ವೇದನೆ ಸಂವೇದನೆಯಾದ ಸಮಯ

Share Button

ಡಾ. ಹೆಚ್ ಎನ್ ಮಂಜುರಾಜ್

ಮುಚ್ಚಿ ಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು
ಬಿಚ್ಚಿ ಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ
ಹೃದಯ ಕೇಳಲಿ ಈಗ ಬಳಿಯೆ ಕೂತು!

ಮೆಚ್ಚಿಸುವ ಹಂಗಿಲ್ಲ; ವಂಚನೆಯ ಸೋಂಕಿಲ್ಲ
ತನ್ನ ಹಮ್ಮನು ಮೆರೆಸೊ ಹಂಬಲವು ಇಲ್ಲ
ಯಾರ ಕಿಚ್ಚಿಗೆ ಯಾರೊ ಬೀಸಿದ ಕಲ್ಲಿಗೆ
ಎದೆಗೊಳವು ಕದಡುವ ಭಯವು ಇಲ್ಲ

ನಿನ್ನೊಂದಿಗಿರು ನೀನು, ಮರೆತು ಹೋಗಲಿ ಹಾಡು
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು
ಕೋಶದೊಳಗೆ ಕೂತು ಕಾಯುವ ಸಹನೆಗೆ
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು

ಕವಿ ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು
ಸ್ವರ ಸಂಯೋಜನೆ ಮತ್ತು ಗಾಯನ : ರಾಘವೇಂದ್ರ ಬೀಜಾಡಿ, ವಾದ್ಯ ಸಂಯೋಜನೆ: ಸಮೀರ್ ರಾವ್

ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು!’ ಸತ್ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರ ಮಾತಿನ ಮೂಲಕ ಪ್ರಾರಂಭಿಸುವೆ: ನಮ್ಮನ್ನು ಕಾಡುವ ಭಾವಗಳು ಕವಿಯ ಬಲೆಯಲ್ಲಿ ಕಲಾತ್ಮಕವಾದಾಗ, ಸುಮಧುರ ಕಂಠದಲಿ ಹಾಡಾದಾಗ ಆಗುವ ಖುಷಿ ಅಷ್ಟಿಷ್ಟಲ್ಲ! ಇದನ್ನೇ ಸಮಾನ ಮನಸ್ಕತೆ ಎನ್ನುವುದು. ಕರೆಕ್ಟಾಗಿ ಹೇಳಿದ್ರಿ ಎಂದು ಪ್ರತಿಕ್ರಿಯಿಸುವಷ್ಟು ಉನ್ಮಾದ; ಯಾರೊಂದಿಗಾದರೂ ಹಂಚಿಕೊಳ್ಳಬೇಕೆಂಬ ಆನಂದ! ಅದಕ್ಕೇ ನಾವು ಭಾವಜೀವಿಗಳು. ಯಾರೂ ಬೇಡವೆಂದುಕೊಂಡರೂ ಅದನ್ನಾದರೂ ಹೇಳಿಕೊಳ್ಳಲು ಒಬ್ಬರು ಬೇಕು; ಹೃದಯವನರ್ಥ ಮಾಡಿಕೊಂಡವರು ಮಾತ್ರ ಸಾಕು! ಎಂಬ ನಿರೀಕ್ಷೆ. ಆಗ ಸಾಹಿತ್ಯವೇ ಸಂಗಾತಿ; ಸಂಗೀತವೇ ಆತ್ಮೋನ್ನತಿ! ನೊಂದ ಮನಕೆ ಆ ಮನವೇ ಇದಿರಾಗಿ ಸಾಂತ್ವನ ಹೇಳುವ ಅಪರೂಪದ ಭಾವತನ್ಮಯತೆ ಈ ಕವಿತೆಯದು. ಜೀವಲಹರಿಗೆ ಕಿಂಚಿತ್ತೂ ಊನವಾಗದಂತೆ ಸಮರ್ಥವಾಗಿ ಅಷ್ಟೇ ಅರ್ಥವತ್ತಾಗಿ ಸಂಗೀತ ಸಂಯೋಜಿಸಿ ತಾದಾತ್ಮ್ಯದಿಂದ ಅದನ್ನು ಹಾಡು ಮಾಡಿದ ಪ್ರತಿಭಾವಂತಿಕೆ ಈ ತಂಡದ್ದು. ಇಯರ್ ಫೋನ್ ಹಾಕಿಕೊಂಡು ಮತ್ತೆ ಮತ್ತೆ ಆಲಿಸುತಾ ಕಳೆದುಕೊಂಡು ನಿಸ್ತೇಜವಾಗಿದ್ದ ಹುಮ್ಮಸ್ಸನ್ನು ಮತ್ತೆ ಮೈಗೂಡಿಸಿಕೊಳ್ಳುತಾ ಆಹ್ಲಾದಿಸುತಾ ಚೈತನ್ಯಗೊಳ್ಳುತಾ ಇರಬೇಕೆನಿಸುವಂಥದು.

ಈ ಕವಿತೆಗೆ ಸ್ವರ ಸಂಯೋಜಿಸಿ ಪ್ರತಿ ಪದಗಳ ಭಾವಾರ್ಥವನ್ನು ಎದುರು ನಿಂತು ಎದೆಗೆ ಇಳಿಸುವ ತನಕ ಹಾಡುತ್ತಲೇ ಇರುವಂತೆ ಅನಿಸುವಷ್ಟು ತೀವ್ರವಾಗಿ ಆದರೆ ಅಷ್ಟೇ ಆಪ್ಯಾಯಮಾನವಾಗಿ ಗೀತವನಾಗಿಸಿದವರು ನಾಡಿನ ಹೆಸರಾಂತ ಭಾವಗೀತಗಾಯಕ ಮತ್ತು ಸ್ವರ ಸಂಯೋಜಕ ಶ್ರೀ ರಾಘವೇಂದ್ರ ಬೀಜಾಡಿಯವರು. ಎಂದಿನಂತೆ ನಮ್ಮನು ತಮ್ಮ ರಚನೆಗಳ ಮೂಲಕ ಪರವಶಗೊಳಿಸುವ ನಿಯತ್ತು ಮತ್ತು ತಾಕತ್ತು ಇರುವ ಹಾಡಿನ ಮೋಡಿಗಾರ ಕವಿ ಶ್ರೀ ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು. ರಾಘವೇಂದ್ರರು ಹಾಗೆ ಹಾಡುತ್ತಾರೆಂದು ಇದನ್ನು ಬರೆದರೋ ಇದನ್ನು ಹೀಗೆ ಬರೆದರೆಂದು ಅವರು ಹಾಗೆ ಹಾಡಿದರೋ– ಈ ಗುಟ್ಟು ರಟ್ಟಾಗುವುದು ಬೇಡ!

ಕವಿ ಶ್ರೀ ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು

ನನ್ನ ಪ್ರಕಾರ, ಕವಿತೆಯ ಕೇಂದ್ರವೇ ನಿನ್ನೊಂದಿಗಿರು ನೀನು!’ ಎಂಬ ಮೂರನೆಯ ಸ್ಟ್ಯಾಂಜ಼ಾದಲ್ಲಿ ಬರುವ ತತ್ತ್ವಜ್ಞಾನ. ಇರುವಿಕೆಯೇ ನಿನ್ನ ಅರಿಯುವಿಕೆ (Isness is your realization) ಎಂಬ ಓಶೋ ರಜನೀಶರ ಮಾತು ಇಲ್ಲಿ ವ್ಯಾಖ್ಯಾನಗೊಂಡಂತಿದೆ. ನಾಲ್ಕು ಸಾಲುಗಳ ಮೂರು ಚರಣಗಳು ಕವನದ ವಿನ್ಯಾಸ. ಮೊದಲೆರಡು ಸಾಲು ಪಲ್ಲವಿ; ಆನಂತರದ್ದು ಅನುಪಲ್ಲವಿ. ಅನುಪಲ್ಲವಿ ಎಂದಾದರೂ ಅನ್ನಿ, ಪಲ್ಲವಿಯೇ ಮುಂದುವರಿದು ಇನ್ನೊಂದು ಪಲ್ಲವಿಯಾಗಿದೆ ಎಂದಾದರೂ ಅನ್ನಿ. ನಿಮ್ಮ ಅನುಕೂಲ. ಆದರೆ ಈ ಮೊದಲ ನಾಲ್ಕು ಸಾಲುಗಳು ಅರ್ಥವಾಗಬೇಕಾದರೆ, ಮುಂದಿನ ನಾಲ್ಕು ಸಾಲುಗಳನ್ನು ಹೃದಯಕಿಳಿಸಲೇಬೇಕು. ಇದು ಇಲ್ಲಿಯ ತಂತ್ರ. ಕೊನೆಯ ನಾಲ್ಕು ಸಾಲುಗಳು ಅದರ ಪರಿಣಾಮ! ಪ್ರತೀಕಗಳಲ್ಲಿ ಮಾತಾಡುವ ಧ್ವನಿಧಾಮ!!

ತುಂಬಾ ಸರಳವಾಗಿ ಹೇಳುವುದಾದರೆ, ಪದಕೋಶದಲ್ಲಿರುವ ಭಾವನಾಮಗಳ ಹೆಸರು ಹೇಳದೇ ಅದರ ಆಂತರ್ಯದ ಸ್ವರೂಪವನ್ನು ಧ್ವನಿಸುವುದೇ ಸೃಷ್ಟಿಶೀಲ ಕವಿತೆಯ ಗುಣ. ಅಂದರೆ ದುಗುಡ ಎಂಬ ಪದವನ್ನು ತರದೇ ದುಗುಡದ ಸ್ವರೂಪ ಮತ್ತದರ ಪರಿಣಾಮಗಳನ್ನು ನಮಗರ್ಥ ಮಾಡಿಸುವ ಸಾಮರ್ಥ್ಯ ಬರೆದ ಸಾಲುಗಳಿಗಿರಬೇಕು. ‘ನನ್ನ ಮನದಲಿ ದುಗುಡವಿದೆ’ ಎಂದರದು ವಾಚ್ಯದ ವರದಿ; ಇದನ್ನೇ ಪ್ರತೀಕಾತ್ಮಕವಾಗಿ ಹೇಳುವುದಾದರೆ: ‘ಸುಳಿ ಸುಳಿದು ಸುತ್ತುವ ಸಾಗರದಲೆಗಳ ಪಾತಾಳಗರಡಿ ಈ ಬೇಗುದಿ!’ ಸಹೃದಯರಲ್ಲಿ ಅರ್ಥದ ಹಲವು ತೆರೆಗಳೆದ್ದು ಅನೇಕಾರ್ಥವಾಗಿ ವ್ಯಾಖ್ಯಾನಗೊಳ್ಳುವ ಅವಕಾಶ ಮತ್ತು ಸಾಧ್ಯತೆಗಳು ಬರೆದ ಸಾಲುಗಳಲೇ ಇರಬೇಕು. ಇದ್ದರದು ಕವನ. ಇಲ್ಲದಿದ್ದರೆ ಜಾತ್ರೆಯ ಜವನ! ಯಾರೋ ಎಸೆದದ್ದನ್ನು ಮತ್ತೆ ಕೈಗೆತ್ತಿಕೊಂಡು ತೇರೆಡೆ ತೂರಿ, ಕೈ ಮುಗಿವ ಜೀವನ! ಈ ಹಿನ್ನೆಲೆಯಲ್ಲಿ ರವೀಂದ್ರನಾಯಕರು ತಮ್ಮದೇ ಸ್ವೋಪಜ್ಞ ಹಾದಿಯನ್ನು ಕಂಡುಕೊಂಡಿದ್ದಾರೆ. ಯಾವುದೇ ಸರ್ಕಸ್ಸು ಮಾಡದೇ ಆಯಾಚಿತವಾಗಿ ನಮಗೆ ಪರಿಚಿತವಿರುವ ಪದಗಳಲೇ ಅಡಗಿರುವ ಕವಿತೆಯ ಗುಣವನ್ನು ಸಮೃದ್ಧವಾಗಿ ಉಣಬಡಿಸುತ್ತಾರೆ. ದುಃಖ, ಬೇಸರ, ವ್ಯಸನ, ಹತಾಶೆ, ನಿರಾಶೆ, ಅಸಹಾಯಕತೆ, ಯಾಂತ್ರಿಕತೆ ಎಂಬ ಪದಗಳನ್ನೇ ತರದೇ ಅದರ ನೇತ್ಯಾತ್ಮಕ ಭಾವಗಳ ಛಾಯೆಯನ್ನು ಕಣ್ಣಮುಂದೆ ತಂದಿಡುವ ಶಕ್ತಿ ಇವರು ಬರೆವ ಸಾಲುಗಳವು. ಅಷ್ಟಕೇ ನಿಲ್ಲದೇ, ಈ ಹಿಂಸೆಯಿಂದ ಹೇಗೆ ಪಾರಾಗಬಹುದೆಂಬ ಪಕ್ವತೆಯ ಪಾಠ ಇಲ್ಲಿಯದು. ಇಂಥ ತೀಕ್ಷ್ಣವನ್ನು ಸುಕುಮಾರವಾದ ಸಾಮಾನ್ಯ ಪದಗಳಲ್ಲೇ ಕವಿಯು ಕಟ್ಟಿಕೊಟ್ಟ ರೀತಿಯೇ ಸೃಜನಶೀಲ; ಪ್ರತಿಭಾಶಾಲ! ಇದೇ ಕವಿತೆಯ ಸ್ವರೂಪ. ಗಿಡದಲ್ಲಿ ಹೂವೂ ಇದೆ; ಮುಳ್ಳೂ ಇದೆ! ನೋಡುವ ದೃಷ್ಟಿಯಲ್ಲಿ ಸಕಾರಾತ್ಮಕ ಆಯ್ಕೆ ಇಲ್ಲದಿದ್ದರೆ ಗೋಳು ತಪ್ಪಿದ್ದಲ್ಲ! ಏಕೆಂದರೆ ಲೋಕವೇ ಹೀಗೆ; ಎಲ್ಲ ಕಾಲದಲ್ಲೂ ಹಾಗೆ. ನಮ್ಮನ್ನು ಅರ್ಥ ಮಾಡಿಕೊಳ್ಳುವವರನ್ನು ಹುಡುಕಿಕೊಂಡು ಅಂಡಲೆಯುವುದೇ ವ್ಯರ್ಥ. ನಮ್ಮನು ಅರ್ಥ ಮಾಡಿಕೊಂಡವರಿಗೆ ಅದರ ಅಗತ್ಯವಿಲ್ಲ; ಅರ್ಥ ಮಾಡಿಕೊಳ್ಳದವರಿಗೂ ಅರ್ಥೈಸುವ ಅಗತ್ಯವಿಲ್ಲ! ಬದುಕು ತುಂಬಾ ಸರಳ; ಅರಿತವರು ವಿರಳ. ಮೊದಲು ನನ್ನನ್ನು ನಾನು ಅರಿವ ಹಾದಿಯಲ್ಲಿ ಸಂಚರಿಸಬೇಕು; ಅದೂ ಒಬ್ಬನೇ! ಕೊನೆಯವರೆಗೂ ನನ್ನೊಂದಿಗಿರುವವನು ನಾನು ಮಾತ್ರ. ನಟ್ಟಿರುಳಿನಲ್ಲಿ ನಮ್ಮ ನೆರಳೂ ಮಾಯವಾಗುವ ಈ ಭಯಾನಕ ಭವಲೋಕದಲ್ಲಿ ಬದುಕನ್ನು ಅರಿಯುವುದೆಂದರೆ ನನ್ನನ್ನು ನಾನು ಅರಿಯುವುದು; ನನ್ನೊಂದಿಗೆ ನಾನಿರುವುದು! ಕಾವ್ಯದ ಕೆಲಸವೇ ಇದು. ಸಮಾಧಾನ ಮತ್ತು ಸಾಂತ್ವನ. ಅದಕ್ಕೇ ಇದನ್ನು ಕಾಂತಾ ಸಮ್ಮಿತ ಎನ್ನುವುದು. ಬುದ್ಧಿ ಹೇಳುತ್ತದೆ, ಸುದ್ದಿ ಮಾಡದೇ! ಕವೀಂದ್ರ ರವೀಂದ್ರರು ಜಗದ ಕಾವ್ಯದಾತ್ಮವನ್ನು ಗುರುತಿಸಿಕೊಂಡಿದ್ದಾರೆ; ತಮ್ಮ ಜೀವಾತ್ಮಕೆ ಬೆಸೆದುಕೊಂಡಿದ್ದಾರೆ. ಸಹೃದಯರಿಗೆ ಮೊಗೆ ಮೊಗೆದು ನೀರುಣಿಸಿ, ನೀರಡಿಕೆ ನೀಗಿಸುತ್ತಾರೆ. ಸ್ನೇಹದ ಮತ್ತು ಪ್ರೀತಿಯ ಮಾತುಗಳನ್ನೇ ಕಾವ್ಯದ ರಸಧ್ವನಿಗಳನ್ನಾಗಿಸುವಲ್ಲಿ ಇವರು ತುಳಿವ ಹಾದಿ ಅನನ್ಯ. ಎಲ್ಲಿಯೂ ಅವರ ಸಾಲುಗಳಲ್ಲಿ ಪ್ರವಚನದ ಧಾಟಿಯಿಲ್ಲ; ಉಪದೇಶದ ಅಹಮಿಕೆಯಿಲ್ಲ; ವಾಚ್ಯದ ಗುರುತಿಲ್ಲ. ಬರೀ ಸೂಚ್ಯ! ಇದೇ ಇಲ್ಲಿಯ ವೈಶಿಷ್ಟ್ಯ. ಹಾಗಾಗಿಯೇ ಅವರ ರಚನೆಗಳು ಏಕಕಾಲಕೆ ಪಂಡಿತ ಪಾಮರರಿಬ್ಬರಿಗೂ ಪ್ರಿಯ. ತೊಟ್ಟಿಲ ಮಗುವನ್ನು ಎತ್ತಿಕೊಳ್ಳುವಾಗಿನ ಹುಷಾರಿನಲ್ಲಿ ಪದಗಳನ್ನು ಎದೆಗವುಚಿ, ಕಣ್ಣಳತೆಯಲೇ ನೇವರಿಸಿ, ಒಲುಮೆಯಿಂದ ಸ್ಪರ್ಶಿಸಿ ಮುತ್ತನಾಯ್ದು ಪೋಣಿಸುವ ತೆರದಿ ನುಡಿಮಾಲೆಯಾಗಿಸುತ್ತಾರೆ. ಇದರ ಪ್ರತಿಶಬ್ದವೂ ನಮ್ಮ ಮನಸಿನ ಹದವೇ ಆಗಿ, ಕವನದೊಳಗೆ ಲೀನವಾಗಿ, ಹಾಡಿನ ಮೂಲಕ ನಮ್ಮ ಪಾಡುಗಳನು ಗುರುತಿಸಿಕೊಂಡು, ಶೋಕ ಸ್ಥಾಯಿಯಾದ ಕರುಣರಸದಲ್ಲಿ ತೋಯ್ದು ಹೋಗುತ್ತೇವೆ. ನಮ್ರತೆಯಿಂದ, ಸಹನೆಯಿಂದ, ತನ್ಮಯತೆಯಿಂದ ಬರೆದದ್ದರಿಂದ ಎಲ್ಲಿಯೂ ಋಣಾತ್ಮಕ ಕ್ರೋಧವಾಗದೇ ಸಕಾರಾತ್ಮಕ ಶಾಂತವಾಗಿ ಶಮೆಯನ್ನು ಬೋಧಿಸುತ್ತದೆ. ಇದು ಕವಿ ಮನಸಿನ ಪ್ರಬುದ್ಧತೆ ಮತ್ತು ಆರೋಗ್ಯಕರ ಮನಸ್ಥಿತಿಯ ಸಾರ್ಥಕತೆ. ಸಹಾನುಭೂತಿಯೇ ಇದರ ಅನುಭೂತಿ!

 ಮನಸಿನ ಕದವನ್ನು ಮುಚ್ಚಿದಷ್ಟೂ ಒಳಿತೇ; ಇಲ್ಲದಿದ್ದರೆ ಅದರದು ವಟವಟ. ಬಾಹ್ಯದಲಿ ಬದುಕಿದಷ್ಟೂ ಜಂಜಾಟ ಜಾಸ್ತಿ. ಬೇಗ ಮುಚ್ಚಿಬಿಡು ಎಂದು ಸಲಹಿಸುತ್ತದೆ ಕವಿತೆ. ಅಂದರೆ ಈಗಾಗಲೇ ತಡವಾಗಿದೆ; ಇನ್ನಾದರೂ ವಟಗುಟ್ಟುವಿಕೆಯನ್ನು ಇಲ್ಲವಾಗಿಸು ಎಂದು. ಜೊತೆಗೆ ಇದು ನಮ್ಮ ಕೈಯಳತೆಯಲೇ ಇದೆ! ಬಾಗಿಲನ್ನು ಭದ್ರವಾಗಿ ಹಾಕಿಕೊಳ್ಳಬೇಕು. ಜ್ಞಾನದ ಹಸಿವಿದ್ದಾಗ ಕದವ ತೆರೆದಿಡಬೇಕು; ಅದೇ ನೆಮ್ಮದಿಯ ಹಸಿವಿದ್ದಾಗ ಮುಚ್ಚಿಕೊಳ್ಳಬೇಕು! ಇದೇ ಇದರ ಸ್ವಾರಸ್ಯ. ಹಾಗೆಂದು ಹೋಗಿ ಕದವ ಮುಚ್ಚಿ ಬರೋಣವೆಂದರೆ ಕಣ್ಣಿಗೆ ಕಾಣುವ ಕದವಲ್ಲವಿದು; ಮನಸಿನದು! ಅದಕೇನು ಮಾಡಬೇಕು? ಅದಕಾಗಿ ಅಂತರ್ಯಾತ್ರೆ ಬೇಕು. ನನ್ನೊಳಗೆ ಪ್ರಯಾಣಿಸಬೇಕು! ನಾವು ಪ್ರಪಂಚ ಪರ್ಯಟನೆ ಮಾಡಲು ತೋರುವಷ್ಟು ಉತ್ಸಾಹವನು ನಮ್ಮೊಳಗಿನಾಳಕಿಳಿಯಲು ತೋರೆವು. ಇದು ಕಷ್ಟಕರ. ಹೊರಗೆ ಅಡ್ಡಾಡುವುದು ಸುಲಭ; ಏಕೆಂದರೆ ಅದು ಅಹಂಪೋಷಿತ. ಒಳಗೆ ಸಂಚರಿಸುವುದು ಅಷ್ಟು ಸುಲಭವಲ್ಲ; ಕಾರಣ, ಮನಸು ಇರಬೇಕು, ಮನಸಾಗಬೇಕು, ಸತ್ಯದರ್ಶನದ ಹಂಬಲವಿರಬೇಕು. ಇದೆಲ್ಲವನೂ ತನ್ನಂತರಾಳದಲಿ ಇಟ್ಟುಕೊಂಡಿದೆ ಕವನದ ಪಲ್ಲವಿಗಳ ಸಾಲು.

ಇಷ್ಟು ದಿನ ಸಂತೆಯಲಿ ಬೆರೆತು ಭವಿಸಿದ್ದು ಲೌಕಿಕತೆ. ಜಗತ್ತಿನಲ್ಲಿರುವವರಿಗೆಲ್ಲಾ ಅರ್ಥ ಮಾಡಿಸುವ, ಜಗತ್ತನ್ನೆಲ್ಲಾ ಅರ್ಥೈಸುವ ದುಸ್ಸಾಹಸದಿಂದ ಈಗ ಏನಾಗಿದೆ? ಜಗವನರಿಯುವ ಧಾವಂತದಲಿ ಧಾವಿಸುತ್ತಾ, ನನ್ನತನವನ್ನೇ ಕಳೆದುಕೊಂಡು, ಲೋಕ ನನ್ನನ್ನು ಒಪ್ಪುತ್ತಿಲ್ಲವೆಂದು ಯಾತನೆಯ ಮುಂದಿಟ್ಟುಕೊಂಡು ಬಿಕ್ಕುವಂತಾಗಿದೆ. ಇದು ತಪ್ಪುಗ್ರಹಿಕೆ. ತಪ್ಪು ವಿಳಾಸವನಿಟ್ಟುಕೊಂಡು ದಿಕ್ಕೆಡುವ ಭ್ರಮಿಕೆ. ತನ್ನ ತಾನರಿಯದೇ ಜಗವನರಿಯುವುದು ಮೂರ್ಖತನವಲ್ಲವೇ? ದೀಪದ ಬುಡವೇ ಕತ್ತಲು; ಹತ್ತಿ ಬೆಳೆದರೂ ಬೆತ್ತಲು! ಸಂತಸವೆಂಬುದು ಸಾಗರದ ಅಲೆಗಳಿದ್ದಂತೆ, ಬರುತ್ತವೆ; ಹೋಗುತ್ತವೆ. ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಆದರೆ ದುಃಖವೆಂಬುದು ಅದರ ಕೇಂದ್ರ ; ಪಾತಾಳದಾಳ! Pain is inevitable; but suffering is optional ಎಂದರು ಸಂಬುದ್ಧರು. ನಿನಗೊಂದು ಆಯ್ಕೆಯ ಅವಕಾಶವಿದೆ ಎಂದು ಅದರತ್ತ ಬೆರಳು ತೋರಿದರು. ನೋವು ಅನಿವಾರ್ಯ; ಸಫರಿಸುವುದು ನಿನಗೆ ಬಿಟ್ಟದ್ದು! ಹಾಗಾಗಿ, ನಿನ್ನ ಹಾದಿ ಅತ್ತ ಕಡೆ ಬೇಡ; ಗೊಳೋ ಎಂಬ ಗೋಳೇಕೆ ನಿನಗೆ; ಇತ್ತ ಬಾ; ಇಲ್ಲೊಂದು ನೆಮ್ಮದಿಯ ದಾರಿಯಿದೆ. ಇದರ ಸಾಧ್ಯತೆಯನ್ನು ಆವಿಷ್ಕರಿಸೋಣ ಎಂಬ ಮಮತೆಯ ಬಂಧುವಾಗುತ್ತದೆ ಈ ಕವಿತೆ.

ಹೇಳಬೇಕಾದುದೆಲ್ಲವೂ ಹೊರಗೆ ಉಳಿಯಲಿ; ಕೇಳಬೇಕಾದ ಹೃದಯ ಇನ್ನಾದರೂ ತೆರೆಯಲಿ. ಇಲ್ಲಿಯವರೆಗೂ ಬರೀ ಬಡಾಯಿಯ ಮಾತುಗಳಾದವು. ಅವರು ಹಂಗೆ; ಇವರು ಹಿಂಗೆ ಎಂಬಂಥ ಲೋಕವ್ಯಸನಗಳಾದವು. ಜಗವೇ ರಿಪೇರಿಗಿರುವಾಗ ನಾನೊಬ್ಬ ಎಲ್ಲವನೂ ಸರಿ ಮಾಡಿಯೇ ಬಿಡುವೆನೆಂಬ ಹುಂಬನಾಗಿದ್ದೆ. ಇದೀಗ ವಿವೇಕ ಉದಯವಾಗಿದೆ. ನಿಜವಾದ ನನ್ನ ಅಂತರಾಳದಲಿ ಹುದುಗಿರುವ ಪಿಸುಮಾತು ಅದೇ ಸತ್ಯದ ಮಾತು. ಅದನ್ನು ಬಚ್ಚಿಟ್ಟು ಬದುಕುತ್ತಿದ್ದೇನೆ. ಇನ್ನಾದರೂ ನೀನು ನಿನ್ನದೇ ಹೃದಯಕೆ ಅದನು ಕೇಳಿಸುವವನಾಗು. ಹಾಗಂತ ಅಂತರ್ಮುಖಿಯಾಗದಿರು; ಅಂತರ್ ಅಭಿಮುಖಿಯಾಗು! ನೋಡುವ ಕನ್ನಡಿಯಲಿ ನನ್ನ ಬಾಹ್ಯರೂಪವನು ಕಂಡುಂಡದ್ದು ಸಾಕು; ಒಳಗಿರುವ ಅಂತಸ್ಸಾಕ್ಷಿಯನ್ನು ಗಮನಿಸಬೇಕು.

ಹಾಗೆ ಗಮನಿಸುವುದಾದರೆ ಅದರಿಂದ ಹಲವು ಲಾಭಗಳಿವೆ; ರಿಲೀಫುಗಳಿವೆ. ರಿಲ್ಯಾಕ್ಸುಗಳಿವೆ! ಶಾಂತಿ-ನೆಮ್ಮದಿಗಳಿವೆ. ಯಾರನ್ನೋ ಸದಾ ಮೆಚ್ಚಿಸುವ ಹಂಗು ಇರದು. ಇದೊಂದು ದೊಡ್ಡ ನಾಗರಿಕ ಪಿಡುಗು. ನಮ್ಮನು ಇನ್ನೊಬ್ಬರಿಗೆ ಅರ್ಥ ಮಾಡಿಸುವ ಆತುರದಲ್ಲೇ ಆಯುಷ್ಯ ಕಳೆದು ಹೋಗುತ್ತದೆ. ನಾನು ಹೀಗೆ; ನೀವು ಹಾಗೆ! ಎಂದು ಮನವರಿಕೆ ಮಾಡಿಕೊಡುವ ಯಾವ ಅಗತ್ಯವು ಯಾರಿಗೂ ಇಲ್ಲ; ಇರಬಾರದು. ಇದು ಮನೋಬೇನೆ. ಇದರಿಂದ ವಿಕ್ಷಿಪ್ತತೆ, ಪ್ರಕ್ಷುಬ್ಧತೆ. ಯಾರೂ ನಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲ; ಅವರಿಗೆ ಬೇಕಾದುದನ್ನು ಬೇಕಷ್ಟನ್ನು ಮಾತ್ರ ನಿರೀಕ್ಷಿಸುತ್ತಿರುತ್ತಾರೆ. ಇದೆಲ್ಲವೂ ಇನ್ನು ಸಾಕು. ಹೊರಗಿನ  ಒದ್ದಾಟಕಿಂತ ಒಳಗಿನ ಹುಡುಕಾಟ ಮುಖ್ಯ. ಹೃದಯದಿಂದ ಹೃದಯಕ್ಕೆ ತಲಪುವ ಮಾತಿನಲ್ಲಿ ಥಳುಕಿಲ್ಲ. ವಂಚನೆಯ ಮುಸುಕಿಲ್ಲ. ದರ್ಪದ ಸಂಸ್ಥಾಪನೆಯಂತೂ ಇಲ್ಲವೇ ಇಲ್ಲ. ಅಹಮಿನ ನಾಗರ ಹೆಡೆಯೆತ್ತುವುದು ಇನ್ನೊಬ್ಬರನು ಕಂಡಾಗ. ನನ್ನಷ್ಟಕೆ ನಾನಿರುವಾಗ, ನನ್ನೊಂದಿಗೆ ನಾನು ಸಂವಾದಿಸುವಾಗ ಅಹಂಭಾವ ಸುಳಿಯುವುದಿಲ್ಲ. ಕಾರಣ, ಏಕಾಂತವೇ ಉಪಾಯ; ಇಲ್ಲ ಯಾರಿಂದಲೋ ಡಿಸ್ಟರ್ಬಾಗುವ ಅಪಾಯ!

ಕ್ರಿಯೆಗೆ ನೀಡುವ ಪ್ರತಿಕ್ರಿಯೆಯ ಎಲ್ಲ ಅಪಾಯಗಳನ್ನು ಮೀರುವ ಒಂದೇ ಸಾಧ್ಯತೆ: ಮೌನ, ಬರೀ ಮೌನ! ಇದು ಹೊಸತರ ಹುಟ್ಟಿಗೆ ಅವಶ್ಯ. ಎಲ್ಲ ಹುಟ್ಟುಗಳ ಗುಟ್ಟಡಗಿರುವುದೇ ಮೌನಕ್ರಾಂತಿಯಲ್ಲಿ. ನನ್ನೊಂದಿಗೆ ನಾನಿದ್ದಾಗ ನನ್ನೊಂದಿಗೆ ನಾನಷ್ಟೇ ಮಾತಾಡಿ ಕೊಳುವಾಗ ಎಲ್ಲವೂ ಸುಖಮಯ. ಇದು ಸಾಧ್ಯವಾಗುವುದು ಆತ್ಯಂತಿಕ ಸಹನೆಯಿಂದ. ಕಂಬಳಿಹುಳುವೊಂದು ತಾನೇ ರಚಿಸಿಕೊಂಡ ಕೋಶದೊಳಗೆ ಧ್ಯಾನಸ್ಥವಾಗುವುದರಿಂದಲೇ ಅದು ಮುಂದೊಂದು ದಿನ ಹಾರುವ ಚಿಟ್ಟೆಯಾಗುವುದು. ರೂಪಾಂತರವೇ ವಿಸ್ಮಯ. ಅದಕಿರುವ ದಾರಿ ತನ್ಮಯ. ಸಾಧನೆ ಸಿದ್ಧಿ ಚಿನ್ಮಯ! ಕವನವು ಹಾಡಾಗುವ ಪವಾಡವೂ ಹೀಗೆಯೇ. ಹೊಸ ಕವಿತೆಯೊಂದು ಹುಟ್ಟಿಕೊಳ್ಳುವ ಗುಟ್ಟೂ ಸಹ! ಕವಿತೆಯೆಂದರೆ ಜೀವಸೃಷ್ಟಿ; ಜೀವದ ನವೋಲ್ಲಾಸ, ನವ ವಿನ್ಯಾಸ. ರೂಪಾಂತರ ಪ್ರಕ್ರಿಯೆ. ಕವಿತೆಯೆಂದರೆ ಬಾಳುಮೆ. ತನಗೆ ನೋವಾದರೂ ಯಾರನೂ ನೋಯಿಸದ ತಪಸ್ಸಿನ ತಾಳುಮೆ! ಹಾಗಾಗಿ ಇಲ್ಲಿ ಕವಿತೆ ಬೇರಲ್ಲ; ಗೀತ ಬೇರಲ್ಲ; ಬದುಕು ಬೇರಲ್ಲ! ಇವುಗಳ ಏಕತ್ರವನ್ನು ಕವಿ ಸಾಧಿಸಿದ್ದಾರೆ. ಕವೀಂದ್ರರಿಗೆ ಸೃಷ್ಟಿ ಮತ್ತು ಸೃಷ್ಟಿಶೀಲತೆಯತ್ತ ವಿಶೇಷ ಅಕ್ಕರೆ; ಆಸ್ಥೆ! ಅವರ ಹಲವು ಕವಿತೆಗಳ ಸ್ಥಾಯೀಗುಣವಿದು; ಇದು ತಾಯಿಗುಣವೆಂದರೂ ಸರಿಯೇ! ಹೊಸತಿಗೆ ತುಡಿವ ಮತ್ತು ಮಿಡಿವ ನಿರಂತರ ಕಾತರ ಅವರ ಪ್ರತಿಭಾ ಕಾಂತಾರ. ರವಿ ಕಾಣದ್ದನ್ನು ಕವಿ ತಾನೇ ಕಾಣಬೇಕು; ಕಂಡರಿಸಬೇಕು; ಕಾಣ್ಕೆಯಾಗಿಸಬೇಕು! ಈ ವಿಚಾರದಲ್ಲಿ ಹಾಡದನಿಯ ಏರುತಗ್ಗುಗಳೇ ಕವಿತೆಯ ಅಂತರಾಳವನು ಮುಟ್ಟಿಸುತ್ತಿದೆ. ಸ್ವರ ಸಂಯೋಜನೆಯಂತೂ ಹರಿವ ನೀರಿನ ನುಣುಪಲ್ಲಿ ಕೈಯಾಡಿಸಿದಂತೆ ಹಿತವಾಗಿದೆ; ಅಬ್ಬರವಿಲ್ಲದ ಹಿನ್ನೆಲೆ ವಾದ್ಯಗೋಷ್ಠಿ ಮಿತವಾಗಿದೆ. ನಮ್ಮಷ್ಟಕೆ ನಾವು, ನಮಗಿಷ್ಟವಾದ ಲಯವು, ಒಬ್ಬರೇ ಕುಂತು ಗುನುಗಿಕೊಳ್ಳುವ ಒಲವು. ‘ಸಹನೆ ವಜ್ರದ ಕವಚ’ ಎಂಬುದೇ ಇಲ್ಲಿಯ ಬಲವು!

ಈಚೆ ದಡದಲಿ ಕುಂತು ಬರೆಯುತಿರುವ ಕವಿಯನು ಆಚೆ ದಡದಲಿ ನಿಂತು ನಿರೀಕ್ಷಿಸುತ್ತಿರುವ ಸಹೃದಯನಿಗೆ ಮುಟ್ಟಿಸುವ ಭಾವದೋಣಿಯೇ ಸಂಗೀತ. ಬರೀ ಓದಿಕೊಂಡ ಕವಿತೆ ತುಂಬ ಹೊತ್ತು ಕಾಡುವುದಿಲ್ಲ; ಆದರೆ ಹಾಡಿಕೊಂಡ ಗೀತೆ ಕಾಡದೇ ಬಿಡುವುದಿಲ್ಲ! ಇಲ್ಲಾಗಿರುವುದೂ ಇದೇ. ಈ ಹಾಡಿನ ಮಾಂತ್ರಿಕತೆಯೀಗ ಅವರದೇ ಯುಟ್ಯೂಬ್ ಚಾನೆಲ್ ಮೂಲಕ ಹತ್ತು ಲಕ್ಷ ಜನರನ್ನು ಮುಟ್ಟಿ, ಮೋಡಿ ಮಾಡಿದೆ ಎಂಬುದೇ ಕಾವ್ಯ ರಸಿಕರ ಮೆಚ್ಚುಗೆ ಮತ್ತು ನಿರಂತರ ಪ್ರೋತ್ಸಾಹದ ದ್ಯೋತಕ. ಇದನ್ನು ಪ್ರೀತಿ ಮತ್ತು ಹೆಮ್ಮೆಗಳಿಂದ ಸ್ವತಃ ಕವಿಯೇ ಹೇಳುತ್ತಾ, ಭಾವಗೀತೆಗಳ ಕಾಲ ಮುಗಿಯಿತೆನ್ನುವವರ ನಡುವೆ ಇಂಥ ಹೊಸ ಪ್ರಯತ್ನಗಳನ್ನು ನಮ್ಮ ತಂಡವು ಮಾಡುತ್ತ ಬಂದಿದೆ. ಎಲ್ಲ ಕಾಲದಲ್ಲೂ ಎಲ್ಲ ಕಲಾ ಪ್ರಕಾರಗಳಿಗೂ ಕಾಯುವ ಅದರದ್ದೇ ಆದ ಬಳಗವಿದೆ ಎಂಬ ಭರವಸೆ ಮೂಡಿದೆ ಎಂದಿದ್ದಾರೆ. ಹಾಡುಗಳನ್ನು ಜನರಿಗೆ ತಲಪಿಸುವಲ್ಲಿ ಗೆಲ್ಲುತ್ತಲೂ ಸೋಲುತ್ತಲೂ ಇರುವ ದಿನಮಾನದಲ್ಲಿ ಪ್ರಸ್ತುತ ಈ ಹಾಡು ಹುಟ್ಟಿದ್ದು ಎಂಬ ಸುಳುಹು ನೀಡಿದ್ದಾರೆ. ಬಹಳಷ್ಟು ನೊಂದ ಮನಸುಗಳಿಗೆ ಸಾಂತ್ವನ ನೀಡಿದೆ. ಏಕಾಂತದಲ್ಲಿ ಕುಳಿತು ಹೃದಯದ ಮಾತನ್ನು ಕೇಳಲು ಪ್ರೇರಿಸಿದೆ ಎಂಬುದನ್ನು ಹಾಡು ಕೇಳಿದ ಮತ್ತು ವೀಕ್ಷಿಸಿದ ಅಭಿಮಾನಿಗಳ ಕಮೆಂಟುಗಳಲ್ಲಿ ಸುವ್ಯಕ್ತವಾಗಿದೆ.

ಕವನವನು ಹಾಡಾಗಿಸುವಾಗ ಬಳಸಿದ ಚಿತ್ರೀಕರಣವನ್ನು ಕುರಿತು ಇಲ್ಲಿ ಹೇಳಲೇಬೇಕು. ಮೊದಲಿಗೆ ನೀರಹನಿ ಒಂದೊಂದೇ  ತೊಟ್ಟಿಕ್ಕುವ, ಭಾವಜಲವು ಜೀವಾಮೃತವಾಗುವ ಹರಿವನ್ನು ತೋರಿಸಿದೆ. ಹೀಗೆ ಹರಿವ, ಮೇಲಿಂದ ಸುರಿವ ದೃಶ್ಯಾವಳಿ ಮುಗಿದು ವಿಶಾಲ ಸಾಗರದ ನೀಲ ನೋಡುತ್ತ ಅದರೆದುರು ಕಲ್ಲುಬೆಂಚಿನಲಿ ಕುಳಿತ ವ್ಯಕ್ತಿಯ ಭಂಗಿ; ಇದು ಹಾಡಿನ ಕೊನೆಗೂ ಕಾಣುವ ನಿಸ್ಸಂಗಿ! ನೀರು ಮತ್ತು ಮಳೆಯನ್ನು ಅದರೆಲ್ಲ ವೈವಿಧ್ಯಮಯ ಕೋನಗಳಲ್ಲಿ ಚಿತ್ರಿಸುವುದರ ಮೂಲಕ ಗೀತೆಯ ಆಶಯವನ್ನು ಸಮರ್ಥವಾಗಿ ಸೆರೆ ಹಿಡಿದ ಯಶಸ್ಸು ಇಲ್ಲಿಯದು. ಇದಿಷ್ಟು ನನ್ನ ಮೊದಲೋದಿನ, ಪ್ರಥಮ ವೀಕ್ಷಣೆಯ ತಕ್ಷಣದ ಸಂವಹನ; ಪ್ರತಿಸ್ಪಂದನ. ಕಾಡುವ ಹಾಡನ್ನಿತ್ತ ಕವಿಗೆ, ಗಾಯಕರಿಗೆ, ಹಿನ್ನೆಲೆ ಸಂಗೀತದ ಮಾಧುರ್ಯವನುಣಿಸಿದವರಿಗೆ, ರಮ್ಯವಾಗಿ ಚಿತ್ರೀಕರಿಸಿದವರಿಗೆ ನಾಡಿನ ಎಲ್ಲ ಕೇಳುಗರ ಮತ್ತು ನೋಡುಗರ ಪರವಾಗಿ ಅಭಿನಂದನೆ ಮತ್ತು ಧನ್ಯವಾದ.

ಈ ಪ್ರಸ್ತುತಿಯನ್ನು ಕವಿ ರವೀಂದ್ರನಾಯಕ್  ಸಣ್ಣಕ್ಕಿಬೆಟ್ಟು ಅವರ ಯೂ-ಟ್ಯೂಬ್ ಚಾನೆಲ್ ನಲ್ಲಿ ಆಲಿಸಬಹುದು, ವೀಕ್ಷಿಸಬಹುದು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

7 Responses

  1. MANJURAJ says:

    ಪ್ರಕಟಿಸಿದ ಸುರಹೊನ್ನೆಗೆ ಅನಂತ ಧನ್ಯವಾದಗಳು

    ಕವಿತೆಯನಾಲಿಸಲು ಯುಟ್ಯೂಬ್ ಕೊಂಡಿ :

    https://youtu.be/1kTsvmyygGY?feature=shared

    ಮೇಲಿನ ಲಿಂಕನು ಕಾಪಿ ಮಾಡಿ ಗೂಗಲಿನಲ್ಲಿ ಪೇಸ್ಟ್ ಮಾಡಿದರೆ
    ಹಾಡು ತೆರೆಯುತ್ತದೆ…

    – ಮಂಜುರಾಜ್

  2. ಕವಿತೆಯ ವಿಶ್ಲೇಷಣೆ.. ಸೊಗಸಾಗಿ ಮೂಡಿಬಂದಿದೆ ಸಾರ್.. ಹಾಡು ಅಷ್ಟೇ ಮಧುರವಾಗಿ ಹೊರಹೊಮ್ಮಿದೆ..ವಂದನೆಗಳು.. ಸಾರ್

  3. Padma Anand says:

    ಸಂಗೀತಕ್ಕೊಂದು ಅಂದದ ಹೊಸ ನಾಮಕರಣ – ‘ಭಾವದೋಣಿ’!
    ಕವಿತೆಯ ಚಂದದ ವಿಶ್ಲೇಷಣೆಯು ಅದರ ಸಾರವನ್ನು ಎಳೆಎಳೆಯಾಗಿ ಬಿಚ್ಚಿ ಕೊಟ್ಟಿತು.

  4. ಶಂಕರಿ ಶರ್ಮ says:

    ಭಾವಪೂರ್ಣ ಕವನದ ರಚಯಿತರ ಪರಿಚಯದ ಜೊತೆಗೆ ಕವನದ ವಿಮರ್ಶಾತ್ಮಕ ಲೇಖನ ಚೆನ್ನಾಗಿದೆ.

  5. Padmini Hegde says:

    ಹಾಗೇ ಓದಿ ಭಾವಿಸುತ್ತಾ ಹೋಗುವಂತೆ ಮಾಡುವ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: