ದೋಸೆಯಾಸೆ
ದೋಸೆಯ ರುಚಿ ಯಾರಿಗೆ ಗೊತ್ತಿಲ್ಲ? ತಿನ್ನದೇ ಇರುವ ಪಾಪಿಗಳು ಯಾರಿಹರು? ಅದರಲೂ ಮಸಾಲೆ ದೋಸೆಯನ್ನು ಆಸ್ವಾದಿಸದ ನಾಲಗೆಯದು ನಿಜಕೂ ಜಡ ಮತ್ತು ಬಡ! ಪುತಿನ ಅವರು ಮಸಾಲೆ ದೋಸೆಯನ್ನು ಕುರಿತು ಬಹು ಸುಂದರವಾದ ಲಲಿತ ಪ್ರಬಂಧವನ್ನು ಬರೆದಾಗ ಒಂದು ಪುಟ್ಟ ಆಕ್ಷೇಪಣೆಯೂ ಎದ್ದಿತ್ತು. ‘ಹಳ್ಳಿಗಳಲ್ಲಿ ಬರಗಾಲ ಬಂದಿದೆಯೆಂದು ರೈತರು ಪಟ್ಟಣದ ಹೊಟೆಲುಗಳಿಗೆ ಹೋಗಿ ಮಸಾಲೆ ದೋಸೆ ತಿನ್ನದೇ ಇರುತ್ತಾರೆಯೇ?’ ಎಂದೇನೋ ಅರ್ಥ ಬರುವ ರೀತಿಯಲ್ಲಿ ಬರೆದಿದ್ದರು. ಇದನ್ನು ಪಾಠ ಮಾಡುವಾಗಲೆಲ್ಲ ನೆನಪಾಗುತಿತ್ತು. ಇನ್ನು ವಸುಧೇಂದ್ರ ಅವರ ‘ಮಸಾಲೆದೋಸೆಗೆ ಕೆಂಪು ಚಟ್ನಿ’ ಎಂಬ ಲಲಿತ ಪ್ರಬಂಧವನ್ನು ಓದುವಾಗಲೂ ಬಾಯಲ್ಲಿ ನೀರೂರದಿದ್ದರೆ ಹೇಳಿ? ಒಟ್ಟಿನಲ್ಲಿ ಮಸಾಲೆ ದೋಸೆಗೂ ನಮ್ಮ ಸಲೈವಾಗೂ ಜನ್ಮ ಜನ್ಮದ ಅನುಬಂಧ. ಕೆಲವರಂತೂ ಕೆಂಪ ಚಟ್ನಿ ಬೇಡ; ಅದಕ್ಕೆ ಬೆಳ್ಳುಳ್ಳಿ ಹಾಕಿರುತ್ತಾರೆಂದು ದೂರವಿಡುವರು. ಆದರೆ ಮಸಾಲೆ ದೋಸೆಯನ್ನಲ್ಲ!
ದೋಸೆ ಮತ್ತು ಇಡ್ಲಿಯನ್ನು ಕಂಡು ಕೊಟ್ಟವರಿಗೆ ನಾವು ಜನ್ಮೇಪಿ ಋಣಿಯಾಗಿರಬೇಕು. ಅಕ್ಕಿಯನು ನೆನೆಸಿ, ಉದ್ದಿನಬೇಳೆ ಸೇರಿಸಿ, ರುಬ್ಬಿ, ಹುದುಗು ಬರಿಸಿ, ದಿನವಿಡೀ ಇಟ್ಟು, ಆಮೇಲೆ ದೋಸೆ ಬರೆಯಬೇಕು ಎಂದರೆ ಇದೊಂದು ನಿಯತ್ತಾದ ಮತ್ತು ನೀತಿವತ್ತಾದ ಪ್ರೋಸೇಸು. ಹುದುಗುವುದಿಲ್ಲವೆಂದು ಪಶ್ಚಿಮ ರಾಷ್ಟ್ರಗಳಲ್ಲಿ ಈಸ್ಟು ಬೆರೆಸುತ್ತಾರೆ. ನನಗೆ ಮತ್ತು ನನ್ನ ಮಗನಿಗೆ ದೋಸೆಯ ಹಿಟ್ಟು ಹುಳಿ ಬಂದ ಮೇಲೆ ತಿನ್ನವುದು ಇಷ್ಟ. ನಮ್ಮ ಕುಟುಂಬ ಮಿತ್ರರು ಹಾಸ್ಯ ಮಾಡುತ್ತಾರೆ. ‘ತುಂಬಾ ಬ್ಯಾಕ್ಟೀರಿಯಾಗಳು ದಾಳಿ ಮಾಡಿದ ಮೇಲೆ ದೋಸೆ ತವದಲ್ಲಿ ಅವು ಕೊತ ಕೊತ ಕುದ್ದರೇನೇ ನಿಮಗೆ ಟೇಸ್ಟು ಅಲ್ವಾ?’ ಎಂದು. ಅಯ್ಯಯ್ಯೋ ಈ ದಿಕ್ಕಿನಲಿ ಯೋಚಿಸಿರಲಿಲ್ಲವಲ್ಲ ಎಂದು ನಾನು ಪೆಚ್ಚಾಗಿದ್ದು ಉಂಟು. ನಮ್ಮ ದೋಸೆ ಎಂಬ ಅಚ್ಚ ದ್ರಾವಿಡ ಪದವೇ ಇಂಗ್ಲಿಷಿಗೆ ಹೋಗಿ ಅಲ್ಲಿ ದೋಸಾ ಆಗಿದೆ. ದೋಸಾ ಎಂಬುದರಿಂದ ದೋಸೆ ಬಂದದ್ದಲ್ಲ ಎಂದು ನಾನು ಪಾಠ ಮಾಡುವಾಗ ಹೇಳಿದರೆ ವಿದ್ಯಾರ್ಥಿಗಳು ಅಚ್ಚರಿ ಪಟ್ಟರು. ಅವರಲ್ಲಿ ಕೆಲವರು ಶಾಲಾ, ಮಾಲಾ, ಬಾಲಾ ಎಂಬ ಸಂಸ್ಕೃತ ಪದಗಳು ಸಮಸಂಸ್ಕೃತ ಪ್ರಕ್ರಿಯೆಗೆ ಒಳಪಟ್ಟು, ಆಕಾರಾಂತ ಪದಗಳು ಎಕಾರಾಂತಗಳಾಗಿ, ಶಾಲೆ, ಮಾಲೆ, ಬಾಲೆ ಎಂದಾದಂತೆ, ದೋಸಾ ಎಂಬುದು ಕನ್ನಡಕೆ ಬರುವಾಗ ದೋಸೆ ಆಗಿದೆಯೆಂದೇ ತಪ್ಪು ಭಾವಿಸಿದ್ದರು! ಇಂಥ ಹಲವು ತಪ್ಪುಗ್ರಹಿಕೆಗಳು ನಮ್ಮ ದೋಸೆ ಮತ್ತು ಇಡ್ಲಿಗಳನ್ನು ಕುರಿತು ಇವೆ.
ಮೂವತ್ತು ಥರದ ದೋಸೆ ಎಂದೇನೋ ಸ್ವಲ್ಪ ವರುಷಗಳ ಹಿಂದೆ ಮೈಸೂರಿನ ಹೊಟೆಲೊಂದು ಭಾರೀ ಸುದ್ದಿ ಮಾಡಿತ್ತು. ಅಲ್ಲಿಗೆ ಹೋಗಿ ನೋಡಿದರೆ ನಮ್ಮ ಮಾಮೂಲಿ ರವಾದೋಸೆ, ಈರುಳ್ಳಿ ದೋಸೆ, ಸೆಟ್ ಮಸಾಲೆ ದೋಸೆಗಳ ಜೊತೆಗೆ ಟೊಮ್ಯಾಟೋ ದೋಸೆ, ಚಿತ್ರಾನ್ನದ ದೋಸೆ, ಉಪ್ಪಿಟ್ಟಿನ ದೋಸೆ ಎಂದೇನೋ ಬೋರ್ಡು ಬರೆದು, ಅದರ ಚಿತ್ರ ಹಾಕಿದ್ದರು. ನೋಡಿದರೆ ಗಾಬರಿಯೇ ಆಯಿತು. ದೋಸೆ ಮಾಡಿ, ಅದರೊಳಗೆ ಆಲೂ ಈರುಳ್ಳಿ ಪಲ್ಯ ಹಾಕುವಂತೆ, ಚಿತ್ರಾನ್ನ ಹಾಕಿ ಕೊಡುತಿದ್ದರು. ಖರ್ಚಾಗದ ಉಪ್ಪಿಟ್ಟು ಮತ್ತು ಚಿತ್ರಾನ್ನಗಳು ಹೀಗೆ ಬಿಕರಿಯಾಗುತ್ತಿವೆಯೆಂದು ಕೊಂಡು ತಿನ್ನದೇ ವಾಪಸು ಬಂದಿದ್ದೆ. ಅದೇಕೋ ನನ್ನ ಮನಸು ಒಪ್ಪಲಿಲ್ಲ. ಕೆಲವರಂತೂ ದೋಸೆಯ ಘನತೆ ಮತ್ತು ಮಹತ್ತತೆಯನ್ನು ಹಾಳು ಮಾಡಿ ಬಿಡುತ್ತಾರೆ. ಹೊಸ ರುಚಿಯ ಹೆಸರಿನಲ್ಲಿ ದೋಸೆಯ ಅತ್ಯಾಚಾರವಂತೂ ಸಾಂಗವಾಗಿ ನಡೆಯುತ್ತದೆ. ನಮ್ಮ ಜನರೂ ಅಷ್ಟೇ. ಅವರೇನೂ ಕಮ್ಮಿಯಿಲ್ಲ. ಹೊಸದಕ್ಕೆ ನೇಣು ಹಾಕಿಕೊಳ್ಳಲು ಅದೇನು ಸಂಭ್ರಮವೋ! ದೇವರಿಗೇ ಪ್ರೀತಿ. ಸುಮ್ಮನೆ ಒಂದು ಮೂಲೆಯಲ್ಲಿ ಹಗ್ಗವೊಂದು ಬಿದ್ದಿದೆ. ಅದು ವೇಸ್ಟಾಗುತ್ತಿದೆ ಎಂದುಕೊಂಡು ಯಾರೋ ಸದುಪಯೋಗ ಪಡಿಸಿಕೊಳ್ಳಬೇಕೆಂದು ನೇಣು ಬಿಗಿದುಕೊಂಡರಂತೆ. ಹಾಗಾಯಿತು ನಮ್ಮ ವಿಚಿತ್ರಾಭಿರುಚಿಯ ಸಂತಾನ. ಸಾರು, ಹುಳಿ, ಮಜ್ಜಿಗೆಯನ್ನು ಸುರಿದು ದೋಸೆಯನ್ನು ಹಾಳು ಮಾಡುವುದೊಂದು ಬಾಕಿಯಿದೆ.
ಮೈಸೂರು ಮತ್ತು ಬೆಂಗಳೂರಿನ ಮಸಾಲೆ ದೋಸೆಯಂತೆಯೇ ದಾವಣಗೆರೆಯ ಬೆಣ್ಣೆದೋಸೆ ಮತ್ತು ಮುಳಬಾಗಿಲು ಬೆಣ್ಣೆ ದೋಸೆಗಳು ಬಲು ಜನಪ್ರಿಯ. ನನಗಂತೂ ದಾವಣಗೆರೆಯ ಬೆಣ್ಣೆದೋಸೆ ತುಂಬಾ ಇಷ್ಟ. ಹುಬ್ಬಳ್ಳಿಯ ಕೊಟ್ಟೂರೇಶ್ವರದಲ್ಲಿ ತಿಂದದ್ದು ನನ್ನ ಜೀವನದ ಪರಮ ಸಂತಸದ ನೆನಪುಗಳಲ್ಲಿ ಒಂದು. ಸುಮ್ಮನೆ ಅಲ್ಲಿಗೆ ಇನ್ನೊಮ್ಮೆ ಹೋಗಿ ತಿಂದು ಬರೋಣ ಅಂತ ಸಾಕಷ್ಟು ಸಲ ಅಂದುಕೊಂಡಿದ್ದೇನೆ. ಹಾಗೆಯೇ ನನ್ನ ಹುಚ್ಚು ಆಸೆಗೆ ನಾನೇ ನಕ್ಕಿದ್ದೇನೆ. ಇದಕ್ಕೆ ಸಮಾಧಾನವೆಂಬಂತೆ, ಕಳೆದ ದಸರಾ ವೇಳೆಯಲ್ಲಿ ಆಹಾರ ಮೇಳ ನಡೆದಾಗ, ದಾವಣಗೆರೆ ಬೆಣ್ಣೆ ದೋಸೆ ತಿಂದೆ. ಪರವಾಗಿಲ್ಲ ಎನಿಸಿತು.
ಏನೇ ಯಾರೇ ಹೇಳಲಿ, ಸೆಟ್ ದೋಸೆ ಬಿಟ್ಟರೆ ಇನ್ನಿಲ್ಲ. ಇದು ಆರೋಗ್ಯಕರ ಮತ್ತು ತಿಂದ ಮೇಲೆ ಯಾವುದೇ ಪಾಪಪ್ರಜ್ಞೆ ಕಾಡುವುದಿಲ್ಲ. ದೋಸೆ ಮತ್ತು ಇಡ್ಲಿಗಾಗಿ ಸ್ನೇಹಿತರುಗಳ ಜೊತೆ ನೂರಾರು ಕಿಲೋಮೀಟರು ಹುಡುಕಿಕೊಂಡು ಹೋಗಿದ್ದಂತೂ ಸತ್ಯ. ಅಲ್ಲೆಲ್ಲೋ ದೋಸೆ ಚೆನ್ನಾಗಿರುತ್ತದೆಂಬ ಮಾಹಿತಿ ತಿಳಿದರೆ ಸಾಕು, ಮುಂದಿನ ಭಾನುವಾರ ಫಿಕ್ಸು. ಹೋಗಿ ತಿಂದು ಅದರ ಫೀಡ್ಬ್ಯಾಕ್ ಕೊಟ್ಟಾಗಲೇ ಮನಸಿಗೆ ಸಮಾಧಾನ. ಕೆಲವೊಮ್ಮೆ ಕುಟುಂಬ ಸಮೇತ ಹೋಗಲು ಆಗದೇ ಇದ್ದಾಗ, ‘ಹೇಗಿತ್ತು ಮಂಜು?’ ಎಂದು ನನ್ನ ಮಡದಿ ಕೇಳಿದರೆ, ‘ನಿನ್ನ ಜೊತೆ ಇನ್ನೊಂದ್ಸಲ ಹೋಗಬೇಕು’ ಎಂದರೆ ಫೀಡ್ಬ್ಯಾಕ್ ಸಿಕ್ಕಿತು ಎಂದೇ ಅರ್ಥ. ನಾವು ಕೆ ಆರ್ ನಗರದಲ್ಲಿದ್ದಷ್ಟೂ ದಿವಸ ಅಲ್ಲಿನ ಮೂರು ದೋಸೆ ಹೊಟೆಲುಗಳ ಖಾಯಂ ಗಿರಾಕಿ. ನಮ್ಮ ಮನೆಗೆ ಯಾರೇ ನೆಂಟರು, ಇಷ್ಟರು ಬಂದರೆ ಅಲ್ಲಿಗೆ ಭೇಟಿ ಖಂಡಿತ. ‘ಎರಡರಲ್ಲೊಂದು ಬೆಣ್ಣೆ’ ಎಂದು ನಾನು ಆರ್ಡರು ಮಾಡಿದರೆ, ನನ್ನ ಜೊತೆಗೆ ಬಂದಂಥ ಕುಟುಂಬಮಿತ್ರರು ‘ಹಂಗಂದ್ರೆ?’ ಎಂದು ಹುಬ್ಬು ಗಂಟಿಕ್ಕುತ್ತಿದ್ದರು. ನಾನು ನಕ್ಕು ಸುಮ್ಮನಾಗುತಿದ್ದೆ. ಈ ಪರಿಭಾಷೆಯು ಸಪ್ಲೈಯರಿಗೆ ಗೊತ್ತಾಗುತಿತ್ತು. ಒಂದು ಸಾದಾ ದೋಸೆ ಮತ್ತು ಇನ್ನೊಂದು ಬೆಣ್ಣೆಸಾದಾ ದೋಸೆ ಎಂದರ್ಥ. ಬೆಣ್ಣೆ ಸಾದಾ ದೋಸೆಯನ್ನು ಮೇಲಿಟ್ಟು ಆತ ತಂದುಕೊಟ್ಟರೆ, ನಾನು ಅದನ್ನು ಕೆಳಗಿಟ್ಟು, ಮಾಮೂಲೀ ಸಾದಾ ದೋಸೆಯನ್ನು ಮೊದಲು ತಿನ್ನುತ್ತಿದ್ದೆ. ಬೆಣ್ಣೆ ಸಾದಾ ಬೇಕು; ಆದರೆ ಮೊದಲೇ ಜಿಡ್ಡು ಬಾಯಿಗೆ ಹೋಗಬಾರದೆಂಬ ಸರ್ಕಸ್ಸು ನನ್ನದು. ಬೆಣ್ಣೆ ಸಾದಾ ತೆಗೆದುಕೊಂಡರೆ ಗಟ್ಟಿ ಚಟ್ನಿ ಕೊಡುತ್ತಿದ್ದರು. ಮಾಮೂಲೀ ಸಾದಾ ತೆಗೆದುಕೊಂಡರೆ ನೀರು ಚಟ್ನಿ ಸಿಗುತ್ತಿತ್ತು. ನನಗೊಂದು ವಿಚಿತ್ರ ಹಂಬಲ. ಆಗಲೂ ಇತ್ತು; ಈಗಲೂ ಇದೆ. ಸಾದಾ ದೋಸೆಯನ್ನು ಕಟ್ಟಿಸಿಕೊಂಡು ಬಂದು ಮನೆಯಲ್ಲಿ ತಿನ್ನುವುದು. ಇದೊಂಥರಾ ವಿಚಿತ್ರ ರುಚಿ. ‘ಆರಿದ ದೋಸೆ ತಿನ್ನುತ್ತಾನಲ್ಲ’ ಎಂದು ಜೊತೆಗಾರರು ಮುಖ ಸಿಂಡರಿಸಿಕೊಂಡದ್ದೂ ಇದೆ. ಈಗಲೂ ಆ ಕಡೆ ಬಂದರೆ ನನಗಾಗಿ ಎರಡು ಸಾದಾ ದೋಸೆ ಕಟ್ಟಿಸಿಕೊಂಡು ಬರುತ್ತಾಳೆ ನನ್ನ ಒಲವಿನ ಮಡದಿ. ಇದು ಕೊಡುವ ಖುಷಿ ನನ್ನ ಪಾಲಿಗೆ ಕೋಟಿಗೆ ಸಮಾನ.
ಸಾದಾ ದೋಸೆಯು ಕೆಲವು ಕಡೆ ಸೆಟ್ ದೋಸೆಯಾಗುತ್ತದೆ. ನಮ್ಮ ಕಾಲದಲ್ಲಿ ಸೆಟ್ ಎಂದರೆ ನಾಲ್ಕು. ಎಪ್ಪತ್ತು, ಎಂಬತ್ತರ ದಶಕದಲ್ಲಿ ನಾವು ಮೈಸೂರಿನ ನಂಜುಮಳಿಗೆಯಲ್ಲಿ ಇದ್ದಾಗ ಗಲ್ಲಿ ಹೋಟೆಲು ಅಂತ ಇತ್ತು. ನಮ್ಮ ತಂದೆಯವರು ಒಂದು ಸೆಟ್ ತರಿಸಿ, ನನಗೂ ನನ್ನ ತಂಗಿಗೂ ಎರಡೆರಡು ಹಂಚಿ, ಅವರು ಮಾತ್ರ ಇಡ್ಲಿ ಸಾಂಬಾರ್ ತರಿಸಿಕೊಂಡು ತಿನ್ನುತ್ತಿದ್ದರು. ಅದು ಯಾವಾಗ ಸೆಟ್ ಎಂದರೆ ಮೂರು ದೋಸೆ ಎಂಬುದಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದರೋ? ಅದಾರು ತಂದರೋ? ಗೊತ್ತೇ ಆಗಲಿಲ್ಲ. ಈಗ ಕೆಲವು ಹೊಟೆಲುಗಳಲ್ಲಿ ಸೆಟ್ ಎಂದೆ ಚಿಕ್ಕದಾದ ಮೂರೇ ದೋಸೆ ತಂದು ಬಡಿಯುತ್ತಾರೆ. ಹಾಫ್ ಸೆಟ್ ಎಂದರೆ ಎರಡು ಕೊಡುತ್ತಾರೆ. ಬೆಲೆಯೇರಿಕೆ ಆದ ಹಾಗೆ ದೋಸೆಯ ಸೈಜಿಗೆ ಹೊತ್ತುಗಾಲ. ಅದರ ಅಳತೆ ಚಿಕ್ಕದಾಗಿ ಬಿಡುತ್ತದೆ. ದೋಸೆ ಹಾಕುವವರ ಕೈಗಳಿಗೂ ಬೆಲೆ ಏರಿಸುವವರ ಕೈಗಳಿಗೂ ಅದಾವ ನಂಟೋ ಗೊತ್ತಿಲ್ಲ!
ಇನ್ನು ಮೈಸೂರಿನ ಹಳ್ಳದ ಕೇರಿ (ಈಗಿನ ಮಹಾವೀರನಗರ) ಯಲ್ಲಿದ್ದಾಗ ಹೊಟೆಲ್ ಮಧುನಿವಾಸ್ ಎಂಬುದು ಸುವಿಖ್ಯಾತವಾಗಿತ್ತು. ಅಲ್ಲೊಬ್ಬರು ನಮ್ಮ ತಾಯಿಯ ಕಡೆಯ ಬಂಧುಗಳು ಕೆಲಸಕ್ಕಿದ್ದರು. ಮಧುನಿವಾಸ್ ಎಂದರೆ ಚಟ್ನಿಗೆ ಹೆಸರುವಾಸಿ. ಯಾವುದೇ ಬೇಸರವಿಲ್ಲದೇ ತಂದು ಸುರಿಯುತ್ತಿದ್ದರು. ಅಲ್ಲಿ ನಮ್ಮ ತಾಯ್ತಂದೆಯವರು ತಮ್ಮ ಕಡೆಯ ಬಂಧುಗಳಿದ್ದರೆ ಮಾತ್ರ ಹೋಗಿ, ನನಗೂ ನನ್ನ ತಂಗಿಗೂ ಒಂದು ಮಸಾಲೆ ದೋಸೆಯನ್ನು ತರಿಸಿ, ನಮ್ಮಿಬ್ಬರಿಗೂ ಅರ್ಧರ್ಧ ಮಾಡಿ ಕೊಡುತ್ತಿದ್ದರು. ದೊಡ್ಡದಾದ ಭಾಗಕ್ಕಾಗಿ ನಾವಿಬ್ಬರೂ ಕಚ್ಚಾಡಿದ್ದು ನೆನಪಿದೆ. ನಾನು ದೊಡ್ಡವನಾದ ಮೇಲೆ ದುಡ್ಡು ಸಂಪಾದನೆ ಮಾಡಿ, ಒಬ್ಬನೇ ಹೊಟೆಲಿಗೆ ಬಂದು ಇಡೀ ಒಂದು ಮಸಾಲೆ ದೋಸೆಯನ್ನು ತರಿಸಿಕೊಂಡು ತಿನ್ನಬೇಕೆಂದು ಅನಿಸುತ್ತಿತ್ತು; ನನ್ನ ಜೀವನದ ಮಹದಾಸೆಯೇ ಇದಾಗಿತ್ತು. ಪಾಪ, ಬಡತನದ ನಮ್ಮ ತಾಯ್ತಂದೆಯರು ಆ ಕಾಲದಲಿ ಅದರಲ್ಲೂ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು ಹೊಟೆಲಿಗೆ ಕರೆದುಕೊಂಡು ಹೋಗುತ್ತಿದ್ದುದೇ ನೈಜ ಕ್ರಾಂತಿ. ಅಂತಹುದರಲ್ಲಿ ನಾವಿಬ್ಬರು ಅದನ್ನು ಅರ್ಥ ಮಾಡಿಕೊಳ್ಳದೇ ಇಡೀ ಮಸಾಲೆ ದೋಸೆಯನ್ನು ಕೊಡಿಸಲಿಲ್ಲವಲ್ಲ ಎಂದು ಪೆಚ್ಚು ಮೋರೆ ಹಾಕಿಕೊಂಡು ಅದರ ಸವಿಯನ್ನು ಕೈ ಬಿಟ್ಟು ವ್ಯಸನಗೊಳ್ಳುತ್ತಿದ್ದೆವು. ಇದನ್ನೆಲ್ಲ ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಈಗಲೂ ನಾನೇನೂ ತುಂಬ ಬದಲಾಗಿಲ್ಲ. ನನ್ನದೆಲ್ಲಾ ಪುಟ್ಪುಟ್ಟ ಆಸೆಗಳು. ಮೈಸೂರಿನ ಹರಿಹರ ಹೊಟೆಲಿಗೆ ಹೋಗಿ ಒಂದು ಇಡ್ಲಿಯನ್ನು ನೀರು ನೀರಾದ ಕೆಂಪು ಚಟ್ನಿಯೊಂದಿಗೆ ತಿಂದು, ಅರ್ಧ ಸೆಟ್ ಸಾದಾ ದೋಸೆಯನ್ನು ತಿನ್ನುವುದೇ ಕನಸು. ಕೆಲವು ಹೊಟೆಲುಗಳಲ್ಲಿ ಗಟ್ಟಿ ಚಟ್ನಿಯೊಂದಿಗೂ ಕೆಲವು ಹೊಟೆಲುಗಳಲ್ಲಿ ನೀರು ಚಟ್ನಿಯೊಂದಿಗೂ ತಿನ್ನುವುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕು. ಇದಕಾವ ಸ್ಟಾಂಡರ್ಡ್ ನೀತಿ ನಿಯಮಗಳಿಲ್ಲ. ಒಬ್ಬರಂತೂ ಸೆಟ್ ದೋಸೆ ತರಿಸಿಕೊಂಡು ನೀರು ಚಟ್ನಿಯನ್ನು ಅದರ ಮೇಲೆ ಸುರುವಿಕೊಂಡು, ಚೆನ್ನಾಗಿ ನೆನೆಸಿ, ಕಲಸಿ, ತುತ್ತು ಮಾಡಿಕೊಂಡು ನುಂಗಿದರು. ನಾನದನ್ನು ನೋಡಿ ಅಸಹ್ಯ ಪಟ್ಟುಕೊಂಡು ದೋಸೆಯ ಮಾನ ಮತ್ತು ಮರ್ಯಾದೆಗಳೆರಡನ್ನೂ ಈ ಮನುಷ್ಯ ತೆಗೆದನಲ್ಲ ಎಂದು ಬಲು ನೊಂದುಕೊಂಡೆ. ಅದರಲ್ಲಿ ಅವರಿಗೆ ಅದಾವ ರುಚಿ ಸಿಕ್ಕುತ್ತದೋ ನಾ ಬೇರೆ ಕಾಣೆ. ಇನ್ನು ಮದುವೆ ಮನೆಗಳಲ್ಲಿ ಊಟದ ಜೊತೆಗೆ ದೋಸೆ ಕೊಡುವ ಪದ್ಧತಿ ಬೆಳೆದು ಬಂದಿದೆ. ಅನ್ಲಿಮಿಟೆಡ್ ಮೀಲ್ಸ್ನಲ್ಲಿ ದೋಸೆಯೂ ಸೇರಿದೆ. ಸೆಟ್ ಮಸಾಲೆಯನ್ನು ತರಿಸಿಕೊಳ್ಳುವ ಮಂದಿಯು ಒಂದಕ್ಕೆ ಆಲೂ ಪಲ್ಯವನ್ನೂ ಇನ್ನೊಂದಕ್ಕೆ ಸಾಗು ಅಥವಾ ಕೂರ್ಮವನ್ನು ಕೇಳುತ್ತಾರೆ. ನಾವು ಕೇಳುವುದನ್ನು ಮರೆತರೆ, ಸಪ್ಲೈಯರೇ ನೆನಪಿಸುತ್ತಾರೆ. ಅಷ್ಟರಮಟ್ಟಿಗೆ ಸೆಟ್ ಮಸಾಲೆಯದು ಪಲ್ಯ ಮತ್ತು ಸಾಗು ಕಾಂಬಿನೇಷನ್ನು. ಮೊನ್ನೆ ನಮ್ಮ ಪುಸ್ತಕ ಶಿಲ್ಪಿ ಗೆಳೆಯ ಬಸವರಾಜು, ಎಂಬತ್ತು ವರುಷ ಹಳೆಯದಾದ ಮೈಸೂರಿನ ಗುರುಪ್ರಸಾದ್ ಗೆ ಕರೆದುಕೊಂಡು ಹೋಗಿ, ಸೆಟ್ ಮಸಾಲೆಯ ರುಚಿ ತೋರಿಸಿದರು. ಇನ್ನು ನಾನು ನನ್ನ ಬಳಗದ ಎಲ್ಲರಿಗೂ ಅದರ ರುಚಿ ತೋರಿಸದೇ ಬಿಡೆನು. ಹೊಟೆಲ್ ಮೈಲಾರಿಯ ದೋಸೆಯೇಕೋ ನನಗೆ ಇಷ್ಟವಾಗುವುದಿಲ್ಲ. ಅವರು ಮೈದಾಹಿಟ್ಟನ್ನು ಮಿಕ್ಸ್ ಮಾಡುವುದರಿಂದ ತಿನ್ನುವಾಗ ಖುಷಿ ಅನಿಸಿದರೂ ತಿಂದ ಮೇಲೆ ಋಷಿಯಂತಿರಲು ಆಗದು!
ಕೆಲವು ಹೊಟೆಲುಗಳಲ್ಲಿ ಸೆಟ್ ದೋಸೆ ಇರುವುದಿಲ್ಲ. ಇಂಥ ಕಡೆ ಹೋಗಿ ಪ್ಲೈನ್ ದೋಸೆ ಆರ್ಡರು ಮಾಡಿದರೆ, ತೆಳ್ಳಗೆ ನಾಯಿ ನಾಲಗೆಯಂತೆ ಮುಟ್ಟಿದರೆ ಚೂರಾಗುವಂತೆ, ಬೆಳ್ಳಗೆ ಬಿಳಿಚಿಕೊಂಡ ದೋಸೆಯನ್ನು ತಂದಿಡುತ್ತಾರೆ. ಒಂದು ಹೊಟೆಲಿನಲ್ಲಂತೂ ಈ ಪ್ಲೈನ್ ದೋಸೆಯು ಎಷ್ಟು ಹರಿತವಾಗಿತ್ತೆಂದರೆ ನನ್ನ ನಾಲಗೆ ಮತ್ತು ವಸಡುಗಳನ್ನು ಡ್ಯಾಮೇಜು ಮಾಡಿಬಿಟ್ಟಿತು. ಇದೇನು ದೋಸೆಯೋ, ಶಾರ್ಪು ನೈಫೋ ಎಂದು ತಿಳಿಯದೇ ಕಂಗಾಲಾದೆ. ಅಷ್ಟು ಗರಿಗರಿ ಯಾಕೆ ಮಾಡುತ್ತಾರೆಂದರೆ ದೋಸೆಯ ಹಿಟ್ಟು ಉಳಿಸಲು. ಇಂಥ ಹೊಟೆಲುಗಳನ್ನು ಗುರುತಿಟ್ಟುಕೊಂಡು ಇನ್ನೊಮ್ಮೆ ಹೋಗದೇ ಸರಿಯಾಗಿ ಬುದ್ಧಿ ಕಲಿಸಿದೆ ಎಂದು ನಾನು ಸಮಾಧಾನ ಪಟ್ಟುಕೊಂಡಿದ್ದೇನೆ.
ಈರುಳ್ಳಿ ದೋಸೆಯ ಘಮವೇ ಬೇರೆ. ಆದರೆ ಇದು ಬೇಯುವುದು ನಿಧಾನ. ಹಾಗಾಗಿ, ಜಪ ಮಾಡುತ್ತಾ ಕಾಯಬೇಕು. ಹಸಿವೆಯಾಗಿದ್ದರಂತೂ ಈರುಳ್ಳಿ ದೋಸೆಯನ್ನು ಆರ್ಡರ್ ಮಾಡಲೇಬಾರದು. ಅವರು ತಂದು ಕೊಡುವ ಹೊತ್ತಿಗೆ ನಮ್ಮ ಹೊಟ್ಟೆಯ ಹುಳಗಳು ಆತ್ಮಹತ್ಯೆ ಮಾಡಿಕೊಂಡಿರುತ್ತವೆ. ಅಲ್ಲಿಯವರೆಗೆ ಏನಾದರೂ ತಿನ್ನೋಣವೆಂದುಕೊಂಡರೆ ಆಮೇಲೆ ಈರುಳ್ಳಿ ದೋಸೆಯ ಟೇಸ್ಟು ರುಚಿಸುವುದಿಲ್ಲ. ಹೊಟ್ಟೆ ತುಂಬಿದ ಮೇಲೆ ಮತ್ತು ಹೊಳೆ ದಾಟಿದ ಮೇಲೆ ಅದರ ಮಹತ್ವ ಶೂನ್ಯ. ಇಲ್ಲೊಂದು ವಿಷಯ ಹೇಳಲೇಬೇಕು: ಹಲವರಿಗೆ ಮಸಾಲೆದೋಸೆಯನ್ನು ಸರಿಯಾಗಿ ತಿನ್ನಲು ಬರುವುದೇ ಇಲ್ಲ. ಮಸಾಲೆದೋಸೆಯನ್ನು ತಂದಿಟ್ಟ ಮೇಲೆ, ಅದರ ಮಧ್ಯಭಾಗದಿಂದ ತಿನ್ನಲು ಶುರು ಮಾಡಬೇಕು. ನಾನು ಅದರ ತುದಿಯಿಂದ ಹೊರಡುತ್ತಿದ್ದೆ. ಇದು ಸರಿಕ್ರಮವಲ್ಲ ಎಂದು ನನ್ನ ಬಂಧುಗಳು ಒಮ್ಮೆ ತಿಂದು ತೋರಿಸಿದರು. ‘ಊಟ ನಿದ್ದೆಗಳು ಪಾಠ ಮಾಡಿದ ಹಾಗೆ’ ಎಂಬ ಗಾದೆಯಿದ್ದರೂ ಅವರಿಗೆ ಬೇಕಾದ್ದನ್ನು ಅವರು ಹೇಗಾದರೂ ತಿನ್ನಬಹುದು ಎಂಬ ಸ್ವಾತಂತ್ರ್ಯದ ಅರಿವು ನನ್ನಲ್ಲಿದ್ದರೂ ಕೆಲವರು ಹ್ಯಾಗೆ ಹ್ಯಾಗೋ ದೋಸೆ ತಿನ್ನುವಾಗ ನನಗೇ ಗೊತ್ತಿಲ್ಲದಂಥ ಅಸಹನೆ ಮೂಡುತ್ತದೆ. ಒಬ್ಬ ಸಹಪಾಠಿಯಂತೂ ಮಧ್ಯದಿಂದ ತಿನ್ನಲೇಬಾರದು ಎಂಬುದಕ್ಕೆ ಕೊಟ್ಟ ಕಾರಣವೆಂದರೆ, ಪ್ಲೇಟಿಗಿಂತ ದೋಸೆಯು ಉದ್ದವಿರುತ್ತದೆ. ಅದರ ಎರಡೂ ತುದಿಗಳು ಟೇಬಲ್ಲಿಗೆ ತಾಗುತ್ತಿರುತ್ತವೆ. ಹಾಗಾಗಿ ಮೊದಲು ನಾವು ಅದರ ಎರಡು ಕಿವಿಗಳನ್ನು ಕತ್ತರಿಸಿ ತಿನ್ನಬೇಕು ಎಂಬುದವನ ತರ್ಕ. ಲೋಕೋಭಿನ್ನರುಚಿಃ ಎಂದಂತೆ, ‘ತಿನ್ನೋಭಿನ್ನರುಚಿಃ’ ಎಂದುಕೊಂಡು ಸುಮ್ಮನಾಗಿರುವೆ.
ಹೊಟೆಲಿನ ದೋಸೆಯಂತೆ, ಮನೆಯ ದೋಸೆಯೇಕೆ ಹಾಗಾಗುವುದಿಲ್ಲ ಎಂದು ನಾನು ನಮ್ಮಮ್ಮನನ್ನು ಕೇಳಿದ್ದೆ. ಅವರು ಹೊಟೆಲಿನಲ್ಲಿ ಕಾವು ತುಂಬಾ ಇದ್ದು, ಒಂದೇ ಕಡೆ ಬೇಯಿಸುತ್ತಾರೆ. ಮನೆಯಲ್ಲಿ ಹಾಗಲ್ಲ ಎಂದರು. ಕೆಲವರಂತೂ ದೋಸೆಹಿಟ್ಟು ಸಿದ್ಧಪಡಿಸಲು ಒಂದು ಕಪ್ ಅನ್ನ ಹಾಕಿ ಬಿಡುತ್ತಾರೆ. ಕೆಲವರು ಸೀಮೇಅಕ್ಕಿ, ಇನ್ನು ಕೆಲವರು ಅವಲಕ್ಕಿ, ಬೂದುಗುಂಬಳಕಾಯಿಯ ತಿರುಳು. ಒಟ್ಟಿನಲ್ಲಿ ಥರಾವರಿ ರೀತಿಯಲ್ಲಿ ದೋಸೆಹಿಟ್ಟನ್ನು ಸಿದ್ಧಪಡಿಸುವ ಖಯಾಲಿಯಿದೆ. ಮಿಕ್ಸಿಯಲ್ಲಿ ರುಬ್ಬುವುದಕಿಂತಲೂ ಗ್ರಯಿಂಡರ್ನಲ್ಲಿ ರುಬ್ಬಿದರೇ ದೋಸೆ ಚೆನ್ನಾಗಿ ಆಗುವುದು. ಮಿಕ್ಸಿಯ ಬ್ಲೇಡುಗಳಿಗಿಂತ ರುಬ್ಬುವ ಗುಂಡಿಗೆ ಎಲ್ಲವನೂ ಸಮಗೊಳಿಸುವ ಶಕ್ತಿಯಿದೆ. ಅದಕ್ಕೇ ರುಬ್ಬಿದರೇ ರುಚಿ ಹೆಚ್ಚು. ನಮ್ಮ ಮನೆಯಲ್ಲಂತೂ ಚಟ್ನಿಯನ್ನೂ ಒರಳುಕಲ್ಲಿನಲ್ಲಿ ರುಬ್ಬುವ ರೂಢಿ. ಇದರ ಮಜಾವೇ ಬೇರೆ. ದೋಸೆಗೆ ಒರಳುಕಲ್ಲಿನಲಿ ರುಬ್ಬಿದ ಚಟ್ನಿಯಿದ್ದರೆ ಅದು ನೈಜ ಸ್ವರ್ಗ!
ಏನೇ ಮಾಡಿದರೂ ಮಾರನೆಯ ದಿನಕ್ಕೆ ದೋಸೆಹಿಟ್ಟಿನ ಹುದುಗು ಕಡಮೆಯಾಗಿ, ಒರಟೊರಟಾಗಿ ಬಿಡುತ್ತದೆ. ಮೊದಲ ದಿನದ ಮೃದುತ್ವ ಎರಡನೆಯ ದಿನಕ್ಕೆ ಕ್ಯಾರೀ ಆಗುವುದಿಲ್ಲ. ಇನ್ನು ಕೆಲವರಂತೂ ಕಿಂಚಿತ್ತೂ ಹುಳಿ ಬರಲು ಬಿಡದೇ ಪದೇ ಪದೇ ಫ್ರಿಜ್ಜಿನಲ್ಲಿಟ್ಟು, ದೋಸೆ ಹಾಕಿ ಕೊಡುತ್ತಾರೆ. ನಾನೀಗ ವಾಸ ಮಾಡುತ್ತಿರುವ ಹೊಳೆನರಸೀಪುರದ ನೆರೆಹೊರೆಯವರಂತೂ ಬೆಳಗ್ಗೆ ರುಬ್ಬಿ, ಮಧ್ಯಾಹ್ನಕೆಲ್ಲ ದೋಸೆ ಹುಯ್ದು ತಿಂದೇ ಬಿಡುವರು. ನಾವು ಇದಕ್ಕೆ ತದ್ವಿರುದ್ಧ. ಸಂಜೆ ರುಬ್ಬಿ, ಎತ್ತಿಟ್ಟು, ಅದರ ಮೇಲೆ ಭಾರ ಹಾಕಿ, ಹುದುಗು ಹೆಚ್ಚಾಗಿ ಚೆಲ್ಲದಂತೆ ಪ್ರಿ ಕಾಷನರಿ ತೆಗೆದುಕೊಂಡು, ಮಾರನೆಯ ದಿನದ ಬೆಳಗಿನ ಉಪಾಹಾರಕ್ಕೆ ಬಳಸುವುದು. ಪ್ರಾರಂಭದಲ್ಲೇ ಹೇಳಿದೆನಲ್ಲ, ಹುಳಿ ಬಂದಷ್ಟೂ ನನಗದು ಪ್ರಿಯ. ಯಾವ ಕಾರಣಕ್ಕೂ ಫ್ರಿಜ್ಜಿನಲ್ಲಿ ಇಡಬೇಡವೆಂದು ನನ್ನಾಕೆಗೆ ಹೇಳುತ್ತಲೇ ಇರುತ್ತೇನೆ. ತುಂಬಾ ಹುಳಿ ಬಂದದ್ದನ್ನು ತಿನ್ನಬಾರದು; ಅದು ಆರೋಗ್ಯಕ್ಕೆ ಹಾನಿಕರ ಎಂಬುದು ಹಲವರ ಆಲೋಚನೆ. ಇದು ಸರಿಯೂ ಇರಬಹುದು. ನಮ್ಮ ದೇಹದಲ್ಲಿರುವ ಆಮ್ಲ ಮತ್ತು ಪ್ರತ್ಯಾಮ್ಲಗಳು ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆಂಬುದು ನಿಜ.
ಇನ್ನು ಬೇಳೆಗಳನ್ನು ಹಾಕಿ ಮಾಡುವ ದೋಸೆ, ಮೆಂತ್ಯದ ದೋಸೆ, ರವೆದೋಸೆ, ರಾಗಿದೋಸೆ, ಅಕ್ಕಿ ಹಿಟ್ಟನ್ನು ಕದಡಿಕೊಂಡು ಮಾಡುವ ಇನ್ಸ್ಟಂಟ್ ದೋಸೆ ಮುಂತಾಗಿ ವಿಧಗಳಿವೆ. ಈಗಂತೂ ದೋಸಾ ಬ್ಯಾಟರ್ ಸಿಗುವುದರಿಂದ ಅದನ್ನು ತರುವುದು, ದೋಸೆ ಹುಯ್ಯುವುದು, ಸುಲಭವಾಗಿದೆ. ಅದೇನೇ ಮಾಡಿದರೂ ದೋಸೆಗೆ ಚಟ್ನಿಯೇ ಭೂಷಣ. ನನ್ನ ಮಗನಿಗೆ ಕಡ್ಡಾಯವಾಗಿ ಪಲ್ಯ ಬೇಕೇ ಬೇಕು. ನಾನು ಹಾಗಲ್ಲ. ಚಟ್ನಿಪ್ರಿಯ. ಕೆಲವೊಮ್ಮೆ ಚಟ್ನಿಯು ಬೇಸರವಾಗಿ, ಚಟ್ನಿಪುಡಿಗೆ ಮೊಸರು ಹಾಕಿಕೊಂಡು ನಂಚಿಕೊಂಡದ್ದಿದೆ. ಕೆಲವು ಹೊಟೆಲುಗಳಲ್ಲಿ ಪಲ್ಯ ಮುಗಿದು ಹೋಗಿದ್ದರೆ, ಒಂದು ಕಪ್ ಸಾಂಬಾರು ತಂದಿಡುವರು. ಅಂತೂ ಏನೋ ಒಂದನ್ನು ಅವರು ಆಲ್ಟರ್ನೇಟಿಗಾಗಿ ಕಂಡುಕೊಂಡಿದ್ದಾರೆ; ಗ್ರಾಹಕರನ್ನು ತೃಪ್ತಿಪಡಿಸಲು.
ಒಮ್ಮೆ ಮೌಲ್ಯಮಾಪನಕ್ಕಾಗಿ ಹೋಗಿದ್ದಾಗ ಮಧ್ಯಾಹ್ನ ಊಟಕ್ಕೆ ಒಟ್ಟಿಗೆ ಕುಳಿತುಕೊಳ್ಳುವ ಪರಿಪಾಠದಿಂದಾಗಿ ತಂದಿದ್ದ ಬುತ್ತಿ ತೆರೆದವು. ನನ್ನ ಸಹೋದ್ಯೋಗಿಯೊಬ್ಬರು ದೋಸೆಗೆ ಹುರುಳಿಕಾಯಿ ಪಲ್ಯವನ್ನು ನಂಚಿಕೊಳ್ಳುತ್ತಿದ್ದರು. ಗಮನವಿಟ್ಟು ನೋಡಿದೆ. ಒಂದು ಹುರುಳಿಕಾಯನ್ನು ಎರಡು ಭಾಗ ಮಾಡಿ ಅದರ ಪಲ್ಯ ಮಾಡಿದ್ದರು. ಆ ದೋಸೆಗೆ ಆ ಬೀನ್ಸು ಪಲ್ಯ ಯಾವ ರೀತಿಯಲ್ಲೂ ಮ್ಯಾಚಾಗದೇ ಪದೇ ಪದೇ ಡಬ್ಬಿಗೆ ಜಾರಿ ಬೀಳುತ್ತಿತ್ತು. ಅವರಂತೂ ಅದ್ಯಾವುದನ್ನೂ ಗಮನಿಸದೇ, ಕಚಕ ಪಚಕ ಅಂತ ಬೀನ್ಸನ್ನು ಜಗಿಯುತ್ತಾ, ದೋಸೆಯನ್ನು ಮುರಿದುಕೊಂಡು ತಿನ್ನುತ್ತಿದ್ದರು. ಆ ಮೂಲಕ ಅವರಿಗೆ ಮಾಡಿ ಕಳಿಸಿದ ಅವರ ಮಡದಿಯ / ಮನೆಯವರ ಅಡುಗೆ ಕಲೆ ಮತ್ತು ಅಭಿರುಚಿಗಳನ್ನು ಲೆಕ್ಕ ಹಾಕಲು ಶುರು ಮಾಡಿದೆ. ನರಕ ಎಂಬುದೇನಾದರೂ ಇದ್ದರೆ ಅದು ಅವರ ಅಡುಗೆಮನೆಯಲ್ಲೇ ಎಂದುಕೊಂಡು ಬೆಚ್ಚಿ ಬಿದ್ದೆ. ನಾವೆಲ್ಲ ಎಷ್ಟೊಂದು ಅದೃಷ್ಟಶಾಲಿಗಳು. ಒಳ್ಳೊಳ್ಳೆಯ ರುಚಿ ರುಚಿ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುವವರು ನಮ್ಮ ಸಂಗಾತಿ. ನಿಜಕ್ಕೂ ಪುಣ್ಯ ಮಾಡಿದ್ದೇನೆ ಎಂದುಕೊಂಡು ವಿಚಿತ್ರ ಸಂತೋಷ ಅನುಭವಿಸಿದೆ. ಈಗಲೂ ನಾನು ದೋಸೆ ತಿನ್ನುವಾಗ ಆ ಬೀನ್ಸು ಪಲ್ಯದಂಥದು ನೆನಪಾದರೆ ತಿನ್ನುವ ಖುಷಿಯೇ ಹೊರಟು ಹೋಗುತ್ತದೆ. ಅಂತೂ ದೋಸೆಯ ಹೊಟೆಲುಗಳು ನನಗೆ ಯಾವತ್ತೂ ಪ್ರಿಯ. ಎಂಥೆಂಥ ಕಡೆ ತಿಂದಿದ್ದರೂ ಹುಡುಕಿಕೊಂಡು ಹೋಗಿ ತಿಂದು ಬಸವಳಿದಿದ್ದರೂ ನನಗೆ ಈ ವಿಷಯದಲ್ಲಿ ಬುದ್ಧಿ ಬಂದೇ ಇಲ್ಲ. ಈಗಲೂ ಅಲ್ಲೆಲ್ಲೋ ದೋಸೆ ಚೆನ್ನಾಗಿರುತ್ತದೆ ಎಂದು ಯಾರಾದರೂ ಹೇಳಿದರೆ ಕಿವಿ ನಿಮಿರುತ್ತದೆ. ನಾನೀಗ ವಾಸ ಮಾಡುತ್ತಿರುವ ಹೊಳೆನರಸೀಪುರದಲ್ಲಿ ವಾಸವಿ ಹೊಟೆಲಿನ ದೋಸೆ ನನಗೆ ಪ್ರಿಯ. ಕಟ್ಟಿಗೆ ಒಲೆಯಲ್ಲಿ ಬೆಂದ ಅದರ ಘಮವು ನಿದ್ದೆಯಲ್ಲೂ ಕಾಡುವುದು. ಆಗಾಗ ಕುಟುಂಬ ಸಮೇತ ಹೋಗಿ ತಿಂದು ಬರುತ್ತೇವೆ. ಇನ್ನು ಮೈಸೂರಿಗೆ ಹೋಗುವಾಗ ನಡುವೆ ಸಿಗುವ ಕೆ ಆರ್ ನಗರದ ಮೂರು ಹೊಟೆಲುಗಳಲ್ಲೂ ದೋಸೆ ಸೇವನೆ ನಡೆಯುತ್ತಲೇ ಇರುತ್ತದೆ. ಅಂತೂ ದೋಸೆಯೇ ನನ್ನಾಸೆ. ಅಂದೂ ಇಂದೂ ಮುಂದೂ!
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ದೋಸೆಯ ಬಗ್ಗೆ ಎಷ್ಟೊಂದು ಅಧ್ಯಯನ ಮಾಡಿದ್ದೀರಿ….ದೋಸೆಯ ಬಣ್ಣ, ರುಚಿ, ಶಕ್ತಿ, ಘಮ ತಂಬಿ ತುಳುಕುವ ಬರಹ ಸೂಪರ್ ಆಗಿದೆ.
ಧನ್ಯವಾದಗಳು ಹೇಮಾ ಮೇಡಂ……….
ತಿನ್ನುವಾಗ ಬರೆದದ್ದು ನೆನಪಾಗುವುದಿಲ್ಲ; ಆದರೆ ಬರೆಯುವಾಗ ಮತ್ತು ಓದುವಾಗ
ನೀವೇ ಹೇಳಿದಂತೆ, ಬಣ್ಣ-ರುಚಿ-ಘಮ ಈ ಮೂರೂ ಸಂಗಮಿಸಿದ ದೋಸಾ ನೆನಪಾಗದೇ
ಇರುವುದಿಲ್ಲ! ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಸುರಹೊನ್ನೆಯ ಎಲ್ಲ ಸಹೃದಯೀ
ಓದುಗ ಮತ್ತು ಬರೆಹಗಾರರಿಗೆ ಮೈಸೂರಿನ ಮಸಾಲೆದೋಸೆಯನ್ನು ತಿನ್ನಿಸಿಯೇ
ನಾನು ಕೃತಜ್ಞತೆ ಹೇಳಬೇಕು. ಈ ಸಂದರ್ಭ ಮತ್ತು ಸಮಯ ಬೇಗ ಒದಗಲಿ!
ವಂದನೆಗಳು. ಬದುಕಲ್ಲಿ ಇನ್ನೇನಿದೆ; ಬಣ್ಣ – ರುಚಿ – ಘಮ ಬಿಟ್ಟು !!
ವಾರೆವಾಹ್…ದೋಸೆ ಯ ಬಗ್ಗೆ..ನಿಮಗಿರುವ ಆಸೆ ಅಭಿಲಾಷೆ…ಅದನ್ನು ಹೇಗೆ ತಯಾರಿ ನೆಡಸಬೇಕೆಂಬುದರ ಕಡರ ಗಮನ..ಅಷ್ಟೇ ಅಲ್ಲ ತಿನ್ನುವ ಕ್ರಮ…ದೋಸೆಯ ಬಗೆಗಳು..ಹೊಂದಿಕೊಳ್ಳುವ ವ್ಯಂಜನ ..ಒಂದೇ ಎರಡೇ..ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಪೂರ್ತಿ ಚಿತ್ರ ಣದ ಅನೆವರಣ ಸೊಗಸಾದ ನಿರೂಪಣೆ ಯೊಂದಿಗೆ ಬಂದ ಲೇಖನ ಮನಸ್ಸಿಗೆ ಮುದತಂದಿತು.. ಸಾರ್..
ಲೇಖನ ಓದುತ್ತಾ ಓದುತ್ತಾ ಬಾಯಲ್ಲಿ ನೀರೂರಿ ಮನೆ ಎದುರಿಗಿದ್ದ ಬೆಣ್ಣೆ ದೋಸೆ ಹೋಟೆಲ್ ಗೆ ಸಂಜೆ ಹೋಗಲೇ ಬೇಕೆಂದು ಹಂಬಲ ಮೂಡಿತ್ತು
ದೋಸೆಯಾಸೆಯ ಗುರುವಿಗೆ ಇನ್ನೂ ಒಳ್ಳೊಳ್ಳೆ ದೋಸೆ ಹೋಟೆಲುಗಳು ದೊರಕಲಿ
ಆಗಲಿ, ಧನ್ಯವಾದ ಪ್ರಮೋದ್
ದೋಸೆಯ ಘಮ ಸುತ್ತುವರಿದು ಬಂದಂತೆ ಅನುಭವವಾಯಿತು ಈ ಲೇಖನ ಓದಿ…ಚಂದದ ಬರಹ
ದೋಸೆ ಚನ್ನಾಗಿದೆ…. ಬರಹ ರುಚಿಯಾಗಿದೆ.
ನಾವು ವಿದ್ಯಾರ್ಥಿಯಾಗಿದ್ದಾಗ ಕೆ ಆರ್ ನಗರ ದ ಶ್ರೀ ಹೋಟೆಲ್ ನಲ್ಲಿ ಚಪ್ಪರಿಸುತ್ತಿದ್ದದ್ದು ನೆನಪಾಯಿತು…
ಧನ್ಯವಾದಗಳು ಗುರುಗಳೇ
ದೋಸೆಯ ಬಗ್ಗೆ ನಿರ್ದೋಷ ಪ್ರಬಂಧ… K.R. ನಗರದ ಶ್ರೀ ಹೋಟೆಲಿನ ಬೆಣ್ಣೆದೋಸೆಯ ಪ್ರಿಯನಾದ ನನಗೆ… ನಿಮ್ಮ ಬರೆಹ ಓದುವಾಗ ದೋಸೆಯ ಚಪ್ಪರಿಸಿದ ಅನುಭವ ಬಂದಿದ್ದು ಸುಳ್ಳಲ್ಲ. ಬೇಸಿಗೆಯಲ್ಲೂ ಬೆಣ್ಣೆಯಂತ ನಯವಾದ ಒಂದೊಳ್ಳೆ ಪ್ರಬಂಧ ಬರೆದು ಓದುವ ಮನಸಿಗೆ ಉಣಬಡಿಸಿದ ನನ್ನ ನೆಚ್ಚಿನ ಗುರುಗಳಿಗೆ ಅನಂತ ವಂದನೆಗಳು…… ಜೈ ದೋಸೆ
ಧನ್ಯವಾದಗಳು ಮಂಜು
Doseyannu adarallu hubballiya. Bennedose, shree hotellina dose, Vasavi dose, Madhunivas dose galannu nenapaagi khandita.hybballli doses annually tinnalebekemba bayake bruhadaakaaravaagi beleyitu. Dose nammannaluvashtu shaktiyutavaagide anta ivattu gotta you.. dose.ruchi benneyobdige mugigadaruttide.
ದೋಸೆ ಬಗೆಗಿನ ಸಾಮಾನ್ಯ ಜ್ಞಾನವೂ ಸಹ ನಿಮ್ಮ ಬರಹದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ ಸರ್. ನಿಮ್ಮ ಬರಹವೂ ಮಸಾಲೆ ದೋಸೆಯ ಹಾಗೆಯೇ ಇದೆ.
ದೋಸೆಯ ಘಮ ನೆನಪಾಗ್ತಿದೆ. ಮಸ್ತ್ ಮಸ್ತ್ ಲೇಖನ
ಧನ್ಯವಾದ ಮೇಡಂ
ದೋಸೆಯನ್ನು ಒರಳುಕಲ್ಲಿನಲ್ಲಿ ರುಬ್ಬಿದ ಚಟ್ನಿಯೊಂದಿಗೆ ಸವಿಯುವ ನೈಜ ಸ್ವರ್ಗ ಸುಖವನ್ನೂ, ದೋಸೆಗಳ ಹಲವಾರು ಸ್ಥಳ ಪುರಾಣಗಳೊಂದಿಗೆ ವಿವರಿಸಿರುವ ದೋಸಾಯಣ ಬಾಯಲ್ಲಿ ನೀರೂರಿಸುತ್ತಿದೆ.
ಧನ್ಯವಾದ ಮೇಡಂ
ದೋಸೆಯ ವೈವಿಧ್ಯತೆ ಜೊತೆಗೆ ಅವುಗಳನ್ನು ಹೇಗೆ ತಿನ್ನಬೇಕು ಎನ್ನುವ ವಿವರಣೆ ಇನ್ನೂ ಚೆನ್ನಿದೆ. ನಾನಂತೂ ಈಗಲೂ ಯಾವ ಹೋಟೆಲಿಗೆ ಹೋಗಲಿ, ಮಸಾಲೆ ದೋಸೆಗೇ ಮೊದಲ ಆದ್ಯತೆ! ಬಾಯಲ್ಲಿ ನೀರೂರಿಸುವ ಘಮ ಘಮ ಲೇಖನಕ್ಕೆ ಧನ್ಯವಾದಗಳು.
ಹೌದೇ, ತುಂಬ ಸಂತೋಷ
ದೋಸೆಯಷ್ಷೆ ಸವಿಯಾಗಿದೆ,,,ನಿಮ್ಮ ಲೇಖನ
ಧನ್ಯವಾದ
ದೋಸೆಯ ಘಮ ಘಮ ಪರಿಮಳ ಮಾಮರಕ್ಕೆ ಹಬ್ಬಿದ ಮಲ್ಲಿ ಗೆ ಬಳ್ಳಿಯಂತೆ ಅಡರಿಬಿಟ್ಟಿದೆ! 365 ದಿನ ತಿಂದರೂ ದೋಸೆಯಾಸೆ ಹಾಗೇ lively!
ಸೊಗಸಾದ ದೋಸೆ ಆಖ್ಯಾನ!
ಧನ್ಯವಾದಗಳು ಮೇಡಂ, ನಿಮ್ಮ ಶ್ಲಾಘನೆ ನನಗೆ ನೂರಾನೆ ಬಲ ತಂದಿದೆ