ಪ್ರೇಮಿಗಳ ದಿನದಂದು – ಪ್ರೇಮಕವಿಯ ನೆನೆಪು
ಮತ್ತೊಂದು ಪ್ರೇಮಿಗಳ ದಿನ ಬಂದೇಬಿಟ್ಟಿತು. ಪ್ರೀತಿ – ಪ್ರೇಮ, ಒಲವು -ಚೆಲುವು, ಮನಸ್ಸು- ಹೃದಯ ಮುಂತಾದ ಸುಮಧುರ ಶಬ್ದಗಳು ರಿಂಗಣಿಸುವ ಸಮಯವಾಯಿತು. ಹಾಗಾಗಿ ಈಗ ನಾವು ಪ್ರೇಮಕವಿ ಎಂದೇ ಖ್ಯಾತರಾದ, ಸಿದ್ಧರೂ ಪ್ರಸಿದ್ಧರೂ ಆದ ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ನೆನೆಪಿಸಿಕೊಳ್ಳೋಣ. ಇದಕ್ಕೂ ಮುಂಚೆ ಒಂದೆರಡು ವಿಷಯಗಳತ್ತ ಗಮನಹರಿಸೋಣ.
ನಮ್ಮ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ವಿವಾಹ ಪೂರ್ವ ಪ್ರಣಯ ಸಾಹಿತ್ಯಕ್ಕೇನೂ ಕೊರತೆ ಇಲ್ಲ. ಆದರೂ ಅದು ನಮ್ಮಲ್ಲಿ ಪಾಶ್ಚಿಮಾತ್ಯರಲ್ಲಿರುವಂತೆ ಇಲ್ಲ. ನಮ್ಮ ಆ ವಿವಾಹ ಪೂರ್ವ ಪ್ರಣಯ ಸಾಹಿತ್ಯ, ಮುಂದೆ ಬಹುತೇಕ ದಾಂಪತ್ಯದೆಡೆಗೆ ಮುಖ ಮಾಡಿ ನಿಲ್ಲುತ್ತದೆ. ದಾಂಪತ್ಯೋತ್ತರ ಪ್ರಣಯ ಗೀತೆಗಳಿಗೂ ನಮ್ಮಲ್ಲಿ ಕೊರತೆ ಇಲ್ಲ. ಅದರಲ್ಲೂ ನವೋದಯ ಕಾಲದಲ್ಲಿ ದಾಂಪತ್ಯೋತ್ತರ ಪ್ರಣಯ ಗೀತೆಗಳ ಮೆರವಣಿಗೆಯೇ ಸಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಮೊದಲಿಗೆ ಕನ್ನಡ ಸಾಹಿತ್ಯದ ಇತಿಹಾಸವನ್ನು ಸ್ವಲ್ಪ ಗಮನಿಸೋಣ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದನೆಯ ನಾಗವರ್ಮನೆಂಬ ಸುಪ್ರಸಿದ್ಧ ಕವಿಯೊಬ್ಬನಿದ್ದಾನೆ. ಆತನ ಕಾಲ ಸುಮಾರು 990. ಪ್ರಕಾಂಡ ಪಂಡಿತನಾಗಿದ್ದ ಆತ ಛಂದೋಂಬುಧಿ ಮತ್ತು ಕರ್ನಾಟಕ ಕಾದಂಬರಿ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಪರಮೇಶ್ವರನೇ ಛಂದ ಶ್ಶಾಸ್ತ್ರದ ಮೂಲ ಪ್ರವರ್ತಕ. ಆ ಶಾಸ್ತ್ರವನ್ನು ಶಿವನು ತನ್ನ ಪತ್ನಿಯಾದ ಪಾರ್ವತಿಗೆ ಹೇಳಿದನಂತೆ. ನಾಗವರ್ಮನೂ ಸಹ ಇದರಿಂದ ಪ್ರೇರೇಪಿತನಾಗಿ ತನ್ನ ಸತಿಯನ್ನೇ ಮುಂದಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾನೆ . “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಅಲ್ಲವೇ….
ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತನಾದ ನಂದಳಿಕೆಯ ಲಕ್ಷ್ಮೀನಾರಾಯಣನು ಸೃಷ್ಟಿಸಿದ ರಾಮಾಶ್ವಮೇಧ ಕೃತಿ, ಸತ್ವದಿಂದ ಅಷ್ಟೇನೂ ಪ್ರಸಿದ್ಧವಾಗಿಲ್ಲದಿದ್ದರೂ ಅಲ್ಲಿ ಬರುವ ಮುದ್ದಣ ಮನೋರಮೆಯರ ಸರಸ ಸಂವಾದವು ಅತ್ಯಂತ ರಸಮಯವಾಗಿದೆ. ತನ್ನ ಹೆಂಡತಿ ಮನೋರಮೆಗೆ [ ನಿಜನಾಮ – ಕಮಲಾಬಾಯಿ] ಮುದ್ದಣ ರಾಮಶ್ವಮೇಧದ ಕಥೆಯನ್ನು ಹೇಳಿದನು ಎನ್ನುವ ಧಾಟಿ ಆ ಗ್ರಂಥಕ್ಕಿದೆ. ಕೃತಿಯ ನಡುನಡುವೆ ಬರುವ ಆ ದಂಪತಿಗಳ ಸರಸ ಸಂಭಾಷಣೆ ಓದುಗರ ಮನವನ್ನು ಸೆಳೆದುಕೊಳ್ಳುತ್ತದೆ. ಎಸ್ ವಿ ರಂಗಣ್ಣನವರು ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು ಕೃತಿಯನ್ನೂ ಅವರೀರ್ವರ ಸಂಭಾಷಣೆಯನ್ನು ವಿಮರ್ಶಿಸಿದ್ದಾರೆ. ಆ ಚಿರನೂತನವಾದ ಸಂಸಾರಿಕ ಚಿತ್ರ ಸಹೃದಯರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುತ್ತದೆ.
ಹೊಸಗನ್ನಡ ಸಾಹಿತ್ಯದಲ್ಲಿ ಪ್ರಣಯ ಗೀತೆಗಳ ಸಂಕಲನವನ್ನು ಮೊದಲು ತಂದವರು ತೀ. ನಂ. ಶ್ರೀಕಂಠಯ್ಯನವರು. ಒಲುಮೆ ಎಂಬುದೇ ಆ ಕವನ ಸಂಕಲನದ ಹೆಸರು. ಮುಂದೆ ತೀ.ನಂ. ಶ್ರೀಕಂಠಯ್ಯನವರ ಒತ್ತಾಸೆಯಿಂದ ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯ ಕವನಗಳನ್ನು ಬರೆಯಲು ಸಾಧ್ಯವಾಯಿತು. ಎ ಆರ್ ಕೃಷ್ಣಶಾಸ್ತ್ರಿಗಳ ಸಹಾಯದಿಂದಾಗಿ ಈ ಕವನಗಳು ಬೆಳಕು ಕಂಡವು. ಇದು ಇವರು ಅರಳು ಎಂದಾಗ ಅರಳಿದ ಮಲ್ಲಿಗೆ ಎಂದು ಮೈಸೂರು ಮಲ್ಲಿಗೆ ಸಂಕಲನದ ಅರಿಕೆಯಲ್ಲಿ ಕವಿ ನರಸಿಂಹ ಸ್ವಾಮಿಯವರು ಹೇಳಿಕೊಳ್ಳುತ್ತಾರೆ. ಈ ಕವನ ಸಂಕಲನ ಮೊದಲು ಮುದ್ರಣ ಗೊಂಡಿದ್ದು 1942ರಲ್ಲಿ. ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟ ಮಾನ್ಯ ಡಿವಿಜಿಯವರು ಇಂತಹ ಕವಿತೆಗಳು ಪುಸ್ತಕ ರೂಪದಲ್ಲಿ ದೊರೆತ ದಿನ ರಸಿಕ ಜನರಿಗೆ ಹಬ್ಬ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲ ಋತುಗಳಲ್ಲಿಯೂ ನಗುನಗುತ್ತಿರಲಿ ಎಂದು ಹಾರೈಸುತ್ತಾರೆ. ಅವರ ಆಶೀರ್ವಾದದ ಬಲದಿಂದಲೋ ಏನೋ ಎಂಟು ದಶಕಗಳು ಕಳೆದಿದ್ದರೂ ಈ ಕೃತಿ ಇಂದಿಗೂ ಎಲ್ಲ ಋತುಗಳಲ್ಲೂ ಅರಳಿ, ಮರಳಿ ಮರಳಿ ಅರಳಿ, ಕಂಗೊಳಿಸಿ ಸುವಾಸನೆಯನ್ನು ಬೀರುತ್ತಾ ಸಾಗುತ್ತಿದೆ.
ಇನ್ನು ಕೆ ಎಸ್ ನ ರವರ ದಾಂಪತ್ಯ ಗೀತೆಗಳ ಕಡೆಗೆ ಸ್ವಲ್ಪ ಕಣ್ಣರಳಿಸಿ ನೋಡೋಣ.
ಗೃಹಲಕ್ಷ್ಮೀ ಎಂಬ ಕವನವೊಂದರಲ್ಲಿ ಕವಿ ಹಾಡುವ ರೀತಿಯನ್ನು ನೋಡಿ.
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗು ಗೆನ್ನೆಯ ಚೆನ್ನೆ ನನ್ನ ಮಡದಿ ……
ಬಂಗಾರದಂಥ ಹುಡುಗಿ-
ನನ್ನೊಡವೆ ನನ್ನ ಬೆಡಗಿ ….
ನಮಗಿಲ್ಲ ನೂರು ಚಿಂತೆ:
ನಾವು ಗಂಧರ್ವರಂತೆ……
ತಾರೆಗಳ ಮೀಟುವೆವು ಚಂದಿರನ ದಾಟುವೆವು ಒಲುಮೆಯೊಳಗೊಂದು ನಾವು;
ನಮಗಿಲ್ಲ ನೋವು ಸಾವು.
ಅಬ್ಬಾ! ಎಂತಹ ಅದ್ಭುತವಾದ ಸಾಲುಗಳಿವು! ನಿಜ ಪ್ರೇಮಿಯೊಬ್ಬನ ಪ್ರೇಮದ ಹೊನಲು ಇಲ್ಲಿ ತಾನೇ ತಾನಾಗಿ ಹರಿದಿದೆ.
ಹಳ್ಳಿಯ ಚೆಲುವೆ ಎಂಬ ಮತ್ತೊಂದು ಕವನದಲ್ಲಿನ ಕೆಲವು ಸಾಲುಗಳನ್ನು ನೋಡಿ.
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆ ಮದುವೆ…
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;…..
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು;
ಮುಂದೆ ಹೋಗೆನ್ನದಿರು ನನ್ನ ಮನದರಸಿ.
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ….
ಅಪ್ಪಟ ಪ್ರೇಮಿಯೊಬ್ಬನು ತನ್ನ ಪ್ರಿಯತಮೆಯ ಬಳಿ ಬೇಡುವ ಪ್ರೇಮ ಭಿಕ್ಷೆ ಸಹೃದಯ ರಸಿಕರ ಮನಸೂರೆಗೊಳ್ಳುತ್ತದೆ. ಹೀಗೆ ಭಿಕ್ಷೆ ಬೇಡಿದರೆ ಭಿಕ್ಷೆ ಕೊಡದಿರುವ ಹೆಣ್ಣಾರು !
ಮುಂದಿನ ಮತ್ತೊಂದು ಕವನ ಬಾರೆ ನನ್ನ ಶಾರದೆ
ಮದುವೆಯಾಗಿ ತಿಂಗಳಿಲ್ಲ,
ನೋಡಿರಣ್ಣ ಹೇಗಿದೆ!
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ! ಹಿಂದೆ ಮುಂದೆ ನೋಡದೆ,
ಎದುರು ಮಾತನಾಡದೆ….
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು ,
ಕಾಣದೊಂದು ಕನಸು ಕಂಡು,
ಮಾತಿಗೊಲಿಯದಮೃತವುಂಡು,
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ?
ಪ್ರೇಮವೆಂಬುದು ಎಂದಿಗೂ ಹಾಸ್ಯವಲ್ಲ. ಅದು ಸತ್ವಪೂರ್ಣವಾದ ರಸವುಳ್ಳದ್ದು. ಅದು ಜನರ ದುಃಖವನ್ನು ಹಗುರಾಗಿಸಲು ಇರುವ ಸಾಧನ ಎನ್ನುವುದು ಕವಿಯ ಅಂತರಾಳದ ಭಾವ.
ʼಗೆʼ ಎಂಬ ಕವನದಲ್ಲಿ ಕವಿ ಹಾಡುವ ರೀತಿ ಹೇಗಿದೆ ನೋಡಿ .
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.
ಒಲಮೆ ಎಂಬುದು ಪ್ರೇಮಿಗಳ ಹೃದಯದಲ್ಲಿ ಎಂದೆಂದಿಗೂ ಉಕ್ಕುವ ಕಡಲ ಅಲೆ. ಇಲ್ಲಿ ಕವಿ ಆ ಕಡಲ ಅಲೆಗೆ ಮನ ಸೋತಿದ್ದಾರೆ.
ಪ್ರೇಮದ ಗುಲಾಬಿಗೆ ಎಂಬ ಮತ್ತೊಂದು ಕವನದಲ್ಲಿ ಕವಿಯ ನಿವೇದನೆಯ ಮಾತುಗಳನ್ನು ನೋಡಿ.
ಮುತ್ತನಿಡುವೆನು ಅರಳು ಪ್ರೇಮದ ಗುಲಾಬಿಯೇ ,
ಮುತ್ತನಿಡುವೆನು , ನಕ್ಕು , ಮುತ್ತ ಸುರಿಸು
ಸುತ್ತ ಸಾವಿರ ಹೂವು ಕತ್ತೆತ್ತಿ ನೋಡಿದರೆ
ಅತ್ತ ಹೋಗದಿದು ನಿನ್ನ ಹಿಡಿದ ಮನಸು….
ಹೂವಿಲ್ಲದಿರೆ ನಾನು ಭೂಮಿಯಲ್ಲಿ ಇರಲಾರೆ
ಹೂವಿಂದ ಬಲು ದುಃಖ ಹಗುರವಹುದು.
ನಾನು – ಹೂವೆಂಬೆರಡು ನಮ್ಮ ಪ್ರೇಮದೊಳೊಂದೆ.
ಹೂವಿಗಿಂತಲೂ ಬದುಕು ಹಗುರ, ಸೊಗಸು!
ಇಲ್ಲಿ ಕವಿ ತನ್ನ ಪ್ರಿಯತಮೆಯನ್ನು ಕೆಂಗುಲಾಬಿಗೆ ಹೋಲಿಸಿ ಮುತ್ತನಿಟ್ಟು ಸರಸವಾಡುತ್ತಾ ರಸಿಕರಿಗೆ ಕಚಗುಳಿ ಇಡುತ್ತಾರೆ.
ಪ್ರಶ್ನೆಗೆ ಉತ್ತರ ಎಂಬ ಮತ್ತೊಂದು ಕವನ ಹೀಗಿದೆ
ಒಂದಿರುಳು ಕನಸಿನಲ್ಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು-
ನಮ್ಮೂರು ಹುನ್ನೂರೊ, ನಿಮ್ಮೂರು ನವಿಲೂರೊ
ಚಂದ ನಿನಗಾಗುವುದೆಂದು.
ಗಂಡ ಹೆಂಡತಿಯ ನಡುವೆ ಒಂದು ದಿನ ಇರುಳಿನಲ್ಲಿ ನಡೆಯುವ ಸಂಭಾಷಣೆಯನ್ನು ಆಧರಿಸಿರುವ ಕವಿತೆ ಇದು. ಒಂದೆಡೆ ತನ್ನ ತೌರನನ್ನೂ ಬಿಟ್ಟು ಕೊಡದೆ ಮತ್ತೊಂದೆಡೆ ಗಂಡನ ಪ್ರೇಮವನ್ನು ಬಿಟ್ಟು ಕೊಡದೆ ಪತ್ನಿಯಾದವಳು ಉತ್ತರಿಸುವ ಪರಿ ವಿನೂತನವೆನಿಸುತ್ತದೆ. ಇಲ್ಲಿರುವ ಎಲ್ಲಾ ಕವನಗಳನ್ನು ಪೂರ್ಣವಾಗಿ ಓದಿಯೇ ರಸಜ್ಞರು ಸವಿಯಬೇಕಾಗಿದೆ.
ಮುಂದಿನ ಕವನ ಸಂಕಲನಗಳಲ್ಲೂ ಕವಿಯ ಪ್ರೇಮದ ಹಡಗು ನಿತ್ಯ ನಿರಂತರವಾಗಿ ಸಾಗಿದೆ.
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು….
ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?
ಹೀಗೆ ಇನ್ನೂ ನೂರಾರು ಕವಿತೆಗಳು ಎಂದೆಂದಿಗೂ ಸಹೃದಯರ ಮನದಲ್ಲಿ ಹಚ್ಚ ಹಸುರಾಗುಳಿಯುತ್ತವೆ.
ಮೈಸೂರು ಮಲ್ಲಿಗೆ ಕವನಸಂಕಲನವಂತೂ 25 ಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿರುವುದು ಕನ್ನಡಿಗರ ಸಾರ್ಥಕತೆಯ ದ್ಯೋತಕವಾಗಿದೆ. ಮೈಸೂರು ಮಲ್ಲಿಗೆಯನ್ನು ತಂಗಾಳಿಗೊಡ್ಡಿದ ನರಸಿಂಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ, ಈ ಲಾವಣ್ಯವು ನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ ಎಂಬ ಮಾನ್ಯ ಬೇಂದ್ರೆಯವರ ಮಾತುಗಳಾಗಲಿ, ಮೈಸೂರು ಮಲ್ಲಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೆಲ್ಲಾ ತನ್ನ ಸುವಾಸನೆಯನ್ನು ಬೀರಿ ಮುದಗೊಳಿಸುತ್ತಿದೆ…….. ಇದು ಅರೆ ಬಿರಿದ ಮೊಗ್ಗಲ್ಲ, ಪ್ರಫುಲ್ಲ ಪುಷ್ಫ ಎಂಬ ಮಾನ್ಯ ಬಿ.ಎಂ. ಶ್ರೀ ಯವರ ಮಾತುಗಳಾಗಲೀ ಅತ್ಯಂತ ಅರ್ಥಪೂರ್ಣವೆನಿಸುತ್ತವೆ.
-ವೆಂಕಟಾಚಲ. ಜಿ. ಮೈಸೂರು
ಪ್ರೇಮಕವಿಯ ನೆನಪಿನ ಲೇಖನ ಸೊಗಸಾಗಿ ಮೂಡಿಬಂದಿದೆ.. ಅವರ ಮೈಸೂರು ಮಲ್ಲಿಗೆ ಕವನ ಸಂಕಲನ ನಲವತ್ತೆರಡಕ್ಕೂ ಹೆಚ್ಚು ಮುದ್ರಣ ಕಂಡಿದೆ….ಎನ್ನುವ ಮಾಹಿತಿ ಇದೆ ಸಾರ್
ಧನ್ಯವಾದಗಳು ತಮ್ಮ ಮೆಚ್ಚುಗೆಯ ಮಾತುಗಳಿಗೆ…
ಹಾಗೂ ಮಾಹಿತಿಗೆ
ಪ್ರೇಮ ನೂತನ; ಅದರಲೂ ಮೈಸೂರ ಮಲ್ಲಿಗೆ ಚಿರನೂತನ.
ಮೈಸೂರ ಮಲ್ಲಿಗೆ ಎಂಬುದು ಕೆಎಸ್‌ನ ಅವರು ನೀಡಿದ ಶೀರ್ಷಿಕೆಯ ಸರಿರೂಪ.
ಇರಲಿ. ಲೇಖನ ಚೆನ್ನಾಗಿದೆ. ಮುದ್ದಣ, ತೀನಂಶ್ರೀಯವರನ್ನೂ ಕನೆಕ್ಟ್ ಮಾಡಿಕೊಂಡದ್ದು
ಅರ್ಥಪೂರ್ಣ. ಧನ್ಯವಾದಗಳು ನಿಮಗೆ
ಧನ್ಯವಾದಗಳು ಸರ್…
ತಮ್ಮ ನಲ್ನೆಯ ಮಾತುಗಳಿಗೆ….
ಮೈಸೂರ ಮಲ್ಲಿಗೆ ಅಮರ ಕೃತಿ….,
ಸೊಗಸಾದ ಬರಹ.
ಧನ್ಯವಾದಗಳು ಮೇಡಮ್…
ಪ್ರಕಟಿಸಿದ್ದಕ್ಕೆ ಮತ್ತು ಮೆಚ್ಚಿಕೊಂಡಿದ್ದಕ್ಕೆ….
ಚಂದದ ಬರಹ
ಮೆಚ್ಚುಗೆಗೆ ಧನ್ಯವಾದಗಳು
ಚಿರನೂತನ ದಿನಕ್ಕಾಗಿ ಕೆ.ಎಸ್. ನರಸಿಂಹಸ್ವಾಮಿಯವರ ಚಿರನೂತನ ಹಾಡುಗಳ ವಿಶ್ಲೇಷಣಾತ್ಮಕ ಲೇಖನವು ಸೂಕ್ತ, ಸುಂದರ!
ಪ್ರೋತ್ಸಾಹದ ನುಡಿಗಳಿಗೆ ಮನಃಪೂರ್ವಕ ನಮನಗಳು
ಪ್ರೇಮಿಗಳ ದಿನಕ್ಕಾಗಿ ಪ್ರೇಮಕವಿಯ ಪ್ರೇಮಗೀತೆಗಳ ಗುಣಗಾನ ಸೊಗಸಾಗಿ ಮೂಡಿಬಂದು ಮುದ ನೀಡಿದೆ.
ಧನ್ಯವಾದಗಳು ಮೇಡಮ್
ತಮ್ಮ ಮೆಚ್ಚುಗೆಯ ನುಡಿಗಳಿಗೆ