ಕಾವ್ಯ ಭಾಗವತ 30 : ಪುರಂಜನೋಪಖ್ಯಾನ

Share Button

30.ಚತುರ್ಥ ಸ್ಕಂದ
ಅಧ್ಯಾಯ – 4
ಪುರಂಜನೋಪಖ್ಯಾನ

ಪುರಂಜನ ರಾಜ
ಶಬ್ಧ ಸ್ಪರ್ಶ ರೂಪ, ರಸಗಂಧ
ವಿಷಯ ಸುಖಗಳ
ಮನಸಾರೆ ಅನುಭವಿಸುವ
ಅಭಿಲಾಶೆಯಂ
ಪೂರೈಸಲ್
ಮಧುರಗಾನ ಸುಧೆಯಂ
ಪಸರಿಸುತ ಹಾರಾಡುವ
ಚಿತ್ರ-ವಿಚಿತ್ರ ಪಕ್ಷಿ ಸಮೂಹ
ಭ್ರಮರಗಳು,
ಸರೋವರದ ಜಲಸಮೃದ್ಧಿಯಲಿ
ಅರಳಿನಿಂತ ಕಮಲ ಪುಷ್ಫ
ಉಪವನದಿ ಬೆಳೆದುನಿಂದ
ಅಪಾರ ವೃಕ್ಷರಾಶಿಯ ನಡುವೆ
ಪಕ್ಷಿ ಕಾಶಿಯ
ಮಧುವನವಿರ್ಪ
ಸುಂದರ ನಗರದ ರಾಣಿ
ತ್ರಿಲೋಕ ಸುಂದರಿಯ
ದರ್ಶನ ಮಾತ್ರದಿಂ
ಪುರಂಜನನ ಕಾಮೋತ್ಕಂಟ
ವಾಸನೆಗಳಿಗನುಗುಣವಾಗಿ
ಸರ್ವಸುಖವನ್ನನುಭವಿಸಲು
ಸಿಕ್ಕ
ಕನ್ಯೆ ಇವಳೆಂದು
ಅರಿತ
ಪುರಂಜನನ್ನೊಂದು ನೋಟದಿಂ
ತನ್ನೆಲ್ಲ ಕಾಮನೆಗಳೆಲ್ಲವಂ
ಪೂರೈಪ
ಪುರುಷನಿವನೆಂದು
ಬಾಲೆ
ಪುರಂಜನನಾಲಂಗಿಸೆ,
ಗೃಹಸ್ಥ ಧರ್ಮದ
ಧರ್ಮಾರ್ಥ ಕಾಮ, ಮೋಕ್ಷದ
ಪ್ರಥಮ
ಹೆಜ್ಜೆಯನಿಟ್ಟ
ಪುರಂಜನ

ಧರ್ಮಾರ್ಥ ಕಾಮ, ಮೋಕ್ಷದ
ಪುರುಷಾರ್ಥದ ಹಾದಿಯಲಿ
ಬರೀ ಕಾಮನೆಗಳ
ಕೊನೆಮೊದಲಿಲ್ಲದ
ಸೆಳೆತಕ್ಕೆ ಸಿಕ್ಕ
ಪುರಂಜನನ
ಜೀವಾತ್ಮ ನಡೆದ ಹಾದಿ,
ಮಿತಿಯಿಲ್ಲದ ಕಾಮನೆ
ವಿಷಯೇಂದ್ರಿಯಗಳ ಸೆಳೆತದಲಿ
ಕಾಮ ಸುಖವನ್ನನುಭವಿಸಲು
ಕ್ರೌರ್ಯ, ಪ್ರಾಣಿಹಿಂಸೆ, ಮೃಗೀಯ ವಿಹಾರ,
ಯಜ್ಞ, ಯಾಗಾದಿ ನಡೆಸಲು
ಮುಗ್ಧ ಪ್ರಾಣಿಹಿಂಸೆ ಮಾಡಿ,
ವಿಷಯಾಭಿಲಾಶೆ, ಕಾಮನೆಯಲ್ಲೇ
ಜೀವನ ಕಳೆದು, ಮುಪ್ಪು ಬಂದೊಡೆ,
ಪುರಂಜನಗೆಲ್ಲಿದೆ
ಮುಪ್ಪು ತಡೆವ ಸ್ಥೈರ್ಯ,
ಆತ್ಮಬಲ,
ಎಲ್ಲರೂ ತಿವಿಯುವವರೆ
ಯಜ್ಞ ಯಾಗಾದಿಗಳಲ್ಲಿ ಸತ್ತ
ಕೊಂಬುಳ್ಳ ಪ್ರಾಣಿಗಳು,
ಯಜ್ಞ ಪಶುಗಳು
ಮಂತ್ರಿಗಳ, ಪುರಜನರೆಲ್ಲರ
ಅನಾದರದಿಂದ
ಸತ್ತ ಪುರಂಜನ

ಸತ್ತು, ನರಕದಲಿ ಪುರಂಜನ, ಬಹು
ಸಂವತ್ಸರಗಳು
ಯಾತನೆಯನ್ನನುಭವಿಸಿ,
ಮತ್ತೆ ಸ್ರ್ತೀ ಜನ್ಮವ ಧರಿಸಿ
ಆ ಜನ್ಮದ ಪತಿ ಮರಣಿಸೆ,
ಸತಿಯಾದ
ಪುರಂಜನ ಜೀವಾತ್ಮನ
ಕಥೆ,
ಬರೀ ಕಥೆಯಲ್ಲ ಅದು,
ಆತ್ಮತತ್ವ.
ಪುರಂಜನ ಜೀವಾತ್ಮ
ಶಬ್ಧ ಸ್ಪರ್ಶರೂಪ, ರಸ, ಗಂಧ
ವಿಷಯಗಳನ್ನನುಭವಿಸುತಲೆ
ಪಂಚೇಂದ್ರಿಯಗಳ, ನವರಂಧ್ರಗಳ
ದೇಹವ ಪಡೆದು
ಮನುಜನಾಗಿ,
ʼಬುದ್ಧಿʼ ಎಂಬ ಪ್ರಮದೆಯ
ಪತ್ನಿಯಾಗಿ ವರಿಸಿ
ಪಂಚ ಜ್ಞಾನೇಂದ್ರಿಯ
ಕರ್ಮೇಂದ್ರಿಯ
ಮನಸ್ಸುಗಳಿಂದ
ಜೀವ ಸುಖವನನ್ನುಭವಿಸಿ
ಎಲ್ಲ ಸುಖ, ದುಃಖ
ಅನುಭವಗಳಿಗೆಲ್ಲ
ತನ್ನನ್ನೇ, ಜೀವಾತ್ಮನ್ನೇ,
ಆರೋಪಿಯನನ್ನಾಗಿಸಿ
ಪರಮಾತ್ಮನನ್ನು ಮರೆತ
ಜೀವಾತ್ಮ,
ಸುಖಃ, ದುಃಖ, ಅಹಂಕಾರ,
ಮಮಕಾರದಿಂ
ಪುನರ್ಜನ್ಮಗಳ ಪಡೆದು
ಉಚ್ಚ, ನೀಚ, ಜನ್ಮಗಳಲಿ
ತೊಳಲುವ ಜೀವಾತ್ಮನಿಗೆ
ಹರಿಭಕ್ತಿಯ ಪಥವೇ
ಜೀವನ್ಮುಕ್ತಿಯ ಪಥ
ಎಲ್ಲ ಸೃಷ್ಟಿ ಸ್ಥಿತಿ ಲಯಗಳ ಜನಕ
ಸಕಲ ಚರಾಚರಗಳ ಅಂತರ್ಯಾಮಿ
ಶ್ರೀಹರಿಯ ಭಜನೆ,
ಜೀವಾತ್ಮ, ಪರಮಾತ್ಮನಲಿ
ಒಂದಾಗುವುದೇ
ಮೋಕ್ಷ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :

(ಮುಂದುವರಿಯುವುದು)
-ಎಂ. ಆರ್.‌ ಆನಂದ, ಮೈಸೂರು

4 Responses

  1. ಪದ್ಮಾ ಆನಂದ್ says:

    ಬದುಕನ್ನು ನೋಡಬೇಕಾದ ರೀತಿ ಮತ್ತು ಇರಬಾರದ ಪರಿ ಎರಡನ್ನೂ ಬಿಂಬಿಸುವ ಕಾವ್ಯ ಭಾಗವತ ಸರಣಿಯ ಈ ಕಾವ್ಯ ಮನಸ್ಸನ್ನು ಎಚ್ಚರಿಸುವಂತಿದೆ.

  2. ಕಾವ್ಯ ಭಾಗವತ ಸೊಗಸಾಗಿ ಸಾಗಿ ಬರುತ್ತಿದೆ ಸಾರ್..

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್

  4. ಶಂಕರಿ ಶರ್ಮ says:

    ಆತ್ಮೋನ್ನತಿಗೆ ಪ್ರಯತ್ನಿಸದೆ, ವಿಷಯಾಸಕ್ತ ನಿರತ ಪುರಂಜನ ಕಥೆ ಬಹಳ ಕುತೂಹಲಕಾರಿಯಾಗಿದೆ. ಕಾವ್ಯ ಭಾಗವತ ಚೆನ್ನಾಗಿ
    ಮೂಡಿಬರುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: