ಕಾದಂಬರಿ : ತಾಯಿ – ಪುಟ 13
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಾಗಮೋಹನದಾಸ್ ದೊಡ್ಡ ಮೊತ್ತ ವೃದ್ಧಾಶ್ರಮದ ಖರ್ಚುವೆಚ್ಚಕ್ಕಾಗಿ ಇಟ್ಟಿದ್ದರು. ಸುಮಾರು 2 ಲಕ್ಷ ಪ್ರತಿತಿಂಗಳೂ ನೀಲಕಂಠನ ಕೈಗೆ ಸಿಗುತ್ತಿತ್ತು. ನ್ಯಾಯವಾಗಿ ಖರ್ಚುಮಾಡಿದ್ದರೆ ಆ ಹಣ ವೃದ್ಧಾಶ್ರಮ ನಡೆಸಲು ಸಾಕಾಗುತ್ತಿತ್ತು. ಆದರೆ ನೀಲಕಂಠನ ದುರಾಸೆಯಿಂದ ಹಣ ಅವನ ಅಕೌಂಟ್ ಸೇರುತ್ತಿತ್ತು. ವೃದ್ಧಾಶ್ರಮದವರಿಗೆ ಹೊಟ್ಟೆ ತುಂಬಾ ಊಟ ಹಾಕದೇ, ಅವರ ಆರೋಗ್ಯಕ್ಕೆ ಗಮನಕೊಡದೆ ಎಷ್ಟು ಹಣ ಮಾಡಿಕೊಡಲು ಸಾಧ್ಯವೋ ಅಷ್ಟು ಹಣ ಮಾಡಿಕೊಂಡಿದ್ದ. ತಂಗಿ ಮದುವೆ ಗ್ರಾಂಡ್ ಆಗಿ ಮಾಡಿದ್ದ. ತಮ್ಮನನ್ನು ಇಂಜಿನಿಯರಿಂಗ್‌ಗೆ ಸೇರಿಸಿದ್ದ. ಸ್ವಂತ ಮನೆಕೊಳ್ಳಲು ಹಣ ಸೇರಿಸುತ್ತಿದ್ದ. ಒಂದು ಚಂದದ ಹುಡುಗಿಯ ಕೈ ಹಿಡಿಯಬೇಕೆಂದು ಕನಸುಕಂಡಿದ್ದ. ಇದೇ ಸಂದರ್ಭದಲ್ಲಿ ಚಿನ್ಮಯಿ ಅವನನ್ನು ಕಾಡತೊಡಗಿದ್ದಳು. ಅವಳ ಕೈ ಹಿಡಿಯಬೇಕೆಂಬ ಆಸೆ ಹುಟ್ಟಿತ್ತು. ಆದರೆ ಅವನ ಕಲ್ಯಾಣಗುಣಗಳ ಪರಿಚಯವಿದ್ದ ಗೌರಮ್ಮ ಅವನನ್ನು ಸಾರಾಸಗಟಾಗಿ ನಿರಾಕರಿಸಿದ್ದರು. ಒಬ್ಬ ಯಃಕಶ್ಚಿತ್ ಅಡಿಗೆಯವಳು ನನ್ನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ನಿರಾಕರಿಸಿದ್ದಳಲ್ಲಾ ಎಂದು ಕೋಪ ಬಂದು, ಆ ಕೋಪ ಹಠದ ರೂಪ ತಾಳಿತ್ತು. ಚಿನ್ಮಯಿಯನ್ನು ಕಿಡ್ನಾಪ್ ಮಾಡಿ ಮದುವೆಯಾಗಬೇಕೆಂದು ಅವನು ಯೋಚಿಸಿದ್ದ. ಆದರೆ ಅವಳಿಗೆ ಒಳ್ಳೆಯ ಆಶ್ರಯ ದೊರಕಿತ್ತು.
ಒಂದೂವರೆಯ ಹೊತ್ತಿಗೆ ಊಟ ಬಂತು. ಅಡಿಗೆಯವರೇ ಊಟ ಬಡಿಸಿದರು. ಬಹಳ ದಿನಗಳ ನಂತರ ಒಳ್ಳೆಯ ಊಟ ಸಿಕ್ಕಾಗ ವೃದ್ಧಾಶ್ರಮದವರು ಖುಷಿಯಿಂದ ಊಟ ಮಾಡಿದರು.
ಅಡಿಗೆಯವರಿಗೆ 5 ಗಂಟೆಯ ಹೊತ್ತಿಗೆ ಕೇಸರಿಭಾತ್, ಪಕೋಡ ಕಳಿಸಲು ಹೇಳಿ, ಆಫೀಸ್‌ರೂಂ ಸೇರಿ ಅಕೌಂಟ್ಸ್ ಬುಕ್ ತೆಗೆದ. ಸುಮಾರು 11/2 ವರ್ಷದಿಂದ ಅಕೌಂಟ್ಸ್ ಬರೆದಿರಲಿಲ್ಲ!
ಎರಡು ಗಂಟೆಗೆ ಸರಿಯಾಗಿ ಇಬ್ಬರು ಆಡಿಟರ‍್ಸ್ ಬಂದರು.
“ನನ್ನ ಹೆಸರು ದಿನೇಶ್‌ಪಂಡಿತ್. ಇವರು ನನ್ನ ಕೊಲೀಗ್ ಅಚ್ಯುತ್‌ರಾವ್. ನಾವು ನಿಮ್ಮ ಆಶ್ರಮದ ಅಕೌಂಟ್ಸ್ ನೋಡಲು ಬಂದಿದ್ದೇವೆ.”
“ಸರ್ ನಮಸ್ಕಾರ. ನೀವು ಬರುವ ವಿಚಾರ ಸಾಹೇಬರು ಹೇಳಿದ್ದರು. ನಾನು ಎರಡು ತಿಂಗಳ ಲೆಕ್ಕ ಬರೆದಿಲ್ಲ….. ನೀವು……..”
“ಡೋಂಟ್‌ವರಿ. ಇವತ್ತು 2 ತಿಂಗಳದು ಬರೆದು ನಾಳೆ ಕೊಡಿ. ನಾವು ಹಳೆಯ ಲೆಕ್ಕಗಳನ್ನು ನೋಡ್ತೀವಿ.”
ನೀಲಕಂಠ ವಿಧಿಯಿಲ್ಲದೆ ಹಳೆಯ ಕಡತಗಳನ್ನು ನೀಡಿದ. ಅವರು ಕೂಲಂಕಷವಾಗಿ ಪರಿಶೀಲಿಸಲಾರಂಭಿಸಿದರು. ಸಂದೇಹ ಬಂದಾಗ ನೀಲಕಂಠನನ್ನು ಕೇಳುತ್ತಿದ್ದರು.
“ಬಹಳಷ್ಟು ಖರ್ಚುಗಳಿಗೆ ರಸೀದಿಗಳೇ ಇಲ್ಲವಲ್ಲ ಮಿಸ್ಟರ್ ನೀಲಕಂಠ. ನೀವೇ ಲೆಕ್ಕ ಬರೀತಿದ್ದೀರೋ ಅಥವಾ ಆ ಕೆಲಸಕ್ಕೆ ಗುಮಾಸ್ತರಿದ್ದಾರೋ?”
“ನಾನೇ ಬರೆಯುತ್ತಿದ್ದೇನೆ.”
“ಅದಕ್ಕೆ ಇಷ್ಟೊಂದು ತಪ್ಪುಗಳು…..”
“ಸರ್, ನಾನು ನೇರವಾಗಿ ಮಾತಾಡ್ತಿದ್ದೀನಿ. ತಪ್ಪು ತಿಳಿಯಬೇಡಿ. ಈ ತಪ್ಪುಗಳನ್ನು ಮುಚ್ಚಿಡಲು ಎಷ್ಟು ತೊಗೋತೀರಾ ಹೇಳಿ.”
“ಎಷ್ಟು ಕೊಡ್ತೀರಾ?”
“ಇಬ್ಬರಿಗೂ ತಲಾ 2 ಲಕ್ಷ ಕೊಡ್ತೀನಿ.”
ದಿನೇಶ್ ಪಂಡಿತ್ ಜೋರಾಗಿ ನಕ್ಕರು.
“ನಾವಿಬ್ಬರೂ ಚಂದ್ರಮೋಹನ್ ಸರ್ ಹತ್ತಿರ 15 ವರ್ಷಗಳಿಂದ ಕೆಲಸ ಮಾಡ್ತಿದ್ದೇವೆ. ನಮಗೆ ನಿಮ್ಮ ಹಣದ ಅಗತ್ಯವಿಲ್ಲ. ಲಂಚ ತೆಗೆದುಕೊಂಡು ಕೇಸ್ ಮುಚ್ಚಿಹಾಕಲು ನಾವು ಸಿದ್ಧರಿಲ್ಲ. ಈ ವಿಚಾರ ನಾವು ಚಂದ್ರಮೋಹನ್ ಸರ್‌ಗೆ ಹೇಳ್ತೀನಿ.”
“ಸರ್, ದಯವಿಟ್ಟು ಹಾಗೆ ಮಾಡಬೇಡಿ.”
“ನಾವು ಹೇಳದೆ ಇದ್ರೆ ಸರ್‌ಗೆ ಮೋಸ ಮಾಡಿದ ಹಾಗಾಗತ್ತೆ. ನಮಗೆ ಅನ್ನ ಕೊಡುವ ಧಣಿಗೆ ಹೇಗೆ ಮೋಸ ಮಾಡೋದು?”
“ಕೆಲವು ದಿನಗಳು ಟೈಂ ಕೊಡಿ ಸರ್. ಲೆಕ್ಕ ಸರಿಮಾಡ್ತೀನಿ.”
“ಟೈಂ ಕೊಡಬೇಕಾಗಿರುವುದು ಸಾಹೇಬರು, ನಾವಲ್ಲ” ಎಂದರು ಅಚ್ಯುತರಾವ್.
ಐದು ಗಂಟೆಯ ಹೊತ್ತಿಗೆ ಚಂದ್ರಮೋಹನ್ ದಂಪತಿಗಳು ಬಂದರು. ಆಡಿಟರ‍್ಸ್ ನೋಡಿ ‘ಅಕೌಂಟ್ಸ್ ಸರಿಯಾಗಿದೆಯಾ?’ ಎಂದು ಕೇಳಿದರು.
“ಸರ್, ಈ ಅಕೌಂಟ್ಸ್ ತಲೆ ಬುಡ ಅರ್ಥವಾಗ್ತಿಲ್ಲ. ಹಣ ಬಂದಿರುವುದಕ್ಕೂ ಖರ್ಚಾಗಿರುವುದಕ್ಕೂ ಟ್ಯಾಲಿ ಆಗ್ತಿಲ್ಲ. ಒಂದಕ್ಕೂ ರಸೀದಿಗಳಿಲ್ಲ. ತುಂಬಾ ಕನ್‌ಪ್ಯೂಸ್ ಆಗ್ತಿದೆ.”
“ಅರ್ಥವಾಗುವ ಹಾಗೆ ಹೇಳಿ ಮಿ|| ಪಂಡಿತ್.”
“ಪ್ರತಿ ತಿಂಗಳೂ ಅಡಿಗೆಯವರ ಸಂಬಳ, ಕೆಲಸದವರ ಸಂಬಳ, ಡಾಕ್ಟರ್‌ಗೆ ಕೊಟ್ಟಿದ್ದು, ವಾಚ್‌ಮೆನ್‌ಗೆ ಕೊಟ್ಟಿದ್ದು ಅಂತ ಅಮೌಂಟ್ ಹಾಕಿದ್ದಾರೆ. ಆದರೆ ರಸೀದಿಗಳಿಲ್ಲ.”
“ಐ ಸೀ..”
“ನಿಮ್ಮ ಲೆಕ್ಕದ ಪ್ರಕಾರ ಪ್ರತಿವರ್ಷ ಡೋನರ್‌ಗಳು ಹಣ, ಬಟ್ಟೆ, ಔಷಧಿಗಳು, ಫರ್ನೀಚರ್ ಕೊಟ್ಟಿದ್ದಾರೆ ಆದರೆ ಅದರ ಲೆಕ್ಕವೇ ಇಲ್ಲ.”
“ಯಾರೇ ಡೊನೇಟ್ ಮಾಡಿದ್ರೂ ನನಗೆ ವಿಷಯ ತಿಳಿಸೇ ಡೊನೇಟ್ ಮಾಡಿರೋದು. ಅದರ ಲೆಕ್ಕ ನಮ್ಮ ಹತ್ತಿರ ಇದೆಯಲ್ಲಾ? ಈ ವಾರ 10 ಬೆತ್ತದ ಚೇರ್‌ಗಳು ಬಂದಿರಬೇಕು…. ನೀಲಕಂಠ ಎಲ್ಲಿ?”
“ಈಗ ರ‍್ತೀನಿ” ಅಂತ ಹೊರಗೆ ಹೋದರು. ಅಷ್ಟರಲ್ಲಿ ಮಾಧುರಿ ಒಳಗೆ ಹೋಗಿ ಕೆಲವು ವಿಷಯಗಳನ್ನು ವಿಚಾರಿಸಿಕೊಂಡು ಬಂದರು.
“ಅಡಿಗೆಯವರು, ಕೆಲಸದವರು, ವಾಚ್‌ಮೆನ್, ಡಾಕ್ಟರ್ – ಇವರೆಲ್ಲಾ ಮೂರು ವರ್ಷಗಳಿಂದ ಈ ಕಡೆ ಸುಳಿದಿಲ್ಲವಂತೆ. ಅವರಿಗ್ಯಾಕೆ ಸಂಬಳ ಕೊಟ್ಟಿದ್ದಾರೆ?” ಮಾಧುರಿ ಕೇಳಿದರು.
ಅಷ್ಟರಲ್ಲಿ ನೀಲಕಂಠ ಬಂದು ಎಲ್ಲರಿಗೂ ತಿಂಡಿ ತಂದುಕೊಟ್ಟ. ನಂತರ ಬಿಸಿಬಿಸಿ ಕಾಫಿ ಬಂತು.
“ನೀಲಕಂಠ, ನಿಮ್ಮ ಬಗ್ಗೆ ತುಂಬಾ ಕಂಪ್ಲೇಂಟ್ಸ್ ಬಂದಿದೆ. ಆಶ್ರಮದವರು ಹೇಳಿದ ಪ್ರಕಾರ ಅಡಿಗೆಯವರು, ಕೆಲಸದವರು, ವಾಚ್‌ಮೆನ್ ಯಾರೂ ಇಲ್ಲ. ಡಾಕ್ಟರ್ ಕೂಡ ಬರ‍್ತಿಲ್ಲ. ನಾಲ್ಕು ತಿಂಗಳ ಹಿಂದೆ ಮೈಸೂರಿನ ಚಂದನಲಾಲ್ 25 ಸೀರೆ ಕೊಟ್ಟಿದ್ದಾರೆ. ಆದರೆ ಇವರೆಲ್ಲರೂ ಹಳೇ ಸೀರೆ, ಹರಿದಿರುವ ಸೀರೆಗಳನ್ನು ಉಟ್ಟಿದ್ದಾರೆ ಕಾರಣವೇನು? ಇಲ್ಲಿ ಕೆಲಸದವರು ಇಲ್ಲದೇ ಇರುವಾಗ ಯಾರಿಗೆ ಸಂಬಳ ಕೊಡ್ತಿದ್ದೀರಾ? ಇಲ್ಲಿಯವರೆಗೆ ಸೋಪು, ಹಲ್ಲುಪುಡಿ, ಪೇಸ್ಟ್, ಕೊಬ್ಬರಿ ಎಣ್ಣೆ ಕೊಡುವುದು ನಿಲ್ಲಿಸಿದ್ದೀರ. ದಿನಕ್ಕೆ ಒಂದು ಸಲ ಕಾಫಿ ಕೊಡ್ತಿದ್ದೀರ. ಸ್ನಾನಕ್ಕೆ ಬಿಸಿನೀರು ಕೊಡ್ತಿಲ್ಲ. ಯಾಕೆ ಹೀಗೆ?” ಮಾಧುರಿ ಕೂಗಾಡಿದರು.
ನೀಲಕಂಠ ಉತ್ತರಿಸಲಿಲ್ಲ.
“ಮಾಧುರಿ ಮಾತನಾಡಿ ಪ್ರಯೋಜನವಿಲ್ಲ. ಮಿ|| ಪಂಡಿತ್ ಇವನು ಆಶ್ರಮಕ್ಕೆ ಸೇರಿದ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಅವನು ಆ ಹಣ ವಾಪಸ್ಸು ಮಾಡಬೇಕು. ಇಲ್ಲದಿದ್ದರೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ.”
ನೀಲಕಂಠ ಅವರ ಕಾಲಿಗೆ ಬಿದ್ದು ಹೇಳಿದ. “ಸರ್, ನನಗೆ ಕೊಂಚ ಟೈಂ ಕೊಡಿ. ನಾನು ಹಣ ವಾಪಸ್ಸು ಮಾಡ್ತೀನಿ. ದಯವಿಟ್ಟು ಪೋಲಿಸ್ ಕಂಪ್ಲೇಂಟ್ ಕೊಡಬೇಡಿ.”
“ಮಿ|| ಪಂಡಿತ್ ಇವನು ಎಷ್ಟು ಹಣ ವಾಪಸ್ಸು ಮಾಡಬೇಕಾಗತ್ತೆ ಹೇಳಿ. ಅವನು ಈ ತಿಂಗಳಿನ ಒಳಗೆ ವಾಪಸ್ಸು ಮಾಡಬೇಕು. ಇಲ್ಲದಿದ್ದರೆ ಕಂಪ್ಲೇಂಟ್ ಕೊಡೋಣ.”
“ಆಗಲಿ ಸರ್. ನೋಡಿ ಹೇಳ್ತೀವಿ.”
“ನಾನು ಈ ವೃದ್ಧಾಶ್ರಮ ಮುಚ್ಚುತ್ತಾ ಇದ್ದೀನಿ. ಒಂದು ತಿಂಗಳ ಒಳಗೆ ಇಲ್ಲಿಯ ವ್ಯವಹಾರವೆಲ್ಲಾ ಮುಗಿಯಬೇಕು.”
ನೀಲಕಂಠ ಕುಸಿದು ಹೋಗಿದ್ದ. ತನ್ನ ಜೀವನದಲ್ಲಿ ಇಂತಹದ್ದೊಂದು ದಿನ ಬರುತ್ತದೆಂದು ಅವನು ಎಣಿಸಿರಲಿಲ್ಲ. ಐಷಾರಾಮಿ ಜೀವನ ನಡೆಸುತ್ತಾ ಆರಾಮವಾಗಿದ್ದವನಿಗೆ ಬರಸಿಡಿಲು ಬಡಿದಂತಾಗಿತ್ತು. ಒಂದು ತಿಂಗಳಕಾಲ ಇಲ್ಲಿರುವ ಮಹಿಳೆಯರನ್ನು ಚೆನ್ನಾಗಿ ನೋಡಿಕೊಂಡರೆ ಅವದಿಂದ ತನ್ನ ಕೆಲಸ ಉಳಿಯಬಹುದು” ಎನ್ನಿಸಿತು.
ಮರುದಿನ ಮಧ್ಯಾಹ್ನ ಮಿ|| ಪಂಡಿತ್ ಚಂದ್ರಮೋಹನ್‌ಗೆ ಫೋನ್ ಮಾಡಿ ಹೇಳಿದರು. “ನಮ್ಮ ಲೆಕ್ಕಕ್ಕೆ ಸಿಕ್ಕಿರುವ ಪ್ರಕಾರ ನೀಲಕಂಠ 10-12 ಲಕ್ಷ ಕೊಡಬೇಕಾಗತ್ತೆ. ಇನ್ನು ದಾನವಾಗಿ ಬಂದಿರುವ ದವಸಧಾನ್ಯ ಬಟ್ಟೆಗಳ ಲೆಕ್ಕ ನಮಗೆ ಗೊತ್ತಿಲ್ಲ. ಸಂಬಳದ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿದ್ದಾನೆ.”
“ಆಯ್ತು. ಅವನನ್ನು ನಾನು ವಿಚಾರಿಸ್ತೇನೆ. ನೀವು ಆ ಅಕೌಂಟ್ ಬುಕ್ಸ್ಗಳನ್ನು ಆಶ್ರಮಕ್ಕೆ ತಲುಪಿಸಿ ಬೆಂಗಳೂರಿಗೆ ಹಿಂದಿರುಗಿ.”
“ಅಲ್ಲಿ ಯಾರ ಕೈಗೆ ಕೊಡೋದು ಸರ್?”
“ಪ್ರೇಮಮ್ಮನ ಕೈಗೆ ಕೊಟ್ಟು ‘ಸಾಹೇಬರಿಗೆ ತಲುಪಿಸಿ ಇನ್ನು ಯಾರಿಗೂ ಕೊಡಬೇಡಿ’ ಅಂತ ಹೇಳಿಬಿಡಿ.”
“ಆಗಲಿ ಸರ್.”
“ಇವತ್ತಿನ ಪ್ರೋಗ್ರಾಂ ಏನು?” ತಿಂಡಿ ತಿನ್ನುತ್ತಾ ಮಾಧುರಿ ಕೇಳಿದಳು. “ಗೋದಾಮಣಿ ಹೇಳಿದ ಹಾಗೇ ಒಪ್ಪಿಸೋದೇ ಸೂಕ್ತ ಅನ್ನಿಸಿದೆ.”
“ಅವರು ಏನಾದರೂ ಕಂಡಿಷನ್ಸ್ ಹಾಕಿದರೆ?”
“ಆ ಕಂಡಿಷನ್ಸ್ ಏನೂಂತ ಕೇಳೋಣ……..”
“ಆಗಲಿ. ಗೌರಮ್ಮಂಗೆ ಫೋನ್ ಮಾಡಿ ನಾವು ಬರುತ್ತಿರುವ ವಿಚಾರ ತಿಳಿಸಿಬಿಡಿ.”
ಚಂದ್ರಮೋಹನ್ ಗೌರಮ್ಮನಿಗೆ ಫೋನ್ ಮಾಡಿ “ನಾನು ನನ್ನ ಹೆಂಡತಿ ನಿಮ್ಮ ಆಶ್ರಮಕ್ಕೆ 11 ಗಂಟೆಗೆ ರ‍್ತೀವಿ. ಗೋದಾಮಣಿಯವರು ಬಿಡುವಾಗರ‍್ತಾರಾ?”
“ಬಿಡುವಾಗರ‍್ತಾರೆ, ಖಂಡಿತಾ ಬನ್ನಿ” ಎಂದರು ಗೌರಮ್ಮ. ತಕ್ಷಣ ಅವರು ಗೋದಾಮಣಿಗೆ, ರಾಜಲಕ್ಷ್ಮಿಗೆ ವಿಷಯ ತಿಳಿಸಿದರು.
ಚಂದ್ರಮೋಹನ್ ಅವರ ಪತ್ನಿ 11 ಗಂಟೆಗೆ ಸರಿಯಾಗಿ ಆಶ್ರಮದಲ್ಲಿದ್ದರು. ಪರಸ್ಪರ ಪರಿಚಯವಾದ ಮೇಲೆ ಗೋದಾಮಣಿ ತಮ್ಮ ರೂಮ್‌ನಲ್ಲೇ ಕುಳಿತು ಮಾತನಾಡಲು ಆಹ್ವಾನಿಸಿದರು.
ರಾಜಲಕ್ಷ್ಮಿ, ನಾಗಮಣಿ, ಗೋದಾಮಣಿ, ಮಧುಮತಿ, ಭುವನೇಶ್ವರಿ ಮಾತು-ಕತೆಗೆ ಕುಳಿತರು. ಗೌರಮ್ಮ ಚಂದ್ರಮೋಹನ್ ದಂಪತಿಗಳಿಗೆ ಆಶ್ರಮ ತೋರಿಸಿಕೊಂಡು ಬಂದರು.
“ಆಶ್ರಮ ತುಂಬಾ ಚೆನ್ನಾಗಿದೆ. ನೋಡಿ ತುಂಬಾ ಖುಷಿಯಾಯಿತು.”
“ಮೊದಲು ನಮ್ಮ ಆಶ್ರಮ ನೋಡಿಕೊಳ್ತಿದ್ದ ಗೋಪಾಲರಾಯರು ಕಲಿಸಿದ ಶಿಸ್ತನ್ನು, ನಿಯಮಗಳನ್ನು ನಾವು ಫಾಲೋ ಮಾಡ್ತಿದ್ದೇವಷ್ಟೆ. ಗೋಪಾಲರಾಯರು ಹೈದರಾಬಾದ್‌ಗೆ ಹೋದಮೇಲೆ ನಾವೇ ಕೆಲಸ ಹಂಚಿಕೊಂಡು ಆಶ್ರಮ ನಡೆಸ್ತಿದ್ದೇವೆ…..”
“ನಾವು ಬಂದು 3 ದಿನ ಆಯ್ತು. ನೀಲಕಂಠ ಆಶ್ರಮಾನ್ನ ಹಾಳುಮಾಡಿಬಿಟ್ಟಿದ್ದಾನೆ. ಈ ತಿಂಗಳ ನಂತರ ನಾವು ವೃದ್ಧಾಶ್ರಮ ಮುಚ್ಚುತ್ತಾ ಇದ್ದೇವೆ. ಆಲ್ಲಿರುವವರನ್ನು ನೀವು ನಿಮ್ಮ ಹೊಸ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ.”
“ನಾವು ನಮ್ಮ ವೃದ್ಧಾಶ್ರಮಕ್ಕೆ ಪ್ರತಿ ತಿಂಗಳೂ ಖರ್ಚು ಮಾಡ್ತಿದ್ದ ಹಣವನ್ನು ನಿಮಗೆ ಕೊಟ್ಟುಬಿಡ್ತೀವಿ….” ಮಾಧುರಿ ಹೇಳಿದರು.
“ಬೇಡ ಮೇಡಂ. ನನಗಿದು ಒಪ್ಪಿಗೆಯಿಲ್ಲ” ರಾಜಲಕ್ಷ್ಮಿ ಹೇಳಿದರು.
“ಯಾಕೆ?”
“ಒಂದು ಮನೆಗೆ ಒಬ್ಬರೇ ಮುಖ್ಯಸ್ಥರಿರಬೇಕು. ತುಂಬಾ ಜನ ಓನರ‍್ಸ್ ಆದರೆ ಕಷ್ಟ.”
“ನಾನು ಹಣ ಕೊಡುವುದರಿಂದ ನಿಮಗೇನು ತೊಂದರೆ?”
“ಈ ವೃದ್ಧಾಶ್ರಮದಲ್ಲಿರುವವರು ತಿಂಗಳಿಗೆ 30,000 ರೂ. ಕೊಡ್ತಿದ್ದಾರೆ. ನೀವು ಅಷ್ಟು ಕೊಡುವುದು ಸಾಧ್ಯವಿಲ್ಲ. ನೀವು ಹಣ ಕೊಡ್ತಿದ್ದೀರಾಂತ ತಿಳಿದರೆ ಆ ಆಶ್ರಮದವರು ಇಲ್ಲಿರುವವರ ಜೊತೆ ಪೈಪೋಟಿ ಮಾಡ್ತಾರೆ. ಅದಾಗಬಾರದು. ಅವರು ಉಚಿತವಾಗಿದ್ದೇವೆ ಎನ್ನುವ ಭಾವನೆ ಹೊಂದಿರಬೇಕು. ಆಗಲೇ ಅವರು ಉಳಿದವರ ಜೊತೆ ಹೊಂದಿಕೊಳ್ಳಲು ಸಾಧ್ಯ.”
“ನೀವು ಹೇಳ್ತಿರೋದು ನಿಜ. ನಾವು ನಿಮ್ಮ ಆಶ್ರಮಕ್ಕೆ ಏನಾದರೂ ವಸ್ತುಗಳನ್ನು ಕೊಡಬಹುದಾ?”
“ಖಂಡಿತಾ ಕೊಡಿ. ಬೇಡ ಅನ್ನಲ್ಲ. ಆದರೆ ಹಣ ಮಾತ್ರ ಬೇಡ.”
“ನಾವು ನಿಮ್ಮ ಆಶ್ರಮ ನೋಡಬಹುದಾ?”
“ಮೊದಲು ನಮ್ ಜೊತೆ ಊಟ ಮಾಡಿ. ಆಮೇಲೆ ನಾವ್ಯಾರಾದರೂ ಬಂದು ಆಶ್ರಮ ತೋರಿಸ್ತೇವೆ” ಎಂದರು ಗೋದಾಮಣಿ.
ಗೌರಮ್ಮ ಅವರಿಗಾಗಿ ಪೂರಿ, ಸಾಗು, ಅನ್ನ, ತಿಳಿಸಾರು, ಪಲ್ಯ ಮಾಡಿ ಮೊಸರನ್ನ ಕಲಿಸಿದ್ದರು.
“ಗೌರಮ್ಮ ಅಡಿಗೆ ತುಂಬಾ ಚೆನ್ನಾಗಿತ್ತು. ಇಂತಹ ಊಟ ಮಾಡಿ ಬಹಳ ದಿನಗಳಾಗಿದ್ದವು” ಎಂದರು ಚಂದ್ರಮೋಹನ್.
ಊಟದ ನಂತರ ಚಂದ್ರಮೋಹನ್ ಕಾರ್‌ನಲ್ಲಿ ಮಧುಮತಿ, ಗೋದಾಮಣಿ ಹೊರಟರು. ವಾಚ್‌ಮೆನ್ ಬೀಗ ತೆಗೆದು ಮನೆ ತೋರಿಸಿದ.
“ಗೋದಾಮಣಿಯವರೇ ನಾವು ಮಂಚ, ಹಾಸಿಗೆಗಳನ್ನೂ ಪ್ರತಿ ರೂಮ್‌ಗೆ, ಹಾಲ್‌ಗೆ ಫ್ಯಾನ್‌ಗಳನ್ನು ಕೊಡಬಹುದಲ್ವಾ?”
“ನಾವು ಈಗಾಗಲೇ ಹಾಸಿಗೆ, ಮಂಚ ಬುಕ್ ಮಾಡಿದ್ದೇವೆ.”
“ಚಿಂತೆಯಿಲ್ಲ. ಅದರ ಅಮೌಂಟ್ ನಾವು ಪೇ ಮಾಡ್ತೀವಿ. ಹಾಗೆ ಫ್ಯಾನ್‌ಗಳು, ಹಾಲ್‌ನಲ್ಲಿ ಹಾಕಲು ಫರ್ನೀಚರ್ ನಾನೇ ಕಳಿಸ್ತೀನಿ. ನೀವು ರಾಜಲಕ್ಷಿö್ಮಯವರಿಗೆ ಹೇಳಿ.”
“ಆಗಲಿ ಹೇಳ್ತೀವಿ.”
ಅವರುಗಳು ವಾಪಸ್ಸು ಬಂದಾಗ 4 ಗಂಟೆಯಾಗಿತ್ತು. ಗೌರಮ್ಮ ಕೊಟ್ಟ ಟೀ ಕುಡಿದು ಹೊರಟರು. ಹೊರಡುವ ಮುಂದೆ ರಾಜಲಕ್ಷಿö್ಮಗೆ “ನಾವು ಗೋದಾಮಣಿಯವರ ಬಳಿ ಕೆಲವು ವಿಚಾರಗಳನ್ನು ಹೇಳಿದ್ದೀವಿ. ದಯವಿಟ್ಟು ಒಪ್ಪಿಕೊಳ್ಳಿ. ಬೇಡ ಅನ್ನಬೇಡಿ” ಎಂದರು.
ಅವರು ತಾವು ನಡೆಸುತ್ತಿದ್ದ ಆಶ್ರಮಕ್ಕೆ ಬಂದಾಗ ನೀಲಕಂಠ ಅವರಿಗಾಗಿ ಕಾಯುತ್ತಿದ್ದರು.
“ನೀಲಕಂಠ ನಿನ್ನ ಹತ್ತಿರ ಮಾತಾಡಬೇಕು. ರೂಂಗೆ ಬಾ.”
ನೀಲಕಂಠ ಆಫೀಸ್‌ರೂಂಗೆ ಬಂದು ಅವರೆದುರು ನಿಂತುಕೊಂಡ.
ಅಷ್ಟರಲ್ಲಿ ಮಧುರಾ ಹೋಗಿ ಪ್ರೇಮಮ್ಮನ ಬಳಿ ಇದ್ದ ಅವರ ಬಳಿ ಇದ್ದ ಅಕೌಂಟ್ ಬುಕ್ಸ್ ತಂದರು.
“ನೀಲಕಂಠ ಇವತ್ತು ಇಡ್ಲಿ, ಸಾಂಬಾರು ಹೊಟ್ಟೆ ತುಂಬಾ ಕೊಟ್ಟರಂತೆ. ಬೆಳಗ್ಗೆ 6-30ಗೆ ಒಂದು ಸಲ ಕಾಫಿ, ತಿಂಡಿಯಾದ ಮೇಲೆ ಕಾಫಿ ಕೊಟ್ಟರಂತೆ. ಊಟಕ್ಕೆ ಅನ್ನ, ಸಾರು, ಸಾಂಬಾರು, ಪಲ್ಯ ಮಾಡಿಸಿದ್ದರಂತೆ. ಈಗ ಸಾಯಂಕಾಲಕ್ಕೆ ಅವಲಕ್ಕಿ ಚೂಡ, ಕಾಫಿಯಂತೆ. ರಾತ್ರಿ ಚಪಾತಿ, ಪಲ್ಯ, ಮೊಸರನ್ನವಂತೆ.”
“ಗುಡ್ ಗುಡ್”
“ಎಲ್ಲರಿಗೂ ಸೋಪು, ಕೊಬ್ಬರಿ ಎಣ್ಣೆ ಪೇಸ್ಟ್ ಕೊಟ್ಟಿದ್ದಾರಂತೆ. ಬಟ್ಟೆ ಒಗೆಯುವ ಸೋಪೂ ತಂದುಕೊಟ್ಟಿದ್ದಾರಂತೆ.”
“ಎಷ್ಟು ದಿನ ಈ ನಾಟಕ ನೀಲಕಂಠ?”
“ಹಾಗಲ್ಲ ಸರ್.”
“ಮುಚ್ಚುಬಾಯಿ. ನೀನು ನಮಗೆ 10 ಲಕ್ಷ ಕೊಡಬೇಕು. ಈಗ 5 ಲಕ್ಷ ಕೊಡು. ಒಂದನೇ ತಾರೀಕು 5 ಲಕ್ಷ ಕೊಡಬೇಕು. ಆಶ್ರಮದಲ್ಲಿರುವ ಹೆಂಗಸರಿಗೆ ತಲಾ ಎರಡೆರಡು ಸೀರೆ ತಂದುಕೊಡಬೇಕು………”
“ಸರ್… ನಾನು ಲೆಕ್ಕ ಸರಿಮಾಡ್ತೀನಿ.”
“ನೀನು ಸುಳ್ಳು ಲೆಕ್ಕ ಬರೆಯೋದು ಬೇಡ. ನಿನ್ನ ಮೇಲೆ ನಮಗೆ ನಂಬಿಕೆಯಿಲ್ಲ. ಕಣ್ಣಾರೆ ಇಲ್ಲಿಯ ಸ್ಥಿತಿ ನೋಡಿದ್ದಾಗಿದೆ. ನಿನ್ನಿಂದ ನಮಗೆ ಬರಬೇಕಾದ ಹಣ ಬರದಿದ್ದರೆ ನಾನು ಪೋಲಿಸ್ ಕಂಪ್ಲೇಂಟ್ ಕೊಡುವುದು ಖಂಡಿತಾ. ತಲೆ ತಪ್ಪಿಸಿಕೊಂಡು ಹೋದರೆ ಮಾಧ್ಯಮಗಳಲ್ಲಿ ನಿನ್ನ ಫೋಟೋಗಳು ಪ್ರಕಟವಾಗುತ್ತವೆ ಹುಷಾರ್.”
ನೀಲಕಂಠ ಉತ್ತರ ಹೇಳುವ ಸ್ಥಿತಿಯಲ್ಲೇ ಇರಲಿಲ್ಲ.
ಚಿನ್ಮಯಿ ಪರೀಕ್ಷೆಯ ಗಡಿಬಿಡಿಯಲ್ಲಿದ್ದಳು. ಅವಳು ಯಾವ ಕೆಲಸಕ್ಕೂ ಸಿಗುವಂತಿರಲಿಲ್ಲ.
ರಾಜಲಕ್ಷ್ಮಿ ಹೊಸ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ಮತ್ತೊಮ್ಮೆ ಭಾಸ್ಕರನ ಕೈಲಿ ಪಟ್ಟಿಮಾಡಿಸಿದರು. ಹಾಸಿಗೆ, ಮಂಚಗಳ ಖರ್ಚು ಚಂದ್ರಮೋಹನ್ ವಹಿಸಿಕೊಂಡಿದ್ದರಿಂದ ಹಣ ಉಳಿದಿತ್ತು.
“ಅಮ್ಮಾ ಆ ಹಣದಲ್ಲಿ ಬಣ್ಣ ಹಚ್ಚಿಸಿಬಿಡಿ. ಮುಂದಿನ ತಿಂಗಳ ಹೊತ್ತಿಗೆ ಮನೆ ಸಿದ್ಧವಾಗಬೇಕಲ್ವಾ?”
“ನೀನೇ ನಿಂತು ನಿನ್ನ ಮೇಲ್ವಿಚಾರಣೆಯಲ್ಲಿ ಎಲ್ಲವನ್ನೂ ಸಿದ್ಧಮಾಡಿಸಬೇಕು.”
“ಆಗಲಿ ಅಮ್ಮಾ, ಖಂಡಿತಾ ಮಾಡಿಕೊಡ್ತೀನಿ” ಎಂದ ಭಾಸ್ಕರ.
ನೀಲಕಂಠ ಆಶ್ರಮದವರಿಗೆ ಕುಂದುಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದ. ಆಶ್ರಮದ ಹಾಲ್‌ನಲ್ಲಿ ಟಿ.ವಿ. ತಂದು ಹಾಕಿದ. ತುಂಬಾ ನಯವಾಗಿ ಮಾತನಾಡಿಸುತ್ತಿದ್ದ. ಹೇಗೋ ಕಷ್ಟದಿಂದ 5 ಲಕ್ಷ ಹೊಂದಿಸಿ ಚಂದ್ರಮೋಹನ್‌ಗೆ ಕಳುಹಿಸಿದ್ದ. ಆದರೆ ತಿಂಗಳ ಕೊನೆಯಲ್ಲಿ ಪುನಃ 5 ಲಕ್ಷ ಕೊಡಲು ಅವನ ಬಳಿ ಹಣವಿರಲಿಲ್ಲ. ಮುಖ್ಯವಾಗಿ ಈ ವೃದ್ಧಾಶ್ರಮ ಅವನ ಕೈ ಬಿಟ್ಟು ಹೋಗುವುದು ಅವನಿಗೆ ಇಷ್ಟವಿರಲಿಲ್ಲ.
ಒಂದು ಸಾಯಂಕಾಲ ಆಶ್ರಮದವರ ಜೊತೆ ತಿಂಡಿ ತಿನ್ನುತ್ತಾ ಕೇಳಿದ. “ನಿಮ್ಮ ಕುಂದುಕೊರತೆಗಳೇನಾದರೂ ಇದ್ದರೆ ಹೇಳಿ.”
“ಚಂದ್ರಮೋಹನ್ ಸರ್ ಬಂದು ಹೋದಮೇಲೆ ಎಲ್ಲಾ ಚೆನ್ನಾಗೇ ಇದೆಯಲ್ಲಾ ನೀಲಕಂಠಪ್ಪ.”
“ನಾನು ಇನ್ನು ಮುಂದೆ ನಿಮ್ಮನ್ನೆಲ್ಲಾ ಹೀಗೆ ನೋಡಿಕೊಳ್ತೇನೆ. ದಯವಿಟ್ಟು ನೀವೆಲ್ಲಾ ಸೇರಿ ನನಗೊಂದು ಸಹಾಯ ಮಾಡಿ.”
“ಏನು ಸಹಾಯ?”
“ಈ ತಿಂಗಳ ಕೊನೆಯಲ್ಲಿ ಸಾಹೇಬರು ಬರ‍್ತಾರೆ. ನೀವು ಅವರ ಹತ್ತಿರ ನಾವು ಇಲ್ಲೇ ಇರ‍್ತೀವಿ. ವೃದ್ಧಾಶ್ರಮ ಮುಚ್ಚಬೇಡಿ. ಈಗ ವ್ಯವಸ್ಥೆಯಲ್ಲಾ ತುಂಬಾ ಚೆನ್ನಾಗಿದೆ ಅಂತ ಕೇಳಿಕೊಳ್ಳಿ.”
“ಯಾಕಪ್ಪ. ನಾವು ಖುಷಿಯಾಗಿರೋದು ನಿನಗಿಷ್ಟವಿಲ್ವಾ? ನಮ್ಮ ಕೈಯ್ಯಲ್ಲಿ ಇದನ್ನು ಹೇಳಿಸುವುದಕ್ಕೇ ನೀನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ನಾಟಕ ಆಡ್ತಿದ್ದೀಯಾಂತ ನಮಗೆ ಗೊತ್ತು. ಯಾರು ಇದಕ್ಕೆ ಒಪ್ಪಿದರೂ ನಾನು ಇದಕ್ಕೆ ಒಪ್ಪಲ್ಲ” ಪ್ರೇಮಮ್ಮ ಹೇಳಿದರು.
“ಪ್ರೇಮಕ್ಕ ನೀವೇ ಒಪ್ಪದಿದ್ರೆ ನಾವೆಲ್ಲಾ ಯಾಕೆ ಒಪ್ತೀವಿ? ನೀಲಕಂಠಪ್ಪ ನೀವೀಗ ನಮ್ಮನ್ನು ಚೆನ್ನಾಗಿ ನೋಡಿಕೊಳ್ತಿರಬಹುದು. ಸಾಹೇಬರು ಬಂದು ಹೋದ ಮೇಲೆ ನೀವು ಹೀಗೇ ಇರ‍್ತೀರಾಂತ ಏನು ಗ್ಯಾರಂಟಿ?” ಜಯಮ್ಮ ಕೇಳಿದರು.
“ಸಾಹೇಬರು ಈ ವೃದ್ಧಾಶ್ರಮ ಮುಚ್ತಾರೆ. ಆಗ ನೀವೆಲ್ಲಾ ಎಲ್ಲಿಗೆ ಹೋಗ್ತೀರಾ? ಬೀದಿಯಲ್ಲಿ ಬೀಳಬೇಕಾಗತ್ತೆ.”
“ಸಾಹೇಬರು ನಮಗೋಸ್ಕರ ಬೇರೆ ವೃದ್ಧಾಶ್ರಮ ನೋಡಿದ್ದಾರೆ. ತುಂಬಾ ಚೆನ್ನಾಗಿದೆಯಂತೆ. ನಮಗೆ ಅವರ ಮಾತಿನಲ್ಲಿ ನಂಬಿಕೆಯಿದೆ. ನಾವು ಖಂಡಿತಾ ಇಲ್ಲಿರಲ್ಲ. ನಾಗಮ್ಮ ದೃಢವಾಗಿ ಗಟ್ಟಿಧ್ವನಿಯಲ್ಲಿ ಹೇಳಿದರು.
ನೀಲಕಂಠ ಏನೂ ಮಾಡನಾಡಲಿಲ್ಲ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41892
-ಸಿ.ಎನ್. ಮುಕ್ತಾ
ಮನಸ್ಸಿಗೆ ಸಮಾಧಾನ ಉಂಟಾಗುವ ರೀತಿಯಲ್ಲಿ ಧಾರವಾಹಿಯ ಈ ಕಂತು ಸಾಗಿದ್ದು ಮುದ ನೀಡಿತು.
ಅಂತೂ ಆತಂಕ ದೂರವಾಗಿ..ನೆಮ್ಮದಿ ಯ ನೆಲೆಯತ್ತ ಸಾಗುತ್ತಿರುವಂತಿದೆ ಧಾರಾವಾಹಿ..ಮೇಡಂ
ಧನ್ಯವಾದಗಳು. ಮುಂದಿನ ಭಾಗಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಒಂದು ಒಳ್ಳೆಯ ಕೆಲಸ
ಕ್ಕೆ ನೂರಾರು ಅಡೆತಡೆಗಳುಇದ್ದೇಇರುತ್ತವ
ಆತ್ಮಸ್ಥೈರ್ಯ ಮುಖ್ಯ.
ತುಂಬಾ ಚೆನ್ನಾಗಿ ಸಾಗುತ್ತಿದೆ ಕಾದಂಬರಿ. ವಯಸ್ಸಾದವರು ಅನುಭವಿಸುವ ಕಷ್ಟ ಕಾರ್ಪಣ್ಯ ವಾಸ್ತವದ ಚಿತ್ರಣ
ನೀಲಕಂಠಪ್ಪನ ದುರಾಸೆಯಿಂದ ವೃದ್ಧರು ಅನುಭವಿಸಿದ ಕಷ್ಠ ಕೊನೆಗೂ ನಿವಾರಣೆಯಾಗುವ ಸಮಯ ಬಂದಿದೆ…ನೆಮ್ಮದಿಯೆನಿಸಿತು. ಆರಾಮವಾಗಿ ಸಾಗುತ್ತಿರುವ ಕಥೆ ಚೆನ್ನಾಗಿದೆ ಮೇಡಂ