾನು ಶ್ರೀರಾಮನನ್ನು ನೋಡಬೇಕು-ಎಂದು ಹೇಳಿ ಅಪ್ಪಣೆಗಾಗಿ ಕಾದುನಿಂತೆ. ಅವರು ಏನೂ ಮಾತನಾಡದೆ ಹಿಡಿದ ಭಲ್ಲೆಗಳನ್ನು ಸರಿಸಿ ಮುಂದೆ ಹೋಗಲು ಸೂಚಿಸಿದರು. ನಾನು ನಾಲ್ಕು ಹೆಜ್ಜೆಗಳಷ್ಟು ನಡೆದು ಬಾಗಿಲಿನ ಬಳಿ ತಲುಪಿ ಒಳನಡೆದು ಕೆಂಪು ಜಮಖಾನೆ ಹಾಸಿದಂತೆ ಕಾಣುವ ಅಲಂಕೃತ ನೆಲದ ಮೇಲೆ ಕಾಲಿಟ್ಟಿದ್ದೆ. ತಣ್ಣನೆಯ ಅನುಭವವಾಯಿತು. ಅಕ್ಕಪಕ್ಕದ ಗೋಡೆಗಳಲ್ಲಿನ ವರ್ಣಚಿತ್ರಗಳು ಮನಸೆಳೆಯುವಂತಿದ್ದವು. ನಡುವೆ ಅಲ್ಲಲ್ಲಿನ ಕೋಣೆಗಳ ಮುಚ್ಚಿದ ಬಾಗಿಲುಗಳ ಮೇಲಿನ ಹೂಬಳ್ಳಿಗಳ ಮತ್ತು ಪ್ರತಿಮೆಗಳ ಚಿತ್ತಾರದ ಕೆತ್ತನೆಗಳು ದೃಷ್ಟಿಯನ್ನು ಅಲ್ಲೇ ಕೀಲಿಸುವಂತೆ ಮಾಡಿದ್ದವು. ದೂರದಿಂದ ಅಲೆ‌ಅಲೆಯಾಗಿ ತೇಲಿಬಂದಂತೆ ಕೇಳಿಬರುತ್ತಿದ್ದ ವೀಣಾನಾದ ನನ್ನ ಮನದಲ್ಲಿಯೂ ತರಂಗಗಳನ್ನು ಸೃಷ್ಟಿಸುತ್ತಿತ್ತು. ಹೊರಗಿನ ಪರಿವೆಯೇ ಇಲ್ಲದಂತಾಗಿತ್ತು. ನಾನು ಯಾವುದೋ ಮಂತ್ರಶಕ್ತಿಗೆ ಒಳಗಾದವಳಂತೆ ಎಲ್ಲವನ್ನೂ ನೋಡುತ್ತ ನಡೆಯುತ್ತಲೇ ಇದ್ದು ಕೊನೆಗೂ ಕಟ್ಟಡದ ಮಧ್ಯಭಾಗವನ್ನು ತಲುಪಿದ್ದೆ. ಅಲ್ಲಿನ ವೈಭವವನ್ನು ವರ್ಣಿಸಲು ಪದಗಳೇ ಸಾಲದು ಎನ್ನಬಹುದು.

ವಿಶಾಲವಾದ ದರ್ಬಾರ್ ಸಭಾಂಗಣ, ವರ್ಣಚಿತ್ರಗಳಿಂದ ಅಲಂಕೃತಗೊಂಡ ಗೋಡೆಗಳು, ಮುತ್ತು ಮತ್ತು ಪಚ್ಚೆಕಲ್ಲುಗಳಿಂದಾದ ಸುಂದರ ಮೇಲ್ಚಾವಣಿ, ಸುತ್ತ ಹೂವು ಬಳ್ಳಿಗಳ ಕೆತ್ತನೆಯ ಕುಸರಿಕೆಲಸ, ಸಭಾಂಗಣದ ನಡುವೆ ಹೊಳೆಯುತ್ತಿರುವ ಹೊನ್ನಿನ ಮಂಟಪ, ಅದರಲ್ಲಿನ ರಜತ ಸಿಂಹಾಸನದಲ್ಲಿ ಆಸೀನನಾದ ಶ್ರೀರಾಮಚಂದ್ರ ! ಶಿರದ ಮೇಲೆ ಸೂರ್ಯಲಾಂಛನವಿರುವ ವಜ್ರಖಚಿತ ಮುಕುಟ, ಮೈಮೇಲೆ ಸೂರ್ಯನೇ ಉದಯಿಸಿ ಬರುತ್ತಿರುವನೇನೋ ಎಂಬಂತೆ ಕಾಣುವ ಪೀತಾಂಬರ, ಕಮಲಪುಷ್ಪವೊಂದು ಮಾನವರೂಪವನ್ನು ತಳೆದು ಬಂದು ಕುಳಿತಂತೆ ಕಾಣುವ ಅವನ ದಿವ್ಯರೂಪ ದೂರದಿಂದಲೇ ಸೆಳೆಯುವಂತಿತ್ತು. ಪ್ರಶಾಂತಭಾವದ ವಿಕಸಿತ ಮುಖಕಮಲ, ನಯನಗಳು ಕಮಲದ ದಳಗಳು, ಹವಳ ವರ್ಣದ ತುಟಿಯಲ್ಲಿ ಇನ್ನೇನು ಕಮಲದ ಮೊಗ್ಗೊಂದು ಅರಳಲಿದೆ ಎನ್ನುವಂತೆ ಸ್ವಲ್ಪವೇ ಅರಳಿದ ಮುಗುಳ್ನಗೆ, ಹರವಾದ ಎದೆಗೆ ಮತ್ತಷ್ಟು ಮೆರುಗನ್ನು ನೀಡುವಂತಿದ್ದ ಮುತ್ತಿನ ಹಾರಗಳು, ಪಾದಕಮಲಗಳಲ್ಲಿ ಶೋಭಿಸುವ ನೂಪುರಗಳು- ತುಳಸೀದಾಸರು ವರ್ಣಿಸಿದ ರಾಮ ಇವನೇ ಇರಬಹುದು ಎಂದು ಆ ಕ್ಷಣದಲ್ಲಿ ಅನ್ನಿಸಿತು.

ನಾನು ಎಲ್ಲವನ್ನೂ ಮರೆತು ಆ ಸುಂದರ ರೂಪವನ್ನೇ ನೋಡುತ್ತ ನಿಂತಿದ್ದೆ. ಕೇಳಬೇಕೆಂದಿದ್ದ ಪ್ರಶ್ನೆಗಳು ಮರೆತಂತಾಗಿದ್ದು ಹಾಗಿರಲಿ, ಆ ಕ್ಷಣದಲ್ಲಿ ಆನಂದದಿಂದ ಮಾತುಗಳೇ ಬಾರದ ಮೂಕಳಂತಾಗಿದ್ದೆ. ಭವ್ಯವಾದ ಆ ರೂಪ ನನ್ನ ಮನದ ಭಿತ್ತಿಯಲ್ಲಿ ಅಚ್ಚಾಗಿತ್ತು. ಕಾರಣವಿಲ್ಲದೆ ಹೆಚ್ಚು ಹೊತ್ತು ಅಲ್ಲಿ ನಿಲ್ಲುವುದು ಸರಿಯಲ್ಲವೆನಿಸಿ ಮತ್ತೊಮ್ಮೆ ಆ ದಿವ್ಯ ಪಾದಕಮಲಗಳಿಗೆ ವಂದಿಸುತ್ತ ನಾನು ಅಲ್ಲಿಂದ ನಿರ್ಗಮಿಸಿದೆ. ಸ್ವಲ್ಪ ದೂರ ಸಾಗಿದ ನಂತರ ಎಡಭಾಗದ ಮುಚ್ಚಿದ ಬಾಗಿಲುಗಳುಳ್ಳ ಕೋಣೆಗಳ ಸಾಲಿನಲ್ಲಿದ್ದ ಒಂದು ಕೋಣೆಯಿಂದ ಬಳೆಗಳ ಮತ್ತು ನೂಪುರಗಳ ಸದ್ದು ಕೇಳಿಬಂದು ನನ್ನನ್ನು ಅಲ್ಲೇ ನಿಲ್ಲುವಂತೆ ಮಾಡಿತ್ತು. ಒಳಗೆ ಯಾರೋ ಮಹಿಳೆಯಿರಬಹುದೇ ಎನ್ನಿಸಿತ್ತು. ಆಗಲೇ ಯಾರೋ ನಡೆಯುತ್ತಿರುವ ಸದ್ದು, ಮೇಜಿನ ಮೇಲೆ ಏನೋ ಇಟ್ಟ ಸದ್ದು, ಕೈಯಿಂದ ಬಾಚಣಿಗೆ ಜಾರಿಬಿದ್ದ ಸದ್ದು, ನಡುವೆ ಪಿಸುಮಾತುಗಳು, ಆಗಾಗ ಸ್ವಲ್ಪವೇ ನಗುವ ಶಬ್ದ. ಎಲ್ಲವನ್ನೂ ಗಮನಿಸಿದ ನನಗೆ ಅದು ಸೀತೆಯ ಕೋಣೆಯೇ ಇರಬೇಕು ಅನ್ನಿಸಿತು. ಸೀತೆ, ಊರ್ಮಿಳೆ, ಮಾಂಡವಿ, ಶ್ರುತಕೀರ್ತಿ ಎಲ್ಲರೂ ಒಟ್ಟಾಗಿ ಸೇರಿ ಅಲಂಕರಿಸಿಕೊಳ್ಳುತ್ತಿರಬಹುದು ಎಂದು ಭಾವಿಸಿದೆ. ಕೋಣೆಯ ಬಾಗಿಲನ್ನು ಒಮ್ಮೆ ತಟ್ಟಲೇ ಎಂದು ಯೋಚಿಸಿದೆ. ಹಾಗೆ ಮಾಡುವುದು ತಪ್ಪು ಎಂದು ನನ್ನಲ್ಲಿನ ವಿವೇಕ ನನ್ನನ್ನು ಜಾಗೃತಗೊಳಿಸಿತು.

ಅವರೆಲ್ಲರೂ ಮೊದಲೇ ಸುಂದರಿಯರು, ಮೇಲಾಗಿ ಈಗಷ್ಟೇ ಪ್ರಸಾಧನಗಳಿಂದ ಅಲಂಕರಿಸಿಕೊಂಡು ಮತ್ತಷ್ಟು ಸುಂದರವಾಗಿದ್ದಾರೆ. ನಾನಾದರೋ ಬಹಳ ದಿನಗಳಿಂದ ಸ್ನಾನವನ್ನೇ ಕಾಣದೆ ಉಟ್ಟ ಬಟ್ಟೆಯಲ್ಲೇ ಬಂದಿದ್ದೇನೆ. ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವ ಅರಿವೇ ನನಗಿಲ್ಲ. ಅವರನ್ನು ನೋಡಿ ನಾನು ಸಂಭ್ರಮಿಸಿದರೂ ನನ್ನನ್ನು ನೋಡಿ ಅವರು ಏನೆಂದುಕೊಳ್ಳುವರೋ ಎನ್ನುವ ಸಂಶಯ ನನ್ನನ್ನು ಕಾಡಿತು. ಮೆಲ್ಲನೆ ಹೆಜ್ಜೆಯಿಡುತ್ತ ನಾನು ಹೊರಬಾಗಿಲಿನತ್ತ ನಡೆದು ಹೊರಬಂದು ಉದ್ಯಾನದಲ್ಲಿ ನಿಂತಿದ್ದೆ. ಅಲ್ಲಿದ್ದ ಪ್ರಹರಿಗಳು ತಮ್ಮ ಕೈಲಿದ್ದ ಭಲ್ಲೆಗಳನ್ನು ಸರಿಸಿ ಹೊರಹೋಗಲು ನೆರವಾದರು. ಈಗ ನಾನು ಉದ್ಯಾನವನ್ನೂ ದಾಟಿ ಹೊರಗೆ ಬಂದು ನಿಂತಿದ್ದೆ.

ಭೂಮಿಯ ಮೇಲೆ ಕಾಲಿಟ್ಟೊಡನೆ ಬಿಸಿ ತಾಗಿತ್ತು. ನನ್ನ ಚಪ್ಪಲಿಗಳಿಗಾಗಿ ತಡಕಾಡಿದೆ, ಆದರೆ ಅವು ಅಲ್ಲೆಲ್ಲೂ ಕಾಣಲೇ‌ಇಲ್ಲ. ಏನಾಗಿರಬಹುದು ಎಂದು ನಿಧಾನವಾಗಿ ಯೋಚಿಸಿದೆ. ನಾನು ಮಾಡಿದ ತಪ್ಪು ನನಗೆ ಅರಿವಾಗಿತ್ತು. ಒಂದು ಪಾರ್ಶ್ವದಿಂದ ಒಳಗೆ ಪ್ರವೇಶಿಸಿದ ನಾನು ಮತ್ತೊಂದು ಪಾರ್ಶ್ವದಿಂದ ನಿರ್ಗಮಿಸಿದ್ದೆ. ನಾಲ್ಕುದಿಕ್ಕುಗಳಲ್ಲೂ ಒಂದೇ ರೀತಿಯ ವಿನ್ಯಾಸವಿದ್ದುದು ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲಿಯೇ ನಿಂತು ಮುಂದೇನು ಮಾಡುವುದೆಂದು ಯೋಚಿಸತೊಡಗಿದೆ. ಮರಳಿ ನನ್ನೂರಿಗೆ ಹೋಗುವುದು ಹೇಗೆ ಎನ್ನುವ ಸಮಸ್ಯೆ ಕಾಡಿತ್ತು. ಅದೇಕೋ ಬರುವಾಗ ಇದ್ದ ಉತ್ಸಾಹವೆಲ್ಲ ಈಗ ಜರ್ರನೆ ಇಳಿದಿತ್ತು. ಬರುವಾಗ ಜೊತೆಯಲ್ಲಿದ್ದವರು ಈಗಲೂ ಜೊತೆಯಾದಾರೇ ಎನ್ನಿಸಿತ್ತಾದರೂ ಪರಿಚಯವೇ ಇಲ್ಲದ ಅವರನ್ನು ಇಲ್ಲಿ ಅರಸುವುದಾದರೂ ಹೇಗೆ ಎನ್ನಿಸಿ ನಿರಾಸೆ ಕಾಡಿತ್ತು. ನೆಲದ ಬಿಸಿಯನ್ನು ಸಹಿಸಲಾರದ ಪಾದಗಳು -ಎಲ್ಲಿಗಾದರೂ ಸರಿ, ಮೊದಲು ನಡೆಯಲಾರಂಭಿಸು- ಎನ್ನುವ ಸೂಚನೆಯನ್ನು ನೀಡುತ್ತಿದ್ದವು. ಯೋಚನೆಗಳ ಭಾರಕ್ಕೆ ಮನಸ್ಸು ಕುಸಿದಿತ್ತು. ಒಮ್ಮೆಲೇ ಇದ್ದ ಶಕ್ತಿಯೆಲ್ಲ ಮಾಯವಾದ ಅನುಭವ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ನಿಂತ ನೆಲವೇ ತಿರುಗುತ್ತಿದೆಯೇನೋ ಎನ್ನಿಸಿತ್ತು. ಕಣ್ಣೆದುರು ಕತ್ತಲೆ ಕವಿದಂತಾಗಿ ನಾನು ಅಲ್ಲೇ ಬಿದ್ದುಬಿಟ್ಟೆ. ಎಷ್ಟೋ ಹೊತ್ತಿನ ಮೇಲೆ ಕಣ್ತೆರೆದೆ. ಆಗಲೂ ಕತ್ತಲೆಯೇ ಕಂಡಿತ್ತು. ಕಣ್ಣುಗಳನ್ನು ತೆರೆದು ನೋಡುತ್ತಿದ್ದೆ. ಬಹಳ ಸಮಯದ ನಂತರ ಎಲ್ಲಿಂದಲೋ ತೂರಿ ಬಂದ ಸ್ವಲ್ಪವೇ ಬೆಳಕಿನಲ್ಲಿ ಅಸ್ಪಷ್ಟವಾದ ನೋಟ ಏನೆಂದು ತಿಳಿಯಲಿಲ್ಲ.

ಬೆಳಕು ಮತ್ತಷ್ಟು ಹೆಚ್ಚಾದಂತೆ ನನ್ನ ಕೋಣೆಯ ಗೋಡೆ ಕಂಡಿತ್ತು. ನಾನಿನ್ನೂ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದೆ. ಗಡಿಯಾರ ಸದ್ದುಮಾಡಿ ಗಂಟೆ ಆರಾಗಿದೆ ಎಂದು ಸೂಚಿಸಿತ್ತು. ನನಗೆ ಏಳಲೇ ಆಗದಷ್ಟು ಕನಸಿನಲ್ಲಿನ ಪ್ರಯಾಣದ ಆಯಾಸ ಕಾಡಿತ್ತು. ಆದರೂ ಹೇಗೋ ಸಾವರಿಸಿಕೊಂಡು ಎದ್ದು ಕುಳಿತೆ. ಈಗ ನಾನು ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿದ್ದೆ. ನಂತರವೂ ನಾನು ಕಂಡ ಶ್ರೀರಾಮನ ಭವ್ಯವಾದ ಮಂಗಳಮೂರ್ತಿ ಮನದೊಳಗೆ ಉಳಿದಿತ್ತು. ಅರಮನೆಯ ವೈಭವವನ್ನೇ ಮೆಲಕುಹಾಕುತ್ತ ಎದ್ದು ಕೆಲಸದಲ್ಲಿ ತೊಡಗಿದೆ.

(ಮುಗಿಯಿತು)
ಲಲಿತ ಎಸ್, ಸಕಲೇಶಪುರ

5 Responses

 1. ವಾವ್ ಅಂತು ನಿಮ್ಮ ಲಹರಿಯ ಒಳಗೆ ನಮಗೂ ಶ್ರೀ ರಾಮನ ವೃತ್ತಾಂತ ದರ್ಶನ ಎರಡೂ ಮಾಡಿಸಿದಿರಿ ಗೆಳತಿ ..ನಿರೂಪಣೆ ಸೊಗಸಾಗಿ ಹೆಣೆದಿದ್ದೀರಾ…

 2. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿತ್ತು ಲಹರಿ.

 3. ಶಂಕರಿ ಶರ್ಮ says:

  ಕನಸಿನಲ್ಲಾದರೂ ಶ್ರೀರಾಮನ ದಿವ್ಯ ದರ್ಶನ ಪಡೆದ ಸಂತಸವು ಲಹರಿಯಲ್ಲಿ ಮನೆಮಾಡಿದೆ….ಪ್ರಯಾಣದ ಆಯಾಸವೆಲ್ಲಾ ಮರೆಯಾಗಿದೆ. ಸೊಗಸಾದ ಲಹರಿಯು ಸುರೆಹೊನ್ನೆಯ ಪರಿಮಳವನ್ನು ಬೀರಿದೆ!

 4. Hema Mala says:

  ಚೆಂದದ ಲಹರಿ…ನಮ್ಮನ್ನೂ ಅಯೋಧ್ಯೆಗೆ ಕರೆದೊಯ್ದಿತು

 5. Anonymous says:

  Thanks to smt Hema Mala for publishing my writing and thanks to smt Nagarathna, Nayana and Shankari Sharma for inspirig words.
  Lalitha S

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: