ಕಾದಂಬರಿ : ಕಾಲಗರ್ಭ – ಚರಣ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಶಂಕರಪ್ಪ ಅವರ ಹತ್ತಿರ ನಿಷ್ಠೂರ ಕಟ್ಟಕೊಳ್ಳಲು ಹೋಗದೆ ”ನೋಡಿ ರಕ್ತ ಸಂಬಂದದಲ್ಲಿ ಈಗಾಗಲೇ ನಾನು ಮಾಡಿಕೊಂಡಿದ್ದೇನೆ. ಇದು ಈ ತಲೆಮಾರಿಗೇ ಸಾಕು. ಮಗಳಿಗೂ ಅದನ್ನೇ ಮಾಡಲು ನನಗಿಷ್ಟವಿಲ್ಲ. ಅಲ್ಲದೆ ವೈಜ್ಞಾನಿಕ ದೃಷ್ಟಿಯಿಂದಲೂ ಅದು ಒಳ್ಳೆಯದಲ್ಲ. ಅದರ ಬಗ್ಗೆ ಸುಮ್ಮನೆ ಮಾತು ಬೆಳೆಸಿಕೊಂಡು ನಮ್ಮೊಳಗಿನ ಸಂಬಂಧಗಳನ್ನು ಕೆಡಿಸಿಕೊಳ್ಳುವುದು ಬೇಡ” ಎಂದು ಸ್ಪಷ್ಟವಾಗಿಯೇ ತಿಳಿಸಿದನು.

ಸೋದರನ ನೇರವಾದ ಮಾತುಗಳು ಒಡಹುಟ್ಟಿದ ಸೋದರಿಯರಿಗೆ ಆ ಕ್ಷಣದಲ್ಲಿ ನಿರಾಸೆ ಎನ್ನಿಸಿದರೂ ಅದನ್ನೇ ಮುಂದುವರೆಸಿಕೊಂಡು ಹೋದರೆ ಮುಂದಿನ ಆಗುಹೋಗುಗಳಿಂದ ಹೆತ್ತವರ ಒತ್ತಾಸೆಯು ತಪ್ಪಿಹೋಗಬಹುದೆಂದು ಆಲೋಚಿಸಿ ಸುಮ್ಮನಾದರು.

ಅದೇ ವೇಳೆಗೆ ಗಂಗಾಧರಪ್ಪನವರು ಇದ್ದೊಬ್ಬ ಮಗ ಮಹೇಶನಿಗಾಗಿ ಕನ್ಯಾನ್ವೇಷಣೆ ಮಾಡತೊಡಗಿದ್ದರು. ಅವರಿಗೆ ತಮ್ಮ ಮಗ ಊರಿಗೇ ಬಂದು ನೆಲೆಸಲು ನಿಶ್ಚಯಿಸಿದ್ದು ಭರಿಸಲಾಗದಷ್ಟು ಸಂತೋಷ ತಂದಿತ್ತು. ಏಕೆಂದರೆ ಮೂರು ಹೆಣ್ಣುಮಕ್ಕಳಾದ ಸುಮಾರು ಮೂರು ವರ್ಷದ ನಂತರ ಹುಟ್ಟಿದ್ದ ಮಗನ ಮೇಲೆ ಅತಿಯಾದ ಅಕ್ಕರೆ. ಅವನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಹೊರಟಾಗ ಮನಸ್ಸಿನಲ್ಲಿ ತಮ್ಮಿಂದ ದೂರವಾಗುತ್ತಾನೇನೋ ಎಂದು ನಿರಾಸೆಯಾಗಿತ್ತು. ಆದರೆ ಅವನು ಓದಲು ಹೋಗಿದ್ದು ವ್ಯವಸಾಯಕ್ಕೆ ಸಂಬಂಧಪಟ್ಟ ವಿಷಯವೇ ಎಂದು ತಿಳಿದು ನಿರಾಳವಾಗಿದ್ದರು. ಮಹೇಶ ಡಿಗ್ರಿ ಮುಗಿಸಿದ ಮೇಲೆ ಎಂ.ಎಸ್.ಸಿ.(ಅಗ್ರಿ) ಪದವಿಗೆಸೇರಿದಾಗ ”ನಮಗೆ ವಯೋಮಾನದಿಂದ ಶಕ್ತಿಯು ಕುಂದುತ್ತಿದೆ. ನಮ್ಮ ಮಗ ಓದನ್ನು ಎಲ್ಲಿಗೆ ನಿಲ್ಲಿಸುತ್ತಾನೋ” ಅಥವಾ ಮುಂದುವರೆದು ವಿದೇಶಕ್ಕೆ ಹಾರಿಬಿಡುತ್ತಾನೋ ಎಂಬ ಶಂಕೆಯಿಂದ ಆತಂಕಗೊಂಡರು. ಹಾಗೇನಾದರೂ ಮಾಡಿದರೆ ತಾನು ಅವನ್ನು ತಡೆಯಲು ಸಾಧ್ಯವೇ, ಎಂದೆಲ್ಲಾ ಆಲೋಚಿಸಿದರು. ಮಗನಿಗೆ ಮನದಳಲನ್ನು ಹೇಳಲೂ ಆಗದೆ ತೊಳಲಾಡುತ್ತಿದ್ದರು. ಅಚ್ಚರಿಯ ನಡೆಯೆಂಬಂತೆ ಮಹೇಶ ಸ್ನಾತಕೋತ್ತರ ಪದವಿ ಪಡೆದು ಅಪ್ಪಾ, ನಾನಂದುಕೊಂಡಂತೆ ಕಲಿಕೆ ಮಾಡಿದ್ದಾಯಿತು. ಇನ್ನೇನಿದ್ದರೂ ನಮಗೆ ತಲೆಮಾರಿನಿಂದ ಬಂದಿರುವ ಭೂಮಿತಾಯಿಯ ಸೇವೆಯೇ ನನ್ನ ಬದುಕಿನ ಗುರಿ ಎಂದು ನಿರ್ಧಾರ ಪ್ರಕಟಿಸಿದಾಗ ಅವರಿಗೆ ಸ್ವರ್ಗಕ್ಕೆ ಮೂರೇಗೇಣು ಎಂಬಂತಾಗಿತ್ತು. ಅವನಿಗೊಬ್ಬ ಬಾಳಸಂಗಾತಿಯನ್ನು ತಂದು ಮದುವೆ ಮಾಡಿಬಿಟ್ಟರೆ ಅವನ ಬದುಕು ಕಟ್ಟಿಕೊಟ್ಟಂತಾಯಿತು ಎಂದು ಸೂಕ್ತ ಸಂಬಂಧದ ಹುಡುಕಾಟ ನಡೆಸಿದ್ದರು.

ಆ ಹೊತ್ತಿಗೆ ಸುಬ್ಬಣ್ಣನು ಎಸ್.ಎಸ್.ಎಲ್.ಸಿ., ಪಾಸಾಗಿದ್ದ. ಅಲ್ಲದೆ ತನ್ನ ವಿದ್ಯಾಭ್ಯಾಸ ಮಾಡುತ್ತಲೇ ತನ್ನ ತಾಯಿಗೆ ಮತ್ತು ಆಶ್ರಯ ನೀಡಿದ್ದ ಮನೆಯ ಜಮೀನಿನ ಕೆಲಸಗಳಿಗೂ ಕೈಹಾಕುತ್ತಿದ್ದ. ವ್ಯವಸಾಯಗಾರರ ಕುಟುಂಬವಾದ್ದರಿಂದ ಅಲ್ಲಿನ ಎಲ್ಲ ಆಗುಹೋಗುಗಳನ್ನು ನಿಭಾಯಿಸುತ್ತ ಸುಬ್ಬಣ್ಣನೆಂದರೆ ಎಂಥ ಕೆಲಸಕ್ಕೂ ಸೈ ಎನ್ನುವಷ್ಟರ ಮಟ್ಟಿಗೆ ಆತ್ಮೀಯನಾಗಿದ್ದ. ಗಂಗಾಧರಪ್ಪನವರು ಅವನನ್ನು ಕಾಲೇಜಿಗೆ ಸೇರಿಸುತ್ತೇನೆ ಮುಂದಕ್ಕೆ ಓದು ಎಂದಾಗ, ಬೇಡಿ ನನಗಿಷ್ಟೇ ಸಾಕು, ಜಮೀನಿನ ಕೆಲಸ ನನಗೆ ಇಷ್ಟ, ಅದರಲ್ಲೇ ಮುಂದುವರೆಯುತ್ತೇನೆಂದು ಹೇಳಿದ. ಅವನ ಮಾತು ಕೇಳಿದ ಗಂಗಾಧರಪ್ಪನವರಿಗೆ ಹಾಲು ಕುಡಿದಷ್ಟು ಸಂತೋಷವಾಯ್ತು. ತಮ್ಮ ಪತ್ನಿಗೆ ನೋಡು ಗೌರಾ, ನಿನ್ನ ಮಾತು ಕೇಳಿ ಅವರನ್ನು ಇಲ್ಲಿಗೆ ಕರೆತಂದದ್ದು ಒಳ್ಳೆಯದೇ ಆಯಿತು. ಅವರುಗಳಿಗೆ ಆಶ್ರಯ ಕೊಟ್ಟದ್ದಕ್ಕೂ ಸಾರ್ಥಕವಾಯಿತು. ಒಂಟಿ ಎತ್ತಿನಂತಿರುವ ನಮ್ಮ ಮಹೇಶನಿಗೆ ಜೋಡಿಯಾಯಿತು ಎಂದು ತಮ್ಮ ಸಂತಸವನ್ನು ಪತ್ನಿಯೊಡನೆ ಹಂಚಿಕೊಂಡರು.

”ಹೌದು..ರೀ, ಮಹೇಶನ ಮದುವೆಯಾದ ಮೇಲೆ ಇವನಿಗೂ ಒಂದು ಹೆಣ್ಣು ತಂದು ಅವನಿಗೂ ಬದುಕು ನೇರ್ಪು ಮಾಡಿಕೊಡೋಣ” ಎಂದರು ಗೌರಮ್ಮ.

ಗಂಡಹೆಂqತಿಯರ ಯೋಚನೆ ಒಂದುತೆರನದ್ದಾದರೆ, ಅವರ ಮಗ ಮಹೇಶನ ಯೋಜನೆ ಬೇರೆಯದಾಗಿತ್ತು. ತಾನು ಓದಿ ತಿಳಿದದ್ದನ್ನು ತನ್ನ ಜಮೀನಿನಲ್ಲಿ ಸದುಪಯೋಗಮಾಡಿ ಒಳ್ಳೆಯ ಫಲಿತಾಂಶ ಪಡೆಯಬೇಕೆಂಬ ಹಂಬಲದಿಂದ ಹಂತ ಹಂತವಾಗಿ ವ್ಯವಸಾಯದಲ್ಲಿ ಸುಧಾರಣೆಗಳನ್ನು ತಂದನು. ಭೂಮಿಯನ್ನು ಉಳುಮೆಮಾಡಲು, ಬಿತ್ತನೆಗೆ, ಕೊಯ್ಲಿಗೆ, ಒಕ್ಕಣೆಮಾಡಲು ಅಧುನಿಕ ಯಂತ್ರಗಳನ್ನು ತರಿಸಿ ಆಳುಮಕ್ಕಳಿಗೆ ಅವುಗಳ ಉಪಯೋಗದ ವಿಧಾನಗಳನ್ನು ಕಲಿಸಿಕೊಟ್ಟನು. ಬಹಳ ವರ್ಷಗಳಿಂದ ಏತನೀರಾವರಿಗೆ ಉಪಯೋಗ ಮಾಡುತ್ತಿದ್ದ ಕಲ್ಯಾಣಿಗೆ ಪಂಪುಸೆಟ್ಟು, ತೋಟಕ್ಕೆಂದೇ ಬೇರೆ ಕೊಳವೆಬಾವಿ ತೆಗೆಸಿ ಅದಕ್ಕು ಪಂಪು ಅಳವಡಿಸಿದ್ದ. ನೀರನ್ನು ವ್ಯರ್ಥವಾಗದಂತೆ ತುಂತರು ನೀರಾವರಿ ಪದ್ಧತಿಯಂತೆ ಸಣ್ಣ ಸಣ್ಣ ನಳಿಕೆಗಳ ಮೂಲಕ ಸಸಿಗಳ ಬುಡಕ್ಕೆ ನೀರನ್ನು ಹನಿಸುವಂತೆ ಸುಧಾರಣೆ ಮಾಡಿದ. ಹೀಗೇ ಒಂದೊಂದು ಹೊಸ ಉತ್ತಮ ವ್ಯವಸ್ಥೆಗಳನ್ನು ಮಾಡಲಾರಂಭಿಸಿದ.

ಒತ್ತೊತ್ತಾಗಿ ಕ್ರಮವಿಲ್ಲದಂತೆ ಬೆಳೆದು ನಿಂತಿದ್ದ ತೋಟದ ಬೆಳೆಗಳನ್ನು ಒಂದು ಹದಕ್ಕೆ ತಂದ. ಕಳೆ, ಕಸಕಡ್ಡಿಗಳ ವಿಲೇವಾರಿ ಕ್ರಮಬದ್ಧವಾಗಿತ್ತು. ಗಿಡಗಳಿಗೆ, ಬೆಳೆಗಳಿಗೆ ಮನೆಯಲ್ಲೇ ತಯಾರಿಸಿದ ಔಷಧಿಗಳ ಸಿಂಪಡಣೆ, ಉತ್ತಮ ಜಾತಿಯ ಹಣ್ಣಿನ ಬೀಜಗಳನ್ನು ತರಿಸಿ ನೆಡಿಸಿದನಂತರ ಸಸಿಗಳು ಬೆಳೆದಮೇಲೆ ಅವುಗಳಿಗೆ ಕಸಿಮಾಡುವ ವ್ಯವಸ್ಥೆ ಮಾಡಿ ಉತ್ತಮೀಕರಿಸಿದ ಸಸಿಗಳ ಮಾರಾಟ ಮಾಡಲು ತೊಡಗಿದ. ತೋಟದಲ್ಲೇ ಕಾಂಪೋಸ್ಟ್ ಮತ್ತು ಎರೆಹುಳು ಗೊಬ್ಬರ ತಯಾರಿಕೆಗಾಗಿ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಿದ. ಹಿಂದಿನಿಂದ ನಡೆದು ಬಂದಂತೆ ಒಂದೇ ರೀತಿಯ ಬೆಳೆಗಳನ್ನು ಬೆಳೆಯುವ ಬದಲು ಋತುಮಾನಕ್ಕೆ ತಕ್ಕಂತೆ ಬೇರೆಬೇರೆ ಬೆಳೆಗಳನ್ನು ಬೆಳೆಯಲಾರಂಭಿಸಿದ. ಅದುವರೆಗೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಉತ್ಪತ್ತಿ ಮಾಡುತ್ತಿದ್ದ ಹೂ, ತರಕಾರಿಗಳಿಗಾಗಿ ಹೊಲದಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ಅವು ಹೆಚ್ಚಾಗಿ ಉತ್ಪತ್ತಿ ಆಗುವಂತೆ ಕ್ರಮ ಕೈಗೊಂಡಿದ್ದ. ಹೊಸದಾಗಿ ರೇಷ್ಮೆ ಸೊಪ್ಪು ಬೆಳೆಯಲು ಸಾಲುಗಳನ್ನು ಗೊತ್ತುಮಾಡಿದ. ಜೊತೆಗೆ ಪಶುಗಳ ಪಾಲನೆ ಮಾಡಲು ಪ್ರಾರಂಭಿಸಿದ. ಇದರಿಂದ ದೊರಕುವ ಹಾಲು ಮತ್ತು ಉತ್ಪತ್ತಿಯಾಗುವ ಗೊಬ್ಬರಗಳಿಂದಲೂ ಲಾಭ ಮಾಡಬಹುದೆಂದು ತೋರಿದ.

ಇವನ ಹೊಸದಾದ ಸುಧಾರಿತ ವ್ಯವಸಾಯ ಪದ್ಧತಿಯಿಂದ ಪ್ರಭಾವಿತರಾಗಿ ಗ್ರಾಮದ ರೈತರು ಇವನ ಬಳಿಗೆ ಸಲಹೆ ಸೂಚನೆ ಪಡೆಯಲು ಬರುತ್ತಿದ್ದರು. ಇವರ ಕುಟುಂಬದ ಆಪ್ತರಾದ ನೀಲಕಂಠಪ್ಪನವರೂ ಇದಕ್ಕೆ ಹೊರತಾಗಲಿಲ್ಲ. ಎಲ್ಲರ ಜೊತೆ ಸಮಾಲೋಚಿಸುವುದಲ್ಲದೆ ಆಗಿಂದಾಗ್ಗೆ ಆಗಮಿಸುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದ ಮಹೇಶ. ತಮ್ಮ ತಂದೆಯ ಕಾಲಕ್ಕಿಂತ ಅಧಿಕವಾದ ಉತ್ಪನ್ನಗಳನ್ನು ಬೆಳೆಯುವಂತೆ ಮಾಡಿದ್ದ ಮಹೇಶನಿಗೆ ಕಂಕಣಭಾಗ್ಯ ಇನ್ನೂ ಒದಗಿ ಬಂದಿರಲಿಲ್ಲ. ಈ ಸಂಗತಿ ಗಂಗಾಧರಪ್ಪನವರಿಗೆ ನುಂಗಲಾರದ ತುತ್ತಾಯಿತು.

ಈಗವರದ್ದು ಸುತ್ತಮುತ್ತ ಹತ್ತಾರು ಹಳ್ಳಿಗಳಲ್ಲಿ ಎದ್ದುಕಾಣುವಂತಹ ಕುಟುಂಬ. ಒಬ್ಬನೇ ಮಗ, ವಿದ್ಯಾವಂತ, ರೂಪವಂತ, ಗುಣವಂತ, ಹೀಗಿದ್ದಾಗ ಯಾರೇ ಆದರೂ ಕುಣಿಯುತ್ತ ಅವನೊಡನೆ ಸಂಬಂಧ ಬೆಳೆಸಲು ಮುಂದಾಗುತ್ತಾರೆ ಎಂದು ಭಾವಿಸಿದ್ದ ಗಂಗಾಧರಪ್ಪನವರಿಗೆ ಹಾಗಾಗದಿದ್ದುದು ಬಹಳ ಸೋಜಿಗದ ಸಂಗತಿಯಾಗಿತ್ತು. ”ವ್ಯವಸಾಯ ಮನೆಮಂದಿ ಸಾಯ” ಎಂಬ ಹಳ್ಳಿಯ ಒರಟು ಗಾದೆಯಂತೆ ಬಹುತೇಕ ಜನರು ವ್ಯವಸಾಯಗಾರ ಕುಟುಂಬಕ್ಕೆ ತಮ್ಮ ಮಗಳನ್ನು ಕೊಡಲು ಹಿಂಜರಿಯುತ್ತಾರೆಂದು , ಬದಲಿಗೆ ಪೇಟೆಯಲ್ಲಿ ನೌಕರಿ ಮಾಡುವವರಿಗೆ ಕೊಡಲು ಹೆಚ್ಚಿನ ಒಲವು ತೋರುತ್ತಾರೆಂಬ ಅಭಿಪ್ರಾಯ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಡವರು ಬಲ್ಲಿದರೆಂಬ ಭೇದಭಾವ ನೋಡದೆ ಎಡತಾಕಿದರೂ ಏನೂ ಪ್ರಯೋಜನವಾಗಲಿಲ್ಲ. ಇದರಿಂದ ಕಂಗಾಲಾದ ಗಂಗಾಧರಪ್ಪನವರ ನೆರವಿಗೆ ಧಾವಿಸಿದವರು ಮಿತ್ರರಾದ ನೀಲಕಂಠಪ್ಪನವರು.

ಒಂದುದಿನ ಹೀಗೇ ತಾವೇ ಕಟ್ಟಿಸಿದ್ದ ಶಿವಾಲಯದ ಕಟ್ಟೆಯಮೇಲೆ ಕುಳಿತು ಲೋಕಾಭಿರಾಮವಾಗಿ ಚರ್ಚಿಸುತ್ತಿದ್ದಾಗ ಪಕ್ಕದಲ್ಲೇ ಕಾಣುತ್ತಿದ್ದ ಹೊಲದಲ್ಲಿ ಮಹೇಶ, ಮಾದೇವಿ ಒಬ್ಬರಿನ್ನೊಬ್ಬರನ್ನು ಛೇಡಿಸುತ್ತಾ ನಗೆಯಾಡುತ್ತಾ ನಡೆದು ಬರುತ್ತಿರುವುದು ಕಣ್ಣಿಗೆ ಬಿತ್ತು. ಆಗ ಗಂಗಾಧರಪ್ಪ ”ನಾನು ನೋಡಿದರೆ ಮಗನಿಗೆ ಮದುವೆಯಾಗುತ್ತಿಲ್ಲ ಎಂದು ಪರಿತಪಿಸುತ್ತಿದ್ದೇನೆ. ಇಲ್ಲಿ ಈ ಹೈದ ಯಾವುದೇ ಚಿಂತೆಯಿಲ್ಲದೆ ಓಡಾಡುತ್ತಿದ್ದಾನೆ. ಹಾಗೇನಾದರೂ ಕೇಳಿದರೆ ಆಗುವ ಕಾಲ ಬಂದಾಗ ತಾನೇ ಒದಗುತ್ತೆ ಬಿಡಪ್ಪಾ, ನಿಮಗೂ ಕಂಕಣಬಲ ಬಂದದ್ದು ತಡವಾಗಿಯೇ ಅಂತೆ ಅಮ್ಮ ನನಗೆ ಹೇಳಿದ್ದಳು ಎಂದು ನನಗೇ ತಿರುಗುಬಾಣ ಎಸೆಯುತ್ತಾನೆ” ಎಂದರು.

”ಹೆ ಹ್ಹೆ.. ಆ ವಿಷಯ ನನಗೇನು ಹೊಸದಾ. ಆಗಿದ್ದು ತಡವಾದ ಹಾಗೇ ಮಕ್ಕಳು ಐದುವರ್ಷಕ್ಕೊಂದು. ನಂತರ ಒಂಬತ್ತು ವರ್ಷದ ನಂತರ ಕುಲಪುತ್ರ ಹುಟ್ಟಿದ್ದು ಹಳ್ಳಿಯವರ ಬಾಯಲ್ಲಿ ಇದ್ಯಾವಸೀಮೆ ಮಕ್ಕಳನ್ನು ಹಡೆಯಾಟಾಂತ ನಗೆಯಾಡುತ್ತಿದ್ದರು. ಕೊನೆಗೆ ಗೌರಮ್ಮನವರು ನಿನಗೆ ದಮ್ಮಯ್ಯಗುಡ್ಡೆ ಹಾಕಿ ಕುಟುಂಬಯೋಜನೆ ಆಪರೇಷನ್ ಮಾಡಿಸಿಕೊಂಡು ಪಾರಾದರು ಎಂದು ನಕ್ಕರು” ನೀಲಕಂಠಪ್ಪ.

‘ಹೋ..ಹೋ..ತಡಿ ತಡಿ ನೀನ್ಯಾವ ಘನಂದಾರಿ ಕೆಲಸ ಮಾಡಿದೆಯಪ್ಪ. ವಂಶೋದ್ಧಾರಕ ಬೇಕೇಬೇಕೆಂದು ಸಾಲಾಗಿ ಸಪ್ತಮಾತೃಕೆಯರಿಗೆ ತಂದೆಯಾದೆ. ಅಬ್ಬಬಾ ! ಹಿರಿಯರು ನಿನಗೆ ಬಿಟ್ಟುಹೋದ ಗಂಟು ಭೂತಾಯಿ ಭದ್ರವಾಗಿತ್ತು. ಅವರಿಗೆಲ್ಲ ತಕ್ಕಮಟ್ಟಿಗೆ ಓದುಬರಹ ಕಲಿಸಿ ನೆಲೆ ಮಾಡಿಕೊಟ್ಟೆ. ಇಲ್ಲಂದಿದ್ರೆ ಅವರನ್ನು ದಡ ಸೇರಿಸೋ ಹೊತ್ತಿಗೆ ನಿನ್ನ ಕೈ ಖಾಲಿಯಾಗಿ ತಾಳತಂಬೂರಿ ಹಿಡೀಬೇಕಾಗಿತ್ತು” ಎಂದು ಛೇಡಿಸುತ್ತಾ ನಕ್ಕರು.

”ಹೌದು ಗಂಗೂ ಬುದ್ಧಿಗೇಡಿ ಕೆಲಸ ಮಾಡಿಕೊಂಡೆ. ನೀನು ಹೇಳಿದಂತೆ ಹಿರಿಯರ ಆಶೀರ್ವಾದ, ಆಸ್ತಿ ನನ್ನ ಕೈ ಹಿಡಿಯಿತು. ಎಲ್ಲರಿಗೂ ನೆಲೆ ಒದಗಿಸಿ, ಹೆಣ್ಣುಮಕ್ಕಳಿಗೆಲ್ಲ ಅರಿಶಿನ ಕುಂಕುಮಕ್ಕೂ ತತ್ವಾರವಾಗದಂತೆ ಕೊಟ್ಟಿದ್ದೇನೆ. ಮಗನಿಗೂ ಮೊದಲಿನಷ್ಟಲ್ಲದಿದ್ದರೂ ಬಡತನ ಬಾರದಂತೆ ನೋಡಿಕೊಂಡಿದ್ದೇನೆ. ಅವನೂ ಬುದ್ಧಿವಂತಿಕೆಯಿಂದ ಇನ್ನೂ ಹೆಚ್ಚಾಗಿಯೇ ರೂಢಿಸಿಕೊಂಡು ಘನವಾಗಿಯೇ ಬದುಕು ನಡೆಸುತ್ತಿದ್ದಾನೆ. ಆದರೇನು ಅವನಿಗೆ ಹುಟ್ಟಿದ್ದು ಒಂದೇ ಹೆಣ್ಣುಪಿಳ್ಳೆ”.

”ಅರೇ ! ಗೆಳೆಯ ನನಗೆ ಒಂದು ಆಲೋಚನೆ ಹೊಳೀತು. ಹೇಳ್ತೀನಿ ಕೇಳು, ನಾನು ನಿನಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯ, ಅನುಭವವೂ ಹೆಚ್ಚೇ.ನಿನ್ನ ಮನೆಯಲ್ಲಿ ನಿನ್ನ ಮಗನಿಗೆ, ನನ್ನ ಮನೆಯಲ್ಲಿ ನನ್ನ ಮೊಮ್ಮಗಳಿಗೆ ಜೊತೆಗಾರರು ಸಿಕ್ಕುತ್ತಿಲ್ಲ. ಮಗ ಶಂಕರ ತನ್ನ ಮಗಳ ಮದುವೆ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾನೆ. ಅದರೆ ಅವನು ಹಾಕುವ ಶರತ್ತುಗಳನ್ನು ಒಪ್ಪಿಕೊಂಡು ತಾಳಿ ಕಟ್ಟಲು ಯಾವ ಗಂಡೂ ಸಿಕ್ಕಿಲ್ಲ. ಏಕೆಂದರೆ ಅಳಿಯನಾಗುವವನು ಮನೆಯ ಅಳಿಯನಾಗಿ ಭೂತಾಯಿಯ ಸೇವೆ ಮಾಡಬೇಕು. ಅದನ್ಯಾರೂ ಒಪ್ಪಿಕೊಳ್ಳುತ್ತಿಲ್ಲ. ಅತ್ತಕಡೆ ಭೂಮಿಯ ಮಗನಾಗಿಯೇ ಬದುಕನ್ನು ನಡೆಸುತ್ತೇನೆಂದು ಹೊರಟಿರುವ ನಿನ್ನ ಮಗನಿಗೆ ಕನ್ಯೆ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ತಲೆತಲಾಂತರದಿಂದ ನಮ್ಮ ಎರಡೂ ಕುಟುಂಬಗಳು ಸ್ನೇಹ, ಹೊಂದಾಣಿಕೆ, ಪ್ರೀತಿ, ವಿಶ್ವಾಸ, ಅಕ್ಕರೆ, ಅಭಿಮಾನ, ನಂಬಿಕೆಗಳಿಂದ ಹೊಂದಿಕೊಂಡಿವೆ. ನಾವೇ ಏಕೆ ಕೊಟ್ಟುತಂದು ಬೀಗರಾಗಿಬಿಡಬಾರದು? ನೀನು ನಿಧಾನವಾಗಿ ಇದರ ಬಗ್ಗೆ ಆಲೋಚಿಸು” ಎಂದು ಸಲಹೆ ನೀಡಿದರು ನೀಲಕಂಠಪ್ಪ.

‘ಹಾ ! ನೀನೀಗ ಹೇಳುತ್ತಿದ್ದೀಯೆ, ನಮ್ಮ ಮನೆಯಲ್ಲಿ ನನ್ನ ಹೆಂಡತಿ ಈ ಮಾತನ್ನು ಅನೇಕ ಸಾರಿ ನನ್ನ ಮುಂದೆ ಹೇಳಿದ್ದಾಳೆ. ಆದರೆ ನನ್ನ ಮಗನಿಗಿಂತ ಸುಮಾರು ಹತ್ತು ವರ್ಷ ಕಿರಿಯವಳು ನಿನ್ನ ಮೊಮ್ಮಗಳು. ಮಿಗಿಲಾಗಿ ಈಗಿನ ಕಾಲದ ವಿದ್ಯಾವಂತೆ. ಪದವೀಧರಳು, ಅವಳು ಇದನ್ನು ಒಪ್ಪುವುದು ಕಷ್ಟವೆಂದು ನಾನೇ ಕೇಳಲಿಲ್ಲ ”ಎಂದು ತಮ್ಮ ಮನದೊಳಗಿನ ಶಂಕೆಯನ್ನು ಹೊರಹಾಕಿದರು ಗಂಗಾಧರಪ್ಪ.

ಗೆಳೆಯನ ನಿರಾಶೆಯ ಮಾತುಗಳನ್ನು ಕೇಳಿದ ನೀಲಕಂಠಪ್ಪ ”ಅದ್ಯಾಕೆ ಅಷ್ಟು ಮನಸ್ಸನ್ನು ಚಿಕ್ಕದು ಮಾಡುಕೊಳ್ಳುತ್ತೀ. ಮಕ್ಕಳನ್ನೇ ಒಮ್ಮೆ ಕೇಳಿಬಿಡೋಣ. ಒಪ್ಪಿದರೆ ಒಳ್ಳೆಯದು. ಇಲ್ಲದಿದ್ದರೆ ಹುಡುಕಾಟ ಮುಂದುವರಿಸೋಣ. ಒಂದು ಹೆಣ್ಣಿಗೆ ಒಂದು ಗಂಡೂಂತ ಎಲ್ಲೋ ಒಂದುಕಡೆ ಬ್ರಹ್ಮ ಸೃಷ್ಟಿ ಮಾಡೇ ಇರುತ್ತಾನೆ.ಏಳು ಕತ್ತಲಾಗುತ್ತಿದೆ. ಮನೆ ಸೇರಿಕೊಳ್ಳೋಣ” ಎಂದು ಗೆಳೆಯನನ್ನು ಎಬ್ಬಿಸಿ ಮನೆಯತ್ತ ನಡೆದರು.

ಮನೆ ತಲುಪಿದ ನೀಲಕಂಠಪ್ಪನವರಿಗೆ ಬಾಗಿಲಲ್ಲೇ ಯಾರೋ ನಿಂತಿದ್ದ ಹಾಗೆ ಕಾಣಿಸಿತು. ದಿಟ್ಟಿಸಿ ನೋಡಿದರು. ”ಅರೆ..ನನ್ನ ಹೆಂಡತಿಯೇ ! ಅದ್ಯಾಕೆ ಮನೆಯಲ್ಲಿ ಯಾರಿಗಾದರೂ ಹುಷಾರು ತಪ್ಪಿತೇ? ಅಥವಾ ಹೊಸಬರ್‍ಯಾರಾದರೂ ಮನೆಗೆ ಬಂದಿದ್ದಾರಾ?ಮತಾಡ್ತಾ ಮಾತಾಡ್ತಾ ಟೈಮೇ ಗೊತ್ತಾಗಲಿಲ್ಲ” ಎಂದುಕೊಂಡು ಬಿರುಸಾಗಿ ಮನೆಯತ್ತ ಕಾಲಾಡಿಸಿದರು.

”ಹೊತ್ತು ಎಷ್ಟಾಗಿದೆ ಗೊತ್ತೇನು? ಜಮೀನಿನಿಂದ ಕತ್ತಲಾಗೋದರ ಒಳಗೆ ಬನ್ನಿ ಅಂತ ಎಷ್ಟು ಹೇಳಿದರೂ ಕೇಳಲ್ಲ ನೀವು. ಕತ್ತಲಲ್ಲಿ ಹುಳು ಹಪ್ಪಟೆ ಓಡಾಡುತ್ತಿರುತ್ತವೆ. ಇತ್ತೀಚೆಗಂತೂ ಕಾಡುಪ್ರಾಣಿಗಳೂ ಊರಿನ ಸರಹದ್ದಿಗೆ ಬರೋಕೆ ಶುರುವಾಗಿದೆ. ಯಾಕೆಬೇಕು ಇಲ್ಲದ ತಾಪತ್ರಯ. ನೀವೇನು ಹದಿನೆಂಟು ವರ್ಷದ ಹುಡುಗಾಂತ ತಿಳಿದುಕೊಂಡಿರೇನು” ಎಂದು ಗಂಡನನ್ನು ತರಾಟೆಗೆ ತೆಗೆದುಕೊಂಡರು ಬಸಮ್ಮ.

ಒಹೋ ! ಯಾರಿಗೇನೂ ಆಗಿಲ್ಲವೆಂದು ಮನಸ್ಸು ನಿರಾಳವಾಯಿತು. ತಾನು ತಡವಾಗಿ ಮನೆಗೆ ಬಂದೆನೆಂದು ಈಕೆಯ ಆತಂಕ ಅಂದುಕೊಂಡು ತನ್ನ ಮೇಲೆ ಆಕೆಗಿರುವ ಕಾಳಜಿ ಬಗ್ಗೆ ಹೆಮ್ಮೆಯನ್ನಿಸಿತು. ಅದನ್ನು ತೋರಿಸಿಕೊಳ್ಳದೆ ”ಏ..ದಿನಾ ಬರುವಹೊತ್ತಿಗೇ ಬಂದಿದ್ದೇನೆ. ಈಗ ಕಾರ್ತಿಕಮಾಸ ಬೇಗ ಕತ್ತಲಾಗಿದೆ. ಮರೆತುಬಿಟ್ಟಿದ್ದೀಯೆ, ಎಲ್ಲಿ ಪಕ್ಕಕ್ಕೆ ಸರಿ, ಒಳಗೆ ಹೋಗಲು ಜಾಗ ಬೇಡವೇ ನಾನೇನು ಮೂರು ಚೋಟುದ್ದದ ಮನುಷ್ಯನೇ?” ಎಂದು ನಗೆ ಚಟಾಕಿ ಹಾರಿಸಿದರು ನೀಲಕಂಠಪ್ಪ.

”ಆಹಾ ! ಜಟ್ಟಿ ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂದನಂತೆ ಎನ್ನುವ ಗುಂಪಿಗೆ ಸೇರಿದವರು ನೀವು. ಏನಾದರೂ ಹೇಳಿ ನನ್ನ ಬಾಯಿ ಮುಚ್ಚಿಸಿಬಿಡುತ್ತೀರಿ ”ಎಂದು ಅವರು ಒಳಗೆ ಬರಲು ಅನುವುಮಾಡಿಕೊಟ್ಟರು ಬಸಮ್ಮ. ನಂತರ ಅವರನ್ನೇ ಹಿಂಬಾಲಿಸಿದರು. ದಿನದ ರೂಢಿಯಂತೆ ಸಂಜೆಯ ಸ್ನಾನ ಮುಗಿಸಿ ದೇವರಕೋಣೆಗೆ ಬಂದರು ನೀಲಕಂಠಪ್ಪ. ಶಿವಪೂಜೆಗೆ ಮೊಮ್ಮಗಳು ಮಾದೇವಿ ಅಣಿಮಾಡುತ್ತಿದ್ದಳು. ಅವರನ್ನು ನೋಡಿ ”ಅಜ್ಜಿಯ ಹತ್ತಿರ ಮಂಗಳಾರತಿ ಎತ್ತಿಸಿಕೊಂಡಿರಾ ತಾತ?” ಎಂದಳು. ”ಏ..ಅದೆಲ್ಲಾ ನನಗೆ ಮಾಮೂಲು ಕೂಸೇ. ನಿನ್ನಜ್ಜಿಗೆ ನನ್ನನ್ನು ಅಂದು‌ ಆಡದಿದ್ದರೆ ತಿಂದದ್ದು ಅರಗುವುದಿಲ್ಲ’ ”ಎಂದು ತಮಾಷೆ ಮಾಡಿದರು.

ತಾತನ ಮಾತಿಗೆ ಮಾದೇವಿ ನಗುತ್ತಾ ”ಅವರು ಹೇಳುವುದರಲ್ಲೂ ಅರ್ಥವಿದೆ ತಾತ. ಕಾವಲು ಕಾಯುವ ಬೈರ, ರಂಗ, ಶೀನ, ಕೆಂಚ ಎಲ್ಲರೂ ಹೇಳ್ತಾನೇ ಇರ್‍ತಾರೆ. ಇತ್ತೀಚೆಗೆ ಚಿರತೆ, ಹುಲಿ, ಒಂದೊಂದು ಸಾರಿ ಆನೆಗಳೂ ಈಕಡೆ ಬರುತ್ತಿರುತ್ತವಂತೆ. ಕಂಡರೆ ಓಡಿಬರಬೇಕಾಗುತ್ತೆ. ತೋಟದ ಮನೆಯೊಳಕ್ಕೆ ಹೋಗಬೇಕಾದರೂ ಸಮಯ ಬೇಕಲ್ಲಾ. ಪ್ರತಿದಿನವೂ ಆ ಗಂಗಾಧರಮಾವ ನೀವು ಅದೆಷ್ಟು ಮಾತಾಡ್ತಿರುತ್ತೀರಿ? ಮುಗಿಯೋದೇ ಇಲ್ಲವಾ?”ಎಂದು ಹಾಸ್ಯ ಮಾಡುತ್ತಲೇ ಅವರನ್ನು ಎಚ್ಚರಿಸಿದಳು.

”ಹುಂ..ನಾವೇನೋ ಮೊದಲಿಂದಲೂ ಗೆಳೆಯರು. ಅದು ಸರಿ, ಆದರೆ ನೀನೂ ಮಹೇಶ ದಿನಾ ತೋಟ, ಹೊಲ, ಗದ್ದೆ, ಅಂತ ಓಡಾಡಿಕೊಂಡು ಮಾತಾಡ್ತಾನೇ ಇರ್‍ತೀರಲ್ಲಾ. ಅಂತದ್ದೇನಿರುತ್ತಪ್ಪಾ ಮಾತಾಡೋದು? ಇಬ್ಬರಿಗೂ ಅವರವರ ಮನೆಗಳಲ್ಲಿ ಮದುವೆ ಮಾಡೋ ಆಲೋಚನೆಯಲ್ಲಿದ್ದೇವೆ. ಆಮೇಲೆ ಏನು ಮಾತಾಡೋಕೆ ಸಾಧ್ಯ? ಏನು ಮಾಡ್ತೀರಾ?” ಎಂದು ಕೇಳಿದರು ನೀಲಕಂಠಪ್ಪ.

”ಹೂಂ ಎರಡು ಮನೇಲೂ ಬರೀ ಓಡಾಟವೇ ನಡೀತಿದೆ. ನಾನು ಮುಂದಕ್ಕೆ ಓದ್ತೀನಿ ಅಂದರೂ ಬಿಡಲಿಲ್ಲ. ಕೆಲಸದ ಮಾತಂತೂ ದೂರವೇ. ಇನ್ನೂ ಮದುವೇನೂ ಗೊತ್ತಾಗುತ್ತಿಲ್ಲ. ಈ ಊರಲ್ಲೇ ಇದ್ದು ನಮ್ಮ ಮನೆತನ ನಡೆಸಿಕೊಂಡು ಹೋಗೊ ಭೂಪತಿ ಗಂಡು ಸಿಕ್ಕುತ್ತಿಲ್ಲ. ಚಿಕ್ಕಂದಿನಿಂದಲೂ ಗೊತ್ತಿರುವ ಗೆಳೆಯರೆಂದರೆ ಅವರೊಬ್ಬರೇ, ಹೀಗಾಗಿ ಅವರ ಹಿಂದೆಮುಂದೆ ತಿರುಗುತ್ತಾ ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುತ್ತಾ ಅದರ ಬಗ್ಗೆ ಮಾತಾಡ್ತಾ ಇರ್‍ತೇನೆ ”ಎಂದಳು ಮಾದೇವಿ.

‘ಕೂಸೇ, ಒಂದು ಉಪಾಯ ಹೇಳ್ತೀನಿ, ಹಿಂಗೆ ಮಾಡಿದ್ರೆ ಹೆಂಗೇ?’
‘ಅದೇನು ತಾತಾ?’ ‘ಕೇಳಿದಳು ಮಾದೇವಿ.
‘ನಿನ್ನ ಮಾಡಿಕೊಳ್ಳಲು ಮಹೇಶ ಒಪ್ಪಿದರೆ ನಿಮ್ಮಿಬ್ಬರಿಗೂ ಡುಂ..ಡುಂ.. ಪೀ.. ಪೀ.. ಊದಿಸಿಬಿಡೋಣ ಏನಂತೀ?’
‘ಹೋಗಿ ತಾತಾ..ಅವರೆಲ್ಲಿ ಒಪ್ತಾರೆ’ ಎಂದಳು ಮಾದೇವಿ.
‘ಅದನ್ನೆಲ್ಲ ಪಕ್ಕಕ್ಕಿಡು, ನಿನಗೆ ಅವನು ಒಪ್ಪಿಗೆಯೇ?’ ಎಂದಾಗ ಹೂ ಬಿಡಿಸುತ್ತಾ ತಟ್ಟೆಗೆ ಹಾಕುತ್ತಿದ್ದ ದೇವಿಯ ಮುಖ ನಾಚಿಕೆಯಿಂದ ಕೆಂಪಾದುದನ್ನು ಕಂಡು ನೀಲಕಂಠಪ್ಪನವರು ‘ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತಿದೆ’ ‘ಎಂದುಕೊಂಡರು.

ಹೊರಗಿನಿಂದ ”ಅದೇನು ತಾತ ಮೊಮ್ಮಗಳ ಮಧ್ಯೆ ಜುಗಲಬಂದಿ. ಮನೆಗೆ ಬಂದಿರೋದೆ ತಡವಾಗಿ. ಅದರಲ್ಲಿ ಎನು ಗುಸುಗುಸು..ಪಿಸಿಪಿಸಿ? ದೇವೀ ಪೂಜೆಗೆ ಸಿದ್ಧಪಡಿಸಿದ್ದಾಗಿದ್ರೆ ಹೊರಗೆ ಬಾರವ್ವಾ. ಇಲ್ಲಂದ್ರೆ ಶಿವಪೂಜೆ ಮುಗಿಯುವಷ್ಟರಲ್ಲಿ ಅರ್ಧರಾತ್ರಿ ಆದರೂ ಆದೀತು. ನಿನ್ನ ತಾತನಿಗೆ ಇವತ್ತೇನೋ ಆಗಿದೆ. ದಾರೀಲಿ ಬರುವಾಗ ಆ ಚಿನ್ನನ ಗಂಡಂಗಿಗೇನಾದ್ರೂ ಹೋಗಿಬಂದರೇನೋ ಅನ್ನೋ ಹಾಗೆ ” ಎಂದು ಹೇಳಿದ ಅಜ್ಜಿಯ ಖಾರವಾದ ಮಾತುಗಳನ್ನು ಕೇಳಿ ಮಾದೇವಿ ಲಗುಬಗೆಯಿಂದ ದೇವರ ಕೋಣೆಯಿಂದ ಹೊರಬಂದು ಸೀದಾ ತನ್ನ ಕೋಣೆ ಸೇರಿಕೊಂಡಳು.

ಮಂಚದ ಮೇಲಿದ್ದ ಹಾಸಿಗೆಯ ಮೇಲೆ ಉರುಳಿಕೊಂಡವಳೇ ”ತಾತ ಹೇಳಿದಂತೆ ಮಹೀ ಒಪ್ಪಿದರೆ, ಛೇ.. ಆವರೊಬ್ಬರು ಒಪ್ಪಿದರೆ ಸಾಕೇ, ಮನೆಯವರೆಲ್ಲ ಒಪ್ಪಬೇಕು. ಹಾಗಾದರೆ ಎಷ್ಟು ಛಂದ. ನಾನು ಆರಾಧಿಸುವ ಅಂತರಂಗದ ಗೆಳೆಯ ನನಗೆ ಬಾಳಸಂಗಾತಿಯಾದರೆ…. ಮೊದಲಿನಿಂದಲು ಅವಳಿಗರಿವಿಲ್ಲದಂತೆ ಅವನ ಬಗ್ಗೆ ಅನುರಾಗ ಮೂಡಿತ್ತು. ಹೇಳಲು ಹೆದರಿಕೆ. ಏಕೆಂದರೆ ಯಾರೊಬ್ಬರೂ ನಮ್ಮಿಬ್ಬರನ್ನು ಜೊತೆಯಾಗಿಸಬೇಕೆಂದು ತಮಾಷೆಗೂ ಹೇಳಿದವರಿಲ್ಲ. ಜೊತೆಗೆ ವಯಸ್ಸಿನ ಅಂತರ. ನಾನು ಅವರೊಟ್ಟಿಗೇ ತಿರುಗಾಡಿದರೂ ನನ್ನನ್ನು ಆ ದೃಷ್ಟಿಯಿಂದ ಮಹೀ ನೋಡಿದ್ದೇ ಇಲ್ಲ. ಬಾಯಿ ಮಾತಿಗಾದರೂ ಎಂದೂ ಏನನ್ನೂ ಕೇಳಿಲ್ಲ, ಹೇಳಿಲ್ಲ. ಅನುಚಿತವಾಗಿ ನಡೆದುಕೊಂಡಿಲ್ಲ. ನಾನೊಬ್ಬಳೇ ಅಂತರಂಗದಲ್ಲಿ ಆರಾಧಿಸುತ್ತಾ ಬಂದಿದ್ದೇನೆ. ಈಗಷ್ಟೆ ತಾತನ ಬಾಯಲ್ಲಿ ಈ ಮಾತು ಬಂದಿದೆ. ನೋಡೋಣ ”ಎಂದುಕೊಳ್ಳುತ್ತಿರುವಾಗಲೇ ‘ಕೂಸೆ ಊಟಕ್ಕೆ ಬಾರವ್ವಾ’ ಎಂಬ ತಾತನ ಕರೆ ಕಿವಿಗೆ ಬಿತ್ತು.

‘ಹಾ ಬಂದೆ ತಾತಾ’ ಎನ್ನುತ್ತಾ ಜಿಂಕೆಯಂತೆ ಒಂದೇ ನೆಗೆತಕ್ಕೆ ಊಟದ ಮನೆಗೆ ಬಂದಳು.
ಊಟ ಮಾಡುತ್ತಲೇ ವಿಷಯ ಪ್ರಸ್ತಾಪಿಸಿದರು ನೀಲಕಂಠಪ್ಪ. ಅದನ್ನು ಕೇಳುತ್ತಿದ್ದಂತೆ ಶಂಕರಪ್ಪ ‘ಓ ! ಇದೊಳ್ಳೆ ಐಡಿಯಾ, ನನ್ನ ಕನಸು ಮನಸ್ಸಿನಲ್ಲೂ ಈ ಯೋಚನೆ ಹೊಳೆದಿರಲಿಲ್ಲ. ಇದ್ದಕ್ಕಿದ್ದಂತೆ ನಿಮ್ಮಿಬ್ಬರಿಗೇ ಹೆಂಗೆ ಹೊಳೀತು?’ ಎಂದು ಕೇಳಿದರು.

‘ಹಾ ..ಮಗಾ ಎಲ್ಲ ದಿಕ್ಕಿನಿಂದಲೂ ಚಿಂತನೆಗೈದು ಈ ತೀರ್ಮಾನಕ್ಕೆ ಬಂದ್ವಿ. ಈಗ ನಿಮ್ಮಗಳ ಅಭಿಪ್ರಾಯವೇನು?’ ಎಂದು ಪೃಶ್ನಿಸಿದರು. ನೀಲಕಂಠಪ್ಪ.

‘ನಮ್ಮ ಮಗಳಿಗೆ ಮಹೇಶನಿಗಿಂತ ಬೇರೆ ಗಂಡು ಬೇಕೇ, ಅಲ್ಲದೆ ಆತ ನಮ್ಮಾಸೆಯಂತೆ ನಮ್ಮ ಕಣ್ಮುಂದೆ ಅವಳ ಬದುಕು, ನಮ್ಮ ನೆಲ, ಮನೆತನ ಎಲ್ಲದಕ್ಕೂ ಜೊತೆಯಾಗಿ ನಿಲ್ಲುತ್ತಾನೆ. ಅವರೊಪ್ಪಿದರೆ ನಮ್ಮ ಪುಣ್ಯ ಅಂದುಕೊಳ್ಳುತ್ತೇವೆ’ಎಂದರು ಶಂಕರಪ್ಪ ದಂಪತಿಗಳು ಒಕ್ಕೊರಲಿನಿಂದ. ಅಲ್ಲಿಯೇ ಇದ್ದ ಬಸಮ್ಮನವರು ‘ನನಗಂತೂ ಪರಮಾನ್ನ ಉಂಡಂತಾಯಿತು ಪುಟ್ಟೀ.. ನಿನಗೊಪ್ಪಿಗೆಯ? ಎಲ್ಲಿ ತಲೆಯೆತ್ತಿ ಮುಖ ತೋರಿಸು’ ಎಂದರು.

ಅಜ್ಜಿಯ ಮಾತಿಗೆ ಉತ್ತರವೀಯದೆ ತಲೆ ಬಗ್ಗಿಸಿ ಊಟ ಮಾಡುತ್ತಿದ್ದ ದೇವಿ ಮೊದಲೇ ಕೆಂಪಾಗಿದ್ದ ಮುಖವನ್ನು ಮತ್ತಷ್ಟು ಕೆಂಪಾಗಿಸಿಕೊಂಡು ”ನೀವುಗಳೆಲ್ಲಾ ಹೇಗೆ ಹೇಳುತ್ತೀರೋ ಹಾಗೇ” ಎನ್ನುವಂತೆ ಬಸವಣ್ಣ ಗುಮಕು ಹಾಕುವ ಹಾಗೆ ಗೋಣು ಅಲ್ಲಾಡಿಸಿ ಸಮ್ಮತಿ ಸೂಚಿಸಿದಳು.

ಇತ್ತಕಡೆ ಗಂಗಾಧರಪ್ಪನವರ ಮನೆಯಲ್ಲಿ ಹಿರಿಯರ್‍ಯಾರೂ ಇಲ್ಲದ್ದರಿಂದ ಅಲ್ಲಿನ ಯಜಮಾನರು ಅವರೇ. ಜೊತೆಗೆ ನೀಲಕಂಠಪ್ಪನವರಿಗಿಂತ ಆಲೋಚನೆ, ವಿಚಾರಪರತೆ, ದಾಷ್ಟಿಕತೆ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ರಾತ್ರಿ ಊಟವಾದ ಮೇಲೆ ”ಎಲ್ಲರೂ ಸ್ವಲ್ಪ ಬನ್ನಿ, ಮಾತನಾಡಬೇಕಾಗಿದೆ” ಎಂದು ಕರೆದರು.

ತನ್ನ ಗಂಡನ ಮಾತನ್ನು ಕೇಳಿದ ಗೌರಮ್ಮ ”ಇದೇನು ಇದ್ದಕ್ಕಿದ್ದಂತೆ ಏನೋ ಮಾತನಾಡಬೇಕು ಎನ್ನುತ್ತಿದ್ದಾರೆ.ಮಗನಿಗೆ ಎಲ್ಲೋ ಸಂಬಂಧ ಹುಡುಕಿದಂತೆ ಕಾಣುತ್ತಿಲ್ಲ. ಸುಬ್ಬಣ್ಣನಿಗೇನಾದರೂ..” ಹೀಗೇ ಯೋಚಿಸುತ್ತಾ ಅಡುಗೆ ಮನೆ ಕೆಲಸ ಮುಗಿಸಿ ಸುಬ್ಬಣ್ಣನ ತಾಯಿ ಮಂಗಳೆ ಜೊತೆಯಾಗಿ ಹೊರಗಿನ ಪಡಸಾಲೆಗೆ ಬಂದು ಕುಳಿತರು. ಮಗ ಮಹೇಶ , ಸುಬ್ಬಣ್ಣ ಕೂಡಿಯೇ ಅಲ್ಲಿಗೆ ಬಂದರು.
ಎಲ್ಲರೂ ಕೇಳಿಸಿಕೊಳ್ಳಿ, ”ಇವತ್ತು ನೀಲಕಂಠಪ್ಪ ಒಂದು ವಿಷಯವನ್ನು ನನ್ನ ತಲೆಯೊಳಕ್ಕೆ ಬಿಟ್ಟ. ನಾನು ನಿಮ್ಮೆಲ್ಲರ ಅಭಿಪ್ರಾಯ ಪಡೆದು ಉತ್ತರ ಹೇಳಬೇಕು. ಅದರಲ್ಲೂ ಮುಖ್ಯವಾಗಿ ಮಹೇಶನಿಗೆ ಇದನ್ನು ಹೇಳಲೇಬೇಕು” ಎಂದರು.

”ಅದೇನು ಹೇಳಿ ಅಪ್ಪಯ್ಯಾ, ಸಾಧ್ಯವಿದ್ದರೆ ನಡೆಸಿಯೇ ಬಿಡುತ್ತೇನೆ” ಎಂದ ಮಹೇಶ.
”ಇದು ಕಣ್ಮುಚ್ಚಿ ನಡೆಸಿಕೊಡೋದಲ್ಲ ಮಗಾ, ನಿನ್ನ ಮೇಲೆ ಯಾವ ಬಲವಂತದ ಒತ್ತಡ ಹೇರುತ್ತಿಲ್ಲ. ನಿಧಾನವಾಗಿ ಯೋಚಿಸಿ ತೀರ್ಮಾನಕ್ಕೆ ಬಾ” ಎಂದರು ಗಂಗಾಧರಪ್ಪ.
ಗೌರಮ್ಮನವರು ಅಸಹನೆಯಿಂದ ”ಅದೇನು ಬಿರಬರನೆ ಹೇಳಿ ಮುಗಿಸಿ, ರವೆ ಹುರಿದಂತೆ ಅತ್ತಿಂದಿತ್ತ ಆಡಿಸುತ್ತಾ ಇರಬೇಡಿ” ಎಂದರು.

”ಹೇಳ್ತೀನಿ ಕಣೆ ಮಾರಾಯ್ತಿ, ಅದ್ಯಾಕೆ ಯಾವುದಕ್ಕೋ ಹೋಲಿಸ್ತೀಯೆ” ಎಂದು ಹಾಗೇ ಒಂದೈದು ನಿಮಿಷ ಮೌನವಾಗಿದ್ದು ಆ ದಿನ ಸಂಜೆ ಗೆಳೆಯ ನೀಲಕಂಠಪ್ಪ ಹೇಳಿದ ಸಲಹೆಯ ವಿವರಗಳನ್ನು ಪೂರ್ತಿ ಯಥಾವತ್ತಾಗಿ ಹೇಳಿದರು. ”ನಿಮ್ಮನಿಮ್ಮ ಅಭಿಪ್ರಾಯಗಳನ್ನು ಚುಟುಕಾಗಿ ಹೇಳಿ. ಮಗಾ ಮಹೇಶಾ ನಿನಗೆ ಬಲವಂತವೇನಿಲ್ಲ. ನಿನ್ನಿಷ್ಟವೇ ನಮ್ಮಿಷ್ಟ. ಇದು ನಿನ್ನ ಬದುಕಿನ ಪ್ರಶ್ನೆ ” ಎಂದರು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40331
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

12 Responses

 1. Hema Mala says:

  ಕುತೂಹಲ ಮೂಡಿಸುವ ಕಾದಂಬರಿ…ಚೆನ್ನಾಗಿದೆ.

 2. ಸುಚೇತಾ says:

  ಚೆನ್ನಾಗಿದೆ.

 3. ನಯನ ಬಜಕೂಡ್ಲು says:

  ಕೃಷಿ, ಹಳ್ಳಿ ಪರಿಸರ, ತೋಟ ಗದ್ದೆ, ಎಲ್ಲವೂ ಸೊಗಸಾಗಿದೆ. ಇವೆಲ್ಲದರ ನಡುವೆ ಮಾಧವಿ, ಮಹೇಶರ ನಡುವೆ ಅನುರಾಗ ಅರಳುವುದೇ…. ಕಾದು ನೋಡಬೇಕಿದೆ. ಸುಂದರ ಕಾದಂಬರಿ.

 4. ಪ್ರಕಟಣೆಗಾಗಿ ಧನ್ಯವಾದಗಳು ಹಾಗೂ…ಕಾದಂಬರಿ ಓದಿ..ಪ್ರತಿ ಕ್ರಿಯೆನಿಡಿರುವುದಕ್ಕೆ ಮತ್ತೊಂದು ಧನ್ಯವಾದಗಳು ಗೆಳತಿ ಹೇಮಾ

 5. ಧನ್ಯವಾದಗಳು ಗೆಳತಿ ಸುಚೇತಾ

 6. Padmini Hegde says:

  ಕಾದಂಬರಿ ಚೆನ್ನಾಗಿ ಆರಂಭವಾಗಿದೆ

 7. ಧನ್ಯವಾದಗಳು ಪದ್ಮಿನಿ ಮೇಡಂ

 8. ಶಂಕರಿ ಶರ್ಮ says:

  ಹಿರಿಯ ಗೆಳೆಯರಿಬ್ಬರ ಆತ್ಮೀಯತೆ, ಉನ್ನತ ವ್ಯಾಸಂಗ ಮಾಡಿ ತನ್ನದೇ ನೆಲದಲ್ಲಿ ಸುಧಾರಿತ ಕೃಷಿ ಪ್ರಯೋಗ ನಿರತ ಮಹೇಶ, ಕಥೆಯ ಸರಳ, ಸಹಜ ನಿರೂಪಣೆ ಎಲ್ಲವೂ ಇಷ್ಟವಾದವು..ಧನ್ಯವಾದಗಳು ನಾಗರತ್ನ ಮೇಡಂ.

 9. ಪದ್ಮಾ ಆನಂದ್ says:

  ಕುತೂಹಲಕರವಾಗಿ ಮುಂದುವರೆದಿದೆ. ʼರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲನ್ನʼದಂತಾಗುವುದೇ?, ಕಾಯಬೇಕಲ್ಲಾ, ಛೆ!

 10. ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: